Sunday, August 28, 2016

ತುಳು ಜೋಕುಲೆ ಕಬಿತೆಲು

ದಾನೇ ಮಾಮಿ 
ದಗಣೆ ಮಾಮಿ 
ಬದನೆ ಕೊಯಿಪಾರಾ... 
ಇರೇಗೊಂಜಿ ಮಗಲ್ ಉಂಡು 
ಎಂಕ್ ಕೊರ್ಪಾರ... 
******************************
ಅರಿ ಕಡೆಪಲ್ ಪಾತಿಮ, 
ಬಲಿ ಬರ್ಪೆ ಪೋಕರೆ, 
ಅಡ್ಡ್ಯೆ ಮಯಿಪುವಲ್ ಚಟ್ಟು, 
ಆಲೊಂಜಿ ತಿಂದಾಲ್ ಬೊಟ್ಟು, 
ಎಂಕೋಜೀ ಕೊರ್ಯಲ್ ಪೊಟ್ಟು.... ಲಾ ಲಾ ಲ 
*****************************
ಆಚಾರಿ ಪೀಚಾರಿ 
ಪಿಲಿತುಂಡೇ,
ಬಯ್ಯತಾ ಚಾಯಾಗ್ 
ಎಲ್ಲುಂಡೆ ...
*****************************
ಕತೆ ಕತೆ ಕಂಕನೋ
ಅಡ್ಪೆ ಅಂಕನೋ
ಕೋಲ್ಲಿ ಮಿನ್ಕನೋ
ಒಂಜರೇ ಬಟ್ಟಲ್ ಇಂದನೋ ಮುಂಡೆ
ಜೆರ್ಪು ಜೆರ್ಪು ......
***************************** ಉಪ್ಪು ಮುನ್ಚಿ ಕಾರ
ಮದ್ಯಾನೋ ಮುಟ್ಟ ಚಟ್ನಿ
ನಿಕ್ ದಾಯ್ತ ಬೋಡು
ಎಂಕ್ ಪೀಯೀ
ಚಿ.....ಚಿ
****************************** ಎಕ್ ದೋ ತಿನ್ ಚಾರ್
ಕತ್ತಲೆಗ್ ಮೀನ್ ಚಾರ್🐟
ನಿಕುಲ್ ದಾಯೇ ಬತ್ತುಜ್ಜಾರ್
ಇರ್ ದಾಯೇ ಲೆತ್ತುಜ್ಜಾರ್🐠


Tuesday, April 26, 2016

ಸಂಗ ದೋಷ

ಜಗವೇ ನಶ್ವರ ಕಪಟ ಮೋಸವಂತೆ,
ಎಲ್ಲೆಲ್ಲೂ ಬರೀ ದುರ್ಜನರ ಸಹವಾಸ,
ನಮ್ಮ ಮೇಘರಾಜನದೂ ಅದೇ ಕಥೆ...
ನೀರಾ ಕುಡುಕ ರವಿಯ ಸೇರಿ
ದಾಸನಾಗಿ ಬಿಟ್ಟನ...
ಮನೆ ಮಾನ ತೆಗೆದನ...
ಇವನಿಗೆ ಹೇಳುವವರಿಲ್ಲ,
ಚಂದ್ರ ರಾತ್ರಿ ಸಂಚಾರಿ,
ಪರ್ವತರಾಜ ಮುದುಕನಾದ,
ವಾಯುವಿಗೆ ನಿಶ್ಯಕ್ತಿ...
ಪ್ರಕೃತಿಯ ಮಾತನ್ನು ಕೇಳಲ್ಲ
ಹಾಗೂ ಹೀಗೂ ಧರಿತ್ರಿ ಬೀದಿಗೆ ಬಂದಳು...!!!
ಭೂಮಿ ಕುಡುಕನ ಮನೆವಾಯಿತು.

Saturday, April 23, 2016

ಪ್ರೀತಿ

ಭೂಮಿಕಳನ್ನು,
ಕಾಯಿಸಿ,
ಗೋಗರಿಸಿ,
ತೊರೆದು,
ನಡುಗಿಸಿ,
ಗುಡುಗಿ,
ಆರ್ಭಟಿಸಿ,
ಆಲಾಪಿಸಿ,
ಪ್ರಲಾಪಿಸಿ,
ಮೌನವಾಗಿ,
ಹನಿಹನಿಯಾಗಿ,
ಧಾರೆಯಾಗಿ,
ಮುನಿದೋ,
ಒಲಿದೋ,
ಮುದ್ದಿಸಿ,
ಮೀಯಿಸುತ್ತಾನೆ
ಈ ಮೇಘರಾಜ....!!

Thursday, March 31, 2016

ಬಾ ಮಳೆಯೇ ಬಾ...

ಬಸಿರೆಲೆ ಸಿಡಿದು 
ಹಳದಿಯಾದ ಅಡಿಕೆ ಮರ ,
ಹೂ ಬಿಟ್ಟು ತಾಯಿಯಾಗದ 
ಮಾವಿನ ಮರ, 
ಏದುಸಿರು ಚೆಲ್ಲಿ ತೇಲುವ
ತೋಡಿನ ಸರು ಮೀನು,
ಪೊರೆ ಕಳಚಿ ನಗ್ನವಾದರೂ
ಸೆಕೆ ತಾಳದ ನಾಗರಹಾವು,
ಬೆವರಿದ ಬೆಂಡದ
ಪಾರಿವಾಳದ ಟೊಳ್ಳು ರೆಕ್ಕೆಗಳು,
ಜೊತೆಗೆ
ಸಿರಿ-ಮುಡಿ ಕಳಚಿ,
ಬೆಂಡೋಲೆ ಕಿವಿಯ ಹರಿಸಿಕೊಂಡು ಭೂಮಿಕಾ,
ಮತ್ತೆ ಮತ್ತೆ ಕಾಯುತ್ತಿದ್ದಾಳೆ,
ಕಾದು ಕಾದು ಅವಿಯಾಗುತ್ತಿದ್ದಾಳೆ,
ಯಾವಾಗ?
ಮೇಘರಾಜ ಮಳೆಯ ಹೊತ್ತು ತರುವನೆಂದು ....!!!!!

Saturday, March 26, 2016

ಬಾ ಮಳೆಯೇ ಬಾ...

ಅವಳು ಕಾಯುತಿದ್ದಾಳೆ, ಅವನಿಗಾಗಿ ಇಡೀ ರಾತ್ರಿ, ಇಡೀ ದಿನ, ಇಡೀ ತಿಂಗಳು, ಅವಳು ಮುಡಿದ ಹೂವು ಬಾಡಿದೆ, ಹಾಲೆದೆ ಆರಿದೆ, ಶಾಂತಮೊಗೆ ನೆರಿ ಕಟ್ಟಿದೆ. ಈ ಬೇಸಗೆಯಲ್ಲಿ ಅವಳು ಕಾಮನ ಬಿಲ್ಲನ್ನೇ ನೋಡಿಲ್ಲ.

ಮತ್ತೆ ಮತ್ತೆ ಕಾಯುತ್ತಿದ್ದಾಳೆ, 
ಕಾದು ಕಾದು ಅವಿಯಾಗುತ್ತಿದ್ದಾಳೆ,
ಮಳೆ ಬರಲೇ ಇಲ್ಲ,
ನದಿ ಹರಿಯಲಿಲ್ಲ,
ಸಮುದ್ರ ಉಕ್ಕಲಿಲ್ಲ.....


ಹೌದು ಇದು ಇಳಾಳ  ಕಥೆ, ಅವಳೇನು ಅವನಿಗಾಗಿ ಸಂದೇಶ ಕಳುಹಿಸಿಲ್ಲ, ಹೊಸ ಸೀರೆ-ರವಿಕೆ ಹೊಲಿಸಿಲ್ಲ, ಮುಂದಲೆ ಬಾಚಿಲ್ಲ, ಮದುರಂಗಿ ಹಾಕಿಲ್ಲ. ಆದರೂ ಅವನು ಬರುತ್ತಾನೆ ನನ್ನ ಮೀಯುಸುತ್ತಾನೆ, ಮನ ತುಂಬಿ ಮುದ್ದಿಸುತ್ತಾನೆ, ಶೃಂಗರಿಸಿ ಕುಶಿ ಪಡುತ್ತಾನೆ ಎಂಬ ಅವಳ ಅದಮ್ಯ ಹಂಬಲ.


ಅವಳ ಅತುರವಲ್ಲ, ಬಲತ್ಕಾರವಿಲ್ಲ, ಅದು ಸಹಜ ಧರಿತ್ರಿ ಮಳೆಗಾಗಿ ಕಾಯುವ ಬಗೆ. ಕೆಡ್ಡಸ ಕಳೆದು ಋತುಮತಿಯಾಗಿದ್ರು ಮೇಘ ಬರಲೇ ಇಲ್ಲ, ಅಮ್ಮನಾಗಿ ಪೋಷಿಷಬೇಕಾದವಳು ತಾಯಿಯಾಗಲು ಕಾಯುತಿದ್ದಾಳೆ.


ಹೌದು ಕರಾವಳಿಗೆ ಬೇಸಿಗೆ ಮಳೆ ಕಾಲಿಟ್ಟಿಲ್ಲ, ಕರಾವಳಿ ಜನರೆಲ್ಲರೂ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ, ಬಿಸಿಲ ಬೇಗೆ ದೇಹವ ದಹಿಸುತಿದೆ, ಕೆಲಸವಿಲ್ಲದ ಬೆವರ ಗ್ರಂಥಿಗಳು ಸಕ್ರಿಯವಾಗಿವೆ, ನಲ್ಲೆ ಮುಡಿದ ಚೆಂಗುಲಾಬಿ ಬಾಡಿದೆ, ಪಲ್ಲಯದೊಳಗಿನ ಶೃಂಗಾರ ಮಾಸಿದೆ, ಸದ್ದಿಲ್ಲದ ಬೆಳದಿಂಗಳು ಶಾಖವಾಗಿದೆ. ಮಾವನ ಮನೆಯ ಅಡಿಕೆ ಮರ ಹಳದಿಯಾಗಿ ನೀರು ಬೇಡುತ್ತಿದೆ, ಚಿಕ್ಕಪ್ಪನ ಗದ್ದೆ ನೀರಿಲ್ಲದೆ ಮಕ್ಕಾಡೆ ಮಲಗಿದೆ. ಅಜ್ಜಿ ಮನೆಯ ಸೌತೆ ಸಣಕಲಾಗಿದೆ.  ಸರು ಮೀನು ತೋಡಿನಲ್ಲಿ ಬೆಂಕಿ ಇಲ್ಲದೆ ಬೇಯ್ಯುತ್ತಿದೆ.  ಗೇರು ಫಲ ಬಿಟ್ಟಿಲ್ಲ, ಮಾವು ನಿನೆನೇ ಕಟ್ಟಿಲ್ಲ.


