Saturday, March 9, 2024

ಕೆಡ್ಡಸ

ಕೆಡ್ಡಸ, ಕೆಡ್ಡಸೊ, ಕೆಡ್ವಸೊ ಎಂಬುವುದು ತುಳುನಾಡು ಮತ್ತು ಅರೆಭಾಷೆ ಪ್ರದೇಶದಲ್ಲಿ ಭೂಮಿಯ ಬಗೆಗಿರುವ ಆಚರಣೆ. ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ, ಆರೋಪಿಸಿ  ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು. ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು

ತುಳುನಾಡಿನಲ್ಲಿ ಹುಡುಗಿ ಮೊದಲ ಬಾರಿಗೆ ಮುಟ್ಟಾಗುವುದನ್ನು(To attain puberty) ಸಂಭ್ರಮಿಸುತ್ತಾರೆ. ದಿನ ಐದು ಜನ ಮುತೈದೆಯರು ಬಂದು ಕಂಗಿನ ಒಲಿಯ ಚೆಂಬೆ ಕಟ್ಟಿ ರಂಗೋಲಿ ಬರೆದು ಬಣ್ಣಂಗಾಯಿಯ ಹೊರಸಿಪ್ಪೆಯಿಂದ ಕೈಬೆರಳಿನಷ್ಟು ದಪ್ಪವಿರುವಂತೆ ನಾರುಗಳನ್ನು ಒಟ್ಟಿಗೆ ಕಾಯಿಯ ಅರ್ಧದವರೆಗೆ ಸುಲಿದು ಪರಸ್ಪರ ಗಂಟು ಮಾಡಿದ ಒಗ್ಗಿ ಹಾಕಿದ  ಐದು ಬಣ್ಣಂಗಾಯಿ ಅಥವಾ ಬೊಂಡಗಳ ಮೇಲೆ ಕುಳ್ಳಿರಿಸುತ್ತಾರೆ. ಇದು ಮನೆಯ ಹತ್ತಿರವಿರುವ ಹಾಲು ಒಸರುವ ಮರದ ಬುಡದಲ್ಲಿ ನಡೆಯುತ್ತದೆ. ಒಂದು ಬಿಂದಿಗೆಯಿಂದ ತಲೆಗೆ ನೀರು ಸುರಿಯುತ್ತಾರೆ. ನಾಲ್ಕನೇಯ ದಿನ ಊರಿನ ಮಡಿವಾಳಗಿತ್ತಿಯನ್ನು ಹೇಳಿಕೆ ಕಳುಹಿಸಿ ಅವಳು ಬಂದು ಸ್ನಾನ ಮಾಡಿಸಿ ಹುಡುಗಿಗೆ ಸೀರೆ ಉಡಿಸುತ್ತಾಳೆ. ಮುಟ್ಟು ಆಗಿ ಹನ್ನೊಂದನೆ ದಿನವನ್ನು ಪೀಲೆ ತೆಗೆಯುವ ಕ್ರಮ ಮಾಡುತ್ತಾರೆ ಇದನ್ನು ಮದ್ಮಲ್ಮದ್ಮೆ ಎಂದು ಕರೆಯುತ್ತಾರೆ. ಗೊತ್ತು ಮಾಡಿದ ದಿನ ನೆಂಟರನ್ನು, ಇಷ್ಟರನ್ನು, ಊರವರನ್ನೆಲ್ಲಾ ಕರೆಯುತ್ತಾರೆ. ದಿನ ಮಡಿವಾಳಗಿತ್ತಿ ಬಂದು ಚೌಕಾಕಾರವಾಗಿ ಮಂಡಲ ಬರೆದು ಅಡಿಕೆ ಮರದ ಸೋಗೆಯ ಎಲೆಯಿಂದ ಚೆಂಬೆಯನ್ನು ಮಾಡಿ ನಡೆ ದಲ್ಯದಲ್ಲಿ ಇಟ್ಟು ಅದರ ಮೇಲೆ ಐದು ಚೆಂಬುಗಳಲ್ಲಿ ನೀರು ತುಂಬಿ ಇಡುತ್ತಾರೆ. ಹುಡುಗಿಯನ್ನು ಪಡು ದಿಕ್ಕಿನಿಂದ ಮಂಡಲದೊಳಗೆ  ಕರೆದುಕೊಂಡು ಬರುತ್ತಾರೆ. ಈಗ ಅವಳು ಎಲೆ ಅಡಿಕೆ ತಿಂದಿರಬೇಕು. ಕಳಸ ಕನ್ನಡಿಯನ್ನು ಹಿಡಿದುಕೊಂಡು ಐದು ಮುದೈದೆಯರು ಐದು ಸುತ್ತು ಬರುತ್ತಾರೆ. ಹುಡುಗಿಯನ್ನು ಬಾಳೆ ಎಲೆಯ ಮೇಲೆ ನಿಲ್ಲಿಸಿತ್ತಾರೆ. ಆಗ ಕಾಲುಂಗುಷ್ಟದಿಂದ ತಲೆಯವರೆಗೆ ನೂಲು ಹಿಡಿದು ಮಾಡಿವಾಳ್ತಿಯು ಕಡಗವನ್ನು ಜಾರಿಸುತ್ತಾಳೆ. ಇದು ಐದು ಸಲ ಮಾಡುತ್ತಾರೆ. ಮತ್ತೆ ಮಡಿವಾಳ್ತಿಯು ತಲೆಯ ಮೇಲೆ ಬಿಳಿ ಬಟ್ಟೆಯನ್ನು ಹಿಡಿಯುತ್ತಾಳೆ, ಮುತೈದೆಯರು ತಲೆಯ ನೀರನ್ನು ಚಿಮುಕಿಸುತ್ತಾರೆಮೊದಲೇ ತಿಂದಿದ್ದ ಎಲೆ ಅಡಿಕೆಯನ್ನು ಉಗಿಯಬೇಕು. ಹುಡುಗಿಯ ಅಮ್ಮ ಮಾಡಿದ ಮಂಡಲವನ್ನು ಸೆಗಣಿಯಿಂದ ಒರೆಸಿ ಮಗಳನ್ನು ಸ್ನಾನ ಮಾಡಿಸಿ ಗುಂಭ ಪೂಜೆಗೆ ತಯಾರಾಗುತ್ತಾರೆ

 



