Friday, March 13, 2015

ರೇಡಿಯೋ ಪುರಾಣ.

ರೇಡಿಯೋ ಅದೆನೋ ಆಯಾತಕಾರದ ಮಾತನಾಡುವ ಪೆಟ್ಟಿಗೆ. ನಮ್ಮ ಮನೆಯ ಸುರಕ್ಷಿತ ಜಾಗದಲ್ಲಿ ಪುಟಾಣಿಗಳಾದ ನಮಗೆ ಎಟುಕದ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಾಗಿ ಕಪಾಟಿನ ಮೂರನೇ ಅಂತಸ್ತಿನ ಮೇಲೆ ತಪಸ್ಸು ಮಾಡುತ್ತಾ ಕುಳಿತಿರುತಿತ್ತು. ಮನೆಯಲ್ಲಿ ಯಾರು ಮೊದಲು ಎದ್ದೇಳುತ್ತಾರೋ ಅವರು ರೇಡಿಯೊವನ್ನು ಚಾಲಿಸುವವರು. ಬೆಳ್ಳಂಬೆಳಗ್ಗೆ  ಮೊದಲು ಕೊಯೋ ಎಂದು ಅರೆದುತ್ತಾ ಸದ್ದು ಮಾಡಿದರೆ 5:55 ಮಿನಿಟಿಗಾಗುವಾಗ ಅದೆನೋ ವಿಶೇಷ ಗುರುತು ಸಂಗೀತ(Signature ಟ್ಯೂನ್) ಕಾರ್ಯಕ್ರಮ  ಮುನ್ಸೂಚನೆಗಿರುವ ವಾದ್ಯಪ್ರಕಾರದ ಧ್ವನಿಯೊಂದಿಗೆ ಬದಲಾಗುವುದು. ಸಮಯ 6 ಭಜಿಸಿತೆಂದರೆ ವಂದೇ ಮಾತರಂನೊಂದಿಗೆ ಅಂದಿನ ರೇಡಿಯೋ ದಿನಚರಿ ಶುರು...
ಅಜ್ಜನಿಂದ ಬಳುವಳಿಯಾಗಿ ಬಂದಿದ್ದ ರೇಡಿಯೋ ನಮ್ಮದು, ಅದರ ಕೈಗೊಂದು ಉದ್ದ ಲಾಡಿ ಬಳ್ಳು ಅಲ್ಲಿ ಇಲ್ಲಿ ನೇತಾಡಿಸಲು... ಅಪರೂಪಕ್ಕೆ ನನ್ನ ತಮ್ಮ ಬೀರ್ಯದಿಂದ ಬೊಂಡ ತೆಗೆದುಕೊಡುವುದ್ದಕ್ಕಾಗಿಯೋ, ಭರಣಿಯಲ್ಲಿ ಇದ್ದ ಮಿಸುಕಾಡುವ ತಿಂಡಿಯ ನೋಡಿಯೋ ಏನೋ  ಹಠದಿಂದ ಅರಚುವುದು... ಮತ್ತೆ ಸಮಾಧಾನವಾಗಲು ಅಜ್ಜನ ರೇಡಿಯೋವೇ ಬೇಕಿತ್ತು. ತನ್ನ ಕುತ್ತಿಗೆಗೆ ಸುತ್ತಿಕೊಂಡು ಮನೆಯೊಳಗೆ ಹೊರಗೆ ಓಡಾಡಿ ಮಂಕಟವಾಗುತ್ತಿದ್ದ, ಅಗಾಗ ಕೋಪದಿಂದ ಉಂಬಿ ಕೆಳಗೆ ಹಾಕಿ, ಕೇಳದಂತೆಯು ಮಾಡುತಿದ್ದ.  ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಪೀಟಿಲು, ಸ್ಯಾಕ್ಸೋಪೋನ್, ಹಾರ್ಮೋನಿಯಂ ಜುಗುಲುಬಂಧಿಯಲ್ಲಿ ಮದುವೆ ಪ್ರಸಂಗವೋ ಬಂದಾಗ ಅಗೋ ನೋಡು ಮದುವೆ ದಿಬ್ಬಣ ಬಂತೆಂದು ಅಪ್ಪ ಎಂದಾಗ ರೇಡಿಯೊದ ಹತ್ತಿರ ಹೋಗಿ ಕಿವಿ ಕೊಟ್ಟು ಕೇಳಿ ಖುಷಿ ಪಡುತಿದ್ದೇವು ಮತ್ತೆ ಬರುವ ಗಿಜಿ ಗಿಜಿ ಗೆಜ್ಜೆ, ಕಿಣಿ ಕಿಣಿ ಕಾಜಿಯ ಧ್ವನಿಗಾಗಿ ಕಾತರ ಮದುಮಗಳು ಮಂಟಪಕ್ಕೆ ಬರುವ ಹೆಜ್ಜೆ ಧ್ವನಿ ಆಗ ಅದ್ಯಾಕೊ ನಾಚಿಕೆಯಿಂದ ಮುಗ್ಧಮೊಗದಲ್ಲೊಂದು ನಸುನಗು ಹಾರಿ ಹೋಗುತಿತ್ತು. ನಮ್ಮ ರೇಡಿಯೋ ಮೊದಲೇ ಹಳತು ಅಗಿದುದರಿಂದ ಮತ್ತೆ ನಾವು ಮಕ್ಕಳ ಮಂಗಗಳ ಕೈಗೆ ಮಾಣಿಕ್ಯ ಸಿಕ್ಕಿದಂತೆ ಸಿಕ್ಕಿ ಅದರ ಬ್ಯಾಟರಿ ತೆಗೆಯೊದು, ತಿರಿಗಿಸೊದು, ಕೇಳದಿದ್ದರೆ ಜೋರಾಗಿ ಬೊಟ್ಟಿ ಚಿತ್ರಹಿಂಸೆ ಕೊಟ್ಟದೆ ಹೆಚ್ಚು ಇದರಿಂದಾಗಿಯೆ ಹಲವಾರು ಬಾರಿ ಅದು ಹಾಸಿಗೆ ಹಿಡಿದದಿದೆ, ಕೆಲವು ಸಲ ಮಳೆಗಾಲದ ಸಂದರ್ಭದಲ್ಲಿ ಬೆಚ್ಚನೆಯ ಜಾಗ ಹುಡುಕುತ್ತಾ ಮೀಸೆ ತುರಿಸಿಕೊಂಡು ಬಂದು ರೇಡಿಯೋದೊಳಗೆ ಮನೆ ಮಾಡುವ ಜಿರಲೆಯಿಂದಾಗಿಯೂ ಕೆಟ್ಟು ಹೋದದಿದೆ... ಅಷ್ಟು ದೊಡ್ಡ ದೇಹದ ಜಿರಲೆ ರೇಡಿಯೋದ ಕೂದಲಿನಂತಹ ಸೆರೆಯೊಳಗೆ ಹೋಗಿ ಆಹಾರ ಹುಡುಕಿ ಮನೆ ಮಾಡಿ ಸಂಸಾರ ಮಾಡುವುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ... ಇದರಿಂದಾಗಿಯೆಲ್ಲ ಕೇಳದೆ ಇದ್ದಾಗ ಅಪ್ಪನೇ ರಿಪೇರಿ ಮಾಡುತ್ತಿದ್ದರು. ಅದೆನೋ ಮಾಡುತಿದ್ದರೋ ಗೊತ್ತಿಲ್ಲ ಒಂದು ಟೆಸ್ಟರ್ನ್ನು ಹಿಡಿದು ಅಲ್ಲಿ, ಇಲ್ಲಿ ತಿರುಗಿಸುತ್ತಿದ್ದರು, ಪುಟ್ಟ ಪುಟ್ಟ ಒಂಟಿ ಕಾಲಿನ ಮನುಷ್ಯರನ್ನು ಮುಟ್ಟಿ ಸರಿಮಾಡುತಿದ್ದರು, ಕಂಬಗಳನ್ನು ಸರಿ ಮಾಡಿ ತಂತಿ ಕಟ್ಟುತ್ತಿದ್ದರು. ಒಂದೆರಡು ವೈರ್ಗಳನ್ನೂ ಸಿಕ್ಕಿಸಿ ಸರಿ ಮಾಡುತಿದ್ದರು. ನಾವುಗಳು ಸುತ್ತ ಕುಳಿತು ಬಡ್ಡ ಚಿಮಿಣಿ ದೀಪವನ್ನು ನಡುವೆ ಇಟ್ಟು ಪಿಳಿಪಿಳಿ ಬಿಟ್ಟು ಅಪ್ಪನ ರೇಡಿಯೋ ತಂತ್ರಜ್ಞಾನತೆಯನ್ನು ಖುಷಿಯಿಂದ ಆನುಭವಿಸುತ್ತಿದ್ದೆವು. ನಾವು ಕೇಳುವ ಮುಗ್ಧ ಪ್ರಶ್ನೆಗಳಿಗೆ ಅಷ್ಟೇ ಪೆದ್ದು ಪೆದ್ದಾಗಿ ಉತ್ತರ ಹೇಳಿ ಕಳಚಿಕೊಳ್ಳುತ್ತಿದ್ದರು. ಸುಮಾರು ದೊಡ್ಡವಾಗುವವರೆಗೆ ರೇಡಿಯೋದೊಳಗೆ ಮಾತಾನಾಡುವವರು ಯಾರು?, ಎಲ್ಲಿಯವರು?, ಎಷ್ಟು ಉದ್ದದವರು?, ಹೇಗೆ ಇಷ್ಟು ಸಣ್ಣ ರೇಡಿಯೋದ ಒಳಗೆ ನುಗ್ಗುತ್ತಾರೆ? ಎಂಬೆಲ್ಲಾ ಪ್ರಶ್ನೆಗಳು ಕಾಡಿದಂತು ಸತ್ಯ ಅವನೆಲ್ಲಾ ರೇಡಿಯೋ ರಿಪೇರಿ ಮಾಡುವ ಸಮಯದಲ್ಲಿ ಅಪ್ಪನ ತಲೆ ತಿನ್ನುತ್ತಿದ್ದೇವು ಮಾತಾನಾಡುವವರು ಯಾರು? ಎಲ್ಲಿದ್ದಾರೆ? ಎಂದರೆ ನಾವು ತಿನ್ನುವ ಬೆಲ್ಲ ನೆಲಗಡಲೆಯಿಂದ ತಯಾರಿಸುವ ಕಟ್ಲ್ಸ್ ನಂತಹ ಸಣ್ಣ ಸಣ್ಣ  ತುಂಡುಗಳನ್ನು ರೇಡಿಯೋದ ಒಳಗೆ ತೋರಿಸಿ ಇವೆಲ್ಲಾ ಅವರ ಮನೆ ಅದರೊಳಗೆ ಇದ್ದಾರೆ ಮಾತಾನಾಡುವಾಗ ಹೊರಗೆ ಬರುತ್ತಾರೆ ಎಂದು, ಮತ್ತೆ ಪಾರದರ್ಶಕ ವೈರ್ಗಲನನ್ನು ತೋರಿಸಿ ಇದು ನಾವು ಮಂಗಳೂರು ಹೋಗುತ್ತೇವೆ ಆಲ್ವಾ... ಆಗ ಬಿಸಿರೋಡ್ ಸಂಕ ಸಿಗುತ್ತದೆ ಅಲ್ವಾ... ಆ ಸಂಕದಿಂದ ಅವರ ಮನೆಗಳಿಗೆ ನೀರು ಸರಬರಾಜು ಮಾಡುವ ಕೊಳವೆಯೆಂದು ಹೇಳಿ ಜೋರಾಗಿ ನಗುತ್ತಿದ್ದರು.
ನಮ್ಮ ಮನೆಯ ರೇಡಿಯೋ. 

ಬೆಳಿಗಿನ ಸುಪ್ರಭಾತದಿಂದಲೇ ಪುತ್ತೂರು ನರಸಿಂಹ ನಾಯಕ್, ಮುಂಬೈ ಸೋದರಿಯರು, ಬೆಂಗಳೂರು ಸೋದರಿಯರು, ವಿದ್ಯಾಭೂಷಣರು ಪರಿಚಿತರು, ಕಾಶ್ಮೀರ ಕದನದ ವರ್ತಮಾನ, ಕ್ರಿಕೆಟ್ ಗೆದ್ದ ಸುದ್ಧಿಗಳು, ಬಿಸಿ ಬಿಸಿ ಸುದ್ದಿಗಳಾಗುತಿದ್ದವು, ಕೇಳುಗರ ಕೋರಿಕೆಯ ಚಿತ್ರಗೀತೆಗಳು, ರಸವಾರ್ತೆ, ಹಿಂದಿ ವಾರ್ತೆಗಳ ಮೊದಲು ಬರುವ ಪ್ರಸಿದ್ಧರ ನುಡಿಮುತ್ತು, ರೇಡಿಯೋ ನಾಟಕ, ತುಳುಕಾರ್ಯಕ್ರಮ, ಕೃಷಿರಂಗ, ಯುವವಾಣಿ, ಪಾಡ್ದನ, ಸಂಧಿ, ಹೀಗೆ ಒಂದೇ ಎರಡೇ.... ನಮ್ಮಜ್ಜಿಗೆ ಇಷ್ಟವಾಗುತಿದ್ದದ್ದು ಸಂಧಿ, ಪದಪಾಡ್ದನವಾದರೆ,  ಪಂಜಿಕಾರಿನ ಮಾವನಿಗೆ ಸಂಜೆ 7:30ರ ಮಂಗಳೂರು ಪೇಟೆಧಾರಣೆ, ಅದೆಷ್ಟು ಕೆಲಸವಿದ್ದರೂ ಪೇಟೆಧಾರಣೆ ಕೇಳಲು ಹಾಜರ್, ನಾವು ಪಿನ್ನೆ - ಪಿಟ್ಟೆಗಳು ಚೀಂಯ್ ಚೀಂಯ್ ಎಂದು ಅರೆದುತ್ತಿದ್ದರೆ (ಮಾನಿಪಾಂತೆ 5 ಮಿನಿಟ್ ಲಾ ಕುಲ್ಲಾರೇ ಅಪುಜಾ?) ಮಾತನಾಡದೇ 5 ನಿಮಿಷವಾದರೂ ಕುಳಿತು ಕೊಳ್ಳಲಾಗುವುದಿಲ್ಲವೇ? ಎಂದು ಗದರಿಸದ ಮಾವನು ಗದರಿಸುತ್ತಿದ್ದರು. ಸಣ್ಣ ಅತ್ತೆಗೆ ಮಧ್ಯಾಹ್ನದ ಸಿಲೋನಿನಿಂದ ಪ್ರಸಾರವಾಗುತಿದ್ದ ಕನ್ನಡ ಚಿತ್ರಗೀತೆಗಳನ್ನು ಕೇಳುವ ಮರ್ಲದರೆ, ಮನೆಯವರೆಲ್ಲಾ ಕಾಯುವ ವಾರದ  ಕ್ರಮವೆಂದರೆ ಅದು ಯಕ್ಷಗಾನ...ಗೋರ-ಗೋರವೆನ್ನುವ ರೇಡಿಯೋವನ್ನು ಸರಿ ಮಾಡುತ್ತಾ ಮಳೆಗಾಲದಲ್ಲಿ ಯಕ್ಷಗಾನ ಕೇಳುವುದೆಂದರೆ ಅದೆನೋ ಸೌಖ್ಯ, ಪಾತ್ರ ರಾಕ್ಷಸನಾಗಿದ್ದರೆ, ರಕ್ಕಸನ ಅರಚಾಟದಂತೆ ನಾವುಗಳು ಸಹ ಅರ್ಬೆಯಿಟ್ಟು ರಕ್ಕಸ ಸಂಭೂತರಾಗುತ್ತಿದ್ದೇವು ಎಂಬುವುದು ನಗು ಭರಿಸುತ್ತದೆ, ಕುಳಿತ್ತಲೇ ಕಾಲು ತಕಥಿಮಿ ಕುಣಿದು ಮನೆಯ ಭಾಗವತರು ಆಗುತ್ತಿದ್ದೆವು. ಆಗಾಗ ಆಕಾಶವಾಣಿಯ ಕೇಳುಗರ ಕೋರಿಕೆಯ ಚಿತ್ರಗೀತೆಗಳ ಕಾರ್ಯಕ್ರಮಕ್ಕೆ ಪತ್ರ ಬರೆದು ನಮ್ಮ ಹೆಸರು ರೇಡಿಯೋದಲ್ಲಿ ಬರುವುದನ್ನು ಕಾದು ಕುಳಿತುಕೊಳ್ಳುವುದು , ಈ ಕಾಯುವುದರಲ್ಲೇನೋ ಸುಖ ಅನುಭವಿಸುತಿದ್ದೇವು.  
