ಮುಂಜಾನೆ ಸಮಯ ಏಳು ಗಂಟೆ "ಸಿ ಕ್ಯೂ, ಸಿ ಕ್ಯೂ. ಗುಡ್ ಮಾರ್ನಿಂಗ್ ಕರಾವಳಿ ಮಾರ್ನಿಂಗ್ ನೆಟ್, ಡಿಸಾಸ್ಟರ್ ಮ್ಯಾನೇಜ್ಮೆಂಟ್ ನೆಟ್, ನೆಟ್ ಕಂಟ್ರೋಲರ್ VU3VXT ಪರಮೇಶ್ ಜಿ" … ಹೌದು ಇದು ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ ರೇಡಿಯೋ ಗೆಳೆಯರ ದಿನದ ಮೊದಲ ದಿನಚರಿ. ಹವ್ಯಾಸಿ ರೇಡಿಯೋ ಬಳಗ ಸುಮಾರು ಐವತ್ತು ವರುಷಗಳಿಂದ ನಿರಂತರವಾಗಿ ಹ್ಯಾಮ್ ರೇಡಿಯೋವನ್ನು ಬಳಸುತ್ತಾ, ಸಂವಹನ ಮಾಡುತ್ತಾ, ತನ್ನ ಬಳಗವನ್ನು ಬೆಳೆಸುತ್ತಾ, ಮುಂಜಾವಿನ ಹಕ್ಕಿಗಳಂತೆ ಚಿಲಿಪಿಲಿ ಹಾಡುತ್ತಾ ಇಂದು ಸುಮಾರು ೩೦-೪೦ ಸಕ್ರಿಯ ಹ್ಯಾಮ್ ಬಳಗ ಉಡುಪಿ ಮಂಗಳೂರಿನಲ್ಲಿ ಹೊಂದಿದೆ.
ಅಂತರ ಜಾಲದೊಂದಿಗೆ ಪ್ರದಕ್ಷಿಣೆ ಹಾಕುತ್ತಿರುವ ನಾವು ಒಂದು ದಿನ ಅಂತರ ಜಾಲ ಕಡಿತಗೊಂಡಾಗ ಸೀಮಿತ ಗೆಳೆಯರಿಗೆ ಮೀಸಲಾಗುತ್ತೇವೆ. ಒಮ್ಮೆ ಯೋಚಿಸಿ, ಈ ಅಂತರ ಜಾಲ, ಮೊಬೈಲ್, ಇನ್ನಿತ್ತರ ಸಂವಹನ ಮಾಧ್ಯಮಗಳು ಯಾವುದೊ ಸಕಾರಣದಿಂದ ಸ್ಥಗಿತಗೊಂಡಾಗ ಸಂವಹನ ನಡೆಸುವುದು ಹೇಗೆ? ನಮ್ಮ ಇಷ್ಟದವರೊಂದಿಗೆ ಮಾತಾನಾಡುವುದು ಹೇಗೆ? ದೂರದೂರಿಗೆ ಸಂದೇಶ ಕಳುಹಿಸುವುದು ಹೇಗೆ? ಹೀಗೆ ಹೇಗೆ? ಪ್ರಶ್ನೆಗಳು ಮೆರವಣಿಗೆಯ ಪತಾಕೆಯಂತೆ ರಂಗು ರಂಗಾಗಿ ಬರುತ್ತದೆ. ನೀವು ಆಲೋಚಿಸಿಯೇ ಇಲ್ಲ ನೋಡಿ..!!!
