Sunday, August 23, 2015

ತುಳುವರಲ್ಲಿ ತೆಂಗಿಗಿರುವ ಪ್ರಾಮುಖ್ಯತೆ.

ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅಲ್ಲೇ ಬೆಳೆದ ಫಲವಸ್ತುಗಳಿಗೆ ರಾಜಮರ್ಯಾದೆ ದೇವಸ್ಥಾನದ ಹೊರಕಾಣಿಕೆ, ಶುಭಸಮಾರಂಭ, ಕೆಡ್ಡಸ, ಅಥವಾ ವಿಶೇಷ ದಿನಗಳಲ್ಲಿ, ಬಾಳೆ ಎಲೆಯಿಂದ ಹಿಡಿದು, ತೆಂಗಿನ ಸಿರಿಯವರೆಗೆ ಮೆಲ್ಪಂಕ್ತಿ, ಅದರಲ್ಲೂ ಕಲ್ಪವೃಕ್ಷ ತೆಂಗಿಗೆ ಉತ್ತುಂಗದ ಸ್ಥಾನ. ಪ್ರತಿದಿನದ ಆಗುಹೋಗುಗಳಲ್ಲಿ ಇದು ಮಿಲಿತವಾಗಿದೆ. ತೆಂಗು ಇಲ್ಲದ ಅಡುಗೆ ಊಹಿಸಲಸಾಧ್ಯ. ದಿನದ ಪ್ರತಿ ಅಡುಗೆಯಲ್ಲಿ ತೆಂಗಿನೆಣ್ಣೆ, ತೆಂಗಿನಕಾಯಿ ಮಾಮೂಲಿ ಅತಿಥಿ. ಅದು ಪಾಯಸವಿರಲಿ, ಮಾಂಸದಡುಗೆಯಿರಲಿ, ಸಸ್ಯಾಹಾರವಾಗಿರಲಿ ಎಲ್ಲದರಲ್ಲೂ ಪಾರುಪತ್ಯವಿದೆ.  ಪುದ್ವರ್(ಹೊಸ ಅಕ್ಕಿ ಊಟ)ದಂದು ತೆಂಗಿನತುರಿ ಕಡೆದು ಹಾಕಿದ ಊಟವೇ ಆಗಬೇಕು, ಪಾಯಸ ಯಾವುದರದಾದರೂ ರುಚಿ ಹೆಚ್ಚಿಸಲು ಮತ್ತು ಪಾಯಸ ಮಂದ ಮಾಡಲು ದನದ ಹಾಲಿಗೆ ಪೂರಕವಾಗಿ ತೆಂಗಿನ ಹಾಲೇ ಬೇಕು.

ಸಭೆ ಸಮಾರಂಭಗಳಲ್ಲಿ ಪೂರ್ಣಕುಂಭ ಸ್ವಾಗತ, ಮದುವೆದಿನದ ಕಲಶ ಕನ್ನಡಿ, ಮದಿಮಾಲ್ ಮದ್ಮೆಯ ಧಾರೆಯೆರೆಯಲು, ನಿಷಿಂಚನ, ಪ್ರತಿ ದೇವಸ್ಥಾನದ ಸೇವೆಗಳ ಪ್ರಸಾದ, ನಾಗರಾಧನೆ, ದೈವಗಳಿಗೆ, ಗುರುಕಾರ್ಣೆವರಿಗೆ ಅಗೆಲು ಹಾಕಿ ತಂಬಿಲ ಕಟ್ಟಲು ಬೇಕೇ ಬೇಕು. ಪೂಜೆಯಲ್ಲಿಡುವ ಸ್ವಸ್ತಿಕಗಳಲ್ಲೆಲ್ಲ ತೆಂಗಿನಕಾಯಿಯಿಲ್ಲದೇ ಪೂರ್ಣವಾಗುವುದೇ ಇಲ್ಲ. ಜಾತ್ರೋತ್ಸವದ ಸಂದರ್ಭ ದೇವಸ್ಥಾನದ ತೋರಣ, ಕೊಡಿಮರಗಳು ಬೋಂಡ, ತೆಂಗುಗಳಿಂದಲೇ ಸಿಂಗರಿಸಲ್ಪಡುವುದು. 