ಹುಡುಗಿಯನ್ನು ಮದುಮಗಳಿನಂತೆ ಶೃಂಗಾರ ಮಾಡಿ ಬುಟ್ಟಿಯೊಂದರಲ್ಲಿ ಅಕ್ಕಿ ಹುಡಿ, ಬೆಲ್ಲ, ಅವಲಕ್ಕಿ ತೆಂಗಿನಕಾಯಿ, ಬಾಳೆಹಣ್ಣು, ಐದು ಕೊಡಿ ಬಾಳೆ ಎಲೆಗಳನ್ನು ಹಿಡಿದುಕೊಂಡು ಹೆಂಗಸರು ಹುಡುಗಿಯ ತಲೆಗೆ ಒಂದು ಮಡಕೆಯನ್ನು ಹೊರಿಸುತ್ತಾರೆ. ಮಡಿಕೆಯಲ್ಲಿ ಹಾಲು ಇರುತ್ತದೆ. ಎಲ್ಲರೂ ಬಾವಿಯ ದಂಡೆ ಅಥವಾ ಫಲ ಕೊಡುವ ತೆಂಗಿನ ಮರದ ಬುಡದ ಹತ್ತಿರ ಬರುವರು. ಹಾಲಿರುವ ಮಡಕೆಯನ್ನು ಅದರ ಬದಿಯಲ್ಲಿ ಇಟ್ಟು, ಹುಲ್ಲಿನ ಚಾಪೆಯೊಂದರನ್ನು ಹಾಸಿ ಐದು ಬಾಳೆ ಎಲೆ ಹಾಕಿ, ಅದರ ಮೇಲೆ ಸುಲಿದ ತೆಂಗಿನಕಾಯಿಯೊಂದನ್ನು ಇಡುವಳು. ಐದು ಬಾಳೆ ಎಲೆಗೆ ಅಕ್ಕಿ ಹುಡಿ, ಬೆಲ್ಲ, ಬಾಳೆಹಣ್ಣುಅವಲಕ್ಕಿಯನ್ನು ಬಡಿಸಬೇಕು. ಭಾಗ ಮಾಡಿದ ತೆಂಗಿನ ಕಾಯಿಯನ್ನು ಇಡಬೇಕು, ದೀಪವೊಂದನ್ನು ಉರಿಸಿಟ್ಟು, ಪ್ರತೀ ಎಲೆಗೆ ಕೈಮುಗಿಯುತ್ತಾಳೆ. ಐದು ಮುತೈದೆಯರು ಸೇರಿ ಹುಡುಗಿಯೊಂದಿಗೆ ಬಾವಿ ಅಥವಾ ತೆಂಗಿನ ಮರಕ್ಕೆ ಐದು ಸುತ್ತು ಬರಬೇಕು. ಮತ್ತೆ ಹಾಲಿನ ಮಡಕೆಯನ್ನು ತಲೆಯಲ್ಲಿರಿಸಿ ಮನೆಯೊಳಗೆ ಕರೆದುಕೊಂಡು ಬರುತ್ತಾರೆ. ಮನೆಯ ಬಾಗಿಲಿನಲ್ಲಿ ಅರತಿ ಮಾಡಿ ಮನೆಯೊಳಗೆ ಹೋಗುತ್ತಾರೆ. ಮನೆಯೊಳಗೆ ದೇವರ ಕೋಣೆಯ ಹತ್ತಿರ ಕುಳ್ಳಿರಿಸಿ ಮಡಿಕೆಯನ್ನು ಇಳಿಸುವರು. ಬಂದವರೆಲ್ಲ ದೇಸೆ ಹಾಕಿ ಹುಡುಗಿಯನ್ನು ಹರಸಿ ಉಡುಗೊರೆಯನ್ನು ಕೊಡುತ್ತಾರೆ. ಕಡೆಗೆ ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯುತ್ತಾಳೆ. ಇದು ಪುತ್ತೂರು, ಸುಳ್ಯ ಕಡೆಯ ಗೌಡ ಸಮುದಾಯದ ಆಚರಣೆಯ ಕ್ರಮವಾಗಿದೆ. ಕ್ರಮಾಚರಣೆಗಳು ಪ್ರಾದೇಶಿಕವಾಗಿ, ಜಾತಿವಾರುವಾಗಿ ಒಂದಷ್ಟು ಬಿನ್ನತೆ ಇರಬಹುದು ಅದರೆ ಅವೆಲ್ಲದರ ಆಶಯವೂ ಫಲವಂತಿಗೆಯದ್ದಾಗಿದೆ



 

ಹೀಗೆ ಮಗಳು ಮದ್ಮಲ್ಅದಳು, ದೊಡ್ಡವಳಾದಳು ಎಂದು ಮನೆ ಮಂದಿಗೆಲ್ಲ ಕುಷಿಯ ಸಂಗತಿ. ಅಂದರೆ ಸೃಷ್ಟಿಸುವ ಕಾರ್ಯಕ್ಕೆ ಅನುವಾದಳು ಎಂಬರ್ಥ. ಅದೇ ಖುಷಿಯನ್ನು ಜಾನಪದಿಯ ಸೃಷ್ಟಿಯ ಪ್ರಕೃತಿಯ  ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಕೆಡ್ಡಸ, ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎಂಬ ಪ್ರತೀತಿ. ಅಂದರೆ  ಜಗದಲ್ಲಾಗುವ ಹಗಲು - ರಾತ್ರಿ, ಬಿಸಿಲು - ಮಳೆ, ಹುಣ್ಣಿಮೆ - ಅಮಾವಾಸ್ಯೆಗಳು ನಮ್ಮ ಬಾಹ್ಯ ಅನುಭವಕ್ಕೆ ಬರುವಂತಹುದು ಅದರೆ ಸಂಕ್ರಮಣ, ಉತ್ತರಾಯಣಗಳು ಸಾಮಾನ್ಯ  ಯೋಚನೆಗೆ ನಿಲುಕದ್ದುಅಂತಹುದೇ ಪ್ರಕೃತಿಯಲ್ಲಾಗುವ ವ್ಯತ್ಯಯವನ್ನು ತುಳುವರು ಒಂದೊಂದು ಆಚರಣೆಯ ರೂಪದಲ್ಲಿ ಆಚರಿಸುತ್ತಿದ್ದಾರೆ.


ಪದ ಅರ್ಥ

·        ಕೆಡ್‌, ಕೆಡ್ಪುನ, ಕೆಡಗ್‌ - ಹಾಳಾಗು, ಕೆಟ್ಟುಹೋಗು, ಕೆಡಿಸು 

·        ಜ್ಞಾತಿ ಪದೊವಾಗಿ ತಮಿಳ್‌:  keṭuv; ಮಳಯಾಲಂ: keṭu; ಕೊರಗ: keṛ; ಕನ್ನಡ keḍu

·   ಕೆಟ್ಟ ಮತ್ತು ಆವಾಸ ಎನ್ನುವ ಪದಗಳೆರಡು ಸಂಧಿಯಾಗಿ ಕೆಡ್ವಾಸ ಆಗಿದೆ. ‘ಕಾರ ಕಾರವು ಆದೇಶವಾಗಿ ಬಂದಿದೆ

·        ಕೆಡ, ಕೇಡ - ನೆಲ ಅಗೆಯುವುದು 

·        ಖೇಡ, ಖೆಡ್ಡ - ಗುಂಡಿ

·        ಆಸೊ, ವಿಸೋ - ನಿಷೇಧ.

