Sunday, August 23, 2015

ತುಳುವರಲ್ಲಿ ತೆಂಗಿಗಿರುವ ಪ್ರಾಮುಖ್ಯತೆ.

ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅಲ್ಲೇ ಬೆಳೆದ ಫಲವಸ್ತುಗಳಿಗೆ ರಾಜಮರ್ಯಾದೆ ದೇವಸ್ಥಾನದ ಹೊರಕಾಣಿಕೆ, ಶುಭಸಮಾರಂಭ, ಕೆಡ್ಡಸ, ಅಥವಾ ವಿಶೇಷ ದಿನಗಳಲ್ಲಿ, ಬಾಳೆ ಎಲೆಯಿಂದ ಹಿಡಿದು, ತೆಂಗಿನ ಸಿರಿಯವರೆಗೆ ಮೆಲ್ಪಂಕ್ತಿ, ಅದರಲ್ಲೂ ಕಲ್ಪವೃಕ್ಷ ತೆಂಗಿಗೆ ಉತ್ತುಂಗದ ಸ್ಥಾನ. ಪ್ರತಿದಿನದ ಆಗುಹೋಗುಗಳಲ್ಲಿ ಇದು ಮಿಲಿತವಾಗಿದೆ. ತೆಂಗು ಇಲ್ಲದ ಅಡುಗೆ ಊಹಿಸಲಸಾಧ್ಯ. ದಿನದ ಪ್ರತಿ ಅಡುಗೆಯಲ್ಲಿ ತೆಂಗಿನೆಣ್ಣೆ, ತೆಂಗಿನಕಾಯಿ ಮಾಮೂಲಿ ಅತಿಥಿ. ಅದು ಪಾಯಸವಿರಲಿ, ಮಾಂಸದಡುಗೆಯಿರಲಿ, ಸಸ್ಯಾಹಾರವಾಗಿರಲಿ ಎಲ್ಲದರಲ್ಲೂ ಪಾರುಪತ್ಯವಿದೆ.  ಪುದ್ವರ್(ಹೊಸ ಅಕ್ಕಿ ಊಟ)ದಂದು ತೆಂಗಿನತುರಿ ಕಡೆದು ಹಾಕಿದ ಊಟವೇ ಆಗಬೇಕು, ಪಾಯಸ ಯಾವುದರದಾದರೂ ರುಚಿ ಹೆಚ್ಚಿಸಲು ಮತ್ತು ಪಾಯಸ ಮಂದ ಮಾಡಲು ದನದ ಹಾಲಿಗೆ ಪೂರಕವಾಗಿ ತೆಂಗಿನ ಹಾಲೇ ಬೇಕು.

ಸಭೆ ಸಮಾರಂಭಗಳಲ್ಲಿ ಪೂರ್ಣಕುಂಭ ಸ್ವಾಗತ, ಮದುವೆದಿನದ ಕಲಶ ಕನ್ನಡಿ, ಮದಿಮಾಲ್ ಮದ್ಮೆಯ ಧಾರೆಯೆರೆಯಲು, ನಿಷಿಂಚನ, ಪ್ರತಿ ದೇವಸ್ಥಾನದ ಸೇವೆಗಳ ಪ್ರಸಾದ, ನಾಗರಾಧನೆ, ದೈವಗಳಿಗೆ, ಗುರುಕಾರ್ಣೆವರಿಗೆ ಅಗೆಲು ಹಾಕಿ ತಂಬಿಲ ಕಟ್ಟಲು ಬೇಕೇ ಬೇಕು. ಪೂಜೆಯಲ್ಲಿಡುವ ಸ್ವಸ್ತಿಕಗಳಲ್ಲೆಲ್ಲ ತೆಂಗಿನಕಾಯಿಯಿಲ್ಲದೇ ಪೂರ್ಣವಾಗುವುದೇ ಇಲ್ಲ. ಜಾತ್ರೋತ್ಸವದ ಸಂದರ್ಭ ದೇವಸ್ಥಾನದ ತೋರಣ, ಕೊಡಿಮರಗಳು ಬೋಂಡ, ತೆಂಗುಗಳಿಂದಲೇ ಸಿಂಗರಿಸಲ್ಪಡುವುದು. 

ತುಳುನಾಡಿನ ಪ್ರತಿ ಮನೆಯಲ್ಲೂ ಕಲ್ಪವೃಕ್ಷ  ಸಾಮಾನ್ಯ, ಬಚ್ಚಲಿನ ನೀರು ಅಥವಾ ವ್ಯರ್ಥವಾಗುವ ನೀರು ಸೀದಾ ತೆಂಗಿನ ಮರದ ಬುಡಕ್ಕೆ, ಹೊಸ ನೆಂಟರು, ಅಪರೂಪದವರೂ, ಅಧಿಕಾರಿಗಳು, ಶುದ್ಧಚರಣೆ ಮಾಡುವವರಿಗೆ ಸೀಯಾಳವೇ ಮಾರ್ಯಾದಿಯ ಸಂಕೇತ. ಮದುವೆಯಾದ ಜೋಡಿಗೆ ಮದುವೆಯ ತುಪ್ಪದ ಕಾರ್ಯಕ್ರಮದಲ್ಲಿ ಎಳನೀರೆ ಬಾಯಾರಿಕೆ ನಿವಾರಿಸುವುದು. ಹೆಣ್ಣು ಮೊದಲ ಭಾರಿ ಮುಟ್ಟದಾಗ ಹೆಣ್ಣನ್ನು ಶುದ್ಧೀಕರಿಸಿ ಮರುಸೇರ್ಪಡೆಗೊಳಿಸುವ ಮತ್ತು ಸಾಮಾಜಿಕವಾಗಿ ಹೊರಗಾದ ಹೆಣ್ಣನ್ನು ಶುದ್ಧೀಕರಿಸುವ ಮತ್ತು ಹೆಣ್ಣು ಫಲ ಕೊಡುವ ಸಾಮರ್ಥ್ಯವನ್ನು ಪಡೆದಿರುವ ಸಂಗತಿಯನ್ನು ಸಾಮಾಜೀಕರಿಸುವ ‘ಮದಿಮ್ಮಾಲ್‌ಮದಿಮೆ’ ಕ್ರಿಯಾಚರಣೆಯ ಸನ್ನಿವೇಶದಲ್ಲಿ ಸಿಪ್ಪೆ ಸುಲಿಯದ ತೆಂಗಿನಕಾಯಿಗಳು ಪ್ರಧಾನವಾಗಿ ಆಯ್ಕೆಗೊಳ್ಳುತ್ತವೆ. ಒಸುಗೆಯಾರತಿಯ ಈ ಸಂದರ್ಭದಲ್ಲಿ ತಂಪು ಮಾಡಲೂ ಬನ್ನಂಗಾಯಿಯೇ ಬೇಕು, ಅಸೌಖ್ಯದವರಿಗೆ ಶಕ್ತಿವರ್ಧಕವಾಗಿ ಬಳಕೆಯಾಗುವುದು ಇದೇ.
ಪಂಚಕಜ್ಜಾಯದ ತೆಂಗಿನಕಾಯಿ 

ತೆಂಗಿನ ಪಾವಿತ್ರ್ಯತೆಯ ಬಗೆಗಿನ ನಂಬಿಕೆಗಳು ವಿಶೇಷವಾದವುಗಳು ಪ್ರತಿ ಗ್ರಹಣದ ನಂತರ ಮಂತ್ರಿಸಿದ ಬಿಳಿ ಬೈರಾಸಿನಲ್ಲಿ ಸುತ್ತಿದ ತೆಂಗಿನ ಕಾಯಿಯನ್ನು ಧರ್ಮಸ್ಥಳದಿಂದಲೋ, ಕುಂಟಾರಿನಿಂದಲೋ ತಂದು ಮನೆಯ ರಕ್ಷೆಯಾಗಿ ಮನೆಯ ಎದುರಿನ ಪಾಕ್ಕಾಸಿಗೆ, ಮಾಡಿಗೋ ಕಟ್ಟಿ ಪ್ರಾರ್ಥಿಸುವುದು ತುಳುವರಿಗೆ ತೆಂಗೊಂದು ದೈವಿ ಶಕ್ತಿಯ ರೂಪದಲ್ಲಿ ರಕ್ಷಣ ಕವಚವಾಗುತ್ತದೆ. ಖಾಲಿ ತೊಟ್ಟಿಲಲ್ಲಿ ನೀರಿರುವ ತೆಂಗಿನಕಾಯಿ ಹಾಕಿಡುವುದು , ಇಲ್ಲದಿದ್ದರೆ ಕುಲೆ ಪೀಡೆಗಳು ಮಲಗುತ್ತವೆಯಂತೆ ಎಂಬ ನಂಬಿಕೆಯ ಹಿಂದೆ ಜೊಗುಳ ಹಾಡಿ ತೂಗಿಸಿದ  ಮಲಗಿಸುತ್ತಿದ್ದ ತೊಟ್ಟಿಲು ಯಾವಾಗಲೂ ಮಗುವನ್ನು ತೂಗುತ್ತಿರಲಿ ಅನಾಥನಾಗುವುದು ಬೇಡವೆಂದು ಸಂಬಂಧ ಅಮರಕ್ಕಾಗಿ ತೆಂಗು ನೆಪ ಮಾತ್ರ. ಚೌತಿಯ ದಿನ ಸಂಜೆ ಚಂದ್ರನ ನೋಡಿದರೆ ತೆಂಗಿನ ಮರ ನೋಡಬೇಕು, ಬೆಳಗೆದ್ದು ತೆಂಗಿನ ಮರದ ಕುಬೆ ನೋಡಿದರೆ ಶುಭ, ಕಾಗೆ ಸ್ನಾನ ಮಾಡುವುದು ಕಂಡರೆ ಅಪಶಕುನ ಅದಕ್ಕೆ ಪರಿಹಾರವಾಗಿ ಏಳು ತೆಂಗಿನ ಮರ ನೋಡಬೇಕು , ಆಕಾಶದಲ್ಲಿ ನಕ್ಷತ್ರ ಚಲಿಸುವುದನ್ನು ಕಂಡರೆ ಸಾಲವಾಗುವುದಂತೆ ಆದಕ್ಕೆ ತೆಂಗಿನ ಮರ ನೋಡಬೇಕಂತೆ ಅದೇ ನಮ್ಮ ಸಾಲಕ್ಕೆ ಜಾಮೀನು ಇವೆಲ್ಲ . ಅಷ್ಟಮಿಯಂದು ತೆಂಗಿನ ಗಿಡ ನೆಟ್ಟರೆ ಉತ್ತರೋತ್ತರ ಅಭಿವೃದ್ಧಿಯೆಂಬ ನಂಬಿಕೆಯೂ ಇದೆ. ಇದೇ ದಿನ ಸಂಜೆ "ತಾರಾಯಿ ಕುಟ್ಟುವ" ಸ್ಪರ್ಧೆಯೂ ನಡೆತ್ತದೆ ಇದು ಇಬ್ಬರು ಎದುರು ಬದುರು ಕುಳಿತು ತಮ್ಮ ತೆಂಗಿನ ಕಾಯಿಗಳನ್ನು ಗುದ್ದಿಸಿಕೊಳ್ಳುವುದು ಯಾರ ತೆಂಗಿನಕಾಯಿ ಒಡೆಯುವುದಿಲ್ಲವೋ ಆತನೇ ವಿಜಯಿ ಹಾಗೂ ಎರಡು ತೆಂಗಿನ ಕಾಯಿಯ ಒಡೆಯ. ಬಾಣಂತಿಯರು 16ದಿನದವರೆಗೆ ತೆಂಗಿನ ಕಾಯಿ ಹಾಕಿದ ಖಾದ್ಯ ತಿನ್ನದೇ ಪಥ್ಯ ಮಾಡಬೇಕು ಅದು ದೇಹವನ್ನು ತಂಪು ಮಾಡುತ್ತದೆ ಎಂಬ ವೈಜ್ಞಾನಿಕತೆಯು ಗುಟ್ಟು ಇದರ ಹಿಂದೆ ಅಡಗಿದೆ. ಮರಣವಾದ ಮನೆಯವರು 16ದಿನ ಕಾಲ ತೆಂಗಿನಿಂದ ತಯಾರಿಸಿದ ಖಾದ್ಯ ತಿನ್ನದೇ ವೃತಚರಿಸಬೇಕು ಎಂಬ ಕಟ್ಟಲೆಯೂ ಇದೆ . ತೆಂಗಿನ ಗಡಿಯನ್ನು ಆಕಾಶ ಮುಖ ಮಾಡಿ ದಿಕ್ಕೆಲಿನ ಬದಿಯಲ್ಲಿ ಇಡಬಾರದು ಯಾಕೆಂದರೆ ಅದು ಅಂತ್ಯಸಂಸ್ಕಾರ ದಿನ ನಡೆಸುವ  ಕ್ರಮವೆಂಬ ನೆಲೆಯಲ್ಲಿ ನಮ್ಮ ಇರುವು ಮತ್ತು ಇಲ್ಲದಿರುವಿಕೆಯ ವ್ಯತ್ಯಾಸವನ್ನು ಗುರುತಿಸುವಿಕೆಯ ನಂಬಿಕೆಯಾಗಿದೆ. ಮನೆಯಲ್ಲಿ , ಕಾರ್ಯಕ್ರಮಗಳಲ್ಲಿ ತೆಂಗಿನ ತುರಿಗಾಗಿ ಮೊದಲು ಹೆಣ್ಣು ಗಡಿಯನ್ನೇ ಹೆರೆಯಬೇಕು ಏಕೆಂದರೆ ಮನೆಯ ಹೆಣ್ಣನ್ನು ಮೊದಲು ಮದುವೆ ಮಾಡಿಸಬೇಕು ಎಂಬ ಹಾಸ್ಯ ವಿಡಂಬನೆ ಇದ್ದರೆ, ಮದುವೆಯಾಗದ ಹುಡುಗರು ತೆಂಗಿನಕಾಯಿ ಭಾಗಮಾಡುವಾಗ ಹೆಣ್ಣು ಗಡಿ ದೊಡ್ಡದಾದರೆ ಆತನಿಗೆ ಆತನಿಂದ ಎತ್ತರವಿರುವ ಹುಡುಗಿ ಸಿಕ್ಕುತ್ತಾಳೆ ಎಂಬ ತಮಾಷೆಯೂ ಇದೆ. 

