Sunday, November 21, 2021

ಅರೆಭಾಷೆ ಪದ ಪದಾರ್ಥ

ಮಾನವ ತನ್ನ ಭಾವನೆ, ಆಲೋಚನೆ, ವಿಚಾರಗಳನ್ನು ಮತ್ತೊಬ್ಬರಿಗೆ ತಿಳಿಸಲು ರೂಢಿಸಿಕೊಂಡಿರುವ ಹಲವು ಮಾಧ್ಯಮಗಳಲ್ಲಿ ಭಾಷೆ ಮುಖ್ಯವಾದದ್ದು.  ಇದು ಮಾನವನನ್ನು ಪ್ರಾಣಿ ಜಗತ್ತಿನಿಂದ ಬೇರ್ಪಡಿಸಿ ತೋರಿಸಲು ಇರುವ ಪ್ರಮುಖ ಸಾಧನವಾಗಿದೆ. ಭಾಷೆಯನ್ನು ಮನುಷ್ಯ ಮೂಲತಃ ಅನುಕರಣೆಯಿಂದ, ಸನ್ನೆಗಳಿಂದ, ನಾಲಗೆಯ ರಚನೆಯ ರೂಪದಿಂದ ಒಲಿಸಿಕೊಂಡಿದ್ದಾನೆ. ಇವೆಲ್ಲದರಿಂದ ಭಾಷೆಯೆಂಬುವುದು ಒಂದು ವಿಶೇಷ ಪ್ರಯೋಗ.  ಒಂದೊಂದು ಅಕ್ಷರವನ್ನು ಜೋಡಿಸುವ ಪದವು ಅರ್ಥವಾತ್ತಾದ ವಾಕ್ಯವಾಗುತ್ತದೆ.  ಇಂತಹ ವಾಕ್ಯಗಳಲ್ಲಿ ಹಲವು ಮಾತುಕತೆಗಳಿರುತ್ತವೆ.   

ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ.  ಅವುಗಳಲ್ಲಿ ನಮ್ಮ ಅರೆಭಾಷೆಯೂ ಒಂದು.   ಸುಮಾರು 600- 700 ವರ್ಷಗಳ ಇತಿಹಾಸವಿರುವ ಅರೆಭಾಷೆ, ಇಂದು ಸಮುದಾಯದ ಭಾಷೆಯಿಂದ ಪರಿಸರದ ಭಾಷೆಯಾಗಿ ಪ್ರದೇಶದ ಜನರ ಭಾಷೆಯಾಗುತ್ತಿದೆ. ಭಾಷೆಯ ಶಬ್ದ ಭಂಡಾರದಲ್ಲಿ ಬರುವ ಪದಗಳ ಕನಿಷ್ಠತಮ ಘಟಕಗಳನ್ನು ಬಿಡಿಸಿ ಒಡೆದು ನೋಡಿದಾಗ, ಮಾತಿನ ಅರ್ಥ, ಪದಗಳು ಬಂದು ಸೇರುವ ಬಗೆ, ಅದರ ಉಚ್ಚಾರದ ಒಳಮರ್ಮವನ್ನು ತಿಳಿಯಬಹುದು.  ಭಾಷೆಯೊಂದರ ಪದಗಳು ಸ್ಪೋಟಿಸುವುದು ಆ ಭಾಷೆಯ  ಜೀವಂತಿಕೆ ಮತ್ತು ಸೌಂದರ್ಯದ ಕುರುಹಾಗಿದೆ.  ಇಂತಹದ್ದೇ ರಚನೆಗಳು ಮಾತನಾಡುವ, ಕೇಳಿಸಿಕೊಳ್ಳುವ ಭಾಷೆಯಾದ ಅರೆಭಾಷೆಯಲ್ಲಿದೆ.  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಚನೆಯಾದ ನಂತರ ಬರಹದ ರೂಪವನ್ನು ಕಾಣುತ್ತಿದೆ.  ಚಲನಶೀಲವಾದ ಅರೆಭಾಷೆ ತನ್ನದೇ ಪ್ರಾದೇಶಿಕ ಅಸ್ಮಿತೆಯನ್ನು ಆಚರಣೆ ಅರಾಧನೆಗಳಿಂದ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ವಿಧಿ-ನಿಷೇಧಗಳನ್ನು, ಕಟ್ಟುಪಾಡುಗಳನ್ನು ಭಾಷೆಯೊಂದಿಗೆ ಪದಕಟ್ಟುತ್ತಾ, ಪದ ಒಡೆಯುತ್ತಾ, ಹಾಡುಗಳನ್ನು ಜೋಡಿಸುತ್ತಾ ಅನ್ಯಭಾಷೆಯ ಪದಗಳ ಜೊತೆ ನೆಂಟಸ್ತಿಕೆ ಮಾಡುತ್ತಾ  ಬಂದಿದೆ.  ಅಂತಹ ಪದಗಳ ಹರಿವಿನಲ್ಲಿ ಹಲವು ಶಬ್ದಗಳು ಹಿಂದಿನಂತೆ ಉಳಿದು ಕೆಲವು ಮಾರ್ಪಾಡುಗೊಂಡು ಮತ್ತೆ ಕೆಲವು ಮರೆತು, ಬಳಸದೇ ಕಳೆದು ಹೋಗಿರಬಹುದು.  ಅರೆಭಾಷೆಯ ಮೇಲೆ ಹಳೆ ಕನ್ನಡ, ತುಳು, ಮಲಯಾಲಂ ಮೊದಲಾದ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದು.  ಇಂತಹ ಪ್ರಭಾವವು ಭಾಷಾವ್ಯತ್ಯಾಸ, ಧ್ವನಿವ್ಯತ್ಯಾಸ, ಭಾಷಾ ಸ್ವೀಕರಣ, ಸೌಲಭ್ಯಾಕಾಂಕ್ಷೆಯ ಮೂಲಕ ಅರೆಭಾಷೆಯಲ್ಲೂ ವೈವಿಧ್ಯವಿದ್ದು ಇಲ್ಲಿ ಕೆಲವು ಅರೆಭಾಷೆ ಪದಗಳ ಅರ್ಥವನ್ನು ವಿಶ್ಲೇಷಿಸೋಣ.