ತುಳುನಾಡಿನ ಪ್ರತಿ ಮನೆಯಲ್ಲೂ ಕಲ್ಪವೃಕ್ಷ  ಸಾಮಾನ್ಯ, ಬಚ್ಚಲಿನ ನೀರು ಅಥವಾ ವ್ಯರ್ಥವಾಗುವ ನೀರು ಸೀದಾ ತೆಂಗಿನ ಮರದ ಬುಡಕ್ಕೆ, ಹೊಸ ನೆಂಟರು, ಅಪರೂಪದವರೂ, ಅಧಿಕಾರಿಗಳು, ಶುದ್ಧಚರಣೆ ಮಾಡುವವರಿಗೆ ಸೀಯಾಳವೇ ಮಾರ್ಯಾದಿಯ ಸಂಕೇತ. ಮದುವೆಯಾದ ಜೋಡಿಗೆ ಮದುವೆಯ ತುಪ್ಪದ ಕಾರ್ಯಕ್ರಮದಲ್ಲಿ ಎಳನೀರೆ ಬಾಯಾರಿಕೆ ನಿವಾರಿಸುವುದು. ಹೆಣ್ಣು ಮೊದಲ ಭಾರಿ ಮುಟ್ಟದಾಗ ಹೆಣ್ಣನ್ನು ಶುದ್ಧೀಕರಿಸಿ ಮರುಸೇರ್ಪಡೆಗೊಳಿಸುವ ಮತ್ತು ಸಾಮಾಜಿಕವಾಗಿ ಹೊರಗಾದ ಹೆಣ್ಣನ್ನು ಶುದ್ಧೀಕರಿಸುವ ಮತ್ತು ಹೆಣ್ಣು ಫಲ ಕೊಡುವ ಸಾಮರ್ಥ್ಯವನ್ನು ಪಡೆದಿರುವ ಸಂಗತಿಯನ್ನು ಸಾಮಾಜೀಕರಿಸುವ ‘ಮದಿಮ್ಮಾಲ್‌ಮದಿಮೆ’ ಕ್ರಿಯಾಚರಣೆಯ ಸನ್ನಿವೇಶದಲ್ಲಿ ಸಿಪ್ಪೆ ಸುಲಿಯದ ತೆಂಗಿನಕಾಯಿಗಳು ಪ್ರಧಾನವಾಗಿ ಆಯ್ಕೆಗೊಳ್ಳುತ್ತವೆ. ಒಸುಗೆಯಾರತಿಯ ಈ ಸಂದರ್ಭದಲ್ಲಿ ತಂಪು ಮಾಡಲೂ ಬನ್ನಂಗಾಯಿಯೇ ಬೇಕು, ಅಸೌಖ್ಯದವರಿಗೆ ಶಕ್ತಿವರ್ಧಕವಾಗಿ ಬಳಕೆಯಾಗುವುದು ಇದೇ.
ಪಂಚಕಜ್ಜಾಯದ ತೆಂಗಿನಕಾಯಿ 