ಭೂತರಾಧನೆ ಸಂದರ್ಭ ಸಿರಿ ಕಟ್ಟಲು ತೆಂಗಿನ ಗರಿಯೇ ಬೇಕು, ದೇವಸ್ಥಾನಕ್ಕೆ ಪೂಜೆಗೆ ,ಗಣಪತಿಗಿಡಲೂ, ದೈವರಾಧನೆಗೆ ಮುಗಂಡವಿರುವ ತೆಂಗಿನಕಾಯಿ ಬೇಕು, ಕಲ್ಲಿಗೊಡೆದ ತೆಂಗಿನಕಾಯಿಯ ಗಡಿ ಆಕಾಶ ಮುಖ ಮಾಡಿದ್ದರೆ ಮಾಡಿದ ಪೂಜೆ ದೇವರಿಗೆ ಸಮರ್ಪಣೆ ಆಗಿದೆ ಎಂಬುವುದಕ್ಕೆ ಉತ್ತರವಾದರೆ, ದೈವ(ತಾರಾಯಿ ಪಾರಾವೂನಾ) ತೆಂಗಿನ ಕಾಯಿ ಹಾರಿಸಿ ಅದು ಪೂರ್ವ ಪಶ್ಚಿಮಭಿಮುಖವಾಗಿ ಬಿದ್ದರೆ ಮಾಡಿದ ಕೋಲದ ಸೇವೆಯನ್ನು ಸಂಪೂರ್ಣವಾಗಿ ಸ್ವೀಕರಿಸಿದೆ ಎಂದರ್ಥವೂ ಇದೆ. ಪ್ರಾಣಿಬಲಿಗೆ ಪರ್ಯಾಯ ವಸ್ತುರೂಪವಾಗಿ ಧಾರ್ಮಿಕ ಕ್ರಿಯಾಚರಣೆಗಳಲ್ಲಿ ತೆಂಗನ್ನು ಅಪರ್ಿಸುವ ಕ್ರಮವಿದೆ, ಇಲ್ಲಿ ಬಲಿಯ ಕಲ್ಪನೆ ಜೊತೆಗೆ ಅಹಿಂಸೆಯ ನೆಲೆಯಲ್ಲಿ ತೆಂಗನ್ನು ಒಡೆಯಲಾಗುತ್ತದೆ. ಚಿಪ್ಪು ಒಡೆದು ನೀರು ಚೆಲ್ಲುವ ಮೂಲಕ ಪ್ರಾಣಿ ಬಲಿಯ ಅಥವಾ ರಕ್ತ ತರ್ಪಣದ ಕ್ರಿಯೆಯನ್ನು ಪ್ರತ್ಯಕ್ಷೀಕರಿಸಲಾಗುತ್ತದೆ.

ಮಕ್ಕಳಿಗೆ ಗಿರಿಗಿಟಿ, ಹಾವು, ಕೈಚೀಲ, ವಾಚು, ಸರಗಳು ತೆಂಗಿನ ಗರಿಯ ಆಟದ ಸಾಮಾನುಗಳು ಕೋತ್ತಲಿಂಗೆ ಕ್ರಿಕೆಟ್ನ ದಂಡು ಅಗುತ್ತದೆ,  ಮನೆಯ ಪಕ್ಕಾಸ್ಸಾಗಿ, ನೆರಳು ನೀಡುವ ತಟ್ಟಿಯಾಗಿ, ಮಲಗುವ ಚಾಪೆಯಾಗಿ, ಬೆಂಕಿಗೆ ವೇಗೋತ್ಕರ್ಷ ಕೊಡುವ ಮಡಲು ಅಡುಗೆಕೋಣೆಯನ್ನು ಹೊಗೆಯಿಂದ ಪಾರು ಮಾಡಲು ಬಳಕೆಯಾಗುತ್ತದೆ.

ಈ ರೀತಿಯಿಂದೆಲ್ಲಾ ತುಳುವರ ಹುಟ್ಟು, ಯೌವ್ವನ, ಸಾವುಗಳಲ್ಲಿ ತೆಂಗು ಒಂದಾದರೆ ಜಾನಪದ, ಸಾಂಸ್ಕೃತಿಕ, ಸಾಮಾಜಿಕ ನೆಲೆಯಲ್ಲಿ ಈ ಸಸ್ಯ ಪ್ರಭೇಧ ಎತ್ತರದ ಸ್ಥಾನ ಪಡೆದಿದೆ. ಪ್ರಾದೇಶಿಕವಾಗಿ ಲಭ್ಯವಾಗುವ ಈ ಸಸ್ಯ ಪ್ರಪಂಚವನ್ನು ಇಲ್ಲಿನ ಪ್ರದೇಶದ ವಿಭಿನ್ನ ಸಂಸ್ಕೃತಿಗಳು ಗ್ರಹಿಸಿಕೊಳ್ಳುವ ಮತ್ತು ಹೊಂದಿಸಿಕೊಳ್ಳುವ ಸಂಬಂಧ ಸ್ವರೂಪಗಳು ಸಸ್ಯಜಾನಪದವನ್ನು ರೂಪಿಸುತ್ತವೆ.  ಕಡಿಮೆ ಖರ್ಚಿನಲ್ಲಿ, ಹೆಚ್ಚಿನ ಆರೈಕೆಯಿಲ್ಲದೇ ಕರಾವಳಿಯಲ್ಲಿ  ಭೌಗೋಳಿಕವಾಗಿ ಮಣ್ಣು, ನೀರುಗಳ ಸಹಜ ಬೆಂಬಲದಿಂದ ವಾಣಿಜ್ಯ ಬೆಳೆಯಾಗಿ ಯಥೇಛ್ಚವಾಗಿ ಬೆಳೆಯುವುದರಿಂದಲೂ ಅಗಿರಬಹುದು ತುಳುವರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಗಿದೆ. ಇದು ತುಳು ಸಂಸ್ಕ್ರತಿ ಸಂಸ್ಕಾರಕ್ಕೆ ಹಿಡಿದ ಮನ್ನಣೆಯ ಜೊತೆಗೆ ಸಸ್ಯ ಕುಟುಂಬಕ್ಕೆ ಕೊಡುವ ಗೌರವ ಹೌದು.



Monday, May 18, 2015

ಮೊದಲ ಮಳೆ

ಬೆದೆಗೆ ಬಂದ
ಭೂಮಿಗೆ
ಮೇಘರಾಜನ
ಮಿಲನ
ನೆಲ
ತುಂಬಾ 
ಹಸಿರು 
ಉಲ್ಲಾಸದ
ಮಕ್ಕಳು.....

