ನನ್ನ ಮಾವ ತಮ್ಮ ಜಾಗದ ವಲಚ್ಚಿಲ್ನ ಒಳಗೆ ಮರ ಗೆಣಸುಗಳನ್ನು ತಿಂದು ಮುಗಿಸುತಿದ್ದ ಹೆಗ್ಗಣಗಳನ್ನೂ ಹಿಡಿಯಲು ಅಲಲ್ಲಿ ಅಡೆಂಚಿಲ್ ಇಡುತ್ತಿದ್ದರು. ಅದಕ್ಕಾಗಿ ಅಕ್ಕಿಯೋ, ಗೋಧಿಯ ಕಾಳುಗಳನ್ನೋ ಪುಟ್ಟ ಚಿಪ್ಪಿಯಲ್ಲಿಟ್ಟು ಒಂದು ತೊಟ್ಟೆಯಲ್ಲಿ ಕಟ್ಟಿ ಜೋಪಾನ ಮಾಡುತಿದ್ದರು . ಯಾಕೆಂದರೆ ಮುಂಜಾವಿನ ಮಂಜಿನ ಹನಿಗಳಿಗೆ ಗೋಧಿ ನಾನಿ ಬಿಸಾಡುವುದು ಬೇಡವೆಂದು, ತರಕಾರಿ ಬೆಳೆಸಿದ ಮಜಲಿನಲ್ಲಿ ತರಕಾರಿ ನಿನೆಗಳನ್ನು ತಿನ್ನಲು ಬರುತಿದ್ದ ಹಕ್ಕಿಗಳ ಉಪಟಳ ತಡೆಯಲು ಮಾವ ಮುಡ್ಕನೆ ಇಟ್ಟು ಆ ಮುಡ್ಕನೆಗೆ ಕಟ್ಟುವ ಪಕ್ಕಿಕೇನೆ ಹಣ್ಣಿನ ಅರ್ಧದವರೆಗೆ ಮಾತ್ರ ಲಕೋಟೆ ಕಟ್ಟುತ್ತಿದ್ದರು, ಎಲ್ಲ ಕೇನೆಯನ್ನು ಒಂದೇ ಹಕ್ಕಿ ತಿಂದು ತೇಗುವುದು ಬೇಡವೆಂದು ಮಾವನು ಕುರೆ ಕಟ್ಟಿ ಉಳಿಸುವುದು. ಹಕ್ಕಿಗಳ ಹಿಂಡುಗಳನ್ನು ಬೆದರಿಸಲು ಅಲ್ಲಲ್ಲಿ ಬೆದರು ಬೊಂಬೆಯ ಬದಲಾಗಿ ಮಿಂಕೋಟೆ ತೊಟ್ಟೆಗಳನ್ನು, ಬೆದರು ತೊಟ್ಟೆಗಳನ್ನು ತೂಗು ಹಾಕುತಿದ್ದರು. ಇನ್ನು ಹಲಸಿನ ಸೀಸನ್ನಲ್ಲಿ ಹಪ್ಪಳ ಒತ್ತಲು ಗೋಲಾಕಾರದ ಪಾರದರ್ಶಕ ತೊಟ್ಟೆಯನ್ನೇ ಬಳಸುವುದು, ಇದೆಲ್ಲ ನಮ್ಮ ಮಾವನ ತೊಟ್ಟೆ ಕತೆ.
