ನಾನು ನೇತ್ರಾವತಿ..
****************
ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಪಡ್ಡೋಯಿ ಕಡಲು ಅರಬ್ಬೀ ಸಮುದ್ರವನ್ನು... ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ತುಂಬು ಸಂಸಾರ ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ಚೊಕ್ಕ ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ರಕ್ತಕ್ಕಿಂತಲೂ ಮೀರಿದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು ತಮ್ಮ ಕೆರೆಯಲ್ಲಿರುವ, ಬಾವಿಯಲ್ಲಿರುವ , ನಲ್ಲಿ ತಿರುಗಿಸಿದಾಗ ಬರುವ ನೀರು ಅದೇ ನಿಮ್ಮ ನೇತ್ರಾವತಿ ನಾನು.
ನನ್ನ ಜೀವನವೇ ಹೀಗೆ ಎಲ್ಲಿಯೂ , ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಅದರಿಂದಲೇ ಪಾವನವಾಗಿ ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಉಸಿರಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ, ಮಲೆನಾಡಿಗೆ ವರ್ಷಧಾರೆಯನ್ನು ಸಿಂಪಡಿಸುತ್ತಿದ್ದರೆ, ಹಿಮ್ಮೇಳದಲ್ಲಿ ಮಂದಗಾಳಿಗೆ ನೆಟ್ಟಿ ತೆಗೆಯುವ ಲೆಂಕಿರಿಗಳು, ತಂಗಾಳಿಗೆ ಮೈಯೊಡ್ಡಿ ವ್ಯಾಯಾಮ ಮಾಡುವ ಕೊಂಬೆಗಳು, ಬಿಸಿಲಿಗೆ ಬಾಯಾರಿದ ತರಗೆಳಲೆಗಳು ನೀರು ಕುಡಿಯುವುದು, ತೋಡಿನ ಬದುವಿನ ಕೇದಗೆಯ ಪರಿಮಳ, ಇನಿದನಿ ಪಕ್ಷಿಗಳ ರಸಮಂಜರಿ, ಬಳುಕುತ್ತಾ ನಡೆಯುವ ಪ್ರಾಣಿಗಳು ಹೀಗೆ ... ಹೀಗೆ...ಇಂತಹ ಜೀವವೈವಿಧ್ಯದ ಪ್ರಾಕೃತಿಕ ಬಂಗುರವೇ ನನಗೆ ಆಹಾರ, ಕಣ್ಣಿಗೆ ಹಬ್ಬ, ಹೊಟ್ಟೆಗೂ ಖುಷಿ...
