Saturday, December 13, 2014

ನನ್ನಮ್ಮ .

"ಕಾಣದ ದೇವರು ಊರಿಗೆ ನೂರು , ಕಾಣುವ ತಾಯೇ ಪರಮ  ಗುರು " ಹೌದು ಗರ್ಭ ಕಟ್ಟಿದಂದಿನಿಂದ ತಾಯಿಯೊಂದಿಗಿನ ಅನೂಹ್ಯ ಸಂಬಂಧದ ಎಳೆಕವಲೊಡೆದು , ಬರೀ ಕಣ್ಣಿಗೆ ಕಾಣುವ , ಭಾವಿಸಿದಷ್ಟು ಮುಗಿಯದ, ಮರೆಯದಷ್ಟು ಸ್ಮೃತಿಗಳು, ಒಂಬತ್ತು ತಿಂಗಳ ಕಾಲ ಅಮ್ಮನುಂಡರೆ ನನಗೆ ತೃಪ್ತಿ, ಅಮ್ಮ ಉಸಿರಾಡಿದರೆ ನನಗೆ ಉಸಿರು, ಅದೇ ಇಂದು ನಾನುಂಡರೆ ಅಮ್ಮನಿಗೆ ತೃಪ್ತಿ . ನಾನು ಚೆಲುವಲ್ಲಿದ್ದರೆ ಅಮ್ಮನಿಗೆ ಖುಷಿ,  ಏನೋ ಈ ಪ್ರಾಕೃತಿಕ ಬಂಧನ ಜೀವ ಜೀವಗಳ ನಡುವೆ ಉಲ್ಲಾಸದ ಬತ್ತಿಯಂತೆ ಅಲ್ಲಾಡುತ್ತಿದೆ. 

ತುತ್ತು ತಿನ್ನಲು ಹಠತೊಟ್ಟರೆ ಮುತ್ತು ನೀಡುತ್ತಾ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸಿ ಚಂದಮಾಮನ ಕೊಡಿಸೋ ಆಸೆ ತೋರಿಸಿ ನನ್ನ ಕಿಲ ಕಿಲ ನಗುವಲಿ ಆ ನಗುವ ನಡುವಲಿ ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ ಆಲ್ವಾ. "ಕುಕ್ಲು ಬಾಬೆ ಕುಕ್ಲು" ಅಂತ ಹೇಳಿ ತಲೆ ಅಲ್ಲಾಡಿಸುವುದನ್ನು , ತಿರುಗಿಸುವುದನ್ನು ನೋಡುವ ನಿನ್ನ ಕುಶಿ, ಅಲ್ಲೆಲ್ಲೋ ಪುಟ್ಟ ಹೆಜ್ಜೆಗಳಿಗೆ ಬಲವಿಲ್ಲದೇ  ಬಿದ್ದರೆ ಕುಂಡೆಗೆರಡು ಪೆಟ್ಟು ಕೊಟ್ಟು ಎಬ್ಬಿಸುತ್ತಿದ್ದ ನಿನ್ನ ಅರೈಕೆ, ಮಣ್ಣುನ್ನು ತಿನ್ನಲೋ , ಜಗಲಿಯಲ್ಲಿ ಇದ್ದ ಕೋಳಿ ಹಿಕ್ಕೆಯ ಹಿಂದೆ ಹೋದರೆ "ಬಜೀ ಕೊಳಕು ಬಾಲೆ"  ಅಂಥ ಮುದ್ದಿಸುತಿದ್ದದ್ದು, ಸೂಜಿ ಕೊಟ್ಟರೆ ನೀನಗೆನೆ ನನ್ನಿಂದ ಜಾಸ್ತಿ ನೋವಾಗೋದು, ಮತ್ತೆ ಹೆಚ್ಚಾಗಿ ನಾನು ಕೇಳುವ ಮೊದಲೇ ನಿನಗೆ ನನ್ನೆಲ್ಲ ಬೇಕು ಬೇಡಗಳೆಲ್ಲಾ ಗೊತ್ತಾಗಿ ಬಿಡುತಿತ್ತು, ಹೌದು ಇದು ಆ ಮಧುರ ಭಾಂದವ್ಯದ ಕುರುಹುಗಳು. 