ಹಂಞ ಇದು ಅರೆಭಾಷೆಯ ವಿಶೇಷ ಶಬ್ದ. ಹಂಞ, ಹಞ್ಞ  ಎಂದರೆ ಸ್ವಲ್ಪ, ಕಡಿಮೆ, ಅಲ್ಪ ಎಂಬ ಪದವು ಸಂದರ್ಭೋಚಿತ ಅರ್ಥ ಕೊಡುತ್ತದೆ. ಹಂಞ, ಘನ ರೂಪ ಮತ್ತೆ ದೂರ ಅಳೆಯುವ ಮಾಪನವಾಗಿದೆ ಎಂದು ಹೇಳಬಹುದು.  ಹಂಞ ದೂರ,  ಹಂಞ ಜನಗ, ಹೀಗೆ ದ್ರಾವಿಡ ಭಾಷೆಯ ವೈಶಿಷ್ಟ್ಯವು ಅರೆಭಾಷೆಯಲ್ಲೂ ಅನುನಾಸಿಕದಿಂದ ಕೊನೆಗೊಳ್ಳುವ ಮತ್ತು ಮಧ್ಯದಲ್ಲಿ ಬರುವ ಶಬ್ದಗಳು ಇವೆ. ಅನುನಾಸಿಕ ವ್ಯಂಜನ  'ಙ' ಮತ್ತು 'ಞ' ಗಳು ಅರೆ ಭಾಷೆಯಲ್ಲಿ ಧ್ವನಿಮಾಗಳಾಗಿಯೇ ಉಳಿದಿವೆ.   ಮಂಙ, ಕುಂಞ ಇತ್ಯಾದಿ.  ಈ ಪದಗಳಲ್ಲಿ ಅನುನಾಸಿಕ ದ್ವಿತ್ವ ರೂಪವೂ ಇದೆ. ಪಾಣಿನೀಯ ಸೂತ್ರದ ಪ್ರಕಾರ ಪ್ರತೀ ವರ್ಗದ ಕೊನೆಯಲ್ಲಿ ಬರುವ ವ್ಯಂಜನಾನುನಾಸಿಕಗಳನ್ನೇ ಆಯಾ ವರ್ಗದ ಅಕ್ಷರಗಳ ಜೊತೆ ಉಪಯೋಗಿಸಬೇಕು, ಸ್ವರಾನುನಾಸಿಕವನ್ನಲ್ಲ  ಎಂಬುವುದು ತರ್ಕ. ಉದಾಹರಣೆಗೆ ಮಙ್ಙಣೆ, ಅಙ್ಙಣ, ಹಞ್ಞ ಇತ್ಯಾದಿ.  ಹಳೆಗನ್ನಡದ ಹಲವು ಪದಗಳು ಅರೆಭಾಷೆಯಲ್ಲಿ ಮೂಲ ರೂಪವನ್ನು ಉಳಿಸಿಕೊಂಡು ಹಾಗೆಯೇ ಜನಪದರ ಮಾತುಗಳಲ್ಲಿ ಬಳಕೆಯಾಗುತ್ತಿದೆ.  ಜೊತೆಗೆ  ವ್ಯಂಜನಗಳಲ್ಲಿ ಇವತ್ತಿಗೂ ಅನುನಾಸಿಕಗಳು ಉಳಿದು ಕೊಂಡಿರುವುದು ಕೂಡಾ ವಿಶೇಷವೇ ಆಗಿದೆ. ಉದಾ: ಬೇಂಕೆ, ನೀಂಡ್,  ಮಂಕಣೆ ಇತ್ಯಾದಿ.  ಹೀಗೆ ಇದು ಅರೆಭಾಷೆ ಮತ್ತು ಹಳೆಗನ್ನಡದ ನಂಟನ್ನು ವಿವರಿಸುತ್ತದೆ.  ಮಂಙ, ಹಂಞ ಇತ್ಯಾದಿ ಪದಗಳಲ್ಲಿ  ಅನುಸ್ವಾರಗಳ ಬಳಕೆಯಿದ್ದು, ಮಂಙ ಪದವನ್ನು ಮಙವೆಂದು ಬರೆದರೂ ಓದಬಹುದು. 

