ಹೌದು ಇದು ಗಡ್ಡದ ವಿಷ್ಯ, ಹರೆಯಕ್ಕೆ ಬಂದಾಗ ಸಹಜವಾಗಿ ಫಲವತ್ತಾದ ಮೊಗದಲ್ಲಿ ಹುಲುಸಾಗಿ ಬೆಳೆಯುವ ಹುಲ್ಲುಗಳೆಂಬ ಈ ಕೂದಲಿಗೆ ಅದೇನೋ ಪ್ರಚಾರ ಪ್ರಿಯತೆ ಗೊತ್ತಿಲ್ಲ, ಪ್ರತಿ ದಿನ ಗಡ್ಡ ತೆಗೆದರೆ ರಸಿಕನಾದರೆ, ತೆಗೆಯದೆ ಇದ್ದರೆ ಸನ್ಯಾಸಿ. ಹಲವರು ಇದರ ಬಗೆಗೆ ನಯವಾಗಿ ಪ್ರತಿಭಟಿಸುವವರೇ...ಇಲ್ಲಿ ನನ್ನ ದೇಹಕ್ಕೆ ಕಂತುವುದಲ್ಲ ಹಲವರ ಕಣ್ಣು ಗಳಿಗೆ ಚುಚ್ಚುವುದು, ಸಾಮಾಜಿಕ ನೆಲೆಯಲ್ಲಿ ಪ್ರಮುಖವಾದ ಈ ಗಡ್ಡ, ಸಭ್ಯ, ಸಂಸ್ಕಾರವೆನ್ನುವ ಸಮಾಜದಲ್ಲಿ ಕುಹಕವಾಗಿಯೇ ಆಡಿಕೊಳ್ಳುತ್ತಾರೆ.
ತನ್ನಷ್ಟಕ್ಕೆ ಬೆಳೆದ ಈ ಗಡ್ಡದ ಬಗೆಗೆ ನಾನು ಆಲೋಚಿಸಿದ್ದೇ ಕಡಿಮೆ. ಯಾವುದಾದರೂ ಸಮಾರಂಭಕ್ಕೋ, ಗಮ್ಮತಿಗೆ, ಯಾರದೋ ಸಮ್ಮಾನಕ್ಕೋ ಹೋದಾಗ ಪರಿಚಯವಿಲ್ಲದ ಮುಖಗಳು ಕೇಳುವುದು ಯಾರಾತ ಆ ಗಡ್ಡದ ಹುಡುಗ? ಎಂದು ಅದೆಷ್ಟೋ ಸಲ ಮಾತಾನಾಡಿಸಿದ್ದು ಇದೆ, ಮನೆ ಎಲ್ಲಿ ಯಾರ ಮಗ, ಏನು ಓದುವುದು, ಏನು ಉದ್ಯೋಗ ಎಂದು ಜನಗಣತಿಯ ಟೀಚರ್ ಕೇಳುವಂತೆ ಸಾಲು ಸಾಲು ಪ್ರಶ್ನೆಗಳ ಮೆರವಣಿಗೆಯು ಅನುಭವವಾದದಿದೆ , ಸಹಜವಾಗಿ ಬೆಳೆದ ಗಡ್ಡದ ಬಗೆಗೆ, ಗಡ್ಡದಲ್ಲೇ ಪ್ರಶ್ನಿಸಬೇಕೇ ? ಹೊರತು ನನ್ನನೇಕೆ ಅಪರಾಧಿ ಮಾಡುತ್ತಾರೆ ಎಂದು ಆಗಾಗ ಮನಸಲ್ಲೇ ಪ್ರಶ್ನಿಸಿದ್ದು ಇದೆ.