Wednesday, May 13, 2015

ಹ್ಯಾಮ್ ರೇಡಿಯೋ


ಜೀವನವೆಷ್ಟೇ ಸುಖ ನೆಮ್ಮದಿಯಿಂದಿದ್ದರೂ ಜೀವನದ ಸೃಜನಾತ್ಮಕತೆಗೆ ಗೊಬ್ಬರವ ನೀಡಿ ಸಮಯದ ಸದುಪಯೋಗದ ಜೊತೆಗೆ ಮನೋಚೈತನ್ಯ, ಮನೋವಿಕಾಸಕ್ಕೆ ದ್ರವ್ಯವಾಗಿ ಪೋಷಿಸುವುದು ನಮ್ಮ ಹವ್ಯಾಸಗಳು. ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ,ಅಂತಸ್ತು ಮೀರಿ ಸಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವ್ಯಕ್ತಿಗತ, ಸಮೂಹ ಅಥವಾ ಸಂಸ್ಥೆಯೊಂದು ತನ್ನ ಸ್ವಂತ ಸ್ಥಾಪಿತ ರೇಡಿಯೋ ನೆಲೆಯಿಂದ ಮತ್ತೊಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸಿ ಸ್ನೇಹ ಬಯಸುವ ಹವ್ಯಾಸಿಗಳ ಬಳಗ ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡುವುದು. 
ಇದು ದ್ವಿಮುಖಿ ಸಂವಹನ ಮಾಧ್ಯಮ ಇದರಲ್ಲಿ ಒಂದು ಪ್ರಸರಕವಾದರೆ(Transmitter) ಮತ್ತೊಂದು ಪಡೆಯಕ(Receiver) ಪ್ರತಿಯೊಬ್ಬ ಹವ್ಯಾಸಿಯು ತನ್ನದೇ ಅದ ಕರೆ ಗುರುತು ಸಂಖ್ಯೆ ಹೊಂದಿರುತ್ತಾನೆ.  ಇದು ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ನಿಸ್ತಂತು ಪ್ರಯೋಗ, ನಿಶ್ಚಿತವರದಿಗಾರಿಕೆ, ಹವಾಮಾನ, ವಾಹನ ಒತ್ತಡ, ತುರ್ತು ಸಂದೇಶ ರವಾನೆ, ಸ್ವತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಇತರ ಎಲ್ಲಾ ದೂರ ಸಂಪರ್ಕ ಮಾಧ್ಯಮಗಳು ನಿಷ್ಕ್ರಿಯಗೊಂಡಾಗ ಅತ್ಯುಪಯೋಗವಾಗುವ ಎಕೈಕ ಸಂಪರ್ಕ ಸಾಧನವೆಂಬ ಹೆಗ್ಗಳಿಕೆಯು ಇದಕ್ಕಿದೆ.  
ಭೂಪಂಕ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಗಘಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ ಸಹಾಯ ಮಾಡಬಲ್ಲುದು. 
ಹ್ಯಾಮ್ ಪದಕ್ಕೆ ಅಧಿಕೃತ ಹಿನ್ನೆಲೆ ಇಲ್ಲದಿದ್ದರೂ ರೇಡಿಯೋ ಸಾಧನದ ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಡ್ಸ್, ಅರ್ಮಸ್ಟ್ರಾಂಗ್, ಮಾರ್ಕೋನಿಯವರ ಮೊದಲ ಅಕ್ಷರದಿಂದಲ್ಲೂ ಅಗಿರಬಹುದು ಎಂಬ ಊಹೆಯು ಇದೆ ಅದರಂತೆ Help All Mankind  ರಿಂದಲೂ ಅಗಿರಬಹುದು.    
ಹ್ಯಾಮ್ ರೇಡಿಯೋ ಸರ್ವೀಸ್ (ಅಮೆಚ್ಯುರ್ ಸರ್ವೀಸ್ ಮತ್ತು ಅಮೆಚ್ಯುರ್ ಸ್ಯಾಟಲೈಟ್ ಸರ್ವೀಸ್) ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವೆಂಬ ಸ್ವಯತ್ತ ಸಂಸ್ಥೆಯಿಂದ ಸ್ಥಾಪಿತವಾಗಿದೆ ಈ ಸಂಸ್ಥೆಯು ಅಂತರಾಷ್ಟ್ರೀಯ ದೂರಸಂಪರ್ಕ ತಾಂತ್ರಿಕ  ಮತ್ತು ಕಾನೂನಾತ್ಮಕ ನಿಯಮವನ್ನು ವಿಧಿಸಿದೆ.   ಪ್ರತಿ ರಾಷ್ಟ್ರವೂ ತನ್ನದೇ ಪ್ರತ್ಯೇಕವಾದ ರೀತಿ ರಿವಾಜು ಕಟ್ಟಲೆಗಳನ್ನು ಹಾಕಿಕೊಳ್ಳಬಹುದು.     
ಹ್ಯಾಮ್ ರೇಡಿಯೋ ಉತ್ತರಾಖಂಡ್ನ ಪ್ರವಾಹದಲ್ಲಿ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಹಾಗೂ ಬಂಧುಗಳನ್ನ ಒಂದುಗೂಡಿಸುವ  ಮಹತ್ಕಾರ್ಯದಲ್ಲಿ  ಪ್ರಮುಖ ಪಾತ್ರವಹಿಸಿತ್ತು. ಇತ್ತೀಚೆಗೆ ಈಜಿಪ್ಟ್ ಸರಕಾರದ ವಿರುದ್ಧ ನಡೆದ ದಂಗೆಯ ಸಂದರ್ಭದಲ್ಲಿ ಇಂರ್ಟನೆಟ್, ಮೊಬೈಲ್ ಸ್ಥಗಿತಗೊಂಡ ಸಂದರ್ಭದಲ್ಲಿ ಹ್ಯಾಮ್ ರೇಡಿಯೋ ಮೂಲಕ ರವಾನೆಯಾದ ಸಂದೇಶದ ಬಗೆಗೆ ಅಲ್ಲಿನ ಗುಪ್ತಚರ ಇಲಾಖೆಗೆ ಅಧೀಕೃತ  ಮಾಹಿತಿ ಲಭಿಸಿದೆಯಂತೆ. ಬಾಹ್ಯಕಾಶ ಸಂಜಾತೆ ಸುನೀತಾರೊಂದಿಗೆ ಭಾರತೀಯ ವಿದ್ಯಾರ್ಥಿಗಳು ಸಂವಹನ ಮಾಡಿದ ಉದಾಹರಣೆಯು ಇದೆ.
ಹ್ಯಾಮ್ ರೇಡಿಯೋದ ವ್ಯಯಕ್ತಿಕ ಕರೆ ಸಂಖ್ಯೆಯು ಅತನ ಹೆಮ್ಮೆಯ ಗುರುತಿಸುವಿಕೆ ಜೊತೆಗೆ ಅತನ ದೇಶದ ಗುರುತಿಸುವಿಕೆಯು ಆಗಿದೆ. VU3NNV  ಇದ್ದರೆ ಮೊದಲಿನ ಭಾಗ VU3 ದೇಶವನ್ನು ಪ್ರತಿನಿಧಿಸಿದರೆ ಉಳಿದದ್ದು ಸ್ವಗುರುತಿಸಿಕೊಳ್ಳುವಿಕೆ.


ಹ್ಯಾಮ್ ರೇಡಿಯೋ ಅಂದರೆ,
  • ಸ್ವಂತ ರೇಡಿಯೋ ಸ್ಟೇಷನ್ ನ್ನು ನಮ್ಮ ಮನೆ, ಕೆಲಸದ ಜಾಗ, ವಾಹನ, ಹಡಗುಗಳಲ್ಲಿ ಸ್ಥಾಪಿಸುವುದು.
  • ವಿಶ್ವದ ಯಾವುದೇ ಭಾಗದ ಹವ್ಯಾಸಿ ಹ್ಯಾಮ್ನೊಂದಿಗೆ ಸಂಪರ್ಕ ಸಾಧಿಸುವುದು.
  • ಭಾಷೆಯ ಹಂಗಿಲ್ಲದೇ ಗೋಲದ ೨೦೦+ ಹೆಚ್ಚು ದೇಶದ ಜನರೊಂದಿಗೆ ವ್ಯವಹರಿಸಬಹುದು.
  • ಮೋಟರ್ ರ್ಯಾಲಿ, ಪ್ರಸಿದ್ಧ ಕ್ರೀಡಾಕೂಟ, ಕುಂಭಮೇಳದಂತಹ ಉತ್ಸವಗಳ ನೇರ ಮಾಹಿತಿ ಹಂಚಿಕೊಳ್ಳುವುದು.
  • ಭೂಪಂಕ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಗಘಗಳ ಸಂದರ್ಭಗಳಲ್ಲಿ ಮಾಹಿತಿ ಕೊಂಡಿಯಾಗಿ ಸಹಕಾರಿಸುತ್ತದೆ.
  • ಸಾಹಸಿ ರೇಡಿಯೋ ಅಟಗಳಲ್ಲಿ ಭಾಗವಹಿಸಬಹುದು(ರೇಡಿಯೋ ಡೈರೆಕ್ಷನ್ ಪೈಂಡಿಂಗ್  )
  • ರಾಷ್ಟ್ರೀಯ ಅಂತಾರಾಷ್ಟ್ರೀಯ ರೇಡಿಯೋ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಯಾಕಾಗಿ ಹ್ಯಾಮ್ ಆಗಬೇಕು?
  • ಮನರಂಜನೆಗಾಗಿ,
  • ರೇಡಿಯೋ ಸುಲಭ ಸಾಧನ,
  • ಸಮಾಜದ ಸೇವೆ ಮಾಡಬಹುದು.
  • ಉಚಿತವಾಗಿ ವಿಶ್ವದ ಅಪರಿಚಿತರೊಂದಿಗೆ ಹೆಮ್ಮೆಯಿಂದ ಮಾತಾನಾಡಬಹುದು.
  • ಸಮಾನ ಮನಸ್ಕ ಗೆಳೆಯರ ಬಳಗವನ್ನು ಪಡೆಯಬಹುದು.

ದೂರವಾಣಿ, ಚರವಾಣಿಗಳಿಗಿಂತ ಹೇಗೆ ಬಿನ್ನ?
  • ದೂರವಾಣಿ ನಿಮಿಷ ಲೆಕ್ಕದಲ್ಲಿ ದುಡ್ಡು ಖರ್ಚಾಗುತ್ತದೆ.
  • ತುರ್ತು ಸಂದರ್ಭಗಳಲ್ಲಿ ದೂರವಾಣಿಗಳು ಕಾರ್ಯ ಸ್ಥಗಿತಗೊಳ್ಳುತ್ತವೆ.
  • ಊರಂಚುಗಳಲ್ಲಿ ಚರವಾಣಿ, ದೂರವಾಣಿ ಸಂಪರ್ಕ ಕಷ್ಟ ಸಾಧ್ಯ.

ಅಂತರ್ಜಾಲಕ್ಕಿಂತ ಹೇಗೆ  ಬೇರೆ?
  • ಗಣಕಯಂತ್ರದ ಅವಶ್ಯವಿಲ್ಲ.
  • ತಿಂಗಳ ಕೊನೆಗೆ ಕಟ್ಟುವ ಬಿಲ್ಲಿನ ಕಿರಿಕಿರಿಯಿಲ್ಲ.
  • ಪರ್ವತರೋಹಣ, ಸಮುದ್ರ ಪಯಣದ ಸಂದರ್ಭದಲ್ಲೂ ಬಳಸಬಹುದು.
  • ಮೋರ್ಸ್ ಕೋಡ್ ಇದು ಅಂತರಾಷ್ಟ್ರೀಯ ಭಾಷೆ.

ವಿದ್ಯಾರ್ಹತೆ:
12 ವರ್ಷ ತುಂಬಿದ ಭಾರತದ ನಾಗರಿಕರಾಗಿರಬೇಕು ಹಾಗೂ ದೂರಸಂಪರ್ಕ ಮತ್ತು ವಿದ್ಯುನ್ಮಾನ ಸಚಿವಾಲಯ ಭಾರತ ಸರಕಾರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫ್ರೌಡಶಾಲಾ ಹಂತದ ವಿಜ್ಞಾನ ವಿಷಯ(ಮೂಲ ವಿದ್ಯುತ್ ಮತ್ತು ದೂರ ಸಂಪರ್ಕ ), ರೇಡಿಯೋ ಬಳಸುವ ಮೂಲ ಜ್ಞಾನ , ರೇಡಿಯೋ ನಿಯಮಗಳು ಮತ್ತು ಕಾನೂನು.  


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ. 
             7.http://www.qrz.com
                          

ಹ್ಯಾಮ್ ರೇಡಿಯೋ ಖರೀದಿಗಾಗಿ .

ಗಣಕ ಮತ್ತು ಮೊಬೈಲ್ಗಳಿಗಾಗಿ .







Thursday, March 19, 2015

Ham Radio.


Ham (Amateur) Radio is a scientific hobby, friendship through communication, adventurous sport & second line of Communication when all other means of communication fails. HAM has become a unique tool in promoting global friendship.  Today there are thousands of hams who are enthusiastic about Ham Radio and use various methods to communicate with their counterparts around the world. Groups, individuals and educational institutions are all striving to acquire radio technology, as they are eager to improve their skill over a wide spectrum of fields. They operate their wireless transceivers (a combined unit of radio transmitter and receiver)


Amateur radio  is the use of designated radio frequency spectrum for purposes of private recreation, non-commercial exchange of messages, wireless experimentation, self-training, and emergency communication. The term "amateur" is used to specify persons interested in radio technique solely with a personal aim and without direct pecuniary interest, and to differentiate it from commercial broadcasting, public safety (such as police and fire), or professional two-way radio services (such as maritime, aviation, taxis, etc.).