ಹನೀಸ್, ಒಸಿಯ, ಒಸಿ, ಹನಿಯ, ಚೂರು ಶಬ್ದಗಳೆಲ್ಲ ಅರೆಭಾಷೆಯಲ್ಲಿ ಸ್ವಲ್ಪ, ಕಮ್ಮಿ, ಸಾಕು ಎನ್ನುವ ಅರ್ಥವನ್ನು ಕೊಡುತ್ತದೆ.  ಇವುಗಳನ್ನು ಪರಿಮಾನ ಮಾಪನವಾಗಿ ಬಳಸುತ್ತಾರೆ. ಇಲ್ಲಿ ಪದಗಳನ್ನು ಬಳಸುವ ಸಂದರ್ಭವು ದ್ರವ, ಘನ ವಸ್ತುಗಳನ್ನು‌ ಬೇಕು, ಸಾಕು ಎಂಬ ಸಂದರ್ಭದಲ್ಲಿ ಮತ್ತು ದೂರ ಹತ್ತಿರವೆಂಬ ದರ್ಶಕವನ್ನು ತಿಳಿಸುವ ಸಂದರ್ಭವಾಗಿ ಬಳಕೆಯಾಗುತ್ತದೆ.


ʼಹನಿʼ ದ್ರಾವಿಡ ಪದವಾಗಿದ್ದು ಹನಿ, ಹನಿಸ್, ಹನಿಯ ಕ್ರಿಯಾಪದವಾಗಿ ಬಳಕೆಯಾಗುತ್ತದೆ. ಮೆಲ್ನೋಟಕ್ಕೆ ಇದು uncountable nounsಗಳ ತರಹ ಜನರ ಬಾಯಲ್ಲಿ ಬಳಕೆಯಾಗು‌ತ್ತಿದೆ. ಹನಿಸ್ ನಿದ್ದೆ, ಹನಿ ಹನ್ಕುದು. ಉತ್ತಮ ಪುರುಷದಲ್ಲಿ "ನಂಗೆ ಹನಿಯ ಸಂದಿಕಾ",  "ಆಂಬ್ರ ಹನೀಸ್ ಬೊಳ್ಳ ಅವುಟ್ಟು"  ಅದರೆ ʼಹನಿಸ್ʼ ಕ್ರಿಯಾವಾಚಕವಾಗಿ ಬರುವುದಿಲ್ಲ ಆದರೂ  ಬಳಕೆಯಲ್ಲಿದೆ.  

ಹನಿ, ಹನಿಯ, ಹನಿಸ್‌ ದ್ರವ್ಯ ಮತ್ತು ಅನ್‌ಕೌಂಟೆಬಲ್‌ ಬಗೆಗೆ ತಿಳಿಸುವಾಗ ಬಳಸುವ ವ್ಯತ್ಯಾಸವನ್ನು  ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಅದರೆ ಸಾಮಾನ್ಯರ ಮಾತಿನಲ್ಲಿ ಇವೆರಡೂ ಒಂದೇ ಎನ್ನುವ ನೆಲೆಯಲ್ಲಿ ಬಳಕೆಯಾಗುತ್ತದೆ ಜೊತೆಗೆ ಪ್ರಾದೇಶೀಕ ಭಿನ್ನಾಂಶದ ವಾದವೂ ಇದೆ. 


ಗೂಡೆ ಎಂಬ ಈ ಪದಕ್ಕೆ ʼಪ್ರಾಯಕ್ಕೆ ಬಂದ ಹೆಣ್ಣುʼ ಎಂಬ ಅರ್ಥ ಇದೆ.  ಕನ್ನಡ ಭಾಷೆಯಲ್ಲಿ ಸಮಾನ ಅರ್ಥವಿಲ್ಲದಿದ್ದರೂ ಹೆಣ್ಣು ಮಕ್ಕಳೇ ಪ್ರಧಾನವಾಗಿ ಆಡುವ ಕಣ್ಣಾಮುಚ್ಚಾಲೆ ಆಟದಲ್ಲಿ “ಕಣ್ಣಾಮುಚ್ಚೆ ಕಾಡೇ ಕೂಡೆ/ಗೂಡೆ!” ಎಂಬ ಪದ ಬರುತ್ತದೆ.  ಜನಪದರ ರೂಢಿಯಲ್ಲಿ ‘ಜಂಗಮನಿಗೆ ಜೋಳಿಗೆ ತಪ್ಪಿಲ್ಲ, ಕೊರಮನಿಗೆ ಗೂಡೆ ತಪ್ಪಿಲ್ಲ’ ಎಂಬ ಮಾತು ಬರುತ್ತದೆ.  ಇದು ಜಂಗಮನಿಗೆ ಭಿಕ್ಷೆ ಬೇಡುವುದು ತಪ್ಪುವುದಿಲ್ಲ, ಕೊರಮ(ಕೊರವರ)ರ ಕುಲ ಕಸುಬು ಅಗಿರುವ ಬುಟ್ಟಿ ಹೆಣೆಯುವುದು ತಪ್ಪುವುದಿಲ್ಲ ಎಂದಾಗುತ್ತದೆ. ತುಳು ಭಾಷೆಯಲ್ಲೂ ʼಗೂಡೆʼ ಪದ ಪ್ರಯೋಗವಿದೆ.  ತರಗೆಲೆ ತುಂಬಿಸುವ ದೊಡ್ಡ ಬುಟ್ಟಿಯಂತಹ ರಚನೆ ಎಂಬ ಅರ್ಥ ತುಳು ಡಿಕ್ಷನರಿಯಲ್ಲಿದೆ. ಬುಟ್ಟಿ ಮತ್ತು ಹೆಣ್ಣು ಇಲ್ಲಿ ಪ್ರಧಾನವಾಗಿರುವುದನ್ನು ಗಮನಿಸಬಹುದು. ಹಿಂದಿನ ಕಾಲದಲ್ಲಿ ಮನೆಯಲ್ಲೇ ಇದ್ದು ಕೆಲಸ ಮಾಡುವವಳು, ಒಳ್ಳೆಯದು- ಕೆಟ್ಟದು, ಕಷ್ಟ-ನಷ್ಟಗಳನ್ನು ತನ್ನೊಡಳಲಿ ಬುಟ್ಟಿಯಂತೆ ಬಚ್ಚಿಕೊಂಡು ಬದುಕುವವಳು ಎಂಬ ಗೂಢಾರ್ಥವನ್ನು ನೀಡಬಲ್ಲುದು. “ಗೂಡೆಗಳಿಗೆ ಎದೆ ಬಾಕನ ನೆಲ ಕಾಂಬಲೆ” ಎಂಬ ಅರೆಭಾಷೆ ಗಾದೆ ಪ್ರಾಯಕ್ಕೆ ಬಂದ ಹೆಣ್ಣಿಗೆ ನೆಲ ಕಾಣುವುದಿಲ್ಲ  ಅಂದರೆ ಅವಳ ಗತ್ತು ಗೈರತ್ತುಗಳನ್ನು ತಿಳಿಸುತ್ತದೆ.