ಮತ್ತೆ ನಮ್ಮ ಹಳೆ ಟೇಪ್ ರೆಕಾರ್ಡ್ನನ ಕ್ಯಾಸೆಟಿನ ರೀಲ್, ಆ ರೀಲಿನ ಎರಡು ಕಡೆ ಕಲ್ಲುಗಳನ್ನೂ ಕಟ್ಟಿ ರೊಯ್ಯೆಂದು ಮೇಲೆ ಎಸೆದು ಎರಡು ಮರಗಳಿಗೆ ಸಂದು ಹಾಕುವಂತೆ ಮಾಡಿ, ಅದು ಮುಸ್ಸಂಜೆಯ ಬಾಡಿದ ಬೆಳಕಿಗೆ ಮಿನುಗುವ ಚಂದ ನೋಡುವುದು, ವೇಗವಾಗಿ ಬೀಸುವ ಗಾಳಿಗೆ ಆ ರೀಲ್ ಸುಯ್ಯೇ ಸುಯ್ಯಿ ಎಂದು ಬುಸುಗುಟ್ಟುವ ಹಾವಿನ ಶಬ್ದಉಂಟಾದಾಗ ಅಮ್ಮನಿಂದ ಬೈಗುಳ ಕೇಳಿಸುವುದು. ಕಾಗದ ಉರುಂಡೆ ಮಾಡಿ, ಸಣ್ಣ ಉರುಂಟು ಕಲ್ಲುನ್ನು ತುಂಬಿ ಹೊರಗೆ ಲಕೋಟೆ ಕಟ್ಟಿ, ಚೆಂಡಟಾ ಆಡಿದ್ದು ಇದು ಮೊದ ಮೊದಲು ತೊಟ್ಟೆ ಬಳಸಿ ಆಡಿದ ಆಟಗಳು. ಇವು ನಾನು ಮೊದಲು ಕಂಡ ತೊಟ್ಟೆಯ ವಿಷ್ಯ ಹಾಗೂ ತೊಟ್ಟೆಯ ಆಟಗಳು ... ಇನ್ನೂ ಇತ್ತೀಚಿನ ವರೆಗೆ ಮದುವೆಗಳಲ್ಲಿ ಮಿಂಕೋಟೆ ಲಕೋಟೆಗಳ ಅಲಂಕಾರ ಮಾಡುತ್ತಿದ್ದರೆ, ದಿಕ್ಕೆಲಿನ ಮೂಲೆಯಲ್ಲಿ ಅಡಿಕೆ ಹಾಲೆಯ ಮೂಡೆಯಲ್ಲಿ ಕಟ್ಟಿಡುತಿದ್ದ ಲುಂಗೆಲ್ ಮೀನನ್ನು ಕಾಗದದಲ್ಲಿ ಕಟ್ಟಿ ಲಕೋಟೆಯಲ್ಲೇ ಕಟ್ಟುತ್ತಿದದ್ದು ನನ್ನಮ್ಮ , ನಮ್ಮಚಿಕ್ಕಪ್ಪ ತೋಡಿನ ಏಡಿ ಹಿಡಿಯಲು ಮನೆಗೆ ತಂದ ಮೀನಿನ ಪೊಟ್ಟೆಯನ್ನು ತೊಟ್ಟೆಯಲ್ಲಿ ಕಟ್ಟಿ ತೋಡಿನ ಸವಾಕಾಶ ಜಾಗದಲ್ಲಿ ಅಲ್ಲಲ್ಲಿ ಒಂದು ಸಾದ ಗಾತ್ರದ ಕಲ್ಲುಗಳ ಕೆಳಗಿಟ್ಟು ಒಂದೆರಡು ಗಂಟೆಗಳ ನಂತರ ಡೆಂಜಿ ಬೋಂಟೆಗೆ ಹೋಗುವುದು ಆಗಾಗ ನಡೆಯುತ್ತದೆ.
ಆಗಿಂದಾಗ್ಗೆ ತೊಟ್ಟೆ ಎಂದ ಕೂಡಲೇ ನೆಂಪಾಗುವುದು ತೊಟ್ಟೆ ಸಾರಾಯಿ. ಇದನ್ನು ಕರಾವಳಿಯಲ್ಲಿ ತೊಟ್ಟೆ ಅಂತಲೇ ನಾಮ ವಿಶೇಷಣದಿಂದ ಹೆಸರಿಸಲಾಗಿತ್ತು. ನಮ್ಮ ಅಜ್ಜ ಬೇಗನೆ ಗೊಟಕ್ ಅಂದದ್ದು ಈ ತೊಟ್ಟೆಯ ಹಠಾತ್ ಮುಷ್ಕರದ ಬಂದ್ನಿಂದಾಗಿ ಎಂಬುದು ಸತ್ಯ. ಹೌದು ಸುಮಾರು ೮೫ ವರ್ಷದ ನನ್ನಜ್ಜ ಸೂರ್ಯನ ಬೆಳಕನ್ನೇ ಗಂಟೆ ಮಾಡಿ ಸಂಜೆ ೫ ಆಗುವಾಗ ಗಡಂಗಿನ ಎದುರು ದಿನದ ಹಾಜರಿ ಹಾಕುತ್ತಿದ್ದರು. ಯಾವಾಗಲು ಬಾಗಿ ನಡೆಯುತ್ತಿದ್ದ ನಮ್ಮಜ್ಜನೊಳಗೆ ೨ ತೊಟ್ಟೆ ಸೇರಿದರೆ ಸರಿ ಸುಮಾರು ಸರ್ತವಾಗಿಯೇ ಕೈ ಹಿಂದೆ ಕಟ್ಟಿಕೊಂಡು ನಡೆಯುತ್ತಿದ್ದರು. ಹೀಗೆ ನನ್ನಜ್ಜನಂತೆ ನನ್ನೂರ ಹಲವು ತೊಟ್ಟೆ ಪ್ರಿಯರು ಬಾರದ ಊರಿಗೆ ಕಳೆದು ಹೋಗಿದ್ದಾರೆ.