ಹೌದು ನನ್ನ ಇಕ್ಕೆಲಗಳಲ್ಲಿ ಅದೆಷ್ಟು ಬಚ್ಚಿಟ್ಟ ಗುಟ್ಟುಗಳು ಬಿಚ್ಚಿಡಲಾರದೇ ತೆರೆದಿವೆ, ನಾನು ಹರಿದಾಡುವ ಸುಮಾರು 150 ಕಿ.ಮೀ. - 200 ಕಿ.ಮೀ. ಗಳಲ್ಲಿ ಅದೆಷ್ಟು ಕಥೆಗಳು, ಸಾಹಸಗಾಥೆಗಳು, ಸಂಕಟದ ಬುತ್ತಿಗಳು ತಮ್ಮನ್ನು ತಾವೇ ತೆರೆದುಕೊಳ್ಳುತ್ತವೆ. ಆಕಾಶದಲ್ಲಿ ಕರಿಮುಗಿಲು ಚಪ್ಪರ ಹಾಕಿತೆಂದರೆ ಸಾಕು ಒಣ ಅಡಿಕೆ ರಾಶಿ ಮಾಡುವುದೇನು?, ತರಕಾರಿ ಮಜಲು ಸಿದ್ಧಪಡಿಸುವುದೇನು?, ಸೌದೆ ಅಟ್ಟೆ ಮಾಡುವುದೇನು? ಕಾದ ಹೆಂಚಿನ ಮಾಡಿಗೆ ಅಡಕೆ ಹಾಳೆಗಳನಿಟ್ಟು ಭದ್ರಪಡಿಸುವುದೇನು? ಅಂಗಳದಲ್ಲಿದ್ದ ಒಣಗಿದ ಬಟ್ಟೆ ತೆಗೆಯಲು ಅಜ್ಜಿ ಗೊಣಗುತ್ತಾ ಓಡುವುದೇನು? ಜೋರಾಗಿ ಮಳೆ ಬಂದರೆ ಬೊಲ್ಲಕ್ಕೆ ಬರುವ ಧನಿಗಳ ಮನೆಯ ಅಡಿಕೆ,ಬೊಂಡ, ತೆಂಗಿನಕಾಯಿಗೆ ನಮ್ಮ ಮುದರ ಕಾಯುವುದೇನು? ಹದವಾದ ಮಳೆಗೆ ಬೆಳೆದ ತೊಡುತ್ಪತಿಗಳಾದ ಸರು ಮೀನು, ಏಡಿ, ಆಮೆಗಳ ಹಿಡಿಯುವುದೇನು? ದಡದಲ್ಲಿ ಚಿಗುರುವ ಕುವ್ವೆ, ಕೇಸು, ನರೆಗಳನ್ನು ಅಗೆಯುವುದೇನು? ಮತ್ತೆ ಮಳೆ ನಿಂತು ಜಲಚರ ತುಂಬಿದ ಮೇಲೆ ತೊಟೆ ಹಾಕುವುದೇನು? ಈ ತೊಟೆಯ ವಿಚಾರ ನಂಗೂ ಅಸ್ಪಷ್ಟ ಮೀನು ವಿಷದಿಂದ ಸಾಯುತ್ತೋ ಅಥವಾ ಶಬ್ದದಿಂದ ಸಾಯುತ್ತೋ? ಎಂದು... ಹೇಗೆಗೋ ಹಲವಾರ ಹೊಟ್ಟೆಗೆ ಬಟ್ಟೆಗೆ ಪ್ರತ್ಯಕ್ಷ ಪರೋಕ್ಷವಾಗಿ ನಾನೇ ಆಹಾರವಾದೆ... ಅಂರ್ತಜಲದ ದೆಸೆಯಿಂದ ದುಂಡಗೆ ಬೆಳೆದ ಬಳಿತ ಕೆಂಪು ಅಬ್ಲಿಕೆ ಹಣ್ಣನ್ನು, ಚೇರೆ ಹಣ್ಣು ತಿಂದು ದಷ್ಟ- ಪುಷ್ಟವಾಗಿ ಬೆಳೆದ ಮಂಗಗಳು ಭಟ್ರ ತೋಟದಿಂದ , ಗೌಡ್ರ ತೋಟಕ್ಕೆ ಬಾಳೆಕಾಯಿ ವ್ಯಾಪಾರ ಮಾಡಲು ಹೋಗುವ ಪರಿ ನನಗೂ ನಗು ತರಿಸುತ್ತದೆ ಜೊತೆಗೆ ಒಂದಷ್ಟು ಬೊಂಡ ಅಡಿಕೆಗಳನ್ನು ಕೊಯ್ದು ಮಕ್ಕಳಿಗೊ ಅಜ್ಜಿಗೊ, ಇನ್ನೂ ದನ - ಹುಲಿ ಒಂದೇ ಹಂಡೆಯಿಂದ ನೀರು ಕುಡಿದದ್ದು, ಹಾವು ಹೆಡೆಯೆತ್ತಿ ಕಪ್ಪೆಗೆ ಬಿಸಿಲಿನಿಂದ ರಕ್ಷಣೆ ನೀಡಿದ್ದು ಇವೆಲ್ಲ ನನ್ನ ದಡದಲ್ಲೇ..!!!