ನನ್ನಮ್ಮ ನಸುಕಿನಲ್ಲೆದ್ದು ಸೂರ್ಯನನ್ನೇ ಎಬ್ಬಿಸಲು ಹೊರಡುವವಳು , ತುಳಸಿ ದೇವಿಗೆ ಸುತ್ತು ಬಂದು ಬಿಂದಿಗೆ ನೀರು ಸೇದಿ , ದಿನಚರಿಗೆ ಹಾಜರಿ ... ಅಮ್ಮನ ಕಡೆಯುವ ಕಲ್ಲು ಗಡ - ಗಡವೆಂಬ ಸದ್ದು ಮತ್ತು ಮಂಗಳೂರು  ಆಕಾಶವಾಣಿಯ ಸುಪ್ರಭಾತದ ಜುಗಲ್ ಬಂಧಿಯೊಂದಿಗೆ ನನ್ನನ್ನು ಎಬ್ಬಿಸುತ್ತಿತ್ತು. ಅರೆ ಬಿಸಿ ಮಾಡಿದ  ತಂಗಳನ್ನ ಮತ್ತು ಮೊಸರಲ್ಲಿ ನಮ್ಮನ್ನು ಉಣ್ಣಿಸಿ, ಗಡಿ ಬಿಡಿಯಲ್ಲಿ ಅಪ್ಪನಿಗೆ ಪೋದಿಕೆ  ಕಟ್ಟಿ , ಆಗ ತಾನೇ ಸಿದ್ದವಾದ ಪದಾರ್ಥ ಮತ್ತೆ ಕುಚ್ಚಲಕ್ಕಿ ಅನ್ನ ವನ್ನು ನಮ್ಮ ಶಾಲೆಯ  ಚಿಣ್ಣ  ಚಿಣ್ಣ ಬುತ್ತಿಗಳಿಗೆ  ತುಂಬಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿ ಕಟ್ಟಿ ಹೊರಡಿಸುವುದರಲ್ಲಿ ಅಮ್ಮನ ಬೆಳಗಿನ  ಸಂಭ್ರಮ ಕಳೆಯುತ್ತಿತ್ತು .
ಅಮ್ಮ 
ಹಾಗೆ ನೋಡಿದರೆ ಅಮ್ಮನೇ , ಅಪ್ಪನಿಗಿಂತ ಬಲು ಜೋರು , ಮದೆರ್ ಬೆತ್ತ , ಗಾಳಿಯ ಅಡರ್ ಗಳಲ್ಲಿ ಪೆಟ್ಟು ಕೊಡುವುದರಲ್ಲಿ ಇರಬಹುದು, ಬೈಯುವುದರಲ್ಲಿ ಇರಬಹುದು , ಜೀವನ ಸೂಕ್ಷ್ಮಗಳನ್ನೂ ಹೇಳಿಕೊಡುವುದರಲ್ಲಿ ಇರಬಹುದು, ಕೋಳಿ ಸಜ್ಜಿ ಮಾಡುವುದರಲ್ಲಿ ಇರಬಹುದು, ಕಾಟ್ ಹಾವನ್ನು ಓಡಿಸುವದರಲ್ಲಿ ಇರಬಹುದು, ದಿಟ್ಟ, ನೇರ ವಿಷಯಗಳಿಂದ ನಿಷ್ಠುರ ಅದದರಲಿರಬಹುದು, ಯಾರದೋ ಗಾಳಿ ಮಾತನ್ನು ಕೊಂಡೆ ಕಿವಿ ಮಾಡಿ ಕೇಳುವುದರಲ್ಲಿ ಇರಬಹುದು, ಅತಿಥಿಗಳನ್ನೂ ಸತ್ಕರಿಸುವುದರಲ್ಲಿ ಇರಬಹುದು, ದೊಡ್ಡ ಕನಕಿನ ಕಟ್ಟ ತರುವುದರಲ್ಲಿ ಇರಬಹುದು,  ಅಜ್ಜಿ ಕತೆ ಹೇಳುವುದರಲ್ಲಿ ಇರಬಹುದು , ಬಯ್ಯತಾ ಚಾಯಕ್ಕೆ ಕುರು ಕುರು ತಿಂಡಿ ಮಾಡಿ ಕೊಡುವುದರಲ್ಲಿ ಇರಬಹುದು ಹೀಗೆ ಎಲ್ಲದರಲ್ಲೂ ಮುಂದೇನೆ... ಎಲ್ಲರ ಅಮ್ಮನಂತೆ ನನ್ನಮ್ಮನು ಪೂಜೆಗೋ , ಮದುವೆಗೋ ಹೋಗಿ ಬರುವಾಗ  ಅಲ್ಲಿ ಊಟಕ್ಕೆ ಬಡಿಸಿದ  ಹೋಳಿಗೆಯನ್ನು ಎಡಕೈ ಯಲ್ಲಿ ತೆಗೆದುಕೊಂಡು ಕರವಸ್ತ್ರ ದಲ್ಲಿ ಕಟ್ಟಿ ತಿನ್ನಿಸಿದ್ದು, ಯಾರದ್ದೋ ದೂರು ಬಂದರೆ ಬಯ್ಯದೇ ಬುದ್ದಿ ಹೇಳಿದ್ದು, ಗಮ್ಮತ್ತಿನ ದಿನ ಎಲ್ಲವನ್ನೂ  ಬಡಿಸಿ ಕಡೆಗೆ ತಿಳಿಸಾರಿನಲ್ಲೇ ಊಟ ಮಾಡಿ ಕೈ ತೊಳೆದದ್ದು.. ಕಷ್ಟದ ದಿನಗಳಲ್ಲಿ ಇದ್ದುದನ್ನೆಲ್ಲ  ಬೇಯಿಸಿ ನಾನಾಗಲೇ ತಿಂದೆ ಹಸಿವಿಲ್ಲವೆಂದು ಏನೇನೊ ಸಬೂಬು ಹೇಳಿ ಖಾಲಿ ಹೊಟ್ಟೆಯಲ್ಲಿ ಮಲಗಿದ್ದು ಎಲ್ಲ ಅಮ್ಮ ಎಲ್ಲವನ್ನು ಒಡಲಲ್ಲಿ ಬಚ್ಚಿಟ್ಟು ಸಾಕಿದ ಸಾಕ್ಷಿಗಳು.
ಇಂದು  ನನ್ನ ನೋವಿಗೆ ತೇವಗೊಳ್ಳುತಿದ್ದ ಅಮ್ಮನ ಕಣ್ಣು ಸ್ವಲ್ಪ ಗುಂಡಿಯಲ್ಲಿವೆ  , ಮೊಗದಲ್ಲಿ ಭಾವನೆಯ ಗೆರೆಗಳು ದಣಿದ ನೆರಿಗೆಗಳಿವೆ, ಮಾತಿನ ಧ್ವನಿ ತೊದಳುತಿವೆ , ಮಗ ನನ್ನಿಂದ ಎತ್ತರ ಬೆಳೆದಿದ್ದನೆಂದೋ , ಶಾಲೆಗೆ ಹೋಗಿದನೆಂದೋ,  ಮಾತನ್ನು ಕೇಳುವುದಿಲ್ಲವೆಂದೋ , ಸ್ವಲ್ಪ ಹಿತ ನುಡಿಯು ಕಡಿಮೆಯಾಗಿದೆ ಅಷ್ಟೇ ... ಸೇರುಗಟ್ಟಲೆ ಪ್ರೀತಿ , ಬೊಗಸೆ ತುಂಬಾ ಮಮತೆ ಕೊಟ್ಟು ಭೌತಿಕ ಜೀವ ನೀಡಿ ,ಅಪ್ಪನಾಗಿ ಬುದ್ದಿ ಹೇಳುವ , ಅಜ್ಜಿಯಾಗಿ ಕಥೆ ಹೇಳುವ ನನ್ನಮ್ಮನಿಗೆ ಈ ಹಾಡು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ
ಮನೆ ಬೆಳಕಾಗಿ ....


10 comments:

  1. ಅಮ್ಮನನ್ನು ನೆನೆಸಿಕೊಂಡ ರೀತಿಯಲ್ಲೇ ಗೆದ್ದಿದ್ದಿರಿ ಭರತಣ್ಣ.
    ನಾವು ಭರ್ತೀ ಏಳು ಜನ ಅಣ್ಣ ತಮ್ಮಂದಿರು. ನಮ್ಮ ತಂದೆಯವರು ತೀರಿಕೊಂಡಾಗ ನನಗೆ ಮೂರು ವರ್ಷ. ಯಾವ ಅಣ್ಣಂದಿರಿಗೂ ಓದು ಮುಗಿದಿರಲಿಲ್ಲ ಮತ್ತು ಮದುವೆಯೂ ಇಲ್ಲ. ಅದು ಹೇಗೆ ತೂಗಿದಳೋ ಮಹತಾಯಿ. ಅವಳಿಗಿದೋ ನನ್ನ ಸಲಾಮು...

    shared at:
    https://www.facebook.com/photo.php?fbid=602047969839656&set=gm.483794418371780&type=1&theater

    ReplyDelete
    Replies
    1. ಅಮ್ಮ ಶಬ್ಧಕ್ಕೆ ಇದೆ ಅಂತಹ ಶಕ್ತಿ ... ಅದುಮಿದ ಪ್ರಭೆ ಬೆಳಕಾಗಲು ಇಂತಹುಗಳು ನೆಪ ಮಾತ್ರ ...ನಿಮ್ಮ ಅಮ್ಮನಿಗೊಂದು ನನ್ನ ಸಲಾಂ.

      Delete
  2. ಅಪ್ಪಾನೂ ಕಡಿಮೆ ಇಲ್ಲ!

    ReplyDelete
  3. Bahala Shresta Baraha....

    ReplyDelete

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...