ಮಳೆಯಲ್ಲಿ ಅರಳಬೇಕಾದ ಕವನಗಳು, ಮಳೆಗೆ ನೆನಪಾಗೋ ಅ  ಒಲವ ಹುಡುಗ... ಅವನ ಪ್ರೀತಿ ನಿರಾಕರಿಸಿದ ಭಾವಗಳೇ ಇರದ ಯೋಗಿಯಂತಹ  ಹುಡುಗಿ !!, ಕರಿದ ಹಲಸಿನ ಉಂಡ್ಲುಂಗ, ಕಳೆದು ಹೋದ ಮಳೆಯ ನೆನಪಲ್ಲಿ ಇಂದು ಬರಬಹುದು, ನಾಳೆಬರಬಹುದೆಂಬ ಹುಸಿ ಕನಸಿನ ರೈತ, ಜೊತೆಯಲ್ಲಿದ್ದಾಗ ಕಾಡದ ದೂರವಾದ ಮೇಲೆ ಕಾಡಿಸಿ ಕಾಡಿಸಿ ಕಾಡೋ ಈ ಮಳೆ ಹನಿ. ತಾಪಮಾನ ದಿನಂದಿನ ಏರುತ್ತಿದೆ, ಅದು ತನ್ನಿಂದ ತಾನೆ ಆಗಿ ಅವಿರ್ಭವಿಸಿದ್ದಲ್ಲ, ನಮ್ಮಿಂದಲೇ ಉಂಟಾದದ್ದು, ಮರ ಕಡಿಯುವುದು ಬಿಟ್ಟು ನೆಟ್ಟದಿಲ್ಲ, ಮನೆಯ ಎದುರಿನ ಅಂಗಳ ಸಹಜವಾಗಿ ಬಿಡದೇ ಇಂಟರ್ ಲಾಕ್ ಹಾಕಿದ್ದು,  ನಾಗಬನಗಳು ಸೈಟುಗಳಾಗಿವೆ, ನೇತ್ರಾವತಿ ತಿರುಗುತ್ತಿದ್ದಾಳೆ, MRPL ಬೆಳೆಯುತ್ತಿದೆ ಜೊತೆ ಜೊತೆಗೆ ಪುನರ್ಪುಳಿ ಶರಬತ್ತು ಕ್ಯಾನ್ ಇಂಗುತ್ತಿದೆ,  ಭೂತಕೋಲ ಕರಗುತ್ತಿದೆ. 


ಭುವಿಯ ಮಡಿಲ ತುಂಬುವ ಮುನ್ನ ತನಗಿಷ್ಟು ಇರಲೆಂದು ಹಸಿರೆಲೆ  ನೇಚಿ  ಚಾಚಿ ನಿಂತಿಹಳು ಬಾ ಮಳೆಯೇ ಬಾ... ಹೊಟ್ಟೆಹೊರೆವ ತೋಟ ಒಣಗುವ ಮುನ್ನ....


Friday, March 11, 2016

ಪಾತ್ರ ಬದಲಾಯಿಸಿದ ಪ್ರೀತಿ.

ಅವಳು ಇಳಾ ಹೆಸರಿಗೆ ತಕ್ಕಂತೆ ಆಕೆ ಶಾಂತೆ, ಸುಗುಣೆ, ಕರುಣಮಯಿಯವಳು, ಸೌಂದರ್ಯದೊಡತಿಯಲ್ಲದಿದ್ದರೂ ರೂಪವತಿ, ಮನೆಯಲ್ಲಿ ಎರಡನೇಯ ಹೆಣ್ಣು ಮಗಳಾಗಿ ಉತ್ತರ ನಕ್ಷತ್ರದಲ್ಲಿ ಹುಟ್ಟಿದುದರಿಂದ ಎಲ್ಲರಿಂದಲೂ ಒಂದಷ್ಟು ತಿರಸ್ಕಾರದಿಂದಲೇ ಬೆಳೆದವಳು, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ರೂ ಖುಷಿ ಪಡದ ಅಪ್ಪ, ಶಿಕ್ಷಕಿ ತರಬೇತಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಪಾಸಾದಾಗ ಸ್ಥಳೀಯ ವಾರ ಪತ್ರಿಕೆ ಸುದ್ಧಿಬಿಡುಗಡೆ ಸುಳ್ಯದಲ್ಲಿ ಭಾವಚಿತ್ರ ಬಂದಾಗ ಅತ್ಯಾನಂದವಾಗಿದ್ದ ಅಮ್ಮ, ಆಗಾಗ ಕಾಡುತ್ತಿದ್ದ ಬಾವ, ಮನೆಯಲ್ಲಿ ದೈವಗಳ ಭಂಡಾರವಿದ್ದುದರಿಂದ ಶುದ್ಧಾಚರಣೆಯ ವಿಧಿ ವಿಧಾನದ ಕಟ್ಟಲೆ, ಊರಜಾತ್ರೆಯ ವೈಭವ, ತಾನು ಹಾಡಿದ ಭಜನೆಗೆ ಸಿಕ್ಕಿದ ಹೊಗಳಿಕೆ, ಅತಿಯಾಗಿ ಹಚ್ಚಿಕೊಂಡಿದ್ದ ತಮ್ಮ, ತಾನು ಮಾಡಿದ ಆಡುಗೆಯ ಹೊಸ ರುಚಿ, ಕುಡಿತದಿಂದ ಸೊರಗಿ ಸೊರುತ್ತಿದ್ದ ಮನೆ, ಅವಳಿಂದಾಗಿಯೇ ಮನೆಗೆ ಬಂದ ಹೊಸ ಟಿವಿ, ಹತ್ತಿರದಲ್ಲಿದ್ದರೂ ದೂರವಿರುವ ಬಂಧುಗಳು ಹೀಗೆ ಅವಳು ಹೇಳುತ್ತಿದ್ದ ಬಾಲ ಜೀವನದ ಕಷ್ಟ - ಇಷ್ಟದ ಕಥೆ ನನ್ನನ್ನು ಆಕರ್ಷಿಸಿತ್ತು. 