ತೆಂಗಿನ ಪಾವಿತ್ರ್ಯತೆಯ ಬಗೆಗಿನ ನಂಬಿಕೆಗಳು ವಿಶೇಷವಾದವುಗಳು ಪ್ರತಿ ಗ್ರಹಣದ ನಂತರ ಮಂತ್ರಿಸಿದ ಬಿಳಿ ಬೈರಾಸಿನಲ್ಲಿ ಸುತ್ತಿದ ತೆಂಗಿನ ಕಾಯಿಯನ್ನು ಧರ್ಮಸ್ಥಳದಿಂದಲೋ, ಕುಂಟಾರಿನಿಂದಲೋ ತಂದು ಮನೆಯ ರಕ್ಷೆಯಾಗಿ ಮನೆಯ ಎದುರಿನ ಪಾಕ್ಕಾಸಿಗೆ, ಮಾಡಿಗೋ ಕಟ್ಟಿ ಪ್ರಾರ್ಥಿಸುವುದು ತುಳುವರಿಗೆ ತೆಂಗೊಂದು ದೈವಿ ಶಕ್ತಿಯ ರೂಪದಲ್ಲಿ ರಕ್ಷಣ ಕವಚವಾಗುತ್ತದೆ. ಖಾಲಿ ತೊಟ್ಟಿಲಲ್ಲಿ ನೀರಿರುವ ತೆಂಗಿನಕಾಯಿ ಹಾಕಿಡುವುದು , ಇಲ್ಲದಿದ್ದರೆ ಕುಲೆ ಪೀಡೆಗಳು ಮಲಗುತ್ತವೆಯಂತೆ ಎಂಬ ನಂಬಿಕೆಯ ಹಿಂದೆ ಜೊಗುಳ ಹಾಡಿ ತೂಗಿಸಿದ  ಮಲಗಿಸುತ್ತಿದ್ದ ತೊಟ್ಟಿಲು ಯಾವಾಗಲೂ ಮಗುವನ್ನು ತೂಗುತ್ತಿರಲಿ ಅನಾಥನಾಗುವುದು ಬೇಡವೆಂದು ಸಂಬಂಧ ಅಮರಕ್ಕಾಗಿ ತೆಂಗು ನೆಪ ಮಾತ್ರ. ಚೌತಿಯ ದಿನ ಸಂಜೆ ಚಂದ್ರನ ನೋಡಿದರೆ ತೆಂಗಿನ ಮರ ನೋಡಬೇಕು, ಬೆಳಗೆದ್ದು ತೆಂಗಿನ ಮರದ ಕುಬೆ ನೋಡಿದರೆ ಶುಭ, ಕಾಗೆ ಸ್ನಾನ ಮಾಡುವುದು ಕಂಡರೆ ಅಪಶಕುನ ಅದಕ್ಕೆ ಪರಿಹಾರವಾಗಿ ಏಳು ತೆಂಗಿನ ಮರ ನೋಡಬೇಕು , ಆಕಾಶದಲ್ಲಿ ನಕ್ಷತ್ರ ಚಲಿಸುವುದನ್ನು ಕಂಡರೆ ಸಾಲವಾಗುವುದಂತೆ ಆದಕ್ಕೆ ತೆಂಗಿನ ಮರ ನೋಡಬೇಕಂತೆ ಅದೇ ನಮ್ಮ ಸಾಲಕ್ಕೆ ಜಾಮೀನು ಇವೆಲ್ಲ . ಅಷ್ಟಮಿಯಂದು ತೆಂಗಿನ ಗಿಡ ನೆಟ್ಟರೆ ಉತ್ತರೋತ್ತರ ಅಭಿವೃದ್ಧಿಯೆಂಬ ನಂಬಿಕೆಯೂ ಇದೆ. ಇದೇ ದಿನ ಸಂಜೆ "ತಾರಾಯಿ ಕುಟ್ಟುವ" ಸ್ಪರ್ಧೆಯೂ ನಡೆತ್ತದೆ ಇದು ಇಬ್ಬರು ಎದುರು ಬದುರು ಕುಳಿತು ತಮ್ಮ ತೆಂಗಿನ ಕಾಯಿಗಳನ್ನು ಗುದ್ದಿಸಿಕೊಳ್ಳುವುದು ಯಾರ ತೆಂಗಿನಕಾಯಿ ಒಡೆಯುವುದಿಲ್ಲವೋ ಆತನೇ ವಿಜಯಿ ಹಾಗೂ ಎರಡು ತೆಂಗಿನ ಕಾಯಿಯ ಒಡೆಯ. ಬಾಣಂತಿಯರು 16ದಿನದವರೆಗೆ ತೆಂಗಿನ ಕಾಯಿ ಹಾಕಿದ ಖಾದ್ಯ ತಿನ್ನದೇ ಪಥ್ಯ ಮಾಡಬೇಕು ಅದು ದೇಹವನ್ನು ತಂಪು ಮಾಡುತ್ತದೆ ಎಂಬ ವೈಜ್ಞಾನಿಕತೆಯು ಗುಟ್ಟು ಇದರ ಹಿಂದೆ ಅಡಗಿದೆ. ಮರಣವಾದ ಮನೆಯವರು 16ದಿನ ಕಾಲ ತೆಂಗಿನಿಂದ ತಯಾರಿಸಿದ ಖಾದ್ಯ ತಿನ್ನದೇ ವೃತಚರಿಸಬೇಕು ಎಂಬ ಕಟ್ಟಲೆಯೂ ಇದೆ . ತೆಂಗಿನ ಗಡಿಯನ್ನು ಆಕಾಶ ಮುಖ ಮಾಡಿ ದಿಕ್ಕೆಲಿನ ಬದಿಯಲ್ಲಿ ಇಡಬಾರದು ಯಾಕೆಂದರೆ ಅದು ಅಂತ್ಯಸಂಸ್ಕಾರ ದಿನ ನಡೆಸುವ  ಕ್ರಮವೆಂಬ ನೆಲೆಯಲ್ಲಿ ನಮ್ಮ ಇರುವು ಮತ್ತು ಇಲ್ಲದಿರುವಿಕೆಯ ವ್ಯತ್ಯಾಸವನ್ನು ಗುರುತಿಸುವಿಕೆಯ ನಂಬಿಕೆಯಾಗಿದೆ. ಮನೆಯಲ್ಲಿ , ಕಾರ್ಯಕ್ರಮಗಳಲ್ಲಿ ತೆಂಗಿನ ತುರಿಗಾಗಿ ಮೊದಲು ಹೆಣ್ಣು ಗಡಿಯನ್ನೇ ಹೆರೆಯಬೇಕು ಏಕೆಂದರೆ ಮನೆಯ ಹೆಣ್ಣನ್ನು ಮೊದಲು ಮದುವೆ ಮಾಡಿಸಬೇಕು ಎಂಬ ಹಾಸ್ಯ ವಿಡಂಬನೆ ಇದ್ದರೆ, ಮದುವೆಯಾಗದ ಹುಡುಗರು ತೆಂಗಿನಕಾಯಿ ಭಾಗಮಾಡುವಾಗ ಹೆಣ್ಣು ಗಡಿ ದೊಡ್ಡದಾದರೆ ಆತನಿಗೆ ಆತನಿಂದ ಎತ್ತರವಿರುವ ಹುಡುಗಿ ಸಿಕ್ಕುತ್ತಾಳೆ ಎಂಬ ತಮಾಷೆಯೂ ಇದೆ. 