ಇಂದು ಯಾರೋ ಕೊಟ್ಟ ಹೆಸರಿಗೆ ಅಭಿವೃದ್ಧಿಯೆಂದು, ತಮ್ಮಷ್ಟಕ್ಕೆ ತಾವು ಜೀವಿಸುತ್ತಿದ್ದ ಕಷ್ಟಜೀವಿಗಳ ಬದುಕನ್ನು ತಿವಿದು ಮೃತ್ಯು ಕೂಪಕ್ಕೆ ದಬ್ಬುವ ಪರಿ ನೋಡಿದರೆ ನನ್ನ ಅಳಿವು-ಉಳಿವಿನ ಪ್ರಶ್ನೆ ಎದುರಾಗುತ್ತದೆ. ನನ್ನನ್ನು ನಂಬಿರುವ ಹಲವಾರು ಸಸ್ಯ ಪ್ರಭೇದಗಳು, ಹುಲ್ಲುಗಾವಲು, ಕಾಡುಗಳು, ಸೊಂಟ ತಿರುಗಿಸುತ್ತಾ ನಡೆಯುವ ಕುಲಾವಿ ಹಕ್ಕಿ, ಕುಣಿಯುವ ಕಪ್ಪೆ, ಹಾರುವ ಓತಿ, ಕೂಗುವ ಮುಜು, ಸರೀಸೃಪ, ಪುಟ್ಟ ಕೀಟಗಳು ಮತ್ತೆ ನನ್ನ ಪುಟಾಣಿ ಪಯಸ್ವಿನಿ, ಗೌರಿ ಹೊಳೆ, ಸೀರೆ ಹೊಳೆ, ... ಗಳ ಭವಿಷ್ಯ ಚಿಂತಿಸಿದರೆ ಬಾಯಿಯ ನೀರಿನ ಪಸೆ ಆರಿ ಹೋಗುತ್ತದೆ. ಜಲವಿಜ್ಞಾನದ ಬದಲಾವಣೆ ಅಥವಾ ಹರಿವಿನ ತಿರುವಿನ ಬಗೆಗೆ ದುಂಡು ಮೇಜಿನ ಸಭೆಯಲ್ಲೆ ಸಂಕೀರ್ಣ ಸೂತ್ರಗಳು ಅಂಗೀಕರವಾಗಬೇಕೆಂದಿಲ್ಲ, ಸಾಮಾನ್ಯವಾಗಿ ಅಲೋಚನೆಯ ಈ ಸೂತ್ರ ನೋಡಿ " ನಿಮ್ಮ ಮನಸ್ಸು ತಿರುಗಿದರೆ ಸೆಲೆಯೊಡೆಯುತ್ತದೆ, ಅದರಂತೆ ನಾನು ನದಿ, ತಿರುಗಿಸಿದರೆ ಒಣಗಿ ಹೋಗುತ್ತೇನೆ” ಅಷ್ಟೇ ಈ ತೆರನಾದ ಸರಳ ಸೂತ್ರ ಅರ್ಥವಾಗದೇ ಹೋದರೆ ಜಟಿಲ ಸಮಸ್ಯೆಗಳಿಂದ ನಿಮ್ಮ ಪೋಪಿಕಾಲ ಎನ್ನಬೇಕಷ್ಟೇ...???
ಹಾಗೂ ಹೀಗೂ ನಿಮ್ಮ ಹಠವೇ ಗೆಲ್ಲಬೇಕೆಂದು ನನ್ನನ್ನು ತಿರುಗಿಸಿದ್ದೆ ಅದರೆ ಮುಂದೆಂದೂ ಪಾಣೇರ್ ಸಂಕ, ಉಬಾರ್ ಸಂಕ, ಗುರುಪುರ ಸಂಕ, ಉಳ್ಳಾಲ ಸಂಕಗಳ ಅವಶ್ಯಕತೆಯೇ ಇರುವುದಿಲ್ಲ. ಸಂಕದ ಸುಂಕದ ಕಿರಿಕಿರಿಯೂ ಇಲ್ಲ.. ಮುಂದಿನ ತಲೆಮಾರಿನ ಸಜ್ಜನ ಶಿಕ್ಷಣ ತಜ್ಞನೊಬ್ಬ ನಾವು ಪ್ರೌಢಶಾಲೆಯಲ್ಲಿ ಕಲಿತ ಹರಪ್ಪ, ಮೊಹಂಜೋದಾರ ನಾಗರಿಕತೆಯಂತೆ, ನೇತ್ರಾವತಿ ದಡದ ನಾಗರಿಕತೆಯೆಂದು ಪಠ್ಯ ಮುದ್ರಿಸಬೇಕಾದೀತು. ಸುತ್ತ ಮುತ್ತ ಸಂಪಧ್ಬರಿತ ಪಟ್ಟಣಗಳು, ಅಲ್ಲಿನ ಜನ ನಾಗ ದೇವರನ್ನು ಆರಾಧಿಸುತ್ತಿದ್ದರು, ಅಪಾರ ದೈವ ಭಕ್ತರು ವರ್ಷಾವಧಿಯಲ್ಲಿ ಮಾನವ, ದೈವ ಸಂಭೂತನಾಗಿ ಕೋಲವೆಂಬ ವಿಶಿಷ್ಟ ಆಚರಣೆಯಿತ್ತು, ಪ್ರತಿ ಮನೆಗೊಂದರಂತೆ ಗರೋಡಿ, ದೈವಸ್ಥಾನಗಳಿದ್ದವು, ಪರಲೋಕಕ್ಕೆ ಹೋದ ಹಿರಿಯರಲ್ಲಿ ಅಪಾರ ಗೌರವ ಪದಿನಾಜಿ ಕುಲೆಗಳಿಗೆ ಬಡಿಸುವುದು, ಶ್ರಾದ್ಧ ಮಾಡುವುದು, ಮದುವೆ ನಿಶ್ಚಯವಾದ ಹುಡುಗಿ ಸೋದರ ಮಾವನ ಮನೆಗೆ ಹೋಗಿ ಗುರು-ಕಾರ್ಣೆವರಿಗೆ ಅಗೆಲು ಹಾಕುವುದು, ಶುಭ ಕಾರ್ಯಗಳ ನಂತರ ಕಲುರ್ಟಿ ಅಪ್ಪೆಗೆ ಅಗೆಲು ಹಾಕುವುದು, ವಿಶೇಷ ಕಲಾ ನೈಪುಣ್ಯ, ವಾಕ್ಚತುರ್ಯ, ನೃತ್ಯ ರಂಗಸಜ್ಜಿಕೆ, ವೇಷಗಳಿಂದ ದೇವತೆಗಳನ್ನೇ ಭೂಲೋಕಕ್ಕೆ ಬರಮಾಡಿಕೊಳ್ಳುವ ಕಲೆ ಯಕ್ಷಗಾನ, ಮತ್ತೆ ಕೋಣಗಳನ್ನು ಓಡಿಸುವ ಕಂಬಳ, ಕೋಳಿಗಳ ಕುಸ್ತಿ ಕೋಳಿಕಟ್ಟಗಳು ಇಲ್ಲಿನ ಮನೋರಂಜನೆ ಆಟಗಳಾಗಿದ್ದವು, ನೇತ್ರಾವತಿ ಎಂಬ ನದಿ ಸಂಗಮವಾಗುವ ಉಬರ್ ಎಂಬಲ್ಲಿ ಹಿರಿಯರ ಪಿಂಡಬಿಟ್ಟು ಸದ್ಗತಿ ಮಾಡುತ್ತಿದ್ದರು, ಧರ್ಮಸ್ಥಳ, ಸುಬ್ರಹ್ಮಣ್ಯವೆಂಬ ಕಾರ್ಣಿಕದ ದೇವಾಸ್ಥಾನಗಳು ಇದರ ತಪ್ಪಲಲ್ಲೇ ಇದ್ದವು. ಇಲ್ಲಿನ ಪ್ರಮುಖ ಉದ್ಯೋಗ ಕೃಷಿ, ಭತ್ತ, ಅಡಿಕೆ, ತೆಂಗು, ರಬ್ಬರ್, ಕೊಕೋ , ಎಡೆ ಬೆಳೆಯಾಗಿ ಬಾಳೆ ಬೆಳೆಯುತ್ತಿದ್ದರು, ಒಳ್ಳೆ ಮೆಣಸ್ಸನ್ನು ಕಂಗಿಗೆ ಬಿಡುತ್ತಿದ್ದರು.. ಪುರುಷರು ಮಾಸಿದ ಬೈರಸನ್ನು ಹೆಗಲಿಗೆ ಹಾಕಿಕೊಂಡು ಹೊರಟರೆ, ಮಹಿಳೆಯರು ಮುಟ್ಟಾಲೆ ಇಟ್ಟು ಕೆಲಸಗಳಲ್ಲಿ ತೊಡಗುತ್ತಿದ್ದರು. ಪುಟಾಣಿ ಮುದ್ದು ಹುಡುಗಿಯರು ಕಲ್ಲಾಟವಾಡಲು ನದಿಯ ದುಂಡಗಿನ ಕಲ್ಲನ್ನೇ ಆರಿಸುತ್ತಿದ್ದರು ಎಂದು ಸಮಾಜಶಾಸ್ತ್ರ ಅಧ್ಯಯನದಲ್ಲಿ ಕಲ್ಲಚ್ಚದರೆ ಆಶ್ಚರ್ಯಪಡಬೇಕಾದದಿಲ್ಲ.