ಅವಳ ಮುಗ್ದ ಕಿಟಿ ಕಿಟಿ ನಗು, ನಗುತ್ತಲೇ ಇರುತ್ತಿದ್ದ ಮೊಗ, ಮೋಸ-ಮೋಸ ಎಂದು ಗಂಭೀರವಾಗುವ ಮಾತು, ನಿಧಾನಿಸಿ ಮಾಡುವ ಲಘು ಹಾಸ್ಯ, ಜೀವನದ ಹೊರಮೈಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಪ್ರಕಟಿಸುವ ಅವಳ ಅನುಭವದ ನುಡಿಮುತ್ತು, ಕಷ್ಟ ನಷ್ಟಗಳನ್ನು ಅರಗಿಸಿ ಪಕ್ವವಾಗಿದ್ದ ಮನ, ಹಿರಿಯರ ಮೇಲಿದ್ದ ಒಂದಷ್ಟು ಗೌರವ, ಕಿರಿಯರ ಬಗೆಗಿದ್ದ ಆದರ , ಎಲ್ಲರಿಗೂ ಇಷ್ಟವಾಗುವಂತೆ ವ್ಯವಹರಿಸುತ್ತಿದ್ದ ಚಾಕ್ಯತೆ, ನೀನು ದುಡಿಯದ್ದಿದ್ದರೂ 50KG ಅಡಿಕೆ ಸುಲಿದಾದರೂ ನಿನ್ನನ್ನು ಸಾಕುವೆನೆಂಬ ಕೆಚ್ಚು ಅವಳಡೆಗೆ ನನ್ನನ್ನು ತನ್ನಿಂದ ತಾನೇ ಸೆಳೆದದ್ದು.. 

ನಮ್ಮದು ಸುಮಾರು 8ವರ್ಷಗಳ ಪ್ರೀತಿ - ಸ್ನೇಹಗಳ ಮಿಶ್ರಣ ತಿಂಗಳಲ್ಲೋಮ್ಮೆ ಮಾತಾನಾಡುತ್ತಿದ್ದ ಚರವಾಣಿ ನಮ್ಮ ಇರುವಿಕೆಯನ್ನು ನೆನಪಿಸುತ್ತಿತ್ತು ಅಷ್ಟೇ, ಭಾವನೆಗಳ ಸಂದೇಶ ರವಾನೆ ಅಪರೂಪಕ್ಕೆ ನಡೆಯುತ್ತಿತ್ತು. ಬೇಟಿಗೆ ಸಾಕ್ಷಿಯೇ ಇಂದಿನವರೆಗೆ ಸಿಕ್ಕಿಲ್ಲ. ಆಕೆ ಪ್ರೌಢಶಾಲಾ ಶಿಕ್ಷಕಿಯಾದುದರಿಂದ ಅವಳ ಪಾಠದ ವೈಖರಿಯ ವರ್ಣನೆಯೇ ನಮ್ಮ ಮಾತಿನ ಹೈಲೈಟ್... ನನ್ನನ್ನು ನೆನಪಿಸುತ್ತಿದ್ದ ನನ್ನ ದೇಶ ನನ್ನ ಜನ ದೇಶಭಕ್ತಿ ಗೀತೆ, ಕನ್ನಡ ವಾ್ಯಕರಣ, ಡಾರ್ವಿನ ಸಿದ್ಧಾಂತಗಳು, ದ್ವಿಮಾನ ಪದ್ದತಿಯ ವಿಚಾರಗಳು, ವೇದ ಗಣಿತ, ಸಂಸ್ಕೃತ ಶ್ಲೋಕ, ಹಳ್ಳಿ ಮದ್ದು, ರಾಸಾಯನ ಶಾಸ್ತ್ರದ ಸೂತ್ರಗಳ ಬಗೆಗೆ ಅವಳ ವಿಸ್ತಾರ ವಿವರಣೆ ಅರ್ಥವಾಗದಿದ್ದರೂ ಮುಕ್ತವಾಗಿ ಮುದ್ದು ಮುದ್ದಾಗಿ ಹೇಳುವಾಗ ಇಷ್ಟವಾಗುತ್ತಿತ್ತು. ಮತ್ತೆ ಪೋಲಿ ಹುಡುಗನಿಗೆ ಬೈದ ರಿಹರ್ಸಲ್, ಕಾಪಿ ಬರೆಯದ ಹುಡುಗಿಗೆ ಕೊಟ್ಟ ಇಂಪೋಸಿಷನ್,ತರಗತಿಯಲ್ಲಿ ಮಾತಾನಾಡಿದವರಿಗೆ ಕೊಟ್ಟ ಶಿಕ್ಷೆ ಹೀಗೆ ಹಲವು..