·        ಕೆಡ್ಡಸದ ಗಾಳಿ - ಫಲ ಗಾಳಿ

·        ಕೆಡ್ಡಸದ ಬೋಂಟೆ - ಕೆಡ್ಡಸದ ಸಮಯ ಮಾಡುವ ಬೇಟೆ

·        ಕೆಡ್ಡಸ ಬರೆಪುನಿ - ಕೆಡ್ಡಸದ ದಿನ ಅಂಗಳದಲ್ಲಿ ರಂಗೋಲಿ ಹಾಕುವುದು

·        ಕೆಡು (wrat) - ಚರ್ಮದ ಮೇಲೆ ಬೀಳುವ ಹುರುಳಿಯಂತಹ ಮಾಂಸ

·        ಖೇಟ, ಖೆಡ್ಡ, ಕೆಡ್ಡ - ಬೇಟೆ

 

 

ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ದಿವಸ ಇದರ ಆಚರಣೆ ಇರುತ್ತದೆ. ತುಳುವರ ತಿಂಗಳಾದ ಪೊನ್ನಿ ಅಥವಾ ಮಕರ ಮಾಸದ ಇಪ್ಪತ್ತೇಳನೇ ದಿನದ ಸಂಜೆಯಿಂದ  ಕುಂಭ ಸಂಕ್ರಮಣದವರೆಗೆ ಇರುತ್ತದೆ. ಹೆಚ್ಚಾಗಿ ಫೆಬ್ರುವರಿ ತಿಂಗಳ ಎರಡನೇ ವಾರದಲ್ಲಿ ಬರುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಹುದುಗಿರುವ ಪ್ರಾಚೀನ ಸಾಂಸ್ಕೃತಿಕ ಆಶಯ ಫಲೀಕರಣಾಕಾಂಕ್ಷೆಯೆಂಬುದು ಸುವ್ಯಕ್ತಮೂರು ದಿನದ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ. ಸಮಯಕ್ಕೆ ಮಳೆ ಸರಿದು ಫಲ ಗಾಳಿ ಬೀಸುತ್ತಿರುತ್ತದೆ. ಮಾವು, ಗೊಂಕು, ಹಲಸುಗಳೆಲ್ಲ ನಿನೆ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ.


                                                ಕೆಡ್ದಸೊ ಬಡಿಸುವುದು


 

ಕೆಡ್ಡಸದ ಕ್ರಮ

ಕೆಡ್ಡಸದ ಮೊದಲ ದಿನ ಅಷ್ಟೊಂದು ವಿಶೇಷತೆಯಿಲ್ಲದಿದ್ದರೂ ಪುರುಷರು ಕತ್ತಿ, ನೊಗ, ಹಾರೆಗಳಿಗೆ ಪ್ರಾರ್ಥಿಸುವ ಕ್ರಮವಿದೆ. ಮುಂದಿನ ಮೂರು ದಿನ ಕತ್ತಿ, ನೊಗಹಾರೆಗಳು ಒಟ್ಟಾರೆ ಕೃಷಿ ಕೆಲಸಗಳಿಗೆ ಬಳಸುವ ಹತ್ಯಾರುಗಳಿಗೆ ರಜೆ. ತೋಟದ ಕೆಲಸ, ಮರಕಡಿಯುವುದು, ನೆಲ ಅಗೆಯುವುದು, ಹಸಿ ಕೀಳುವುದು, ತರಕಾರಿ ಕೀಳುವುದುನೀರೆರೆಯುವುದು, ಗದ್ದೆ ಕೆಲಸಗಳನ್ನು ಮಾಡಬಾರದು. ಭೂ ಕುಮಾರಿಗೆ ರಜಸ್ವಲೆಯಾಗಿರುವಾಗ ಕೃಷಿಕೆಲಸ ಮಾಡಿ ನೋವುಂಟು ಮಾಡಿದರೆ ಭೂಮಿಗೆ ನೋವಾಗುತ್ತದೆ ಆಕೆ ಬಂಜೆಯಾಗುತ್ತಾಳೆ ಎಂಬುವುದು ಜನಪದರ ನಂಬಿಕೆ. ಮೂರನೇ ದಿನ ಮಹತ್ವದ ದಿನ ಆಕೆಯ ಮೈಲಿಗೆಯ ಶುದ್ಧಚರಣೆಗೆ ಮನೆಯ ಹೆಣ್ಣು ಮಕ್ಕಳು ಮಿಂದು ಮಡಿಯಾಗಿ ತುಳಸಿ ಕಟ್ಟೆಯ ಎದುರು ಗೋಮಯದಿಂದ ಶುದ್ಧಿಗೊಳಿಸಿ ಇದ್ದಿಲು, ಬೆಸ ಸಂಖ್ಯೆ ಯಂತೆ ಹೆಚ್ಚಾಗಿ ಏಳು  ಮಾವಿನ ಎಲೆ, ಏಳು ಹಲಸಿನ ಎಲೆ , ಏಳು ಸರಳಿ  ಎಲೆ , ಪೂರ್ವ ದಿಕ್ಕಿಗೆ ಅದರ ಕಡೆ ಇರುವಂತೆ ಸಾಲಾಗಿ ಇಡುತ್ತಾರೆ. ಎಲೆ ಅಡಿಕೆ, ಕುರ್ದಿ ನೀರು, ಒಂದು ಬಿಂದಿಗೆ ನೀರು, ಅರಶಿನ ಕೊರಡು, ಸೀಗೆ, ಬಾಗೆ, ನರ್ವೋಲ್ ಇಡುತ್ಥಾರೆ. ಸೌಂದರ್ಯವರ್ಧಕಗಳಾದ ಕುಂಕುಮ. ಕನ್ನಡಿ, ಬಾಚಣಿಕೆ, ತೆಂಗಿನೆಣ್ಣೆ, ಕಾಜಿಗಳನ್ನು  ಒಪ್ಪವಾಗಿ ಇಡುತ್ತಾರೆ. ಕ್ತಿಯಾವಿಧಿಗಳು ಒಬ್ಬಳು ಹೆಣ್ಣನ್ನು ಪ್ರತಿನಿಧೀಕರಿಸಿ ಅವಳ ಶುದ್ಧಾಚರಣೆಗೆ ಬೇಕಾದ ಎಲ್ಲಾ ಅಗತ್ಯಗಳನ್ನು ಜನಪದರು ತಯಾರು  ಮಾಡುತ್ತಾರೆ.. ಸ್ನಾನ ಮಾಡಿ ಬರುವಾಗ ಬೇಕಾಗುವ ಪ್ರಾಕೃತಿಕ ಸೌಂದರ್ಯ ವರ್ಧಕಗಳನ್ನು ಬಳಸುವುದನ್ನು ಕಾಣಬಹುದು.   ಚೀತ್ ಮಾಡಿದ ಬಾಳೆಎಲೆಯಲ್ಲಿ ನನ್ಯರಿ, ಬಾಳೆಹಣ್ಣುಗಳನ್ನು ಇಡುತ್ತಾರೆ. . ಜೊತೆಗೆ ಸೌಂದರ್ಯವತಿಯಾದ ಭೂಮಿಗೆ ಯಾರ ಕಣ್ಣು ಮುಟ್ಟುವುದು ಬೇಡವೆಂದು ತೆಂಗಿನ ಗರಿಯ ಕಡ್ಡಿ, ಕಿರು ಕತ್ತಿಯನ್ನು ಇಡುವುದು ಕ್ರಮ. ಕಡೆಗೆ ಕುರ್ದಿ ನೀರಿನಲ್ಲಿ ಜಾಗವನ್ನು ಶುದ್ದೀಕರಿಸಿ ಹೂ, ಗಂಧ, ವೀಳ್ಯ ದೀಪಾದಿಗಳಿಂದ ಪೂಜಿಸಿ, ಸಂತಾನ ಮತ್ತು ಸಂಪತ್ತುಗಳನ್ನು ಹೆಂಗಸರು ಬೇಡುತ್ತಾರೆ. ಹಿಂದೆ ಬಹಿಷ್ಠೆಯಾದ ಮಹಿಳೆ ಮಿಂದು ಮಡಿಯಾಗಿ ಬರಬೇಕಾದರೆ ಎಲ್ಲ ಪರಿಕರಗಳ ಅಗತ್ಯವಿತ್ತು. ಹೆಣ್ಣು ಮುಟ್ಟುನೀರು ಮೀಯುವ ಪ್ರಥಮತಃ ಋತುಮತಿಯಾಗುವ ಸಂದರ್ಭವಂತೂ ಹೆಣ್ಣಿನ ಜೀವನ ಚಕ್ರದಲ್ಲಿ ಒಂದು ಸಡಗರದ ಆಚಾರವಿಧಿಯ ಒಂದು ಪ್ರತೀತಿ ಇಲ್ಲಿ ತೋರುತ್ತದೆ.