ಭೂತರಾಧನೆ ಸಂದರ್ಭ ಸಿರಿ ಕಟ್ಟಲು ತೆಂಗಿನ ಗರಿಯೇ ಬೇಕು, ದೇವಸ್ಥಾನಕ್ಕೆ ಪೂಜೆಗೆ ,ಗಣಪತಿಗಿಡಲೂ, ದೈವರಾಧನೆಗೆ ಮುಗಂಡವಿರುವ ತೆಂಗಿನಕಾಯಿ ಬೇಕು, ಕಲ್ಲಿಗೊಡೆದ ತೆಂಗಿನಕಾಯಿಯ ಗಡಿ ಆಕಾಶ ಮುಖ ಮಾಡಿದ್ದರೆ ಮಾಡಿದ ಪೂಜೆ ದೇವರಿಗೆ ಸಮರ್ಪಣೆ ಆಗಿದೆ ಎಂಬುವುದಕ್ಕೆ ಉತ್ತರವಾದರೆ, ದೈವ(ತಾರಾಯಿ ಪಾರಾವೂನಾ) ತೆಂಗಿನ ಕಾಯಿ ಹಾರಿಸಿ ಅದು ಪೂರ್ವ ಪಶ್ಚಿಮಭಿಮುಖವಾಗಿ ಬಿದ್ದರೆ ಮಾಡಿದ ಕೋಲದ ಸೇವೆಯನ್ನು ಸಂಪೂರ್ಣವಾಗಿ ಸ್ವೀಕರಿಸಿದೆ ಎಂದರ್ಥವೂ ಇದೆ. ಪ್ರಾಣಿಬಲಿಗೆ ಪರ್ಯಾಯ ವಸ್ತುರೂಪವಾಗಿ ಧಾರ್ಮಿಕ ಕ್ರಿಯಾಚರಣೆಗಳಲ್ಲಿ ತೆಂಗನ್ನು ಅಪರ್ಿಸುವ ಕ್ರಮವಿದೆ, ಇಲ್ಲಿ ಬಲಿಯ ಕಲ್ಪನೆ ಜೊತೆಗೆ ಅಹಿಂಸೆಯ ನೆಲೆಯಲ್ಲಿ ತೆಂಗನ್ನು ಒಡೆಯಲಾಗುತ್ತದೆ. ಚಿಪ್ಪು ಒಡೆದು ನೀರು ಚೆಲ್ಲುವ ಮೂಲಕ ಪ್ರಾಣಿ ಬಲಿಯ ಅಥವಾ ರಕ್ತ ತರ್ಪಣದ ಕ್ರಿಯೆಯನ್ನು ಪ್ರತ್ಯಕ್ಷೀಕರಿಸಲಾಗುತ್ತದೆ.