ಬೆಸ್ತವಾರ ಅರೆಭಾಷೆಯಲ್ಲಿ ಗುರುವಾರಕ್ಕೆ ʼಬೇಸ್ತವಾರʼ ಅಂತ ಕರೆಯುತ್ತಾರೆ.  ಬೇಸ್ತವಾರ ಇದು ಬೃಹಸ್ಪತಿವಾರದ ಗ್ರಾಮ್ಯ ರೂಪವಾಗಿದೆ. ಬುಡುಬುಡಿಕೆಯವರ ಭವಿಷ್ಯದ ಮಾತುಗಳಲ್ಲಿ “ಮಂಗಳವಾರ ಮುಖಕ್ಷೌರ ಮಾಡಬೇಡ ಬೇಸ್ತವಾರ ಹೊಸಬಟ್ಟೆ ಹಾಕಬೇಡ, ಭಾನುವಾರ ಪ್ರಯಾಣ ಮಾಡಬೇಡ” ಎಂಬ ಮಾತು ಬರುತ್ತದೆ.. ಮಂಡ್ಯದಲ್ಲಿ ಮಾತಾನಾಡುವ ಕನ್ನಡದಲ್ಲೂ ಬೇಸ್ತಾರ, ಅಯ್ತಾರ ಬಳಕೆಯಿದೆ.  “ಮುಂದ್ನ ಎಂಟತ್ತು ಜಿನ ಇನ್ಯಾವ ಇಸೇಸವೂ ಇಲ್ದೆ ಕಳೀತು. ಒಂದು ಬೇಸ್ತವಾರ ಸಂತೇಲಿ ಸಿಕ್ದ ಅಡವಿಯಪ್ಪ ಲಕ್ಕನ್ನ ಹೊಳೆ ಅತ್ರ ಕರಕಂಡೋಗಿ ಕುಂಡರಿಸಿಕೊಂಡು ಗುಟ್ಟಾಗಿ ಮಾತಾಡಿದೊ” ಈ ರೀತಿ ಶ್ರೀ ಚದುರಂಗರು ಬರೆದ ವೈಶಾಖ ಕಾದಂಬರಿಯಲ್ಲಿ ಬರುತ್ತದೆ.  ʼಬೆಸ್ತʼ ಇದಕ್ಕೆ ಮೀನು ಹಿಡಿಯುವವನು, ಬೆಸೆದವ  ಕೆಲಸಮಾಡುವವನು, ಕೆಲಸಕ್ಕೆ ಕರೆಯಬೇಕಾದವನು ಎಂಬ ಅರ್ಥವಿದೆ ಎಂದು ಇಗೋ ಕನ್ನಡದಲ್ಲಿ ಪ್ರೊ ಜಿ. ವೆಂಕಟಸುಬ್ಬಯ್ಯನವರು ವಿವರಿಸುತ್ತಾರೆ. ಬೆಸ್ತ, ಬೆಸೆಯುವವರಿಗೆ ಮತ್ತು ಗುರುವಾರದ ಸಂಬಂಧ ಕಲ್ಪಿಸುವುದು ಕಷ್ಟ ಸಾಧ್ಯ.


ಕುರೆ ಎಂದರೆ ಅರೆಭಾಷೆಯ ವಿಶೇಷ ಅರ್ಥದಲ್ಲಿ ಮಂಗ ಎಂಬ ಅರ್ಥ ಕೊಡುತ್ತದೆ. ವಿವಿಧಾರ್ಥದಲ್ಲಿ ಇದು ಜಿಪುಣತನ, ಕೊರೆದುಹೋಗು, ಕಡಿಮೆ ಎಂಬ ಅರ್ಥ ಕೊಡುತ್ತದೆ. ‌ ಶ್ರೀ ವೆಂಕಟರಾಜ ಪುಂಚಿತ್ತಾಯರು ಸಂಗ್ರಹಿಸಿದ ತುಳು ಶ್ರೀ ಭಾಗವತದಲ್ಲಿ‌ ಈ ರೀತಿಯ ಉಲ್ಲೇಖವಿದೆ. “ಕುರೆ ವರ್ತಿತಿ ವರ್ತಕೊಮಾಶ್ಚರ್ಯೋ ಶುಭೊ ವರ್ಪಿ ನಿಮಿತ್ತೂ" ಅಂದರೆ ಶುಭವುಂಟಾಗುವುದರ ಕಾರಣದಿಂದ ಮಂಗನು ನಡೆದುಕೊಂಡ ವರ್ತನೆ ಆಶ್ಚರ್ಯಕರವಾದುದು ಎಂಬುವುದಾಗಿದೆ. ʼಕೊರೆಂಙ್ʼ ಅಂದರೆ ಮಂಗ ಎಂದು ತುಳು ಭಾಷೆಯಲ್ಲಿ ಕರೆಯುತ್ತಾರೆ. ಇದು ಹೆಚ್ಚಾಗಿ ಬೈಗುಳ ಪದವಾಗಿ ಬಳಕೆಯಾಗುತ್ತದೆ. ಇದನ್ನು ಗಮನಿಸುವಾಗ ದ್ರಾವಿಡ ಪದವಾಗಿರಬಹುದು.  ʼದೊರೆ ಮರ್ಜಿ ಕುರೆ ಬುದ್ಧಿ ಎಂಬ ಗಾದೆ ಮಾತು ರಾಜನ ದೌಲತ್ತು ಇದ್ದರೂ ಬುದ್ಧಿ ಮಾತ್ರ ಮಂಗನಾದಗಿದೆ.