                                                                 ಕೆಡ್ಡಸದ ಕ್ರಮಾಚರಣೆ

ಕೆಡ್ಡಸದ ವಿಶೇಷ ತಿನಿಸು

ಕೆಡ್ಡಸದ ವಿಶೇಷ ತಿನಿಸು ಅಂದರೆ ಅದು ನನ್ಯರಿ ಅಥವಾ ಕೆಡ್ಡಸದ ಕುಡು ಅರಿ. ಕೆಡ್ಡಸದ ಹಿಂದಿನ ರಾತ್ರಿ ಸೇರು ಕುಚ್ಚಲಕ್ಕಿ ಜಾಲಿಸಿ, ಸ್ವಲ್ಪ ಉಪ್ಪಿನ ನೀರು ಕೊಟ್ಟು ಒಡು ಪಾಲೆ ಅಡ್ಯೆ ಮಾಡುವ ಒಡಿನ ತುಂಡು ಅಥವಾ ಕಾವಲಿಯಲ್ಲಿ ಕುಚ್ಚಲಕ್ಕಿ, ಹುರುಳಿ, ಹೆಸರು, ನೆಲಗಡಲೆ, ಗೇರುಬೀಜ, ಎಳ್ಳು, ಮೆಂತೆ ಹೀಗೆ ಮನೆಯೊಡತಿಯ ಬಾಯಿ ರುಚಿಗೆ ತಕ್ಕಂತೆ ಕೆಲವು ಅದಲು ಬದಲು ಆಗಬಹುದು. ಇವೆಲ್ಲವನ್ನೂ  ಸೇರಿಸಿ ಹುರಿದು ಮತ್ತೆ ಕಡೆಪಕಲ್ಲಿಗೆ ಹಾಕಿ ಅರೆದು ಹುಡಿ ಮಾಡಿದರೆ ಕೆಡ್ಡಸದ ಪ್ರಾಥಮಿಕ ಸಿದ್ಧತೆ ಪೂರ್ಣವಾಯಿತು. ಮರುದಿನ ಬೆಳಗ್ಗೆ ಬೇಗ ಎದ್ದು ಕೈಯಲ್ಲಿ ಸರಿಯಾಗಿ ಮಗಚಲು ಅಗುವಂತಹ ದೊಡ್ಡ ಅಡ್ಯೆತಾ ಕರದಲ್ಲಿ ಬೇಕಾದಷ್ಟು ಪೆರೆಸಿದ ಬೆಲ್ಲ, ತುರಿದ  ತೆಂಗಿನ ಕಾಯಿ, ತಕ್ಕಷ್ಠು ತುಪ್ಪ ಸೇರಿಸಿರೆ ನನ್ಯರಿ ಸಿದ್ಧವಾಗುತ್ತದೆ. .ಅದಕ್ಕೆ  ಹೊದ್ಲು, ಹುರಿಯಕ್ಕಿ, ಹಾಕಿ ಬಾಳೆಹಣ್ಣಿನೊಂದಿಗೆ ನೆಂಚಿ ತಿನ್ನಲು ಅದೆನೋ ಸೊಗಸು

                                                                                ನನ್ಯೇರಿ


ದಿನ ಮಧ್ಯಾಹ್ನದ ಊಟಕ್ಕೆ ಮುಖಗಯವಾಗಿ ನುಗ್ಗೆ ಬದನೆ ಮಿಶ್ರಮಾಡಿದ ಪದಾರ್ಥ ಮಾಡುತ್ತಾರೆ. ಅವರೆ, ಗುಜ್ಜೆ ಪಲ್ಯ, ಹೆಸರು - ಗೇರು ಬೀಜ ಪದಾರ್ಥ ಮಾಡುವುದು ರೂಢಿ. ಜೊತೆಗೆ   ರಾತ್ರಿ ಉದ್ದಿನದೋಸೆ, ಹುಳಿಹಿಟ್ಟು, ಸಿಹಿತಿಂಡಿ ಇರುತ್ತದೆ. ಕೆಡ್ಡಸದ ಬೋಂಟೆಯ ನೆಲೆಯಲ್ಲಿ ಮಾಂಸದ ಪದಾರ್ಥವು ಸಿದ್ಧವಾಗಿರುತ್ತದೆ

 

ಕೆಡ್ಡಸದ ಹೇಳಿಕೆ

ಕೆಡ್ದಸ ಹಬ್ಬ ಸುರುವಾಗುವ ನಾಲ್ಕೈದು ದಿನ ಮೊದಲು ಅಜಲಿನಂತೆ ತಮ್ಮ ವ್ಯಾಪ್ತಿಯ ಊರಿಗೆ ನಲ್ಕೆಯವರು ತೆಂಬರೆ ಬಡಿದುಕೊಂಡು ಊರಿನ ಮನೆ ಮನೆಗಳಿಗೆ ಕೆಡ್ಡಸದ ಹೇಳಿಕೆ ಕೊಡುತ್ತಾರೆ ಇದಕ್ಕೆ ಕೆಡ್ಡಸ ಲೆಪ್ಪುನೆ ಅಂತ ತುಳುವಿನಲ್ಲಿ ಕರೆಯುತ್ತಾರೆ. ಸಾಮಾನ್ಯ ಮನೆಯ ಹಿರಿಯರು ಕೊಡುವ ಬಚ್ಚಿರೆ - ಬಜ್ಜೆಯಿಯನ್ನು ಮೆಲ್ಲುತ್ತಾ ಒಂದಷ್ಟು ಕ್ಷೇಮ ಸಮಾಚಾರ ಮಾತಾನಾಡಿಸಿ ಅವರ ಕಟ್ಟಿನ ಪಾಡ್ದನದ ಹಾಡು ಹೇಳಿ ಕೆಡ್ಡಸ ಕರೆ ತರುತ್ತಾರೆ. ಅವರಿಗೆ ಸೇರು ಕುಚ್ಚಲಕ್ಕಿ, ಒಂದು ಚೆಪ್ಪು ಇರುವ ದೊಡ್ಡ ತೆಂಗಿನಕಾಯಿ, ಉಪ್ಪು, ಮೆಣಸು, ನೀರುಳ್ಳಿ, ಬೆಳ್ಳುಳ್ಳಿ, ಹುಳಿ, ಅರಶಿನ ಕೊರಡು, ಬಚ್ಚಿರೆ-ಬಜ್ಜೆಯಿ ಮತ್ತೆ ದುಡ್ಡು ನೀಡಿ ಕಳುಹಿಸಿ ಕೊಡಬೇಕು.