The amateur radio service (amateur service and amateur satellite service) is established by the International Telecommunication Union (ITU) through the International Telecommunication Regulations. National governments regulate technical and operational characteristics of transmissions and issue individual stations licenses with an identifying call sign. Prospective amateur operators are tested for their understanding of key concepts in electronics and the host government's radio regulations. Radio amateurs use a variety of voice, text, image, and data communications modes and have access to frequency allocations throughout the RF spectrum to enable communication across a city, region, country, continent, the world, or even into space.

The reason why an amateur radio operator is called a 'ham' is not known. Some relate these three letters (HAM) to the names of three great radio experimenters. They are- Hertz (who practically demonstrated the existence of electromagnetic waves in 1888), Armstrong (who developed a resonant oscillator circuit for radio frequency work) and Marconi (the 1909 Nobel laureate in Physics, who in the year 1901 established the first transatlantic radio contact). Another speculation is that the word “HAM” stands for “Help All Mankind” as reflected in its service towards people in distress during natural calamities, disasters and civil emergencies.!!

Each amateur radio station has its own unique “name” allotted by the authorities. In amateur radio, the unique name assigned to a ham radio station and its owner helps you to know its operator as well as the country to which belongs. This particular ham radio station is authorized to be operated by that and the owner of that particular station is physically present during the operation. A call sign like VU2BRU may exist in India VU2 represents country code and BRU represents individual code. Each country has its own prefix.

What radio-amateurs (HAMs) do?

  • Set up and operate own Ham (Amateur) Radio station at affordable cost.

  • Communicate with other Hams located globally. i.e. 300+ countries to develop global friendship.

  • Provide communication during events like ASIAN GAMES, NATIONAL GAMES, MAJOR FESTIVALS, MOTOR SPORTING RALLIES Etc.,

  • Assemble your own radio and conduct scientific experiments.

  • Provide Ham Communication network during Natural Calamities like Earth-quake, Floods, Cyclones, Major accidents, fire etc.

  • Participate in the adventurous Radio Sports (Radio Direction Finding – RDF)

  • Participate in various Radio Contests for numerous achievement National and International awards.

  • Great famous hams are from different interest like actor Amitha Bachan, Ex prime minister Rajiv Gandhi,  astronaut Sunitha Williams.



Why be a Ham?

  • Radio is fun

  • Radio is not expensive

  • Radio is a great hobby

  • You can help in disasters

  • You can talk for free to people around the world

  • New friends can help you get jobs

  • You can help the community in service projects


But isn’t a cell phone better?

  • Cell phones cost per minute to use

  • If you’re not within 10 miles of a highway, your service can be bad

  • Ham can get you new friends with common interests

  • In emergencies, cell phones are busy or not functional (in Tsunami- and hurricane-ravaged areas, only hams can communicate!)


But isn’t the internet better?

  • Internet lets you leave a message when they are asleep. (But you can do that too with ham packets)

  • Many foreign hams don’t have computers.

  • Can be used while camping or sailing!

  • Can be used in power outages or in emergencies

  • No monthly charges

  • Can be linked to computers

  • Morse code is a universal language (QST)

  • Meet new people with similar interests without dangers of chat room


Qualification to become a Ham:

Minimum age is 12 years.  One who should be a Citizen of India . Candidate should qualify in the examination conducted by Ministry of Communication and Information Technology, Government of India.  License fee for 20 years: Rs.1000/- and Life time:  Rs. 2000/- only.


Syllabus: 

Basic Electronics (High School Standard), Operating Procedures, Radio Rules and Regulations.


License: 

Once you qualify in the examination conducted by Ministry of Communication and I.T., Government of India, license will be granted to setup and operate your own Ham Radio Station. I am  a proud  VU3NNV.


You can surf for more information by below link.


1.http://www.wpc.dot.gov.in/Static/amateur.asp

2.http://www.indianhams.com/home.asp

3.http://www.hamradio.in/

4.http://www.arsi.info/

5.http://www.barc.in/

6.http://www.livecbradio.com/radio-phonetic-alphabet.htm

7.http://www.qrz.com

                          


Shop Ham Radio.

1.http://www.409shop.com/

2.http://www.hamradio.com/

3.http://www.aesham.com/

4.https://www.hamcity.com/store/pc/home.asp


Mobile/PC software.

1.http://www.echolink.org/

2.http://www.hamsphere.com/

3.http://hflink.com/software/

                 




                                                                                     


Friday, March 13, 2015

ರೇಡಿಯೋ ಪುರಾಣ.

ರೇಡಿಯೋ ಅದೆನೋ ಆಯಾತಕಾರದ ಮಾತನಾಡುವ ಪೆಟ್ಟಿಗೆ. ನಮ್ಮ ಮನೆಯ ಸುರಕ್ಷಿತ ಜಾಗದಲ್ಲಿ ಪುಟಾಣಿಗಳಾದ ನಮಗೆ ಎಟುಕದ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಾಗಿ ಕಪಾಟಿನ ಮೂರನೇ ಅಂತಸ್ತಿನ ಮೇಲೆ ತಪಸ್ಸು ಮಾಡುತ್ತಾ ಕುಳಿತಿರುತಿತ್ತು. ಮನೆಯಲ್ಲಿ ಯಾರು ಮೊದಲು ಎದ್ದೇಳುತ್ತಾರೋ ಅವರು ರೇಡಿಯೊವನ್ನು ಚಾಲಿಸುವವರು. ಬೆಳ್ಳಂಬೆಳಗ್ಗೆ  ಮೊದಲು ಕೊಯೋ ಎಂದು ಅರೆದುತ್ತಾ ಸದ್ದು ಮಾಡಿದರೆ 5:55 ಮಿನಿಟಿಗಾಗುವಾಗ ಅದೆನೋ ವಿಶೇಷ ಗುರುತು ಸಂಗೀತ(Signature ಟ್ಯೂನ್) ಕಾರ್ಯಕ್ರಮ  ಮುನ್ಸೂಚನೆಗಿರುವ ವಾದ್ಯಪ್ರಕಾರದ ಧ್ವನಿಯೊಂದಿಗೆ ಬದಲಾಗುವುದು. ಸಮಯ 6 ಭಜಿಸಿತೆಂದರೆ ವಂದೇ ಮಾತರಂನೊಂದಿಗೆ ಅಂದಿನ ರೇಡಿಯೋ ದಿನಚರಿ ಶುರು...
ಅಜ್ಜನಿಂದ ಬಳುವಳಿಯಾಗಿ ಬಂದಿದ್ದ ರೇಡಿಯೋ ನಮ್ಮದು, ಅದರ ಕೈಗೊಂದು ಉದ್ದ ಲಾಡಿ ಬಳ್ಳು ಅಲ್ಲಿ ಇಲ್ಲಿ ನೇತಾಡಿಸಲು... ಅಪರೂಪಕ್ಕೆ ನನ್ನ ತಮ್ಮ ಬೀರ್ಯದಿಂದ ಬೊಂಡ ತೆಗೆದುಕೊಡುವುದ್ದಕ್ಕಾಗಿಯೋ, ಭರಣಿಯಲ್ಲಿ ಇದ್ದ ಮಿಸುಕಾಡುವ ತಿಂಡಿಯ ನೋಡಿಯೋ ಏನೋ  ಹಠದಿಂದ ಅರಚುವುದು... ಮತ್ತೆ ಸಮಾಧಾನವಾಗಲು ಅಜ್ಜನ ರೇಡಿಯೋವೇ ಬೇಕಿತ್ತು. ತನ್ನ ಕುತ್ತಿಗೆಗೆ ಸುತ್ತಿಕೊಂಡು ಮನೆಯೊಳಗೆ ಹೊರಗೆ ಓಡಾಡಿ ಮಂಕಟವಾಗುತ್ತಿದ್ದ, ಅಗಾಗ ಕೋಪದಿಂದ ಉಂಬಿ ಕೆಳಗೆ ಹಾಕಿ, ಕೇಳದಂತೆಯು ಮಾಡುತಿದ್ದ.  ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಪೀಟಿಲು, ಸ್ಯಾಕ್ಸೋಪೋನ್, ಹಾರ್ಮೋನಿಯಂ ಜುಗುಲುಬಂಧಿಯಲ್ಲಿ ಮದುವೆ ಪ್ರಸಂಗವೋ ಬಂದಾಗ ಅಗೋ ನೋಡು ಮದುವೆ ದಿಬ್ಬಣ ಬಂತೆಂದು ಅಪ್ಪ ಎಂದಾಗ ರೇಡಿಯೊದ ಹತ್ತಿರ ಹೋಗಿ ಕಿವಿ ಕೊಟ್ಟು ಕೇಳಿ ಖುಷಿ ಪಡುತಿದ್ದೇವು ಮತ್ತೆ ಬರುವ ಗಿಜಿ ಗಿಜಿ ಗೆಜ್ಜೆ, ಕಿಣಿ ಕಿಣಿ ಕಾಜಿಯ ಧ್ವನಿಗಾಗಿ ಕಾತರ ಮದುಮಗಳು ಮಂಟಪಕ್ಕೆ ಬರುವ ಹೆಜ್ಜೆ ಧ್ವನಿ ಆಗ ಅದ್ಯಾಕೊ ನಾಚಿಕೆಯಿಂದ ಮುಗ್ಧಮೊಗದಲ್ಲೊಂದು ನಸುನಗು ಹಾರಿ ಹೋಗುತಿತ್ತು. ನಮ್ಮ ರೇಡಿಯೋ ಮೊದಲೇ ಹಳತು ಅಗಿದುದರಿಂದ ಮತ್ತೆ ನಾವು ಮಕ್ಕಳ ಮಂಗಗಳ ಕೈಗೆ ಮಾಣಿಕ್ಯ ಸಿಕ್ಕಿದಂತೆ ಸಿಕ್ಕಿ ಅದರ ಬ್ಯಾಟರಿ ತೆಗೆಯೊದು, ತಿರಿಗಿಸೊದು, ಕೇಳದಿದ್ದರೆ ಜೋರಾಗಿ ಬೊಟ್ಟಿ ಚಿತ್ರಹಿಂಸೆ ಕೊಟ್ಟದೆ ಹೆಚ್ಚು ಇದರಿಂದಾಗಿಯೆ ಹಲವಾರು ಬಾರಿ ಅದು ಹಾಸಿಗೆ ಹಿಡಿದದಿದೆ, ಕೆಲವು ಸಲ ಮಳೆಗಾಲದ ಸಂದರ್ಭದಲ್ಲಿ ಬೆಚ್ಚನೆಯ ಜಾಗ ಹುಡುಕುತ್ತಾ ಮೀಸೆ ತುರಿಸಿಕೊಂಡು ಬಂದು ರೇಡಿಯೋದೊಳಗೆ ಮನೆ ಮಾಡುವ ಜಿರಲೆಯಿಂದಾಗಿಯೂ ಕೆಟ್ಟು ಹೋದದಿದೆ... ಅಷ್ಟು ದೊಡ್ಡ ದೇಹದ ಜಿರಲೆ ರೇಡಿಯೋದ ಕೂದಲಿನಂತಹ ಸೆರೆಯೊಳಗೆ ಹೋಗಿ ಆಹಾರ ಹುಡುಕಿ ಮನೆ ಮಾಡಿ ಸಂಸಾರ ಮಾಡುವುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ... ಇದರಿಂದಾಗಿಯೆಲ್ಲ ಕೇಳದೆ ಇದ್ದಾಗ ಅಪ್ಪನೇ ರಿಪೇರಿ ಮಾಡುತ್ತಿದ್ದರು. ಅದೆನೋ ಮಾಡುತಿದ್ದರೋ ಗೊತ್ತಿಲ್ಲ ಒಂದು ಟೆಸ್ಟರ್ನ್ನು ಹಿಡಿದು ಅಲ್ಲಿ, ಇಲ್ಲಿ ತಿರುಗಿಸುತ್ತಿದ್ದರು, ಪುಟ್ಟ ಪುಟ್ಟ ಒಂಟಿ ಕಾಲಿನ ಮನುಷ್ಯರನ್ನು ಮುಟ್ಟಿ ಸರಿಮಾಡುತಿದ್ದರು, ಕಂಬಗಳನ್ನು ಸರಿ ಮಾಡಿ ತಂತಿ ಕಟ್ಟುತ್ತಿದ್ದರು. ಒಂದೆರಡು ವೈರ್ಗಳನ್ನೂ ಸಿಕ್ಕಿಸಿ ಸರಿ ಮಾಡುತಿದ್ದರು. ನಾವುಗಳು ಸುತ್ತ ಕುಳಿತು ಬಡ್ಡ ಚಿಮಿಣಿ ದೀಪವನ್ನು ನಡುವೆ ಇಟ್ಟು ಪಿಳಿಪಿಳಿ ಬಿಟ್ಟು ಅಪ್ಪನ ರೇಡಿಯೋ ತಂತ್ರಜ್ಞಾನತೆಯನ್ನು ಖುಷಿಯಿಂದ ಆನುಭವಿಸುತ್ತಿದ್ದೆವು. ನಾವು ಕೇಳುವ ಮುಗ್ಧ ಪ್ರಶ್ನೆಗಳಿಗೆ ಅಷ್ಟೇ ಪೆದ್ದು ಪೆದ್ದಾಗಿ ಉತ್ತರ ಹೇಳಿ ಕಳಚಿಕೊಳ್ಳುತ್ತಿದ್ದರು. ಸುಮಾರು ದೊಡ್ಡವಾಗುವವರೆಗೆ ರೇಡಿಯೋದೊಳಗೆ ಮಾತಾನಾಡುವವರು ಯಾರು?, ಎಲ್ಲಿಯವರು?, ಎಷ್ಟು ಉದ್ದದವರು?, ಹೇಗೆ ಇಷ್ಟು ಸಣ್ಣ ರೇಡಿಯೋದ ಒಳಗೆ ನುಗ್ಗುತ್ತಾರೆ? ಎಂಬೆಲ್ಲಾ ಪ್ರಶ್ನೆಗಳು ಕಾಡಿದಂತು ಸತ್ಯ ಅವನೆಲ್ಲಾ ರೇಡಿಯೋ ರಿಪೇರಿ ಮಾಡುವ ಸಮಯದಲ್ಲಿ ಅಪ್ಪನ ತಲೆ ತಿನ್ನುತ್ತಿದ್ದೇವು ಮಾತಾನಾಡುವವರು ಯಾರು? ಎಲ್ಲಿದ್ದಾರೆ? ಎಂದರೆ ನಾವು ತಿನ್ನುವ ಬೆಲ್ಲ ನೆಲಗಡಲೆಯಿಂದ ತಯಾರಿಸುವ ಕಟ್ಲ್ಸ್ ನಂತಹ ಸಣ್ಣ ಸಣ್ಣ  ತುಂಡುಗಳನ್ನು ರೇಡಿಯೋದ ಒಳಗೆ ತೋರಿಸಿ ಇವೆಲ್ಲಾ ಅವರ ಮನೆ ಅದರೊಳಗೆ ಇದ್ದಾರೆ ಮಾತಾನಾಡುವಾಗ ಹೊರಗೆ ಬರುತ್ತಾರೆ ಎಂದು, ಮತ್ತೆ ಪಾರದರ್ಶಕ ವೈರ್ಗಲನನ್ನು ತೋರಿಸಿ ಇದು ನಾವು ಮಂಗಳೂರು ಹೋಗುತ್ತೇವೆ ಆಲ್ವಾ... ಆಗ ಬಿಸಿರೋಡ್ ಸಂಕ ಸಿಗುತ್ತದೆ ಅಲ್ವಾ... ಆ ಸಂಕದಿಂದ ಅವರ ಮನೆಗಳಿಗೆ ನೀರು ಸರಬರಾಜು ಮಾಡುವ ಕೊಳವೆಯೆಂದು ಹೇಳಿ ಜೋರಾಗಿ ನಗುತ್ತಿದ್ದರು.
ನಮ್ಮ ಮನೆಯ ರೇಡಿಯೋ. 