ಪೊಗ್ಗು ತಿಂಗ ಅರೆಭಾಷೆಯ ಮೊದಲ ತಿಂಗಳು. ಇದು ಸೌರಮಾನದ ಯುಗಾದಿಯಿಂದ ಆರಂಭವಾಗುತ್ತದೆ. ತುಳುವಿನಲ್ಲಿ ತುಳುವರ ತಿಂಗಳಂತೆ ಪಗ್ಗು ಪ್ರಯೋಗವಿದೆ.  ಅದರೆ ಅದರ ಮೂಲ ʼಹಂಚುʼ ಅರ್ಥ ಕೊಡುವ  “ಪಾಗು”ವಿನಿಂದ ಹುಟ್ಟಿರಬಹುದೆಂದು ವಿದ್ವಾಂಸರಾದ ಕಬ್ಬಿನಾಲೆ ವಸಂತ ಭಾರದ್ವಾಜರು ತಿಳಿಸುತ್ತಾರೆ.  “ಪೊಗ್ಗು” ತುಳುವಿಗೆ ಅನ್ವಯಿಸುದಾದರೆ ʼನುಗ್ಗುʼ ಎಂಬ ಅರ್ಥವನ್ನು ಕೊಡುತ್ತದೆ.  ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ ಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನನ್ನು ಕಾಣುವ ನಕ್ಷತ್ರವನ್ನು 'ಮಹಾನಕ್ಷತ್ರ' ಎಂದು ಕರೆಯಲಾಗುತ್ತದೆ.  ಒಂದು ರಾಶಿಯನ್ನು ಪ್ರವೇಶಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ.  ಆ ದಾಟುವ ಸಮಯವನ್ನು 'ಸಂಕ್ರಮಣ' ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನುಗ್ಗುವ ಮೊದಲ ತಿಂಗಳಿಗೆ ಪೊಗ್ಗು, ಪಗ್ಗು ರೂಪ ಧರಿಸಿದೆ. ತಮಿಳು ಮಲಯಾಲಂನಲ್ಲಿ ಪೊಕು, ಕನ್ನಡದಲ್ಲಿ ಪೊಗು, ಹೊಗು, ಹುಗ್ಗು ಅರ್ಥವನ್ನು ಕಾಣಬಹುದು. ಭಾಷಾ ವಿಜ್ಞಾನದ ಪ್ರಕಾರ ಧ್ವನಿ ಬದಲಾವಣೆಯಲ್ಲಿ ಕೆಲವು ಖಚಿತ ಧ್ವನಿಗಳು ಖಚಿತ ರೀತಿಯಲ್ಲಿ ಬದಲಾಗುತ್ತಾ ಹೋಗುವ ರೀತಿಯಾಗಿದೆ.   ಇಲ್ಲಿ ಹಕಾರವೂ >ಪಕಾರಕ್ಕೆ ಬದಲಾಗಿದೆ. ಹುಗ್ಗು>ಪೊಗ್ಗು ಎಂದು ಊಹಿಸಬಹುದು.  ಜೊತೆಗೆ ಅರೆಭಾಷೆಯಲ್ಲಿ ಬಹಳಷ್ಟು ಶಬ್ಧಗಳ ಅರಂಭಿಕ ಸ್ವರ ಅಕ್ಷರ ʼಅʼಕಾರವು ʼಒʼಕಾರ ಅಗಿರುತ್ತದೆ.  ತಪ್ಪು>ತೊಪ್ಪು, ಮದುವೆ>ಮೊದುವೆ, ಪಗ್ಗು>ಪೊಗ್ಗು.   