                                                      ಕೆಡ್ಡಸದ ಹೇಳಿಕೆ ತರುವವರಿಗೆ ಕೊಡುವ ವಸ್ತುಗಳು

 

ಕೆಡ್ಡಸದ ಪಾಡ್ದನ ಹೀಗಿದೆ:

 

"ಸೋಮಾರೊ ಕೆಡ್ಡಸ ಮುಟ್ಟುನೆ,

ಅಂಗಾರೆ ನಡು ಕೆಡ್ಡಸ

ಬುದಾರೊ ಬಿರಿಪುನೆ.

ಪಜಿ ಕಡ್ಪರೆ ಬಲ್ಲಿ,

ಉನುಂಗೆಲ್ ಪೊಲಿಪ್ಯರೆ ಬಲ್ಲಿ,

ಅರಸುಲೆ ಬೋಟೆಂಗ್

ಸರ್ವೆರ್ ಉಲ್ಲಾಯನಕುಲು ಪೋವೋಡುಗೆ.

ಒಲಸಾರಿ ಮಜಲ್ಡ್ ಕೂಡ್ದು

ಒಲಸರಿ ದೇರ್ದ್ದ್‌,  ಪಾಲೆಚ್ಚಾರ್ ಜಪ್ಪುನಗ

ಉಲ್ಲಾಲ್ದಿನಕುಲು  ಕಡಿಪಿಕಲ್ಲ ಕಂಜಿನ್ ನೀರ್ಡ್  ಪಾಡೊಡು.

ಓಡುಡ್  ಕಡೆವೊಡು, ಕಲ್ಲ್ಡ್ ರೊಟ್ಟಿ ಪತ್ತವೊಡು.

ಮಲ್ಲ ಮಲ್ಲ ಮೃಗೊಲು ಜತ್ತ್ದ್ ಬರ್ಪ.

್ಣೊಲ್ಲ ಕುಂಡ ಕೊರಿ,

ಉಬ್ಬುಲ್ಲ ಪಂಜಿ,

ನಾಲ್ಕರ ಕಡಮ್ಮ,

ಪುಲ್ಲಿ ಇಪ್ಪಿ ಉರೆ ಜತ್ತ್ತ್ ಬರ್ಪೊ.

ಕಟ್ಟ ಇಜ್ಜಾಂದಿ ಬೆಡಿ, ಕದಿಕಟ್ಟಂದಿನ ಪಗರಿ,

ಕೈಲ ಕಡೆಲ ಪತ್ತ್ದ್,

ಉಜ್ಜೆರ್ಗೊಂಜಿ ಎರ್ಪು ಏರ್ಪಾದ್

ಇಲ್ಲ ಬೇತ್ತಡಿತ್  ಉಂತೊಂದು

ಮುರ್ಗೊಲೆಗ್ ತಾಂಟಾವೊಡು.

ಮಲ್ಲ ಮಲ್ಲ ಮೃಗೊಲೆನ್ ಜಯಿಪೊಡು.

ಎಂಕ್ ಅಯಿತ ಕೆಬಿ, ಕಾರ್, ಕೈ, ಉಪ್ಪು, ಮುಂಚಿ, ಪುಳಿ ಕೊರೊಡು."

 

(ಸೋಮವಾರ ಕೆಡ್ಡಸ ಪ್ರಾರಂಭವಾಗುವುದು. ಮಂಗಳವಾರ ನಡು ಕೆಡ್ಡಸ. ಬುಧವಾರ ಮುಕ್ತಾಯ. ಹಸಿ ಕಡಿಯಬಾರದು. ಒಣಗಿದನ್ನು ಮುರಿಯಬಾರದು. ಅರಸುಗಳ ಬೇಟೆಗೆ ಎಲ್ಲ  ಮನೆಯವರು ಹೋಗಬೇಕಂತೆ. ವಲಸರಿ ಮಜಲಿನಲ್ಲಿ ಕೂಡಿ ಓಡಾಡಿ ಬೆನ್ನಟ್ಟಿ ಪಾಲೆಚಾರಿನಲ್ಲಿ ಇಳಿಯುವಾಗ  ಮನೆಯ ಒಡತಿಯರು ಕಡೆಯುವ ಕಲ್ಲಿನ ಗುಂಡುಕಲ್ಲನ್ನು ನೀರಲ್ಲಿ ಹಾಕಬೇಕು. ಮಡಿಕೆ ತುಂಡಿನಲ್ಲಿ ಅರೆಯಬೇಕು. ಕಲ್ಲಿನಲ್ಲಿ ರೊಟ್ಟಿ ಹಚ್ಚಬೇಕು. ದೊಡ್ಡ ದೊಡ್ಡ ಮೃಗಗಳು ಇಳಿದುಕೊಂಡು ಬರುತ್ತವೆ. ಬಣ್ಣ ಬಣ್ಣದ ಕಾಡಕೋಳಿ, ಬಿರುರೋಮದ ಹಂದಿ, ನಾಲ್ಕು ಕಾಲಿನ ಕಡವೆ, ಚುಕ್ಕೆಯ ಜಿಂಕೆಗಳು ಇಳಿದುಕೊಂಡು ಬರುತ್ತವೆ. ಕೆಟ್ಟು ಇಲ್ಲದ ಕೋವಿ, ಗರಿ ಇಲ್ಲದ ಬಾಣ, ಸೌಟಿನ ಹಿಡಿ, ಒನಕೆಯನ್ನು ಮೇಲಕ್ಕೆತ್ತಿ ಮನೆಯ ಹಿಂಬದಿ ನಿಲ್ಲಬೇಕು. ಮೃಗಗಳಿಗೆ ತಾಗಿಸಬೇಕು. ದೊಡ್ಡ ದೊಡ್ಡ ಮೃಗಗಳನ್ನು ಗೆಲ್ಲಬೇಕು. ಅದರ ಕೈ, ಕಾಲು, ಕಿವಿ ಮತ್ತು ಉಪ್ಪು, ಮೆಣಸು, ಹುಳಿ ನನಗೆ ಕೊಡಬೇಕು)

 