ಬೆಳಿಗಿನ ಸುಪ್ರಭಾತದಿಂದಲೇ ಪುತ್ತೂರು ನರಸಿಂಹ ನಾಯಕ್, ಮುಂಬೈ ಸೋದರಿಯರು, ಬೆಂಗಳೂರು ಸೋದರಿಯರು, ವಿದ್ಯಾಭೂಷಣರು ಪರಿಚಿತರು, ಕಾಶ್ಮೀರ ಕದನದ ವರ್ತಮಾನ, ಕ್ರಿಕೆಟ್ ಗೆದ್ದ ಸುದ್ಧಿಗಳು, ಬಿಸಿ ಬಿಸಿ ಸುದ್ದಿಗಳಾಗುತಿದ್ದವು, ಕೇಳುಗರ ಕೋರಿಕೆಯ ಚಿತ್ರಗೀತೆಗಳು, ರಸವಾರ್ತೆ, ಹಿಂದಿ ವಾರ್ತೆಗಳ ಮೊದಲು ಬರುವ ಪ್ರಸಿದ್ಧರ ನುಡಿಮುತ್ತು, ರೇಡಿಯೋ ನಾಟಕ, ತುಳುಕಾರ್ಯಕ್ರಮ, ಕೃಷಿರಂಗ, ಯುವವಾಣಿ, ಪಾಡ್ದನ, ಸಂಧಿ, ಹೀಗೆ ಒಂದೇ ಎರಡೇ.... ನಮ್ಮಜ್ಜಿಗೆ ಇಷ್ಟವಾಗುತಿದ್ದದ್ದು ಸಂಧಿ, ಪದಪಾಡ್ದನವಾದರೆ,  ಪಂಜಿಕಾರಿನ ಮಾವನಿಗೆ ಸಂಜೆ 7:30ರ ಮಂಗಳೂರು ಪೇಟೆಧಾರಣೆ, ಅದೆಷ್ಟು ಕೆಲಸವಿದ್ದರೂ ಪೇಟೆಧಾರಣೆ ಕೇಳಲು ಹಾಜರ್, ನಾವು ಪಿನ್ನೆ - ಪಿಟ್ಟೆಗಳು ಚೀಂಯ್ ಚೀಂಯ್ ಎಂದು ಅರೆದುತ್ತಿದ್ದರೆ (ಮಾನಿಪಾಂತೆ 5 ಮಿನಿಟ್ ಲಾ ಕುಲ್ಲಾರೇ ಅಪುಜಾ?) ಮಾತನಾಡದೇ 5 ನಿಮಿಷವಾದರೂ ಕುಳಿತು ಕೊಳ್ಳಲಾಗುವುದಿಲ್ಲವೇ? ಎಂದು ಗದರಿಸದ ಮಾವನು ಗದರಿಸುತ್ತಿದ್ದರು. ಸಣ್ಣ ಅತ್ತೆಗೆ ಮಧ್ಯಾಹ್ನದ ಸಿಲೋನಿನಿಂದ ಪ್ರಸಾರವಾಗುತಿದ್ದ ಕನ್ನಡ ಚಿತ್ರಗೀತೆಗಳನ್ನು ಕೇಳುವ ಮರ್ಲದರೆ, ಮನೆಯವರೆಲ್ಲಾ ಕಾಯುವ ವಾರದ  ಕ್ರಮವೆಂದರೆ ಅದು ಯಕ್ಷಗಾನ...ಗೋರ-ಗೋರವೆನ್ನುವ ರೇಡಿಯೋವನ್ನು ಸರಿ ಮಾಡುತ್ತಾ ಮಳೆಗಾಲದಲ್ಲಿ ಯಕ್ಷಗಾನ ಕೇಳುವುದೆಂದರೆ ಅದೆನೋ ಸೌಖ್ಯ, ಪಾತ್ರ ರಾಕ್ಷಸನಾಗಿದ್ದರೆ, ರಕ್ಕಸನ ಅರಚಾಟದಂತೆ ನಾವುಗಳು ಸಹ ಅರ್ಬೆಯಿಟ್ಟು ರಕ್ಕಸ ಸಂಭೂತರಾಗುತ್ತಿದ್ದೇವು ಎಂಬುವುದು ನಗು ಭರಿಸುತ್ತದೆ, ಕುಳಿತ್ತಲೇ ಕಾಲು ತಕಥಿಮಿ ಕುಣಿದು ಮನೆಯ ಭಾಗವತರು ಆಗುತ್ತಿದ್ದೆವು. ಆಗಾಗ ಆಕಾಶವಾಣಿಯ ಕೇಳುಗರ ಕೋರಿಕೆಯ ಚಿತ್ರಗೀತೆಗಳ ಕಾರ್ಯಕ್ರಮಕ್ಕೆ ಪತ್ರ ಬರೆದು ನಮ್ಮ ಹೆಸರು ರೇಡಿಯೋದಲ್ಲಿ ಬರುವುದನ್ನು ಕಾದು ಕುಳಿತುಕೊಳ್ಳುವುದು , ಈ ಕಾಯುವುದರಲ್ಲೇನೋ ಸುಖ ಅನುಭವಿಸುತಿದ್ದೇವು.  
ಕ್ರಿಕೆಟ್ ಹುಚ್ಚು ಹುಟ್ಟಿಸಿದ್ದೇ ಈ ಮಾತನಾಡುವ ಪೆಟ್ಟಿಗೆ, ಗೆಳೆಯ ಹಸೈನಾರ್ನ ರೂ. 50 ರೇಡಿಯೊ ಅದೆನೋ ಕರಮತ್ತು ಮಾಡಿತ್ತೋ ಗೊತ್ತಿಲ್ಲ... ಕ್ರಿಕೆಟ್ ಇದ್ದ ದಿನ ಬುತ್ತಿಯೊಂದಿಗೆ 5 ಇಂಚು ಉದ್ದದ ಪುಟ್ಟ ರೇಡಿಯೋ ಶಾಲೆಗೆ ಪಾಠ ಕೇಳಲು ಆತನೊಂದಿಗೆ ಹಾಜರ್....  ತರಗತಿಯಲ್ಲೂ ಬಿಡುವಿನ ಸಮಯದಲ್ಲಿ ಊಟ ಮಾಡುವ ತಟ್ಟೆಗೋ, ಅನ್ನ ಕಟ್ಟಿ ತಂದ ಅಲ್ಯೂಮಿನಿಯಂ ಪೋದಿಕೆಗೆ ಪುಟಾಣಿ ಅಂಟೆನಾ ಮುಟ್ಟಿಸಿ ಕೇಳುವುದೋ ಅಬ್ಬಬ್ಬಾ !! ಮತ್ತೆ ಮನೆಗೆ ಹಿಂದುರುಗುವಾಗ ಸಿಕ್ಕ ಸಿಕ್ಕ ಸ್ಥಿರವಾಣಿ ಕಂಬಗಳ ಹತ್ತಿರ ನಿಂತು, ಅಂಟೆನಾ ತಾಗಿಸಿ ಕೇಳುವ ಮಜ ಅತೀ ವರ್ಣನೀಯ...ಅದೆಷ್ಟೋ ಸಲ ರಸ್ತೆ ಬದಿ ನಿಂತು ಏಳೆಂಟು ಜನ ಕ್ರಿಕೆಟ್ ಕೇಳುತ್ತಿದ್ದರೆ ವಾಹನ ವಾಹನ ಸವಾರರು ನಮ್ಮ ಹತ್ತಿರ ನಿಲ್ಲಿಸಿ ಗಾಬರಿಯಿಂದ ವಿಚಾರಿಸಿದ್ದು ಇದೆ.   ಒಂದು ಸಲ ಶಾಲಾ ವಾರ್ಷಿಕ ಕ್ರೀಡೋತ್ಸವದಂದು ಸುಮಾರು ಐದು - ಆರು ರೇಡಿಯೋಗಳು ನಮ್ಮ ಪೆರ್ನಾಜೆ ಗುಡ್ಡೆಯ ತುಂಬಾ ಕಾಮೆಂಟ್ರಿ ಹಾರಿಸಿ ಹಕ್ಕಿಗಳ ಓಡಿಸಿದ್ದೇವು ಅದರಲ್ಲೂ ಸೆಲ್ವನ ದೊಡ್ಡ ರೇಡಿಯೋದ ಶಬ್ಧ ನಮ್ಮ ಪೀಟಿ ಮಾಸ್ತ್ರು ವೆಂಕಟರಮಣ ಭಟ್  ಕೇಳಿ ನಮ್ಮನ್ನು ಹುಡುಕಿಕೊಂಡು ಬಂದದ್ದು ಇದೆ.
ಹೌದು ರೇಡಿಯೋ, ಸಂಸ್ಕಾರ ಕೊಟ್ಟಿದೆ, ಸ್ಮೃತಿಗೆ ಚುರುಕು ಮುಟ್ಟಿಸಿದೆ, ಪಾತ್ರಗಳು ಕಣ್ಣ ಮುಂದೆ ಓಡುವಂತೆ ಮಾಡಿದೆ, ಊಹಿಸಿ ಕಲ್ಪಿಸುವ ಕಲೆಯ ಪೋಷಿಸಿ ಬೆಳೆಸಿದೆ.  ಮಿಗಿಲಾಗಿ ಶಾಲೆಗೆ ಸೇರುವ ಮೊದಲೆ ವಂದೇ ಮಾತರಂ ಬಾಯಿಪಾಠ ಮಾಡಿಸಿತ್ತು, ಹಿಂದಿ ಅಂಕೆಗಳನ್ನು ಕಲಿಸಿತ್ತು. ಇಂದು  ಸಹ ನಮ್ಮ ಮನೆಯನ್ನು ಟಿವಿ ಅವರಿಸಿಕೊಂಡಿಲ್ಲ ರೇಡಿಯೋವೇ ಸುದ್ದಿ ಮುಟ್ಟಿಸುವ ರಾಯಭಾರಿ. ಈ ರೇಡಿಯೋದಿಂದಾಗಿಯೇ ಹಲವಾರು ರೇಡಿಯೋ ಗೆಳೆಯರಿದ್ದಾರೆ ಎಂಬುವುದು ಸಂತಸದ ಸಂಗತಿ. 