ಕ್ರಿಕೆಟ್ ಹುಚ್ಚು ಹುಟ್ಟಿಸಿದ್ದೇ ಈ ಮಾತನಾಡುವ ಪೆಟ್ಟಿಗೆ, ಗೆಳೆಯ ಹಸೈನಾರ್ನ ರೂ. 50 ರೇಡಿಯೊ ಅದೆನೋ ಕರಮತ್ತು ಮಾಡಿತ್ತೋ ಗೊತ್ತಿಲ್ಲ... ಕ್ರಿಕೆಟ್ ಇದ್ದ ದಿನ ಬುತ್ತಿಯೊಂದಿಗೆ 5 ಇಂಚು ಉದ್ದದ ಪುಟ್ಟ ರೇಡಿಯೋ ಶಾಲೆಗೆ ಪಾಠ ಕೇಳಲು ಆತನೊಂದಿಗೆ ಹಾಜರ್....  ತರಗತಿಯಲ್ಲೂ ಬಿಡುವಿನ ಸಮಯದಲ್ಲಿ ಊಟ ಮಾಡುವ ತಟ್ಟೆಗೋ, ಅನ್ನ ಕಟ್ಟಿ ತಂದ ಅಲ್ಯೂಮಿನಿಯಂ ಪೋದಿಕೆಗೆ ಪುಟಾಣಿ ಅಂಟೆನಾ ಮುಟ್ಟಿಸಿ ಕೇಳುವುದೋ ಅಬ್ಬಬ್ಬಾ !! ಮತ್ತೆ ಮನೆಗೆ ಹಿಂದುರುಗುವಾಗ ಸಿಕ್ಕ ಸಿಕ್ಕ ಸ್ಥಿರವಾಣಿ ಕಂಬಗಳ ಹತ್ತಿರ ನಿಂತು, ಅಂಟೆನಾ ತಾಗಿಸಿ ಕೇಳುವ ಮಜ ಅತೀ ವರ್ಣನೀಯ...ಅದೆಷ್ಟೋ ಸಲ ರಸ್ತೆ ಬದಿ ನಿಂತು ಏಳೆಂಟು ಜನ ಕ್ರಿಕೆಟ್ ಕೇಳುತ್ತಿದ್ದರೆ ವಾಹನ ವಾಹನ ಸವಾರರು ನಮ್ಮ ಹತ್ತಿರ ನಿಲ್ಲಿಸಿ ಗಾಬರಿಯಿಂದ ವಿಚಾರಿಸಿದ್ದು ಇದೆ.   ಒಂದು ಸಲ ಶಾಲಾ ವಾರ್ಷಿಕ ಕ್ರೀಡೋತ್ಸವದಂದು ಸುಮಾರು ಐದು - ಆರು ರೇಡಿಯೋಗಳು ನಮ್ಮ ಪೆರ್ನಾಜೆ ಗುಡ್ಡೆಯ ತುಂಬಾ ಕಾಮೆಂಟ್ರಿ ಹಾರಿಸಿ ಹಕ್ಕಿಗಳ ಓಡಿಸಿದ್ದೇವು ಅದರಲ್ಲೂ ಸೆಲ್ವನ ದೊಡ್ಡ ರೇಡಿಯೋದ ಶಬ್ಧ ನಮ್ಮ ಪೀಟಿ ಮಾಸ್ತ್ರು ವೆಂಕಟರಮಣ ಭಟ್  ಕೇಳಿ ನಮ್ಮನ್ನು ಹುಡುಕಿಕೊಂಡು ಬಂದದ್ದು ಇದೆ.
ಹೌದು ರೇಡಿಯೋ, ಸಂಸ್ಕಾರ ಕೊಟ್ಟಿದೆ, ಸ್ಮೃತಿಗೆ ಚುರುಕು ಮುಟ್ಟಿಸಿದೆ, ಪಾತ್ರಗಳು ಕಣ್ಣ ಮುಂದೆ ಓಡುವಂತೆ ಮಾಡಿದೆ, ಊಹಿಸಿ ಕಲ್ಪಿಸುವ ಕಲೆಯ ಪೋಷಿಸಿ ಬೆಳೆಸಿದೆ.  ಮಿಗಿಲಾಗಿ ಶಾಲೆಗೆ ಸೇರುವ ಮೊದಲೆ ವಂದೇ ಮಾತರಂ ಬಾಯಿಪಾಠ ಮಾಡಿಸಿತ್ತು, ಹಿಂದಿ ಅಂಕೆಗಳನ್ನು ಕಲಿಸಿತ್ತು. ಇಂದು  ಸಹ ನಮ್ಮ ಮನೆಯನ್ನು ಟಿವಿ ಅವರಿಸಿಕೊಂಡಿಲ್ಲ ರೇಡಿಯೋವೇ ಸುದ್ದಿ ಮುಟ್ಟಿಸುವ ರಾಯಭಾರಿ. ಈ ರೇಡಿಯೋದಿಂದಾಗಿಯೇ ಹಲವಾರು ರೇಡಿಯೋ ಗೆಳೆಯರಿದ್ದಾರೆ ಎಂಬುವುದು ಸಂತಸದ ಸಂಗತಿ. 

2 comments:

  1. ರೆಡಿಯೋ ಸಿಲೋನ್ ಉಲ್ಲೇಖದ ಮೂಲಕ ನಮ್ಮನ್ನು ಬಾಲ್ಯಕ್ಕೆ ಎಳೆದೊಯ್ದ ತಮ್ಮ ಬರಹಕ್ಕೊಂದು ನಮನ. :-)

    ReplyDelete

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...