ಕೆಡ್ಡಸ   ಬೋಂಟೆ  

ಕೆಡ್ಡಸದ ಸಮಯದಲ್ಲಿ ಕೆಡ್ಡಸ ಬೋಂಟೆಯ ಮಹತ್ವ ತಿಳಿಸುತ್ತದೆ. ಊರಿನ ಗಂಡಸರೆಲ್ಲಾ ಕಾಡಿಗೆ ನುಗ್ಗಿ ಬೋಂಟೆ ದೆರುನಾ ಅಂದರೆ ಕೃಷಿ ಕೆಲಸಕ್ಕೆ ಉಪದ್ರವ ಮಾಡುವ ಕಾಡುಪ್ರಾಣಿಗಳನ್ನು ಓಡಿಸುವುದು. ಮುಖ್ಯವಾಗಿ ಹಂದಿ ಬೋಂಟೆ ಮತ್ತು ಕುಂಡಕೋರಿಯೆಂಬ ಒಂದು ಕಾಡು ಕೋಳಿ ಜಾತಿಯ ಪಕ್ಷಿ ಹಿಡಿಯುವುದು. ಕೆಡ್ಡಸದ ಸಮಯದಲ್ಲಿ ಒಂದು ಪುಂಡಿ ಮಾಂಸವಾಗುವ ಕುಂಡಕೋಳಿಯ ಮಾಂಸ ತಿಂದರೆ ಮಾನವನ ಎಲುಬು ಗಟ್ಟಿಯಾಗುತ್ತದೆಯಂತೆ ಎಂಬ ಬಂಬಿಕೆ ಇದೆ. ಬೋಂಟೆ ದೆರುನಾ ಪುರುಷತ್ವದ ಪ್ರದರ್ಶನವೂ ಅಗಿರಬಹುದು, ಕೃಷಿ ರಕ್ಷಣೆಯು ಅಗಿರಬಹುದು, ಮನರಂಜನೆಯು ಅಗಿರಬಹುದು. ಕಾಡಿಗೆ ಹೋಗಿ ಬೇಟೆಯಾಡುವುದಲ್ಲದೆ ಕೊಳಕೆರೆಗಳಿಗೆ ಹೋಗಿ ಮೀನು, ಏಡಿ ಮುಂತಾದವನ್ನು ಹಿಡಿಯುವುದು. ಕೆಲವರು ಆಮೆಗಳನ್ನೂ ಹುಡುಕುವುದು. ಹಬ್ಬಕ್ಕೋಸ್ಕರ ಸಾಕಿದ ಹಂದಿಗಳನ್ನು ಕೊಲ್ಲುವುದೂ ಇದೆ. ಅದಲ್ಲದಿದ್ದರೆ ಕುಕ್ಕುಟ ಸಂಹಾರವೂ ನಡೆಯುತ್ತದೆ. ಕೆಡ್ಡಸತ ಕೋರಿಕಟ್ಟ ನಡೆಯುತ್ತದೆ.. ಇದಲ್ಲದೆ ವಿನೋದಕ್ಕೋಸ್ಕರ ಕುಟ್ಟಿದೊಣ್ಣೆ, ಪಲ್ಲಿಪತ್ತ್, ತಾರಾಯಿ ಕುಟ್ಟುನ ಮೊದಲಾದ ಆಟಗಳಲ್ಲಿ ಕಾಲ ಕಳೆಯುವುದಿದೆ.

 

ಇಂದಿನ ದಿನ ಬೋಂಟೆ ಇಲ್ಲದಿದ್ದರೂ ಕೆಡ್ಡಸತ ಕೋರಿ ಕಟ್ಟ, ಕೆಡ್ಡಸತ ನೇಮಗಳು ಪರ್ಯಾಯವಾಗಿ ನಡೆಯುತ್ತಿದೆ ಇದರಿಂದ ಕಟ್ಟದ ಕೋರಿಯೋ , ನಾಟಿ ಕೋಳಿಯೋ, ಮೀನೋ ಒಟ್ಟಾರೆ ಮಾಂಸ ರಾತ್ರಿಯ ಊಟಕ್ಕೆ ಸಿದ್ಧವಾಗುತ್ತದೆ.

 

ತುಳುನಾಡಿನ ಕೆಡ್ಡಸಕ್ಕೆ ಸಂವಾದಿಯಾಗಿ ಉತ್ಸವಾಚರಣೆಗಳು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಋತುವಿನಲ್ಲಿ ಪ್ರಚಲಿತವಿದೆ. ಪ್ರಕೃತಿಯ ಚೇತನೋದ್ದೀಪನದ, ಫಲೀಕರಣದ ಆಶಯವುಳ್ಳ ಕೆಡ್ಡಸವು ಅಸ್ಸಾಮಿನ ಪ್ರಸಿದ್ದ ಮಾತೃದೇವತಾ ಆರಾಧನೆಯ ಪ್ರತೀಕವಾದ ಕಾಮಾಖ್ಯಾದೇವಿಗೆ Ambubachi ಉತ್ಸವವೆಂದು, ಕಾಶ್ಮೀರದಲ್ಲಿರಾಜ್ಞೀ ಸ್ನಾಪ್ಯ’ (ರಾಣಿಯ ಸ್ನಾನ)ವೆಂದು, ಒರಿಸ್ಸಾದಲ್ಲಿ ರಜ ಉತ್ಸವ್ ಎಂದು ಹಲವು ಅಲ್ಲಲ್ಲಿ ಇವೆ.

 

ಋತುಚಕ್ರವು ಒಂದು ನೈಸರ್ಗಿಕ, ದೈಹಿಕ ಚಟುವಟಿಕೆಯಾಗಿದ್ದು, ಇದು ಪುರಾಣಗಳಲ್ಲಿ ಮರೆಮಾಚಲ್ಪಟ್ಟಿದೆ. ಸಾಂಪ್ರದಾಯಿಕ ಸಮಾಜಗಳಲ್ಲಿ ವ್ಯಾಪಕವಾದ ನಿಷೇಧಗಳು ಮತ್ತು ವಿಧಿಗಳ ವಿಷಯವಾಗಿದೆ. ಮುಟ್ಟಿನ ಹುಟ್ಟಿನ ಬಗ್ಗೆ ಅನೇಕ ತಪ್ಪುಗ್ರಹಿಕೆಗಳು ಮತ್ತು ಸಾಂಸ್ಕೃತಿಕ ತಪ್ಪುಗ್ರಹಿಕೆಗಳು ಇಂದು ಅಸ್ತಿತ್ವದಲ್ಲಿವೆ. ಅದೇನೇ ಇದ್ದರೂ, ಮುಟ್ಟಿನ ಹಬ್ಬವು ಸಾಮಾಜಿಕ ಮತ್ತು ನಡವಳಿಕೆಯ ಜೀವನದ ಭಾಗವಾಗಿದೆ.

 

ಋತುಚಕ್ರದ ಹಬ್ಬವು ಕ್ಷಿಪ್ರ ದೈಹಿಕ ಬೆಳವಣಿಗೆ, ಲೈಂಗಿಕ ಪಕ್ವತೆ, ಹೊಸ ಆಸೆಗಳು ಮತ್ತು ಉದ್ದೇಶಗಳ ಸಕ್ರಿಯಗೊಳಿಸುವಿಕೆ, ಜೊತೆಗೆ ವ್ಯಾಪಕವಾದ ಸಾಮಾಜಿಕ ಮತ್ತು ಪರಿಣಾಮಕಾರಿ ಬದಲಾವಣೆಗಳು ಸೂಚ್ಯವಾಗಿದೆ. ಋತುಚಕ್ರದ ರಕ್ತವನ್ನು ಪವಿತ್ರ, ದೇವರ ಕೊಡುಗೆ, ಪಾಪಕ್ಕೆ ಶಿಕ್ಷೆ, ಮಾಂತ್ರಿಕತೆ ಎಂದು ಜನಪದರ ನಂಬಿಕೆ ಇದೆ. ಮುಟ್ಟು ಮಹಿಳೆಯರ ಆರೋಗ್ಯ, ಲೈಂಗಿಕತೆ, ಯೋಗಕ್ಷೇಮ ಮತ್ತು ಸಾಮಾಜಿಕ ಸ್ಥಾನಮಾನ ಮತ್ತು ನಡವಳಿಕೆಯ ಬದಲಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ಒಬ್ಬಳ ಮುಟ್ಟಿನ ಸ್ಥಿತಿಯನ್ನು ಬಹಿರಂಗಪಡಿಸುವ ಬಗ್ಗೆ ಕಾಳಜಿಯೊಂದಿಗೆ ಸ್ವಯಂ-ಪ್ರಜ್ಞೆ ಮತ್ತು ಅತಿ ಜಾಗರೂಕತೆಯು ಎರಡು ಸಾಮಾನ್ಯ ಪರಿಣಾಮಗಳಾಗಿವೆ.