ಹೌದು ಇಂತಹ ತುರ್ತಿನ ಸಂದರ್ಭಗಳಲ್ಲಿ ಹ್ಯಾಮ್ ರೇಡಿಯೋ ಬಳಕೆಗೆ ಬರುತ್ತದೆ. ಜೊತೆಗೆ ದೂರದೂರಿಂದ ಮದ್ದು, ಪರವೂರಿನ ಹವಾಮಾನ, ವಾಹನ ದಟ್ಟಣೆ, ಮುಖ ಪರಿಚಯ ಇಲ್ಲದೆ ಹೊಸ ಗೆಳೆಯರನ್ನು ಮಾಡಿಕೊಳ್ಳುವುದು, ಕೃಷಿ ವಿಚಾರ ಹಂಚಿಕೊಳ್ಳುವುದು
ಕ್ಷೇಮ ವಿಚಾರ, ಹೊರ ದೇಶದ ಗೆಳೆಯರನ್ನು ಪಡೆಯುವುದು, ಜಾನಪದ, ಶಿಕ್ಷಣ ತರಬೇತಿ, ವಿದ್ಯುನ್ಮಾನಗಳ ಪ್ರಯೋಗ, ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ನಿಸ್ತಂತು ಪ್ರಯೋಗ, ನಿಶ್ಚಿತವರದಿಗಾರಿಕೆ, ತುರ್ತು ಸಂದೇಶ ರವಾನೆ, ಸ್ವತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಹೀಗೆ ಇದರ ವ್ಯಾಪ್ತಿ ಸಮುದ್ರದಗಲ.
ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಘಡಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಸ್ಥಳೀಯ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ, ದೇಶದ ಸೈನಿಕನಾಗಿ ಸಹಾಯ ಮಾಡಬಲ್ಲುದು.
ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ, ಅಂತಸ್ತು ಮೀರಿ ಸಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವ್ಯಕ್ತಿಗತ, ಸಮೂಹ ಅಥವಾ ಸಂಸ್ಥೆಯೊಂದು ತನ್ನ ಸ್ವಂತ ಸ್ಥಾಪಿತ ರೇಡಿಯೋ ನೆಲೆಯಿಂದ ಮತ್ತೊಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸಿ ಸ್ನೇಹ ಬಯಸುವ ಹವ್ಯಾಸಿಗಳ ಬಳಗ ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡಬಹುದು.
ಹ್ಯಾಮ್, ರೇಡಿಯೊ ಸಂಪರ್ಕ ಜ್ಞಾನವಿರುವ, ರೇಡಿಯೊ ಸ್ಟೇಷನ್ ಇಟ್ಟುಕೊಳ್ಳಲು ಬೇಕಾದ ಲೈಸನ್ಸ್ ಪಡೆದ ಹವ್ಯಾಸಿ. ಹ್ಯಾಮ್ ಹೆಸರು ಹಟ್ರ್ಸ್ (ಎಚ್) ಅಲೆಕ್ಸಾಂಡರ್ ಗ್ರಹಾಮ್ ಬೆಲ್ (ಎ) ಮತ್ತು ಮಾರ್ಕೊನಿ (ಎಂ) ಇವರ ಹೆಸರುಗಳ ಪ್ರಥಮಾಕ್ಷರ ಸಮ್ಮಿಲನ ಎಂಬ ಅಭಿಪ್ರಾಯವಿದೆ ಹೆಲ್ಪ್ ಅಲ್ ಮ್ಯಾನ್ಕೈಂಡ್ ಎಂಬುದು ಆಗಿದೆ . ಭಾರತ ಸರ್ಕಾರ ನಡೆಸುವ ಅಮೆಚೂರ್ ಸ್ಟೇಷನ್ ಆಪರೇಟರ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಹ್ಯಾಮ್ ಲೈಸನ್ಸ್ ಪಡೆದು ಮುಂದೆ ಪ್ರೇಷಕ (ಟ್ರಾನ್ಸ್‍ಮೀಟರ್), ಅಭಿಗ್ರಾಹಕ (ರಿಸೀವರ್) ಮತ್ತು ಆಂಟೆನಗಳನ್ನು ಒಳಗೊಂಡ ಹವ್ಯಾಸಿ ರೇಡಿಯೊ ಸ್ಟೇಷನನ್ನು ತಮ್ಮ ಮನೆ, ಕಾರು, ಹಡಗು ಹೀಗೆ ತಮ್ಮೊಂದಿಗೆ ಲೈಸನ್ಸನ ಮಾದರಿಯಂತೆ ಈ ಸ್ಟೇಷನ್ನುಗಳಿಗೆ ಆಯಾ ದೇಶ ಮತ್ತು ಹವ್ಯಾಸಿಯ ಹೆಸರುಗಳಿಗೆ ಅನುಗುಣವಾದ ಕರೆ ಚಿಹ್ನೆಗಳು (ಕಾಲ್ ಸೈನ್ಸ್) ಇರುತ್ತವೆ. ಇವರು ಪರಸ್ಪರ ಸಂಪರ್ಕ ಸಾಧಿಸಿದ ಅನಂತರ ಕರೆ ಗುರುತು ಪತ್ರಗಳ(ಕ್ಯೂ.ಯಸ್.ಲ್ ) ವಿನಿಮಯವನ್ನು ಮಾಡಿಕೊಳ್ಳುತ್ತಾರೆ.
ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ ನ್ನು ೧೯೭೨ರಲ್ಲಿ ಶ್ರೀ ಯು ವರದರಾಯ ನಾಯಕ್ ಮತ್ತು ಶ್ರೀ ಮಹಾಬಲ ಹೆಗ್ಡೆಯವರು ಸ್ಥಾಪಿಸಿದರು. ಸುಮಾರು ೮೩ ಪ್ರಾಯದ ಶ್ರೀ ಮಹಾಬಲ ಹೆಗ್ಡೆಯವರು ವಿಜಯ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿರುವವರು. ಇಂದಿಗೂ ಸಕ್ರಿಯ ಹ್ಯಾಮ್ ಪಟು ಇವರು. ಅವರ ಮಾತಿನಂತೆ ಆ ಕಾಲದಲ್ಲಿ ಮನರಂಜನೆಗೆ ಯಾವುದೇ ದ್ವಿತೀಯ ಮಾಧ್ಯಮ ಇಲ್ಲದಿದ್ದಾಗ ಅಣ್ಣನ ಮೆಕ್ಯಾನಿಕಲ್ ಜ್ಞಾನದಿಂದ ಈ ಹವ್ಯಾಸದ ಕಡೆಗೆ ವಾಲಿತು, ತನ್ನ ರೇಡಿಯೊ ರಿಪೇರಿ, ಇಲೆಕ್ಟ್ರಾನಿಕ್ ಗಳ ಬಗೆಗಿದ್ದ ಒಲವು ಹ್ಯಾಮ್ ನ ಕಡೆಗೆ ಸೆಳೆಯಿತು ಎನ್ನುತ್ತಾ ಭಾರತದಾದ್ಯಂತ, ಒಟ್ಟಿಗೆ ವಿದೇಶದ ಗೆಳೆಯರನ್ನು ಪಡೆದೆ ಎನ್ನುತ್ತಾರೆ. ಜೊತೆಗೆ ಇಳಿ ವಯಸ್ಸಿನ ನನ್ನ ಜೀವನೋತ್ಸವಕ್ಕೆ ಹ್ಯಾಮ್ ಕಾರಣ ಪ್ರತಿದಿನ ಬೆಳಗ್ಗೆ ಎಲ್ಲರೊಂದಿಗೆ ಹರಟೆ ಹೊಡೆಯುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ.
ಶ್ರೀ ಮಹಾಬಲ ಹೆಗ್ಡೆ (VU2HEG)
ಮಣಿಪಾಲದ ಶ್ರೀಕಾಂತ್ ಭಟ್ ಇವರು ಪ್ರಸ್ತುತ ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ ನ ಅಧ್ಯಕ್ಷರು ಹೇಳುವಂತೆ ನಿಸ್ತಂತು ತಂತ್ರಜ್ಞಾನದ ನೇರ ಅನುಭವ, ಆಂಟೆನಾ, ರೇಡಿಯೋ ತಂತ್ರಜ್ಞಾನದ ಮೂಲ ಜ್ಞಾನಕ್ಕೆ ಬಹಳ ಸಹಕಾರಿ. ಹ್ಯಾಮ್ ಒಂದು ಕುಟುಂಬದಂತೆ ಜ್ಞಾನ, ವಿಶೇಷ ಅನುಭವ, ವ್ಯಕ್ತಿತ್ವ ವಿಕಸನ, ಸ್ವಂತಿಕೆ, ಸಾಹಸಗಳಿಂದ ಕೂಡಿರುವ ವಿಶೇಷ ಹವ್ಯಾಸವಾಗಿದೆ. ಜೊತೆಗೆ ಮರೆಯಲಾರದ ನೆನಪು, ಸಾಹಸದಂತಹ ಪ್ರಯೋಗ ನನ್ನನ್ನು ಪಕ್ವ ಮಾಡಿದೆ ಎನ್ನುತ್ತಾರೆ. ಯುವಕರು ಇಂತಹ ಹವ್ಯಾಸದಿಂದ ತಮ್ಮ ಗೆಳೆತನದ ಜಾಲ ಬೆಳೆಸುವುದರ ಜೊತೆಗೆ ಮತ್ತೊಂದು ಜಗತ್ತನ್ನೇ ನೋಡುವಂತಾಗುತ್ತದೆ. ಹೌದು ೧೩ ಫೆಬ್ರುವರಿ ರೇಡಿಯೋ ದಿನ ಎಲ್ಲರಿಗೆ ರೇಡಿಯೋ ದಿನಾಚರಣೆಯ ಶುಭಾಶಯಗಳು.