ನಮ್ಮ ಅಪರೂಪದ ಮಾತಲ್ಲೂ ಸಲುಗೆಯ ಮಾತಿರಲಿಲ್ಲ, ಲಘುತನವಿದ್ದದ್ದಿಲ್ಲ, ಹುಸಿ ಕೋಪದ ನೆಂಪೆ ಅಗಿಲ್ಲ, ಸ್ವಾರ್ಥದ ಅಮಿಷ ಇರಲಿಲ್ಲ, ಹೊಗಳಿಕೆಯ ಪದಪುಂಜವಿರಲಿಲ್ಲ, ಅದರೆ ಪ್ರೋತ್ಸಾಹದ ನುಡಿಗಳಿದ್ದವು, ಸಮಾನ ಮಾನಸದ ಬಯಕೆಗಳಿಗೆ ಹೋಲಿಕೆಯಿದ್ದವು, ಇದ್ದದ್ದರಲ್ಲೇ ಖುಷಿ ಪಡುತ್ತಿದ್ದ ಅವಳ ವ್ಯಕ್ತಿತ್ವ ನಮ್ಮ ನಿಜ ಸ್ನೇಹ  ಪ್ರೀತಿಯಾಗಲೂ ಸೇತುವಾಯಿತು..!!ಪರಿಮಿತ ಪ್ರೀತಿಯ ಮಾತು ಪರಿಧಿಯಲ್ಲಿ ಪರೀಕ್ಷೆಗೆ ಉತ್ತರಿಸುವಂತಿದ್ದರೂ ಸಮಯದ ಅಪವ್ಯಯವಾಗದಂತೆ ಅಗಾಗ ನಡೆಯುತ್ತಿತ್ತು, ಹೇಳಿಕೊಳ್ಳಲೂ ಏನೂ ಇಲ್ಲದ್ದಿದ್ದರೂ ಹೃದಯ ಜೋರಾಗಿ ಬಡಿದು ಮತ್ತೆ ಮತ್ತೆ ಮಾತಾಡಿಸು ಎಂದು ಪ್ರೀತಿಯನ್ನು ಎಚ್ಚರಿಸುತ್ತಿತ್ತು. ಪ್ರೀತಿ ನಿವೇದಿಸಿ ನಮ್ಮಿಬ್ಬರ ಒಡಲಾಳದಿಂದ ಅಂಗೀಕರವಾಗಿದ್ದರೂ ಅವಳ ಮನೆಯವರ ಕಾರಣವಲ್ಲದ ಕಾರಣದ ನೆವನಕ್ಕೆ ಮುದುಡಿ ಈ ವರ್ಷದ ಅದಿಯಲ್ಲಿ ಸುಗುಣವಂತನೊಂದಿಗೆ ಅವಳಿಗೆ ಮದುವೆ ಗೊತ್ತು ಮಾಡಲಾಯಿತು. ಪ್ರಿಯನಾಗಿ ಅಪ್ಪಿಕೊಳ್ಳಬೇಕಾದವ ನಾನು ಇಂದು ಪ್ರೀತಿಯ ಸೋದರನಾಗಿ ಅಲಂಗಿಸಬೇಕಾಗಿದೆಯಷ್ಟೇ...

ಸೇರುಗಟ್ಟಲೇ ಪ್ರೀತಿ, ಬೊಗಸೆ ತುಂಬಾ ಮಮತೆ ಕಡಿಮೆಯಾಗಿಲ್ಲ ಅದರೆ ಪ್ರೀತಿಯ ರೂಪಿಕ ಹಾಗೂ ಸಂಬಂಧದ ಪಾತ್ರ ಬದಲಾಗಿದೆಯಷ್ಟೇ,"ಕಳೆದುಕೊಂಡ ಕವಿತೆಯ ಕನೆರಿನಂತೆ,ಆಡದೇ ನುಂಗಿದ ಪೋಲಿ ಒಂದು ಪದಗುಚ್ಚದಂತೆ ,ಯಾರದೋ ನೋವಿಗೆ ನನ್ನಲ್ಲೇ ಉಳಿದ ನಿಟ್ಟುಸಿರಿನಂತೆ,ಬೇರ್ಪಡದ ಪ್ರೀತಿ ನನ್ನಲ್ಲೇ ಜೋಪಾನವಾಗಿದೆಮತ್ಯಾರಿಗೋ ಕಾಯುತ್ತಿದೆ"ಸೋದರಿ, ನಿನ್ನ ನೆನೆದವರ ಮನ ಹೂವಿನಂತೆ ಅರಳಿಸಿ, ಹುಟ್ಟಿದ ಮನೆಯ ಕಾಲಿಟ್ಟ ಮನೆಯ ಬೆಳಗುತ್ತಾ, ಸನ್ನಡತೆಯ ಪ್ರಿಯನೂ ಹೂವಿನಂತೆ ಜೋಪಾನ ಮಾಡುವವನ ಜೊತೆಯಾಗಿ, ನಂಬುಗೆಯ ಸ್ನೇಹಿತೆಯಾಗಿ, ಅತ್ಮೀಯ ಸೊಸೆಯಾಗಿ, ಪ್ರೀತಿಯ ಅಮ್ಮನಾಗಿ, ಇಷ್ಟದ ಟೀಚರ್ ಆಗಿ ಸಾರ್ಥಕವಾಗಿ ಬದುಕು ಎಂಬುವುದೇ ನನ್ನಾಸೆ ಮತ್ತು ಹಾರೈಕೆ ಅಪ್ಪು. 
ಶುಭವಾಗಲಿ.
ನಿನ್ನೊಲುಮೆಯ ,
ಪುಟ್ಟಾ...