 

ಅಂಬುಬಾಚಿ ಹಬ್ಬ

ಅಂಬುಬಾಚಿ ಹಬ್ಬ ಅಸ್ಸಾಮಿನಲ್ಲಿ ನಡೆಯುವ ಮುಟ್ಟು ಸಂಬಂಧಿಸಿದ ಹಬ್ಬ. ಸಂಸ್ಕೃತದಲ್ಲಿ, 'ಅಂಬುವಾಸಿ' ಅನ್ನು 'ದೇವತೆ' ಎಂದು ಕರೆಯಲಾಗುತ್ತದೆ, ಇದರಿಂದ ಸ್ಥಳೀಯ ಅಸ್ಸಾಮಿ ವೋ 'ಅಂಬುಬಾಚಿ' ಅಥವಾ 'ಅಂಬುಬೋಸಿ' ಎಂಬ ಪದದಿಂದ ವ್ಯುತ್ಪನ್ನವಾಗಿದೆ ಎಂದು ವಿದ್ವಾಂಸರು ವಿಮರ್ಶಿಸುತ್ತಾರೆ.. ಇದರರ್ಥ ನೀರು ಹೊರಸೂಸು ಎಂಬುವುದಾಗಿದೆ., ಇದು ಮಳೆಗಾಲದ ಆರಂಭದಿಂದ ಭೂಮಿಯ ಊತವನ್ನು ಸೂಚಿಸುತ್ತದೆ.. ಹಬ್ಬವು ಭಾರತದ ಕೆಲವು ಭಾಗಗಳಲ್ಲಿ ಮುಟ್ಟಿನ ಸಮಯದ ದೇವತೆ 'ಕಾಮಾಖ್ಯ' ಆಚರಣೆಯಾಗಿ ಜನಪ್ರಿಯವಾಗಿದೆ. ಇದನ್ನು ಯೋನಿ ಅಥವಾ ಜನನಾಂಗದ ದೇವತೆಗಳೆಂದು ಕರೆಯಲಾಗುತ್ತದೆ. ಪ್ರಮುಖ 'ಶಕ್ತಿ ಪೀಠ'ಗಳಲ್ಲಿ ಇದು ಒಂದಾಗಿದೆ ಎಂದು ಊಹಿಸಲಾಗಿದೆ. ಸಾಮಾನ್ಯವಾಗಿ ಅಂಬುಬಾಚಿ ಪ್ರತಿ ವರ್ಷ ಆಷಾಡ ಮಾಸದ 7ನೇ ದಿನದಂದು ನಡೆಯುತ್ತದೆ. ಅಂಬುಬಾಚಿ ಹಬ್ಬದ ಸಮಯದಲ್ಲಿ ಕಾಮಾಖ್ಯ ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಭೂಮಿ ತಾಯಿಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ


ರಜ ಉತ್ಸವ್

ಒರಿಸ್ಸಾದಲ್ಲಿ ಮುಟ್ಟು ಸಂಬಂಧಿ ಹಬ್ಬವೇ 'ರಜ ಉತ್ಸವವಾಗಿದೆ. ರಜ' ಪದವು 'ರಜಸ್ವಾಲಾ' (ಅಂದರೆ ಮುಟ್ಟಿನ ಮಹಿಳೆ) ಎಂಬ ಪದದಿಂದ ಬಂದಿದೆ. ಹಬ್ಬವು ಭಗವಾನ್ ಜಗನ್ನಾಥನ ಪತ್ನಿ ಭೂದೇವಿಗಾಗಿ ಮಾಡಿದ ಹಬ್ಬವಾಗಿದೆ. ಕೃಷಿ ಕೆಲಸಗಳಿಗೆ ವಿರಾಮ ನೀಡುವ ಉದ್ದೇಶದಿಂದ ಶುರುವಾಗಿ ಇಂದು ಅದನ್ನು ಅಚರಣೆಯ ರೂಪದಲ್ಲಿ ಸಂಭ್ರಮಿಸುತ್ತಾರೆ.. ಜೂನ್ ತಿಂಗಳ ಮಧ್ಯಭಾಗದಲ್ಲಿ 'ರಾಜಾ' ಉತ್ಸವ ನಡೆಯುತ್ತದೆ. ಮೊದಲ ದಿನವನ್ನು 'ಪಹಿಲ್ ರಾಜ' ಎಂದು ಕರೆಯುತ್ತಾರೆ. ಎರಡನೇ ದಿನವನ್ನು 'ಮಿಥುನ ಸಂಕ್ರಾಂತಿ' ಎಂದು ಕರೆಯಲಾಗುತ್ತದೆ. ಮೂರನೇ ದಿನವನ್ನು 'ಭೂ ದಾಹ' ಅಥವಾ 'ಬಸಿ ರಾಜ' ಎಂದು ಕರೆಯಲಾಗುತ್ತದೆ, ಮತ್ತು ನಾಲ್ಕನೇ ಮತ್ತು ಕೊನೆಯ ದಿನವನ್ನು 'ವಸುಮತಿ ಸ್ನಾನ' ಎಂದು ಆಚರಿಸಲಾಗುತ್ತದೆ. ನಾಲ್ಕು ದಿನಗಳು, ಮಹಿಳೆಯರು ತಮ್ಮ ದೈನಂದಿನ ಕೆಲಸಗಳನ್ನು ಬದಿಗೊತ್ತಿ ಹೊಸ ಬಟ್ಟೆಗಳನ್ನು, ಆಭರಣಗಳನ್ನು ಧರಿಸುತ್ತಾರೆ. ಇದು ಅವಿವಾಹಿತ ಹುಡುಗಿಯರ ಮತ್ತು ಸಂಭಾವ್ಯ ತಾಯಂದಿರ ಹಬ್ಬವೆಂದು ಪ್ರಚಲಿತದಲ್ಲಿದೆ. ಮೂರು ದಿನಗಳ ಕಾಲ ಯಾವ ಕೃಷಿ ಚಟುವಟಿಕೆ ನಡೆಸಬಾರದು, ಬರಿಗಾಲಿನಲ್ಲಿ ನಡೆಯಬಾರದು, ಅಡುಗೆ ಮಾಡಬಾರದು ಎಂಬ ಜನಪದರ ನಿರ್ಬಂಧಗಳಿವೆ.