ಮತ್ತೊಂದು ವ್ಯತಿರಿಕ್ತ ಅಂದರೆ ನಮ್ಮ ಮನೆಯಲ್ಲಿ ಗಡ್ಡ ಬಿಡುವುದಕ್ಕೆ, ತೆಗೆಯುವುದ್ದಕ್ಕೆ ಚಕ್ಕಾರವಿಲ್ಲದಿದ್ದರೂ, ಊರಿನವರಿಗೆ, ಅತ್ತಿಗೆಯಂದಿರಿಗೆ, ಸಂಬಂಧಿಗಳಿಗೆ, ಸೋದರ ಅತ್ತೆಯಂದಿರಿಗೆ, ಶಾಲಾ ಟೀಚರ್ಗೆ, ನಮ್ಮ ಕಾಲೇಜು ಪ್ರಾಂಶುಪಾಲರಿಗೆ, ಕಡೆಗೆ ದಾರಿ ಹೋಕರಿಗೂ ಗಡ್ಡ ಚರ್ಚೆಯ ವಿಸ್ಯವೇ, ನಿನಗೆ ಗಡ್ಡ ಚಂದ ಕಾಣೋದಿಲ್ಲ, ನಿನ್ನದು ಕೋಲು ಮುಖ ಹಾಗಾಗಿ ಗಡ್ಡ ಇಲ್ಲದಿದ್ರೆ ಚಂದ, ಆ ಬ್ಯಾರಿ ಅಬೂಬಕರೇ ಮಗನ ಹಾಗೆ ಕಾಣ್ತಿಯಾ, ವಿಶೇಷ ಕಾರ್ಯಕ್ರಮಕ್ಕೆ ಹೋದರೆ ಮುಕ್ರಿ ಬಂದ ನೋಡಿ ಕೋಳಿ ಕೊಡಿ ಎಂದು ಕೂಹಕವಾಡಿದ್ದು ಇದೆ, ಮಗಳಿರುವ ದೂರದಿಂದ ಮಾವ ಆಗುವವರೊಬ್ಬರು ಗಡ್ಡ ಇಡುವುದು ನಮ್ಮ ಸಂಸ್ಕಾರ ಅಲ್ಲ ಆಲ್ವಾ? ಎಂದು ತನ್ನ ಮಗಳಿಗೆ ಈತ ವರನಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮುನ್ಸೂಚನೆ ನೀಡಿದ್ದು ಇದೆ. ನನ್ನೂರ ಬ್ಯಾರಿಗಳ ಮೊಬೈಲ್ ಅಂಗಡಿಯಲ್ಲಿ , ಚಪ್ಪಲಿ ಅಂಗಡಿಗಳಲ್ಲಿ ಬ್ಯಾರಿ ಭಾಷೆಯಲ್ಲೇ ಮಾತಾನಾಡಿಸಿ, ನನ್ನನ್ನೂ ತಾತ್ಕಾಲಿಕ ಬ್ಯಾರಿ ಮಾಡಿಸಿ, ವ್ಯಾಪಾರ ಕುದುರಿಸಿದ್ದು ಇದೆ. ಮತ್ತೆ ಬ್ಯಾರ್ತಿ ಹುಡುಗಿ ನಕ್ಕದು ಇದೆ.