ಗಾಂಧೀ ಹೇಳುತ್ತಾರೆ " ಪ್ರಕೃತಿ ಎಲ್ಲರ ಅಗತ್ಯತೆಯನ್ನು ಪೂರೈಸಬಲ್ಲುದು, ಅದರೆ ದುರಾಸೆಯನ್ನಲ್ಲ" ವೆಂದು ಹಾಗೆನಾದರೂ ನೀವು ನನ್ನನ್ನು ದುರಾಸೆಯ ಕಣಿವೆಗೆ ದೂಡಿದಾದರೆ ಯುಗಯುಗಗಳುರುಳಿದರೂ, ಜನ್ಮ-ಜನ್ಮಾಂತರ ಕಳೆದರೂ ಪುರ್ನಮಿಲನಕ್ಕೆ ಅವಕಾಶವೇ ಇಲ್ಲ. ಶಾಶ್ವತ ವಿರಹಿಗಳಂತೆ ನೀವು ನನ್ನ ನೆನಪಿನಲ್ಲಿರಬೇಕಾದಿತು... ಬಾಷ್ಪೀಭವನ, ಅರ್ಧತೆಗಳಿಗೆ ಹಂಬಲಿಸಬೇಕಾದಿತು.. ಬಿಸಿಗಾಳಿಯೇ ಉಸಿರಾದೀತು...ಉಪ್ಪು ನೀರೇ ಆಹಾರವಾದೀತು. ಡಿಸ್ಕವರಿ ದೂರದರ್ಶನದಲ್ಲಿ ಬರುವ ಪ್ರಸಿದ್ಧ ಚಾರಣಿಗ , ಪ್ರಾಣಿಪ್ರಿಯ ಸ್ಟೀಫನ್ ಹೇಳುತ್ತಾನೆ " ಪ್ರಕೃತಿ ಮತ್ತು ಅದರೊಳಗಿರುವ ಜೀವರಾಶಿಗಳಿಗೆ ತೊಂದರೆಯಾಗದಂತೆ ಅವುಗಳ ಹರಿವು , ಕುಣಿವುಗಳನ್ನು ಅನುಭವಿಸಬೇಕು. ಅವುಗಳ ಸೂಕ್ಷ್ಮವನ್ನು ಮನಸ್ಸಲ್ಲಿ ತುಂಬಿಕೊಂಡು ಚಿತ್ರದಲ್ಲಿ ಸೆರೆ ಹಿಡಿಯಬೇಕು" ಎಂದು.. ನಾನಿಲ್ಲದಿದ್ದರೆ ತುಳುನಾಡಿನ ಮೇಘಗಳು ಜೀವಸಾರ ತುಂಬಿತೇ?, ಗುಡ್ಡಕ್ಕೆ ಆಕಾರ ಬಂದಿತೇ?, ಮಾವಿನ ತೋರಣಕ್ಕೆ ಆಧಾರ ಸಿಕ್ಕಿತೇ?, ಬೊಂಡಕ್ಕೆ ಅಮೃತ ಸಿಹಿ ಬಂದಿತೇ?, ಸಾರ ಕರೆಯ ಕರಿಬಿಳಿ ಕಲ್ಲಾಲ್ಲಿ ನೀರು ಜಿನುಗಿತೇ?, ಚಿತ್ರ ಬಿಡಿಸುವ ಕಲಾಕಾರನಿಗೆ ರೂಪ ಸಿಕ್ಕಿತೇ?, ಕವಿತೆಗೆ ಸ್ಪೂರ್ತಿ ಬಂದಿತೇ?, ಇವೇ ಸ್ಟೀಫನ್ ಹೇಳಿದ ಸೂಕ್ಷ್ಮಗಳು.