Sunday, February 15, 2015

ತುಳುನಾಡ ಕೆಡ್ಡಸ. - ಭೂಮಿ ಋತುಮತಿಯಾಗುವುದು.

          ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು... ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಲೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ...  ತಿನ್ನಲು ಬೊಂಡ, ಬಣ್ಣಂಗಾಯಿ, ಕೊಟ್ಟು ತಂಪು ಮಾಡಿ, ಪ್ರೀತಿಪಾತ್ರರಿಂದ ಸಿಹಿತಿಂಡಿ ನೀಡಿ ಬಾಯಿ ಸಿಹಿಮಾಡಿ, ಮತ್ತೆ ಅರಶಿನ, ಕುಂಕುಮ , ತಲೆಗೆ ತೆಂಗಿನ ಎಣ್ಣೆ , ಸ್ನಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆ ಹಾಕಿ ಸ್ನಾನ ಮಾಡಿಸಿ, ಹೊಸ ಕಾಜಿ, ಹೊಸ ಬಟ್ಟೆ ಹಾಕಿಸಿ ಮದಿಮಾಲ್ ಮಾಡುವುದೆಂದರೆ ಮನೆಮಂದಿಗೆಲ್ಲ ಅದೇನೋ ಖುಷಿಯೋ ಖುಷಿ. ಮನೆ ಹುಡುಗಿ ಮದ್ಮಲಾಯಲ್ ಅದಳು ಅಂದರೆ ಸೃಷ್ಟಿಸುವ ಕಾರ್ಯಕ್ಕೆ ಅನುವಾದಳು ಎಂಬರ್ಥ  ಅದೇ ಖುಷಿಯನ್ನು ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಕೆಡ್ಡಸ, ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎಂಬ ಪ್ರತೀತಿ. ಅಂದರೆ  ಜಗದಲ್ಲಾಗುವ ಹಗಲು - ರಾತ್ರಿ, ಋತು ಬಿಸಿಲು, ಮಳೆ, ಚಳಿ, ಹಾಗೆಯೇ ಹುಣ್ಣಿಮೆ - ಅಮಾವಾಸ್ಯೆಗಳು ನಮ್ಮ ಬಾಹ್ಯ ಅನುಭವಕ್ಕೆ ಬರುವಂತಹುದು ಅದರೆ ಸಂಕ್ರಮಣ, ಉತ್ತರಾಯಣಗಳು ನಮ್ಮ ಯೋಚನೆಗೆ ನಿಲುಕದ್ದು ಅದೇ ಪ್ರಕೃತಿಯ ಋತುಚಕ್ರ ಈ ವ್ಯತ್ಯಯಗಳ ಕಾಲವನ್ನೇ ತುಳುವರು ಒಂದೊಂದು ಆಚರಣೆಯ ರೂಪದಲ್ಲಿ ಆರಾಧಿüಸುತ್ತಿರುವುದು.
ಕಡೆ ಕೆಡ್ಡಸ 

            ಇಂತಹ ಒಂದು ಆಚರಣೆಯಲ್ಲಿ ಒಂದು ಈ ಕೆಡ್ಡಸ, ಇಲ್ಲಿನ ಜನ ಮಣ್ಣಪ್ಪೆ ಭೂಮಿಯನ್ನು ಹೆಣ್ಣಿನ ಸ್ಥಾನ ನೀಡಿ ಪ್ರೀತಿಸುವವರು, ಇದು ತುಳು ತಿಂಗಳ ಪೊನ್ನಿ(ಮಕರ) 27 ಕ್ಕೆ ಭೂರಮೆ ದೊಡ್ಡವಾದಳೆಂಬ ನಂಬಿಕೆ, ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಬರುತ್ತದೆ  ಮೂರು ದಿನದ ಈ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ.. ಈ ಸಮಯಕ್ಕೆ ಮಳೆ ಸರಿದು ಫಲ ಗಾಳಿ ಬೀಸುತ್ತಿರುತ್ತದೆ ಮಾವು, ಗೊಂಕು, ಹಲಸುಗಳೆಲ್ಲ ನಿನೆ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ.

              ಕೆಡ್ಡಸದ ಮೊದಲ ದಿನ ಅಷ್ಟೊಂದು ವಿಶೇಷತೆಯಿಲ್ಲದಿದ್ದರೂ ಪುರುಷರು ಕತ್ತಿ, ನೊಗ, ಹಾರೆಗಳಿಗೆ ಪ್ರಾರ್ಥಿಸುವ ಕ್ರಮವಿದೆ ಮುಂದಿನ ಮೂರು ದಿನ ಕತ್ತಿ , ನೊಗ ,  ಹಾರೆಗಳು ಒಟ್ಟಾರೆ ಹತ್ಯಾರುಗಳಿಗೆ ರಜೆ, ತೋಟದ ಕೆಲಸ, ಮರಕಡಿಯುವುದು, ನೆಲ ಅಗೆಯುವುದು, ಹಸಿ ಕೀಳುವುದು, ತರಕಾರಿ ಕೀಳುವುದು,  ನೀರೆರೆಯುವುದು, ಗದ್ದೆ ಕೆಲಸಗಳನ್ನು ಮಾಡಬಾರದು ಭೂ ಕುಮಾರಿಗೆ ರಜಸ್ವಲೆಯಾಗಿರುವಾಗ ಕೃಷಿಕೆಲಸ ಮಾಡಿ ನೋವುಂಟು ಮಾಡಿದರೆ ಭೂಮಿಗೆ ನೋವಾಗುತ್ತದೆ ಆಕೆ ಬಂಜೆಯಾಗುತ್ತಾಳೆ ಎಂಬುವುದು ಅದರ ಹಿನ್ನೆಲೆ. ಮೂರನೇ ದಿನ ಮಹತ್ವದ ದಿನ ಆಕೆಯ ಮೈಲಿಗೆಯ ಶುದ್ಧಚರಣೆಗೆ ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಿ ತುಳಸಿ ಕಟ್ಟೆಯ ಎದುರು ಗೋಮಯದಿಂದ ಶುದ್ಧಿಗೊಳಿಸಿ ಕ್ರಮವಾಗಿ ಹಲ್ಲುಜ್ಜಲು ಇದ್ದಿಲು ಮಾವಿನ ಎಲೆ, ತಲೆಗೆ ಎಣ್ಣೆ ಬಿಟ್ಟು, ಹಲಸಿನ ಎಲೆ, ಅರಶಿನ ಸ್ನಾನದ ನೀರಿಗೆ ಹಾಕಲು, ಸೀಗೆ, ನರ್ವೋಲ್ ಮೈ ಉಜ್ಜಿಕೊಳ್ಳಲು ಇಟ್ಟರೆ ಕುಂಕುಮ ಹಣೆಗೆ ತಿಲಕವನ್ನಿಡಲು, ದರ್ಪಣ, ಬಾಚಣಿಕೆ ಸೌಂದರ್ಯ ದೋತ್ಯಕವಾದರೆ ಚೀತ್(ಸೀಳಿದ) ಬಾಳೆಎಲೆಯಲ್ಲಿ ನನ್ಯರಿಗಳನ್ನು ಸಾಲಾಗಿ ಇಟ್ಟು ಆಕೆಗೆ ಸಮ್ಮಾನ ಮಾಡಿ ಪ್ರಾರ್ಥಿಸುವುದು ಹೆಂಗಸರ ಕಾರ್ಯ ಜೊತೆಗೆ ತೆಂಗಿನ ಗರಿ ಕಡ್ಡಿ, ಕಿರು ಕತ್ತಿಯನ್ನು ಇಡುವುದು ಕ್ರಮ. ಕೆಡ್ಡಸದ ವಿಶೇಷ ತಿನಿಸು ಅಂದ್ರೆ ಅದು ನನ್ಯರಿ, ಕೆಡ್ಡಸದ ಹಿಂದಿನ ರಾತ್ರಿ ಸೇರು ಕುಚ್ಚಲಕ್ಕಿ ಜಾಲಿಸಿ, ಸ್ವಲ್ಪ ಉಪ್ಪಿನ ನೀರು ಕೊಟ್ಟು ಒಡು ಪಾಲೆ ಅಡ್ಯೆ ಮಾಡುವ ಒಡಿನ ತುಂಡು ಅಥವಾ ಕಾವಲಿಯಲ್ಲಿ ಕುಚ್ಚಲಕ್ಕಿ, ಹುರುಳಿ, ಹೆಸರು, ನೆಲಗಡಲೆ, ಗೇರುಬೀಜ, ಎಳ್ಳು, ಮೆಂತೆ ಸೇರಿಸಿ ಹುರಿದು ಮತ್ತೆ ಕಡೆಪಕಲ್ಲಿಗೆ(ಬೀಸು ಕಲ್ಲು) ಹಾಕಿ ಅರೆದು ಹುಡಿಮಾಡಿದರೆ ಕೆಡ್ಡಸದ ಪ್ರಾಥಮಿಕ ಸಿದ್ಧತೆ ಪೂರ್ಣವಾಯಿತು. ಮರುದಿನ ಬೆಳಗ್ಗೆ ಬೇಗ ಎದ್ದು ದೊಡ್ಡ ಅಡ್ಯೆತಾ ಕರದಲ್ಲಿ ಬೇಕಾದಷ್ಟು ಪೆರೆಸಿದ ಬೆಲ್ಲ, ತೆಂಗಿನ ಕಾಯಿ ತುರಿದು ಸ್ವಲ್ಪ ತುಪ್ಪ ಸೇರಿಸಿರೆ ನನ್ಯರಿ ಸಿದ್ಧ . ಮತ್ತೆ ಹೊದ್ಲು, ಹುರಿಯಕ್ಕಿ ಹಾಕಿ ಬಾಳೆಹಣ್ಣಿನೊಂದಿಗೆ ನೆಂಚಿ ತಿನ್ನಲು ಅದೆನೋ ಸೊಗಸು. ಬೆರೆಸದ ನನ್ಯರಿಯನ್ನು ಹಳೆಯ ಡಬ್ಬಗಳಲ್ಲಿ ತುಂಬಿಸಿಟ್ಟು ಬಂದ ಬಂಧುಗಳಿಗೋ, ಬಯ್ಯಾತ ಚಾಯಕ್ಕೋ ಪ್ರತಿ ಮನೆಯಲ್ಲಿಯೂ ವಾರಗಟ್ಟಲೇ ಕಾಯುತ್ತಿರುತ್ತದೆ. ಈ ನನ್ಯರಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಮತ್ತೆ ಮಧ್ಯಾಹ್ನದ ಊಟಕ್ಕೆ ನುಗ್ಗೆ - ಬದನೆ ವಿಶೇಷ ಪದಾರ್ಥ ಅಗಲೇ ಬೇಕು.
ನನ್ಯೆರಿ 