 

ಮಂಜಲ್ ನೀರಟ್ಟು ವಿಜಾದ ಹಬ್ಬ

'ಮಂಜಲ್ ನೀರಟ್ಟು ವಿಝಾ' ತಮಿಳುನಾಡಿನಲ್ಲಿ ಮೂರು ದಿನಗಳ ಕಾಲ ನಡೆಯುವ ಋತುಚಕ್ರದ ಹಬ್ಬವಾಗಿದೆ. ಹಬ್ಬದಲ್ಲಿ, ಹುಡುಗಿ ಧಾರ್ಮಿಕ ಏಕಾಂತ, ಧಾರ್ಮಿಕ ಸ್ನಾನ ಮತ್ತು ಇತರ ಅನೇಕ ಸ್ಥಳೀಯ ಆಚರಣೆಗಳಿಗೆ ಒಳಗಾಗುತ್ತಾಳೆ. ಅವರು ಮೊದಲು ಮುಟ್ಟದಾಗ ಅರಿಶಿನ ಸ್ನಾನದ ಸಮಾರಂಭವನ್ನು ಆಯೋಜಿಸಲಾಗುತ್ತದೆ

 

ತ್ರಿಪುತರಾಟ್ಟು ಉತ್ಸವ

ಕೇರಳವು ಮುಟ್ಟಿನ ಕಲ್ಪನೆಯನ್ನು ಆಚರಿಸುವ ಪ್ರದೇಶವಾಗಿದೆ. ಪ್ರತಿ ತಿಂಗಳು, ಪಾರ್ವತಿ (ಭಗವತಿ) ದೇವಿಯು  ಋತುಮತಿಯಾಗುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ಆಕೆಯ ಮೂರ್ತಿಯನ್ನು ಮೂರು ದಿನಗಳ ಕಾಲ ಗುಪ್ತ ಕೋಣೆಗೆ ವರ್ಗಾಯಿಸಲಾಗುತ್ತದೆ. ಋತುಚಕ್ರ ಮುಗಿದ ನಂತರ, ಒಂದು ಹೆಣ್ಣು ಆನೆಯನ್ನು ವಿಧ್ಯುಕ್ತವಾಗಿ ಸ್ನಾನಕ್ಕಾಗಿ ಪಂಬಾ ನದಿಗೆ ತರಲಾಗುತ್ತದೆ. ಹಬ್ಬವನ್ನು ತ್ರಿಪುತರಾಟ್ಟು ಉತ್ಸವ ಎಂದು ಕರೆಯಲಾಗುತ್ತದೆ

 

ಪೆದ್ದಮಾನಿಷಿ ಪಂಡಗ ಹಬ್ಬ

ಆಂಧ್ರಪ್ರದೇಶ ಮತ್ತು ತೆಲಂಗಾಣದ ಭಾಗಗಳಲ್ಲಿ 'ಪೆದ್ದಮಾನಿಷಿ ಪಂಡಗ' ಆಚರಿಸಲಾಗುತ್ತದೆ. ಮಹಿಳೆಯ ಜೀವನದ ಮೊದಲ ಋತುಚಕ್ರವನ್ನು ಸಂಭ್ರಮಿಸುವ ಹಬ್ಬವಾಗಿದೆ.. 

 

ಸಂತಾನೋತ್ಸವ ಆಚರಣೆಗಳು ಹಿಂದೂ ವಿಧಿಗಳಿಗೆ ಸೀಮಿತವಾಗಿಲ್ಲ.ಈಜಿಪ್ಟಿನವರ ಚಿಂತನೆಯ ಪ್ರಕಾರ, ಮುಟ್ಟು ಫೇರೋಗಳ ಹಿಂದಿನ ನಿಜವಾದ ಶಕ್ತಿಯಾಗಿದ್ದು, ಅವರನ್ನು ಅಮರರನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ

 

ನಾಲ್ಕು ದಿನಗಳ ಹಬ್ಬವು ಭೂಮಿಯ ಫಲವತ್ತತೆಯ ಪುನರುತ್ಪಾದನೆಯ ಚಕ್ರವನ್ನು ನೆನಪಿಸುತ್ತದೆ ಮತ್ತು ಇದು ಹೆಣ್ಣು ಅಥವಾ ಮಹಿಳೆಯ ಋತುಚಕ್ರದಂತೆಯೇ ಇರುತ್ತದೆ. ಪುರಾತನ ಪುರಾಣದಿಂದ ಹಿಡಿದು ಭಾರತದ ಕೆಲವು ಭಾಗಗಳಲ್ಲಿ ವಿವಿಧ ಜನಾಂಗೀಯ ಗುಂಪುಗಳು ಮತ್ತು ನಾಗರಿಕತೆಗಳಲ್ಲಿ ಋತುಸ್ರಾವವು ಹೇಗೆ ಕಂಡುಬಂದಿದೆ ಎಂಬುದನ್ನು ವಿವರಿಸಲು ವಿಮರ್ಶೆಯು ಉದ್ದೇಶಿಸಿದೆ

 

ಸಾಮಾಜಿಕ ನೆಲೆಕಟ್ಟಿನಲ್ಲಿ ಋತುಮತಿಯಾಗುವುದು ಒಂದು ಗುಪ್ತ ಕ್ರಿಯೆಯಾಗಿ ಬರಿ ಹೆಂಗಸರಿಗೆ ಮಾತ್ರ ಸೀಮಿತಗೊಂಡಿರುತ್ತದೆ. ತುಳುನಾಡಿನಲ್ಲಿ ಇದು ಮದಿಮಾಲ್ ಮದ್ಮೆ ಎಂಬ ನೆಲೆಯಲ್ಲಿ ರೂಪುಗೊಂಡು ಸಾರ್ವರ್ತ್ರಿಕರಣಗೊಳ್ಳುವ ಕ್ರಮ ಇದೆ. ಸಂಪ್ರದಾಯವೂ ಹೆಣ್ಣಿನ ಫಲವಂತಿಕೆಗೆ ಸಂಬಂಧಪಡುತ್ತದೆ. ಮಾದಿಮಾಲ್ಮದ್ಮೆಯಲ್ಲಿ ಬರುವ ಕ್ರಿಯಾವಿಧಿಗಳು ಫಲವಂತಿಕೆಯ ಪ್ರಬಲ ಸಂಕೇತಗಳಾಗಿವೆ. ಮುತೈದೆಯರು, ಹಾಲು ಒಸರುವ ಮರ, ತೆಂಗಿನ ಮರ, ಒಗ್ಗಿ ಹಾಕಿದ ತೆಂಗಿನಕಾಯಿ, ಹಾಲಿನ ಗುಂಭ, ನೀರಿನ ಪೂಜೆ, ಬಾವಿ. ತಿನ್ನಲು ಕೊಡುವ  ಬಣ್ಣಂಗಾಯಿ, ಎಲೆಅಡಿಕೆ ಎಲ್ಲವೂ ಫಲವಂತಿಕೆಯ ರೂಪಗಳಾಗಿವೆ.

 

ತುಳುವರ ಕೆಡ್ಡಸ ಭೂಮಾತೆಯ ಫಲವಂತಿಗೆ, ಸಮೃದ್ಧಿಗಾಗಿ ಪ್ರಾರ್ಥಿಸುವ ಹಬ್ಬ,   ರೀತಿಯಿಂದದಾರೂ ಮೂರೊ ನಾಲ್ಕು ದಿನ ಭೂಮಿಗೂ ರಜೆಯಿರಲಿ, ಕೆಲಸ ಮಾಡುವ ಹತ್ಯಾರುಗಳಿಗೂ ವಿಶ್ರಾಂತಿಯಿರಲಿ ಎಂಬ ಉದ್ದೇಶವೂ ಅಗಿರಬಹುದು. ಹೇಗೆ ಇರಲಿ ನಮ್ಮ ತುಳುವರ ಧರಿತ್ರಿಯ ಆರೈಕೆ ನಿಜಕ್ಕೂ ಹೆಮ್ಮೆ ಪಡುವಂತಹುದು.

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...