ಸಾತ್ವಿಕ ಮಾನಸದ ನನ್ನ ಜನ ಶಾಂತಿ ಪ್ರಿಯರೂ ಎಂಬುದು ನನಗೂ ಅರಿವಿದೆ , ದುರ್ಯೋಧನನನ್ನು ಸುಯೋಧನವೆನ್ನುವವರು ಸಜ್ಜನರೂ ಅಸಲಿ ವಿಷಯ ಮತ್ತು ವಿಷಗಳನ್ನು ತಮ್ಮ ದುರಾಸೆ, ದ್ವೇಷದಲ್ಲಿ ಮರೆಯಾಗದಂತೆ ಕಾಪಾಡಿ, ನಾಡಿನ ಜನತೆಗೆ ಮನದಟ್ಟು ಮಾಡಿ ನನ್ನ ಪವಿತ್ರ ದೇಹವನ್ನು ಕಡಿಯುವ ಕೆಟ್ಟ ಕಜ್ಜವ ವಿರೋಧಿಸಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ,ರೇಡಿಯೋ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಬೆಂಬಲಿಸುತ್ತವೆಯೆಂಬ ಆಚಲ ನಂಬಿಕೆ ಇದೆ. ಮೇಲಿನ ಇಷ್ಟೇಲ್ಲ ಪೀಠಿಕೆಯಿಂದ ತಮ್ಮ ಮನಸ್ಸು ಮದುವೆಯ ದಿನ ಸಂಜೆ ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುವಾಗ ಅಪ್ಪನ ಮನಸ್ಸು ಭಾರವಾದಂತೆ, ದೂರದೂರಿಗೆ ಮಗನನ್ನು ಕಳುಹಿಸಿ ಕೊಡುವಾಗ ಅಮ್ಮನ ಮನಸ್ಸು ಭಾರವಾದಂತೆ ನಿಮ್ಮ ಮನ ನನಗಾಗಿ ಮಿಡಿಯುತ್ತದೆ ಎಂದು ಆಶಿಸುತ್ತಾ, ಅಂಗೈ ಅಗಲದ ಜಮೀನಿಗೋ, ನೀರಿನ ಮೂಲಕ್ಕೋ ದಾಯಾದಿಗಳೊಳಗೆ ಶತ್ರುಗಳಾಗುವ ನೀವು, ಇಡೀ ತುಳುನಾಡಿನ ಪರಿಮಳ ಪಸರಿಸುವ ನಾನು "ನೇತ್ರಾವತಿ" ನಿಮ್ಮ ಅಮ್ಮ, ನಿಮ್ಮ ಮನೆಯವಳು, ನಿಮ್ಮ ಮಗಳು ಮತ್ತು ನಿಮ್ಮ ಸ್ವಂತವೆಂದು ನನ್ನನ್ನು ಉಳಿಸಲು ಹೋರಾಡುತಿರೆಂಬ ಭರವಸೆಯಿದೆ. ನಂಬಿಕೆಯಿದೆ ಇಲ್ಲದಿದ್ದರೆ ಮುಂದೆ ಅರಬ್ಬರಂತೆ ತೈಲೆಣ್ಣೆ ಇಲ್ಲಿ ಸಿಗಲ್ಲ... ಉಪ್ಪನ್ನೇ ಮಾರಬೇಕಾದೀತು... ಎಚ್ಚರ.... ಎಚ್ಚರ....
ನೀವುಗಳಿಗೆ ನಾನು ಅನಿವಾರ್ಯ ಹೊರತು ನನಗಲ್ಲ ಎಂಬುವುದು ಸೃ್ಮತಿಯಲ್ಲಿರಲಿ
ಕಡೆಗೆ ಹೆಮ್ಮೆಯಿಂದ ,
ಅರಬೀಯ ಅಬ್ಬರ,
ಚೆಂಡೆಯ ಠೇಂಕಾರ,
ಕೊಡಿಯಡಿಯ ಗಗ್ಗರ,
ತೋಟೆಗೆ ಬಿದ್ದ ಮಡೆಂಜಿಯು ಬರ್ಬರ...
ಇದು ನನ್ನ ತುಳುನಾಡು.....,ತುಳುನಾಡು.....,ತುಳುನಾಡು.....
- ನಿಮ್ಮವಳು ನೇತ್ರಾವತಿ
No comments:
Post a Comment