ಕೆಡ್ಡಸ ಹಬ್ಬದ ಒಂದು ವಾರದ ಮೊದಲು ಆ ಗ್ರಾಮದ ಭೂತ ನಲಿಕೆ ಜನ, ಪಾಣರ ಜನ, ಮನೆ ಮನೆಗೆ ಬೇಟಿ ನೀಡಿ ಕೆಡ್ಡಸದ ಲೆಪ್ಪೋಗೆ ಕೊಡಲು ಬರುವುದು ಸಾಮಾನ್ಯ ಮನೆಯ ಹಿರಿಯರು ಕೊಟ್ಟ ಬಚ್ಚಿರೆ - ಬಜ್ಜೆಯಿಯನ್ನು ಮೆಲ್ಲುತ್ತಾ ಒಂದಷ್ಟು ಕ್ಷೇಮ ಸಮಾಚಾರ ಮಾತನಾಡಿಸಿ ಅವರ ಕಟ್ಟಿನ ಪಾಡ್ದನದ ಹಾಡು ಹೇಳಿ ಕೆಡ್ಡಸ ಕರೆ ತರುತ್ತಾರೆ. ಅವರಿಗೆ ಸೇರು ಕುಚ್ಚಲಕ್ಕಿ, ಒಂದು ಚೆಪ್ಪು ಇರುವ ದೊಡ್ಡ ತೆಂಗಿನಕಾಯಿ, ಉಪ್ಪು, ಮೆಣಸು, ಹುಳಿ, ಅರಶಿನ ತುಂಡು, ಬಚ್ಚಿರೆ, ಬಜ್ಜೆಯಿ ನೀಡಿ ಕಳುಹಿಸಿ ಕೊಡಬೇಕು. ಕೆಡ್ಡಸದ ದಿನ ಸಂಕ್ರಾಂತಿಯಾದುದರಿಂದ ದೈವಸ್ಥಾನ ಬಾಗಿಲು ತೆರೆದು ದೀಪ ಇಡುವ ಕ್ರಮವೂ ಇದೆ.

ನಲಿಕೆಯವರ ಪಾಡ್ದನ ಹೀಗಿದೆ .
"ಸೋಮವಾರ ಕೆಡ್ಡಸ,
ಮುಟ್ಟುನೆ ಅಂಗಾರ ನಡು ಕೆಡ್ಡಸ
ಬುಧವಾರ ಬಿರಿಪುನೆ
ಪಜಿ ಕಡ್ಪರೆ ಬಲ್ಲಿ
ಉನುಂಗೆಲ್ ಪೊಲಿಪ್ಯರೆ ಬಲ್ಲಿ,
ಅರಸುಲೆ ಬೋಟೆಂಗ್
ಸರ್ವೆರ್ ಉಲ್ಲಾಯನಕುಲು ಪೋವೋಡುಗೆ.
ವಲಸಾರಿ ಮಜಲ್ಡ್ ಕೂಡ್ದು
ವಲಸರಿ ದೇರ್ದ್ದ್  ಪಾಲೆಜ್ಜಾರ್ ಜಪ್ಪುನಗ
ಉಳ್ಳಾಲ್ದಿನಕುಲು  ಕಡಿಪಿ ಕಂಜಿನ್ ನೀರ್ಡ್  ಪಾಡೋದು.
ಓಡುಡ್  ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು.
ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ.
ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ,
ಕೈಲ ಕಡೆಲ ಪತ್ತ್ದ್
ಉಜ್ಜೆರ್ಗೊಂಜಿ ಎರ್ಪು ಏರ್ಪಾದ್
ಇಲ್ಲ ಬೇತ್ತಡಿತ್  ಉಂತೊಂದು
ಮುರ್ಗೊಲೆಗ್ ತಾಂಟಾವೊಡು.
ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.
ಎಂಕ್ ಅಯಿತ ಕೆಬಿ, ಕಾರ್, ಕೈ, ಉಪ್ಪು, ಮುಂಚಿ, ಪುಳಿ ಕೊರೊಡು."
(ಸೋಮವಾರ ಕೆಡ್ಡಸ ಪ್ರಾರಂಭವಾಗುವುದು. ಮಂಗಳವಾರ ನಡು ಕೆಡ್ಡಸ. ಬುಧವಾರ ಮುಕ್ತಾಯ. ಹಸಿ ಕಡಿಯಬಾರದು. ಒಣಗಲು ಮುರಿಯಬಾರದು. ಅರಸುಗಳ ಬೇಟೆಗೆ ಎಲ್ಲಾ  ಯಜಮಾನರು ಹೋಗಬೇಕಂತೆ. ವಲಸರಿ ಮಜಲಿನಲ್ಲಿ ಕೂಡಿ ಓಡಾಡಿ ಬೆನ್ನಟ್ಟಿ ಪಾಲೆಚಾರಿನಲ್ಲಿ ಇಳಿಯುವಾಗ ಒಡತಿಯರು ಕಡೆಯುವ ಕಲ್ಲಿನ ಗುಂಡುಕಲ್ಲನ್ನು ನೀರಲ್ಲಿ ಹಾಕಬೇಕು. ಮಡಿಕೆ ತುಂಡಿನಲ್ಲಿ ಅರೆಯಬೇಕು. ಕಲ್ಲಿನಲ್ಲಿ ರೊಟ್ಟಿ ಹಚ್ಚಬೇಕು. ದೊಡ್ಡ ದೊಡ್ಡ ಮೃಗಗಳು ಇಳಿದುಕೊಂಡು ಬರುತ್ತವೆ. ಬಣ್ಣ ಬಣ್ಣದ ಕಾಡಕೋಳಿ, ಬಿರುರೋಮದ ಹಂದಿ, ನಾಲ್ಕು ಕಾಲಿನ ಕಡವೆ, ಚುಕ್ಕೆಯ ಜಿಂಕೆಗಳು ಇಳಿದುಕೊಂಡು ಬರುತ್ತವೆ. ಕೆಟ್ಟು ಇಲ್ಲದ ಕೋವಿ, ಗರಿ ಇಲ್ಲದ ಬಾಣ, ಸೌಟಿನ ಹಿಡಿ, ಒನಕೆಯನ್ನು ಮೇಲಕ್ಕೆತ್ತಿ ಮನೆಯ ಹಿಂಬದಿ ನಿಲ್ಲಬೇಕು. ಮೃಗಗಳಿಗೆ ತಾಗಿಸಬೇಕು. ದೊಡ್ಡ ದೊಡ್ಡ ಮೃಗಗಳನ್ನು ಗೆಲ್ಲಬೇಕು. ಅದರ ಕೈ, ಕಾಲು, ಕಿವಿ ಮತ್ತು ಉಪ್ಪು, ಮೆಣಸು, ಹುಳಿ ನನಗೆ ಕೊಡಬೇಕು)
cಕೆಡ್ಡಸದ ಹೇಳಿಕೆ ತೆಗೆದುಕೊಂಡು ಬಂದ ನಲಿಕೆ ಜನಾಂಗದವರಿಗೆ ಮನೆಮನೆಗಳಲ್ಲಿ ಕೊಡುವ ದಾನ 