ತಮಗೂ ಗೊತ್ತಿರಬಹುದು ಪ್ಲಾಸ್ಟಿಕ್ ಸುಟ್ಟರೆ ಅದರಿಂದಾಗಿ ಹಲವು ಅನಿಲಗಳು ಉತ್ಪತ್ತಿಯಾಗುತ್ತವೆ ಎಂದು, ನಮ್ಮ ಸಮಾರಂಭಗಳಲ್ಲಿ ಅಡುಗೆ ಭಟ್ರು ಪಪ್ಪಡ ಕಾಯಿಸಿ ಅದರ ಹೊರಕವಚ ಪ್ಲಾಸ್ಟಿಕ್ ತೊಟ್ಟೆಯನ್ನು ಒಲೆಗೆ ಹಾಕುತ್ತಾರಲ್ವಾ, ಇಲ್ಲಿ ಪಪ್ಪಡಕ್ಕೆ ಹಾಕಿದ ಉಪ್ಪಿನಂಶ (Chlorine Compound) ಪ್ಲಾಸ್ಟಿಕ್ ನೊಂದಿಗೆ ವರ್ತಿಸಿ ಅಡುಗೆಮನೆಯಲ್ಲೇ ಡಯಾಕ್ಸಿನ್ ಅನಿಲ ತಯಾರಾಗುತ್ತದೆ. ಈ ಅನಿಲವನ್ನು ಅಮೇರಿಕ ಸೋತು ಹೋದ ಏಕೈಕ ಯುದ್ಧ ವಿಯೆಟ್ನಾಂ ಯುದ್ಧ 1961 - 1971ರಲ್ಲಿ ಬಳಸಿತ್ತು. ಇದರಿಂದಾಗಿ ನೂರಾರು ಎಕರೆ ಸಸ್ಯಜನ್ಯ ನಾಶವಾಗಿತ್ತು. ಬಗೆಬಗೆಯ ಕಾಯಿಲೆಗಳಿಗೆ ನಾಂದಿಯಾಗಿತ್ತಂತೆ. ಆವಾಗಿನ ಕಾಲದಲ್ಲೇ ವಿಷ ಅನಿಲವಾಗಿವಾಗಿ ಬಳಸಿದ್ದರು. ಇದೇ ಅನಿಲ ನಾವು ತೋಟಕ್ಕೆ ನೀರು ಸರಬರಾಜಿಗೆ ಬಳಸುವ PVC ಕೊಳವೆಗಳನ್ನು ಉರಿಸಿದ್ರು ಉತ್ಪತ್ತಿಯಾಗುತ್ತದೆ. ಮತ್ತೆ ತಾವು ನೋಡಿರಬಹುದು ಜಾತ್ರೆಯಂದು ಬಿಡುವ ಕದಿನ, ಅಲ್ಲಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಪಟಾಕಿಗಳಲ್ಲಿ ಬಳಸುವ ನೀಲಿಗಾಗಿ ತಾಮ್ರ, ಹಸಿರಿಗಾಗಿ ಬೇರಿಯಂ, ಕೆಂಪಿಗಾಗಿ ಕ್ರೋಮಿಯಂ ಬಳಸುತ್ತಾರೆ. ನಾವು ದಿನ ಬಳಸುವ ತೆಳು ತೊಟ್ಟೆ, ಅದರಲ್ಲಿ ತರುವ ಮೊಸರು, ತಿಂಡಿ, ಸಾಂಬಾರು, ತರಕಾರಿಗಳ ಮೂಲಕ ದೇಹವನ್ನು ಸುಲಭವಾಗಿ ಸೇರಿಕೊಳ್ಳುತ್ತದೆ. ಇವೆಲ್ಲದುದರಿಂದಾಗಿ ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಭಾಗವಾಗಿರುವುದು ಆಮಿಷವಂತೂ ಅಲ್ಲಅದು ವಿಷವೇ.