ಶ್ರೀಕಾಂತ್ ಭಟ್ (VU2SBJ)
ವಿದ್ಯಾರ್ಹತೆ:
12 ವರ್ಷ ತುಂಬಿದ ಭಾರತದ ನಾಗರಿಕರಾಗಿರಬೇಕು ಹಾಗೂ ದೂರಸಂಪರ್ಕ ಮತ್ತು ವಿದ್ಯುನ್ಮಾನ ಸಚಿವಾಲಯ ಭಾರತ ಸರಕಾರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫ್ರೌಡಶಾಲಾ ಹಂತದ ವಿಜ್ಞಾನ ವಿಷಯ(ಮೂಲ ವಿದ್ಯುತ್ ಮತ್ತು ದೂರ ಸಂಪರ್ಕ ), ರೇಡಿಯೋ ಬಳಸುವ ಮೂಲ ಜ್ಞಾನ , ರೇಡಿಯೋ ನಿಯಮಗಳು ಮತ್ತು ಕಾನೂನುಗಳ ಬಗೆಗೆ ಪ್ರಾಥಮಿಕ ಜ್ಞಾನ ಇರಬೇಕು.
ಹ್ಯಾಮ್ ರೇಡಿಯೋ, ರೇಡಿಯೋ ಸ್ಟೇಷನ್ ಎಂದರೆ ಆಕಾಶವಾಣಿಯಂತೆ ದೊಡ್ಡ ಸ್ಟೇಷನ್ಗಳಲ್ಲ. ಸಾಧನಗಳು ಸುಮಾರು ಎರಡು ಮೂರು ಸಾವಿರದಿಂದ ಲಕ್ಷದಷ್ಟಿದೆ . ವಿ ಎಚ್ ಎಫ್ , ಎಚ್ ಎಫ್, ಯು ಎಚ್ ಎಫ್ ತರಂಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಕರಾವಳಿಯಲ್ಲಿ ಹ್ಯಾಮ್ ಬಹಳಷ್ಟು ಜನರಿದ್ದಾರೆ. ಉದ್ಯೋಗದಾತರು, ಉದ್ಯಮಿಗಳು, ವೈದ್ಯರು, ಪ್ರತಿಷ್ಠಿತ ಕಾಲೇಜುಗಳ ಪ್ರಾಧ್ಯಾಪಕರು, ಪೈಲಟ್, ಬ್ಯಾಂಕ್ ಉದ್ಯೋಗಿಗಳು, ಕೃಷಿಕರು, ಎಂ ಆರ್ ಪಿ ಎಲ್ ಉದ್ಯೋಗಿಗಳು, ಸಮಾಜ ಸೇವಕರು, ಸಾಮನ್ಯರು ಹೀಗೆ ಎಲ್ಲರೂ ಇಲ್ಲಿದ್ದಾರೆ.
ಭರತೇಶ ಅಲಸಂಡೆಮಜಲು
ಲೇಖನ ತುಂಬಾ ಸ್ವಾರಸ್ಯಕರವಾಗಿದೆ.
ReplyDelete