ಚಾಂಪ “ಚಾಮಿ ಅಪ್ಪ”’ ಎನ್ನುವ ವಿಸ್ತೃತ ಪದವನ್ನು ಮೊಟಕುಗೊಳಿಸಿ ಶ್ರಮದ ಮಿತವ್ಯಯಾಸಕ್ತಿಯಿಂದ ‘ಚಾಂಪ’ ಎಂಬುದಾಗಿ ಪರಿವರ್ತಿಸಿಕೊಳ್ಳಲಾಗಿದೆ.  ಸ್ವಾಮಿಯಪ್ಪ>ಚಾಮಿ ಅಪ್ಪ> ಚಾಂಪ.  ಧ್ವನಿವ್ಯತ್ಯಾಸದ ನಿಯಮಾವಳಿಗಳಲ್ಲಿ  ‘ಸೌಲಭ್ಯಾಕಾಂಕ್ಷೆ’ಗೆ ಇದೊಂದು ಮಾದರಿಯಾಗಿದೆ.  ಇದು ತಾತ ಅಥವಾ ಅಜ್ಜ ಎನ್ನುವ ಅರ್ಥವನ್ನು ಕೊಡುತ್ತದೆ. ʼಚಾಮಿʼ ಎಂದರೆ ಸ್ವಾಮಿ,  ದೇವರು ಎಂದು ಬಾಲ ಭಾಷೆಯಲ್ಲಿ ಕರೆಯುಲಾಗುತ್ತದೆ. ತುಳು ಭಾಷೆಯಲ್ಲೂ ಇದೇ ಅರ್ಥವಿದೆ.  ʼಚಾಮಿʼ ಮಾಡುವುದು(ನಮಸ್ಕಾರ ಮಾಡುವುದು), ʼಚಾಮಿʼ ಜೇಜಾ(ದೇವರಿಗೆ ಕೈ ಮುಗಿಯುವುದು, ದೇವರು) ಪ್ರಯೋಗವಿದೆ.  ಇಲ್ಲಿ ಹಿರಿಯರನ್ನು ದೇವರ ಸಮಾನ ಎಂಬ ನೆಲೆಯಲ್ಲಿ ʼಚಾಂಪʼ ಎಂಬ ರೂಪದಲ್ಲಿ ನೋಡಬಹುದು. 

ಹೀಗೆ ಅರೆಭಾಷೆ ಮಾತನಾಡುವ ಪ್ರದೇಶದ ಕೆಲವು ಪದಗಳಲ್ಲಿ ಅದರ ನಿಷ್ಪತ್ತಿಯ ಬಗೆಗೆ  ಚರ್ಚಿಸಲಾಗಿದೆ. ಅರೆಭಾಷೆಯು ಧ್ವನಿ, ವ್ಯಾಕರಣ, ಪದಕೋಶ ಮುಂತಾದ ನೆಲೆಗಳಲ್ಲಿ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ.  ಅರೆಭಾಷೆಯ ಪದಗಳನ್ನು ಬಿಡಿಸಿ ಬೇರೆ ಭಾಷೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಅರ್ಥಗಳನ್ನು ಹೊಂದಿಸಿಕೊಂಡು ಊಹಿಸಬಹುದಾಗಿದೆ. ಪದದ ಮೂಲ, ಹುಟ್ಟು, ಅರ್ಥ, ಸಂದರ್ಭಗಳ  ನೆನೆವರಿಕೆ ಅರೆಭಾಷೆಯಲ್ಲಿ ಅಗಬೇಕಿದೆ. ಭಾಷಾ ವಿಜ್ಞಾನದ ನೆಲೆಯ ಬರಹಗಳು, ಸಂಶೋಧನೆಗಳು ಅಗತ್ಯವಿದ್ದು,  ಮುಂದೆ ಅಧ್ಯಯನಕಾರರಿಗೆ ಬಹಳಷ್ಟು ಅನುಕೂಲವನ್ನು ಒದಗಿಸಿಕೊಡಬಹುದು. 

- ಭರತೇಶ ಅಲಸಂಡೆಮಜಲು

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...