ಮಹಿಳಾ ದಿನಾಚರಣೆ

ಘಟನೆ ೧. ಇಂಚರ ಚಿಗರೆಯಂತಹ ಹುಡುಗಿ, ಅಣ್ಣನ ಮದುವೆಯಲ್ಲಿ ಮದುವೆ ಹೆಣ್ಣು ಅತ್ತಿಗೆಗಿಂತ ಹೆಚ್ಚು ನಾನೇ ಮಿಂಚಬೇಕೆಂದು ತನಗೆ ಬೇಕಾದ ಸೌಂದರ್ಯವರ್ಧಕಗಳನ್ನು ತಿಂಗಳ ಮೊದಲೇ ಖರೀದಿಸಿದ್ದಾಳೆ, ಮ್ಯಾಚಿಂಗ್ ಬಟ್ಟೆಗಳನ್ನೇ ಹಾಕಿ ಕುಣಿದಾಡಿದ್ದಾಳೆ, ತನ್ನ ಕಾಲೇಜು ಗೆಳೆಯ ಗೆಳತಿಯರನ್ನು ಆಮಂತ್ರಿಸಿದ್ದಾಳೆ. ಮೇಕಪ್ ಮಾಡುವ ಹುಡುಗಿಯನ್ನು ಸಂಪರ್ಕಿಸಿದ್ದಾಳೆ ಅದರೆ ಮದುರಂಗಿಯ ದಿನ ಪ್ರಕೃತಿಯ ಕರೆಗೆ ಮುಟ್ಟಾಗುತ್ತಾಳೆ. ಅಮ್ಮನ ಅಪ್ಪಣೆಯಂತೆ ಕೊಟ್ಟಿಗೆಯ ಜಗಲಿಯಲ್ಲೇ ಅವಳ ಸ್ಥಾನ. ದೇವಸ್ಥಾನದ ಅಂಗಣದ ಮದುವೆ ಮಂಟಪಕ್ಕೆ ಪ್ರವೇಶವಿಲ್ಲ. ಕುಳಿತ್ತಲ್ಲೇ ಕಣ್ಣು ಕತ್ತಲೆ ಬಂದಿತ್ತು ಇಂಚರಳಿಗೆ ನಾಳೆಯ ನೆನೆದು.
ಘಟನೆ ೨. ಪ್ರಿಯಾ ತನ್ನ ದೂರದೂರಿನ ಗೆಳತಿ ಮಾಮ್ತಾಜ್‍’ಳ ಮದುವೆಗೆ ಸಹಪಾಠಿಗಳೊಂದಿಗೆ ಬಾಡಿಗೆ ವಾಹನದಲ್ಲಿ ಉಡುಗೊರೆಯೊಂದಿಗೆ ಹೋಗಿದ್ದಳು, ಸುಮಾರು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮನೆಯೊಳಗಿದ್ದ ಮದುಮಗಳನ್ನು ನೋಡಬೇಕೆಂದು ಕಾದು ಕಾದು ಸುಸ್ತಾಗಿ ಉಡುಗೊರೆಯನ್ನು ಮಾಮ್ತಾಜ್‍’ಳ ಅಪ್ಪನೊಂದಿಗೆ ಕೊಟ್ಟು ಬೇಸರದಿಂದ ಹಿಂದುರುಗಿದ್ದರು.
ಮೇಲಿನಂತಹ ಅನುರೂಪ ಘಟನೆಗಳು ನಮ್ಮ-ನಿಮ್ಮ ದೈನಂದಿನ ಅನುಭವಕ್ಕೆ ಬರುವಂತಹುದು. ಪುರುಷ ಸಮಾಜವೆಂದು ಕಕ್ಕುವ ವಿಷಮ ಮೌಢ್ಯಗಳಿವು. ಹೆಣ್ಣು ಅನುಭವಿಸಿ ಅನುಸರಿಸಲೇಬೇಕೇಂದು ದೈವ, ದೇವರು, ಧರ್ಮದ ಹೆಸರಿನಲ್ಲಿ ಹೇರಿಕೆಯ ಹೊರೆಯನ್ನು ಇಂದಿನ ಸಮಾಜವೂ ಹೊತ್ತುಕೊಂಡು ಬಂದಿರುವುದು ಖೇದಕರ. ನಾವು ಮಾಡಿಕೊಂಡ ಧರ್ಮ, ಸಂಸ್ಕಾರ, ಶುದ್ಧಿ ನೆಪದ ಅನುಲಂಘ್ಯ ಕಟ್ಟಲೆಗಳು ಹೆಣ್ಣನ್ನು ಗಂಡಿನ ಕಣ್ಣುಗಳಿಂದ ಕಾಪಾಡಲಿಕ್ಕಿರುವಂತಹುದು ಅದಕ್ಕಾಗಿ ಮುಸುಕು, ಮುಟ್ಟು, ಅಬಲತೆ, ಅಶುದ್ಧತೆಯ ನೆವಗಳು… ನಿಜವಾಗಿಯೂ ಮೈಲಿಗೆ ಇರುವುದು ಗಂಡಿನ ದೃಷ್ಟಿಯಲ್ಲಿ, ಮನಸ್ಸಿನಲ್ಲಿ, ಮೆದುಳಿನಲ್ಲಿ ಅದರೆ ಮುಲಾಮು ಔಷಧ ಹೆಣ್ಣಿನ ಮೈಯಿಗೆ, ಹೆಣ್ಣಿನ ಶಕ್ತಿಗೆ. ಸಮಾನತೆಯೆಂಬುವುದು ಬರುವುದು ಬರೀ ನಾವು ಮಾಡುವ ಭಾಷಣದಿಂದಲ್ಲ, ಕವಿತೆಯಿಂದಲ್ಲ, ಅಥವಾ ಇಂತಹ ಅಪಕ್ವ ಬರಹದಿಂದಲ್ಲ ಅದು ವ್ಯಕ್ತಿಯ ಅಂತರ್ಯದ ಭಾವನೆಗೆ ಚೇತನ ತುಂಬಿ ಅವಳ ವೇದನೆ ನನ್ನದೆಂದಾಗ ಮಾತ್ರ ಸಾಧ್ಯ.
ಕರಾವಳಿಯ ದೈವಾರಾಧನೆ ಇರುವ ಮನೆಗಳಲ್ಲಿ ಇಂದಿಗೂ ತಿಂಗಳ ರಜೆಯ ಸಮಯದಲ್ಲಿ ಮನೆಯ ಹೆಂಗಸರಿಗೆ 3-4 ದಿನ ಕೊಟ್ಟಿಗೆಯಲ್ಲಿ ಅಸ್ಪೃಶ್ಯರಂತೆ ಬದುಕುವ ಶಿಕ್ಷೆ, ದೂರದಿಂದ ಊಟ ಕೊಡುವ ಅತ್ತೆ, ಮಾರು ದೂರ ನಿಂತು ಮಾತಾಡಿಕೊಳ್ಳುವ ನವದಂಪತಿ, ಸಮಾರಂಭಗಳು ನಿಷಿದ್ಧ ಇವು ಧಾರ್ಮಿಕ ವಿಚಾರವಾದರೆ ರಾತ್ರಿಯ ಸಮಾರಂಭಗಳಿಗೆ ಹೋಗುವುದು ಬೇಡ, ದೂರದಲ್ಲಿ ಜರಗುವ ಎನ್.ಸಿ.ಸಿ ಕ್ಯಾಂಪ್’ನಲ್ಲಿ ಭಾಗವಹಿಸುವುದು ಬೇಡ, ದಾರಿಯಲ್ಲಿ ನಿಂತು ಮಾತಾನಾಡಬೇಡ, ದಾರಿಯಲ್ಲಿ ಒಂಟಿಯಾಗಿ ಬರಬೇಡ, ಆ ಕಾರ್ಯಕ್ರಮಕ್ಕೆ ಹೋಗೋದು ಬೇಡ, ಅದು ಇದು ಎಂದು ಏನೇನನ್ನೋ ಊಹಿಸಿಕೊಂಡು , ನಿನ್ನೆಯ ದಿನಪತ್ರಿಕೆಯಲ್ಲಿ ಬಂದ ಅಪ್ರಿಯ ಸುದ್ದಿ, ತಡರಾತ್ರಿ ದೂರದರ್ಶನದಲ್ಲಿ ಬಿತ್ತರಗೊಂಡ ಅಹಿತಕರ ಘಟನೆಯಲ್ಲಿ ತನ್ನ ಮಗಳನ್ನು ಕಲ್ಪಿಸಿಕೊಂಡು ಪ್ರೀತಿಯ ಬಂಧನ ಸದಾ ಸೀದಾ ಸ್ವಾತಂತ್ರ್ಯಕ್ಕೆ ತಡೆ ಮಾತ್ರ ಹೌದು.
ಅವಳ ಕಣ್ಣೊಳಗೆ ಅವಿತಿರುವ ಪುರ್ಕು ತುಂಬಿದ ನೀರು, ಎದೆಯೊಳಗಣ ಶಾಖ, ಒಡಲೊಳಗಿನ ದೊಂಬಿ, ಬಾಹ್ಯ- ಅಂತರ್ಯ ರೂಪಾಂತರ, ಮಾನಸಿಕ ತಲ್ಲಣ, ಮೆದುಳಿನ ಚಂಚಲಗಳಿಗೆ ಮತ್ತಷ್ಟು ಜವ ನೀಡುವ ಈ ಕಟ್ಟಲೆಗಳು ಅವಳನ್ನು ಇನ್ನಷ್ಟು ಜರ್ಝರಿತಗೊಳಿಸುತ್ತವೆ. ತಿಂಗಳ ಮುಟ್ಟೆಂದರೆ ಅದು ಚಂದ್ರನ ಋತುಚಕ್ರ ಹುಣ್ಣಿಮೆ – ಅಮಾವಾಸ್ಯೆ ಅಷ್ಟೇ ಪ್ರಕೃತಿ ಸಹಜ ಅದು ಅಗಲೇಬೇಕು ಹಾಗಾಗದಿದ್ದರೆ ಅವಳು ಹೆಣ್ಣೇ ಅಲ್ಲ. ನಮಗೆ ಹುಣ್ಣಿಮೆಯ ಚಂದ್ರ ಬೇಕು ಆಮಾವಾಸ್ಯೆಯ ಶಶಿ ಬೇಡವೆಂದರೆ ಹೇಗೆ?.