ಮಕ್ಕಳಿಗೆ ಗಿರಿಗಿಟಿ, ಹಾವು, ಕೈಚೀಲ, ವಾಚು, ಸರಗಳು ತೆಂಗಿನ ಗರಿಯ ಆಟದ ಸಾಮಾನುಗಳು ಕೋತ್ತಲಿಂಗೆ ಕ್ರಿಕೆಟ್ನ ದಂಡು ಅಗುತ್ತದೆ,  ಮನೆಯ ಪಕ್ಕಾಸ್ಸಾಗಿ, ನೆರಳು ನೀಡುವ ತಟ್ಟಿಯಾಗಿ, ಮಲಗುವ ಚಾಪೆಯಾಗಿ, ಬೆಂಕಿಗೆ ವೇಗೋತ್ಕರ್ಷ ಕೊಡುವ ಮಡಲು ಅಡುಗೆಕೋಣೆಯನ್ನು ಹೊಗೆಯಿಂದ ಪಾರು ಮಾಡಲು ಬಳಕೆಯಾಗುತ್ತದೆ.

ಈ ರೀತಿಯಿಂದೆಲ್ಲಾ ತುಳುವರ ಹುಟ್ಟು, ಯೌವ್ವನ, ಸಾವುಗಳಲ್ಲಿ ತೆಂಗು ಒಂದಾದರೆ ಜಾನಪದ, ಸಾಂಸ್ಕೃತಿಕ, ಸಾಮಾಜಿಕ ನೆಲೆಯಲ್ಲಿ ಈ ಸಸ್ಯ ಪ್ರಭೇಧ ಎತ್ತರದ ಸ್ಥಾನ ಪಡೆದಿದೆ. ಪ್ರಾದೇಶಿಕವಾಗಿ ಲಭ್ಯವಾಗುವ ಈ ಸಸ್ಯ ಪ್ರಪಂಚವನ್ನು ಇಲ್ಲಿನ ಪ್ರದೇಶದ ವಿಭಿನ್ನ ಸಂಸ್ಕೃತಿಗಳು ಗ್ರಹಿಸಿಕೊಳ್ಳುವ ಮತ್ತು ಹೊಂದಿಸಿಕೊಳ್ಳುವ ಸಂಬಂಧ ಸ್ವರೂಪಗಳು ಸಸ್ಯಜಾನಪದವನ್ನು ರೂಪಿಸುತ್ತವೆ.  ಕಡಿಮೆ ಖರ್ಚಿನಲ್ಲಿ, ಹೆಚ್ಚಿನ ಆರೈಕೆಯಿಲ್ಲದೇ ಕರಾವಳಿಯಲ್ಲಿ  ಭೌಗೋಳಿಕವಾಗಿ ಮಣ್ಣು, ನೀರುಗಳ ಸಹಜ ಬೆಂಬಲದಿಂದ ವಾಣಿಜ್ಯ ಬೆಳೆಯಾಗಿ ಯಥೇಛ್ಚವಾಗಿ ಬೆಳೆಯುವುದರಿಂದಲೂ ಅಗಿರಬಹುದು ತುಳುವರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಗಿದೆ. ಇದು ತುಳು ಸಂಸ್ಕ್ರತಿ ಸಂಸ್ಕಾರಕ್ಕೆ ಹಿಡಿದ ಮನ್ನಣೆಯ ಜೊತೆಗೆ ಸಸ್ಯ ಕುಟುಂಬಕ್ಕೆ ಕೊಡುವ ಗೌರವ ಹೌದು.



Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...