ಈ ಗಡ್ಡದಲ್ಲೂ ಹಲವು ವಿಧವಿದೆ ಕೈಯಾಡಿಸಿದರೆ ಕಂತಿದರೆ ಅದು ಪೊಕ್ರಿ ಗಡ್ಡ, ಅದೆಲ್ಲೋ ಮೂಲೆಯಲ್ಲಿ ಒಂದು ನಾಕು ಕೂದಲು ಬೆಳೆದರೆ ಹೋತ ಗಡ್ಡ, ಸಾಧಾರಣ ಉದ್ದವಿದ್ದರೆ ಹೆಂಡತಿ ಗರ್ಭಿಣಿಯೋ ಎಂಬ ಗಡ್ಡ, ಮತ್ತಷ್ಟು ಮುಖ ತುಂಬಾ ದಪ್ಪವಾಗಿದ್ದರೆ ಏನು ಹುಡುಗನಿಗೆ ಹುಷಾರಿಲ್ವಾ? ಎಂಬಾ ಗಡ್ಡ. ಒಟ್ಟಾರೆ ಅಪರಾಧಿ, ಗಡ್ಡವಂತೂ ಸತ್ಯ. ಹಲವು ಬಾರಿ ಅತ್ತಿಗೆಯಂದಿರ ಬಾಯಿ ಮುಚ್ಚಿಸಿದ್ದು ಇದೆ. ತಮಗೆ ಗಡ್ಡ ಬರುವುದಿಲ್ಲವೆಂದು ನಂಜಿ ಕಾರುವುದು ಅಲ್ವೇ? ಎಂದು ಕೇಳಿ ಮತ್ತೆಂದೂ ನನ್ನ ಗಡ್ಡದ ಬಗೆಗೆ ಪ್ರಶ್ನಿಸದ ಹಾಗೆ ಮಾಡಿದಿದೆ. ಅವರಿಗೆ ವಿಷಯ ಗೊತ್ತಿಲ್ಲ, ದಿನಚರಿಯ ಹಲವು ನಿಮಿಷಗಳು ಉಳಿಯುತ್ತವೆಯೆಂದು, ಮೊಗದ ಸೌಂದರ್ಯ ಕಾಪಾಡುತ್ತದೆಯೆಂದು, ಮುಖವೂ ತೇವವಾಗಿಡುತ್ತದೆಯೆಂದು, ಜೊತೆಗೆ ಮೊಡವೆಗಳು ಕಾಣಿಸುವುದಿಲ್ಲವೆಂಬ ಸತ್ಯಗಳು. ಗಡ್ಡ ತೆಗೆದ ಗದ್ದ ಅದೇನು ಸುಂದರ ಗೊತ್ತಿಲ್ಲ ಕಲಾಯಿ ಹಾಕದ ಕಿಜಿಯ ಪಾತ್ರೆಯಂತೆ ಚುರುಪು ಚುರುಪು ಗಡ್ಡದ ಮಾಸಿದ ಚುಕ್ಕಿಗಳ ಸಶೇಷವಲ್ಲದ ಬಿಂಬ ಮಾತ್ರ ಸತ್ಯ.
ತಮಗೂ ಗೊತ್ತಿರಬಹುದು ಕರಿಯ ಜನಾಂಗದ ಪ್ರಥಮ ಮತ್ತು ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಗಡ್ಡ
ಇಡುತ್ತಿದ್ದರು. ಅವರದೇಲ್ಲ ಭಾವಚಿತ್ರಗಳಲ್ಲಿ ನೋಡಬಹುದು. ನೀವೇನಾದ್ರು ಪ್ರೀತಿ - ಪ್ರೇಮ ವೈಫಲ್ಯ ಇದ್ದಿರಬೇಕು ಎಂದುಕೊಂಡರೆ ಅದು ಸುಳ್ಳು ಅಚ್ಚರಿ ಎಂದರೆ ಅವರು ಗಡ್ಡ ಬಿಡಲು ಪ್ರೇರಣೆ ನೀಡಿದ್ದು 11ರ ಹರೆಯದ ಪೋರಿಯೊಬ್ಬಳ ಪತ್ರವಂತೆ. 1860ರ ಅಕ್ಟೋಬರ್, ಆಗಷ್ಟೆ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆನಡೆಯುವುದರಲ್ಲಿತ್ತು. ರಿಪಬ್ಲಿಕನ್ ಪಕ್ಷದಿಂದ ಲಿಂಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತು. ಅದೇ ಸಮಯಕ್ಕೆ ನ್ಯೂಯಾರ್ಕ್‌ನ ವೆಸ್ಟ್ ಫೀಲ್ಡ್‌ನಿಂದ ಗ್ರೇಸ್ ಬೆಡೆಲ್ಸ್ ಎಂಬ 11 ವರ್ಷದ ಪುಟಾಣಿ ಬರೆದ ಪತ್ರ ಭವಿಷ್ಯದ ಅಧ್ಯಕ್ಷನಾಗಲು ಕನಸು ಹೆಣೆಯುತಿದ್ದ ಅಬ್ರಹಾಂ ಲಿಂಕನ್‌ರ ಕೈ ಸೇರಿತ್ತು. ಅದರಲ್ಲಿ ನಾನು 11 ವರ್ಷದ ಬಾಲಕಿಯಾಗಿದ್ದು, ನೀವೇ ದೇಶದ ಅಧ್ಯಕ್ಷರಾಗಬೇಕೆಂದು ನಾನು ಬಯಸಿದ್ದೇನೆ. ನಾನೇನಾದರು ಹುಡುಗನಾಗಿದ್ದರೆ ನಿಮಗೆ ಓಟ್ ಮಾಡಬಹುದಿತ್ತೇನೋ ಆದಗ್ಯೂ ನನಗೆ ನಾಲ್ಕು ಮಂದಿ ಅಣ್ಣಂದಿರಿದ್ದು, ಅವರೆಲ್ಲರೂ ನಿಮಗೆ ಓಟ್ ಮಾಡುವಂತೆ ಕೇಳುತ್ತೇನೆ. ಆದರೆ ಇದಕ್ಕೊಂದು ಷರತ್ತು. ನಿಮ್ಮ ಮುಖ ತುಂಬಾನೆ ಸಣಕಾಲಾಗಿದ್ದು ನೀವು ಗಡ್ಡ ಮೀಸೆ ಬಿಡುವುದು ಉತ್ತಮ. ಗಡ್ಡ ಬಿಡುವ ಗಂಡಸರನ್ನು ಕಂಡರೆ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಆಗ ಅವರ ಗಂಡಂದಿರಿಗೆ ನಿಮಗೆ ಓಟು ಹಾಕುವಂತೆ ಒತ್ತಾಯಿಸುತ್ತಾರೆ ಹಾಗೂ ತಾವು ನಮ್ಮ ಅಧ್ಯಕ್ಷರಾಗುತ್ತೀರಿ ಎಂದು ಬರೆದಿತ್ತು. ಈ ಪುಟಾಣಿಯ ಬಯಕೆಯಂತೇ ಗಡ್ಡ ಬಿಡುತ್ತೇನೆ ಎಂದು ಲಿಂಕನ್ ಹೇಳಿಕೊಂಡಿದ್ದರಂತೆ, ಹಾಗೂ ಜೀವನ ಪೂರ್ತಿ ಗಡ್ಡಧಾರಿಯೇ ಆಗಿದ್ದರು.
ಹೌದು ವ್ಯಕ್ತಿಯೊಬ್ಬನ ಗಡ್ಡ ಅವನ ತುಂಟ ಮುಗುಳ್ನಗೆಯನ್ನು, ಮುತ್ತುಕೊಡುವ ತುಟಿಗಳನ್ನು ಅಡಗಿಸಲು ಬಹುದು, ಆದರೆ ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಯನಲ್ಲ, ಅವನು ಅವನೇ.. ಬದಲಾದ್ದು ನಮ್ಮ ನೋಟ ಅಷ್ಟೇ.... ಬಿಳಿ ತೊಗಲು ಚಂದ, ತಲೆಕೂದಲು ಇಲ್ಲದವನು ಅಂದವಿಲ್ಲ, ಗಡ್ಡಬಿಟ್ಟವರೆಲ್ಲ ಸುಖವಲ್ಲ ಎಂಬ ನಮ್ಮ ಚಿಂತನೆ ಬದಲಾಯಿಸಬೇಕಾಗಿದೆ. ಅಲ್ವೇ?
No comments:
Post a Comment