ಇಂದಿನ ಸಮಾಜದಲ್ಲಿ ಒಂದಷ್ಟು ಶೋಷಣೆ ನಡೆಯುತ್ತಿದೆಯಾದರೂ ಅದು ದಿನಚರಿಯ ಭಾಗವೆಂದೇ ವಿರೋಧದ ದನಿಯಿಲ್ಲದೇ ಸಾಗುತ್ತಿದೆ, ವಿದ್ಯಾವಂತರೂ ಸುಮ್ಮನಿದ್ದಾರೆ. ಎಲ್ಲ ವಿಚಾರಕ್ಕೂ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಶಿಕ್ಷಣದ ಕೊರತೆಯೆಂದು ದೂರುವ ನಾವುಗಳು ಶಿಕ್ಷಣವಿದ್ದರೂ ಅಷ್ಟವೈರಿಗಳಿಗೆ ಸಮಾನದ ಇಂತಹುಗಳು ನಮ್ಮಲ್ಲೇ ಶಾಖವಾಗಿ ಬೆಚ್ಚಗೆ ಇನ್ನೂ ಸುಖವಾಗಿವೆ ಎಂಬುವುದು ವಿರ್ಪಯಾಸದೊಂದಿಗೆ ಕುಹಕವಾಡುತ್ತಿವೆ.
ಪ್ರತಿ ದಿನವೂ ತೊಳೆದು ಮಡಿ ಮಾಡುವ ಅಂಗಿ, ಸೀರೆಗಳಲ್ಲಿ ಇಷ್ಟೊಂದು ಕೊಳೆ ಇರಬೇಕಾದರೆ ಮನಸ್ಸಿನಲ್ಲಿ ತುಂಬಿರುವ ಕೊಳೆಯ ಕಳೆಯನ್ನು ಕಳೆಯುವುದಾದರೂ ಹೇಗೆ?
ಮಹಿಳಾ ಸ್ವಾತಂತ್ರ್ಯ ಕೆಲವೊಮ್ಮೆ ದುರ್ಬಳಕೆಯೂ ಅಗುವುದಿದೆ. ಅಬಲೆಯಿಂದ ಸಬಲೆಯಾಗುವ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ ಅದರಿಂದ ಏನನ್ನು ಗಳಿಸುತ್ತಾಳೋ ಗೊತ್ತಿಲ್ಲ ಅದರೆ ಅಷ್ಟೇ ಸ್ತ್ರೀ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಒಟ್ಟಾರೆ ಈ ಧಾರ್ಮಿಕ ನಿಷಿದ್ಧ, ಸಾಮಾಜಿಕ ಚೌಕಟ್ಟುಗಳ ಚೌಕಾಶಿಯಲ್ಲಿ ಕಟ್ಟುಪಾಡು ಸಡಿಲಗೊಳಿಸಿದ ಮಾತ್ರಕ್ಕೆ ಪುರುಷ ಕಳೆದುಕೊಳ್ಳುವುದೇನಿಲ್ಲ, ಮುಕ್ತವಾದ ಮಾತ್ರಕ್ಕೆ ಮಹಿಳೆ ಹಾರುವ ಹಕ್ಕಿಯಾಗುವುದಿಲ್ಲ. ಅದೇನಿದ್ದರೂ ಮಾನಸಿಕ ಹಿಂಸೆ ಕಡಿಮೆಯಾಗಿ ನಿರಾಳವಾಗಬಹುದು ಮತ್ತು ದೃಷ್ಟಿಕೋನದ ಸ್ಥಳಾಂತರ ಪ್ರಕ್ರಿಯೆಯಷ್ಟೇ. ಏನೇ ಅಗಲಿ ತಮ್ಮ ಮನೆಗಳಲ್ಲೂ ಇಂತಹ ದಿನಚರಿಯಿದ್ದರೆ ಕೆಲವನ್ನು ತೊರೆದು ಬಿಡಿ, ಅವಳು ನಗುತಿರಲಿ, ಮನ ಶುದ್ಧವಾಗಿರಲಿ. ಮಹಿಳಾ ದಿನಾಚರಣೆಯ ಶುಭಾಶಯಗಳು.

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...