          ಮೇಲಿನ ಡಂಗುರಪದ ಕೆಡ್ಡಸದ ಸಮಯದಲ್ಲಿ ಕೆಡ್ಡಸ ಬೋಂಟೆಯ ಮಹತ್ವ ತಿಳಿಸುತ್ತದೆ. ಊರಿನ ಗಂಡಸರೆಲ್ಲಾ ಕಾಡಿಗೆ ನುಗ್ಗಿ ಬೋಂಟೆ ದೆರುನಾ ಅಂದರೆ ಕೃಷಿ ಕೆಲಸಕ್ಕೆ ಉಪದ್ರವ ಮಾಡುವ ಕಾಡುಪ್ರಾಣಿಗಳನ್ನು ಓಡಿಸುವುದು, ಮುಖ್ಯವಾಗಿ ಪಂಜಿ ಬೋಂಟೆ ಮತ್ತೆ ಕುಂಡಕೋರಿ(ಕಾಡು ಕೋಳಿ ಜಾತಿ)ಯ ಪಕ್ಷಿ ಹಿಡಿಯುವುದು, ಕೆಡ್ಡಸದ ಸಮಯದಲಿಒಂದು ಪುಂಡಿ ಮಾಂಸವಾಗುವ ಕುಂಡಕೋಳಿಯ ಮಾಂಸ ತಿಂದರೆ ಮಾನವನ ಎಲುಬು ಗಟ್ಟಿಯಾಗುತ್ತದೆಯಂತೆ. ಈ ಬೋಂಟೆ ದೆರುನಾ ಪುರುಷತ್ವದ ಪ್ರದರ್ಶನವೂ ಅಗಿರಬಹುದು, ಕೃಷಿ ರಕ್ಷಣೆಯು ಅಗಿರಬಹುದು, ಮನರಂಜನೆಯು ಅಗಿರಬಹುದು.
             ಇಂದು ಬೋಂಟೆ ಇಲ್ಲದಿದ್ದರೂ ಕೆಡ್ಡಸತ ಕೋರಿ ಕಟ್ಟ, ಕೆಡ್ಡಸತ ನೇಮಗಳು ಪರ್ಯಾಯವಾಗಿ ನಡೆಯುತ್ತಿದೆ ಇದರಿಂದ ಕಟ್ಟದ ಕೋರಿಯೋ , ನಾಟಿ ಕೋಳಿಯೋ ಒಟ್ಟಾರೆ ಮಾಂಸ ರಾತ್ರಿಯ ಊಟಕ್ಕೆ ಸಿದ್ಧವಾಗುತ್ತದೆ.
        ತುಳುವರ ಕೆಡ್ಡಸ ಭೂಮಾತೆಯ ಫಲವಂತಿಗೆ, ಸಮೃದ್ಧಿಗಾಗಿ ಪ್ರಾರ್ಥಿಸುವ ಹಬ್ಬ, ಈ  ರೀತಿಯಿಂದದಾರೂ 3 ದಿನ ಭೂಮಿಗೂ ರಜೆಯಿರಲಿ, ಕೆಲಸ ಮಾಡುವ ಹತ್ಯಾರುಗಳಿಗೂ ವಿಶ್ರಾಂತಿಯಿರಲಿ ಎಂಬ ಉದ್ದೇಶವೂ ಅಗಿರಬಹುದು. ಹೇಗೆ ಇರಲಿ ತುಳುವರ ಈ ಧರಿತ್ರಿಯ ಆರೈಕೆ ನಿಜಕ್ಕೂ ಹೆಮ್ಮೆ ಪಡುವಂತಹುದು.
  

Thursday, February 12, 2015

ಇಬ್ಬನಿ


1.ಸತ್ಯ‬ .
oooo
ಹೂವು ಹೆಣ್ಣಾದರೆ ತಾನೇ 
ಹಣ್ಣಾಗುವುದು.. 
ಗಂಡು 
ಮುಟ್ಟದೇ
ಹೆಣ್ಣು ಕೊಡುವುದೇ
ಜಗಕೆ ಕಣ್ಣು...!!!!


2.ಅಮಾವಾಸ್ಯೆ.
೦೦೦೦೦೦೦
ಚಂದ್ರಿಕಾ 
ಮುಟ್ಟಾದೆನೆಂದು 
ಬಾನುಮನೆಯ
ಬಿಟ್ಟು
ಹಿತ್ತಿಲ
ಮನೆಯಲ್ಲಿ
ಮಲಗಿದ್ದಾಳೆ
ಚುಕ್ಕಿ
ಮಕ್ಕಳ
ತೊರೆದು...!!


3.ಗುಡುಗು - ಮಳೆ
೦೦೦೦೦೦೦೦೦
ಮೇಘ,
ಇನಿಯನೊಂದಿಗೆ 
ಪರ್ವತ ಸುತ್ತಿ,
ಹಿಮಕೆನೆ ತಿಂದು,
ತಂಪು ಗಾಳಿ ಸೋಕಿ
ಕೆಮ್ಮು
ಶೀತ..!!!


4.ಮುಸ್ಸಂಜೆ
೦೦೦೦೦
ಬೆಸ್ತನ 
ಬಲೆಗೆ
ಸಿಲುಕಿದ
ರವಿ
ಬಿಡಿಸಿಕೊಳ್ಳಲು
ವಿಲ ವಿಲ
ಒದ್ದಾಡುತ್ತಿದ್ದಾನೆ
ಸಾಗರ ತುಂಬಾ
ರಕ್ತದೋಕುಳಿಯ
ಚೆಲ್ಲಿ.



5.ಅರುಣೋದಯ.
೦೦೦೦೦೦೦೦
ಚಂದ್ರನ
ಪಿರಿಪಿರಿ
ಬೆಳಕ ಮಳೆಗೆ
ಅರಳಿದ
ಚುಕ್ಕಿ
ಅಣಬೆಗಳನ್ನು
ಮಧ್ಯಾನ್ನ ದ ಭೋಜನದ
ಸಿದ್ಧತೆಗಾಗಿ
ಮುಂಜಾನೆಯೇ
ಕೀಳುತ್ತಿದ್ದಾನೆ
ರವಿ ಮಾಮ... 

6.ಮಣ್ಣಿನ ಪರಿಮಳ.
೦೦೦೦೦೦೦೦೦೦
ಮಾಂಸಲದೊಳಗೂ
ಮಾಂಸದೊಳಗೂ
ಮದಿರೆಯೊಳಗೂ
ಮಾಂಫಲದೊಳಗೂ
ಮಾಳಿಗೆಯೊಳಗೂ
ಮಾನಸದೊಳಗೂ
ಇರುವುದೊಂದೇ
ರುಚಿ ಪರಿಮಳ
.
.
.
.
.
ಮಣ್ಣಿನದು...

7.ಮಳೆ
೦೦೦೦೦೦೦
ವರ್ಷಾಳಿಗೆ
ಜೂನ್ ತಿಂಗಳು
ಬೇನೆಯಿಲ್ಲದ 
ಪ್ರಸವಕ್ಕೆ
ದಿನಾಂಕ
ಕೊಟ್ಟಿದ್ದಾರೆ
ಪ್ರಕೃತಿ
ವೈದ್ಯರು...!!

8. ಬಡವನಾಗಬೇಕು
೦೦೦೦೦೦೦೦೦೦೦
ನಾನು ಬಡವನಾಗಬೇಕು
ಅಹಂಕಾರದಲ್ಲಿ 
ಜೀವನದ ಜೀನದಲ್ಲಿ... 
ರೋಗ ಮೂಸುವುದಿಲ್ಲ 
ಚಿಂತೆ ಕಾಡಲ್ಲ 
ಯಾರು ಬೇಡುವುದೂ ಇಲ್ಲ...
ಗೆಳೆಯರು ಕಮ್ಮಿ
ದುಡ್ಡು ಕಡಿಮೆ
ಅದರೂ
ಉಂಡ ಅಗುಳು ಮೈಗೂ
ಹಿಡಿಸುತದೆ
ಪುಷ್ಟಿ ಕೊಡುತದೆ...
ಭಗವಂತನ
ಬಲವೂ
ಇದೆ
ಅನಿಸುತದೆ... !!!!


9. ಮಣ್ಣಿನ ಪರಿಮಳ 
೦೦೦೦೦೦೦೦೦
ಮೇಘ - ಮೇಧಿನಿಯ 
ಪ್ರಥಮ ಮಿಲನಕ್ಕೆ  
ಸಿದ್ಧತೆ 
ಭೂಕೋಣೆ ತುಂಬಾ 
ಸುಗಂಧ 
ಪೂಸಿದ್ದಾರೆ. 

Monday, January 26, 2015

ಪನಿ

1. ಚಂದ್ರ...!
೦೦೦೦೦೦
ಬಣಲೆಯಲ್ಲಿ
ಹಪ್ಪಳ ಕರಿಯುತ್ತಿದ್ದಾರೆ
ರಾತ್ರಿಯ ಭೋಜನಕ್ಕೆಂದು
ಚಂದ್ರ ಕೆಂಪೇರಲೇ 
ಇಲ್ಲ
ರವಿ
ನಿದ್ದೆಗೆಟ್ಟು
ಮುಂಜಾನೆ
ಹಸಿಯಾಗಿ ತಿಂದು
ಬಿಟ್ಟ...!!

2. ಅಸಮಾನತೆ..!
೦೦೦೦೦೦೦೦
ರವಿ 
ಗೋಲಕ್ಕೆ
ಬೆಳಕ
ಯಜಮಾನನಾದ್ರೂ
ಪ್ರೀತಿಸಿ ಆರೈಸುವವರು
ಕಮ್ಮಿ,
ಅದೇ ಭೂಮಿಕಾಳನ್ನು
ಹಾಡಿ ಹೊಗಳುವವರೇ ಹೆಚ್ಚು,
ಕಾರಣ
ಅವಳು
ಹೆಣ್ಣು..!!

3.ಗ್ರಹಣ.
0000
ರವಿಯ
ದಾಂಪತ್ಯ
ಕಲಹದ
ಕುರುಹುವಾಗಿ
ಮೊಗದ
ಬಾವು
ಹೆಪ್ಪುಗಟ್ಟಿದ ರಕ್ತದ
ನೋವು.

4.ದೃಷಿ್ಟ ಬೊಟ್ಟು.
೦೦೦೦೦೦೦೦೦
ನನ್ನವಳ ಸೌಂದರ್ಯಕ್ಕೆ
ದೃಷ್ಟಿ ತಾಕುವುದು
ಬೇಡವೆಂದು
ಅವಳು
ಮುಡಿದ
ಜಡೆಯೊಳಗೆ,
ಹಿಮಮಣಿಗೆ ಕಾದ 
ಗುಲಾಬಿ ಪಕಳೆಗಳಲ್ಲಿ
ಗುಂಡಗಿನ ಬೊಟ್ಟು ಇಟ್ಟಿದ್ದಾನೆ
ಈ ರವಿ.

5. ಗುಡುಗು - ಸಿಡಿಲು...!
೦೦೦೦೦೦೦೦೦
ಶಿಕಾರಿಗೆ ಹೊರಟ 
ಮಳೆರಾಯ
ತೋಟೆಯಿಟ್ಟು
ಬೇಟೆಯಾಡಿದ
ನೀಲಾ ಬಾನಿನೊಡಲ
ಸೀಳಿ ಸೀಳುತ್ತಾ
ಕರಿ ಮೇಘಗಳ
ರುಚಿಯ
ಸವಿಯಲು....

6. ಸಂಧ್ಯಾ ಜ್ಯೋತಿ.
೦೦೦೦೦೦೦೦೦
ಬೆಳಕ ಮೊಗ್ಗು 
ಅರಳುತ್ತಿದೆ...
ರವಿಯಿಲ್ಲವೆಂಬ
ನೆವನಾದಲ್ಲಾದರೂ
ಶಶಿಯನ್ನು
ಹೊಸ್ತಿಲ 
ಹೊರಗೆ
ನಿಲ್ಲಿಸಿ
ಮುದುಡಿಸಿ ಬಿಡಬೇಕೆಂಬ
ಹಠದಿಂದ...!!

7. ದೀಪೋತ್ಸವ.
ನೇಸರ ದೀಪ ಸ್ಥಂಭ
ಚಂದಿರ ದೀಪ ಬಿಂಬ
ಬಾನಿನಲ್ಲಿ
ರಾತ್ರಿ ಹಣತೆಗಳ
ಲಕ್ಷದೀಪೋತ್ಸವ
ನಿತ್ಯ ಕಾರ್ತಿಕೋತ್ಸವ.

8. ಮಾಗಿಯ ಮಂಜು.
೦೦೦೦೦೦೦೦೦
ನವವಧು ಸಿಂಗಾರಿ
ಭೂಮಿಕಾಳ
ಸೌಂದರ್ಯವ
ಹಸಿರ ಸೀರೆಯಲ್ಲಿ
ಮುಂಜಾವ
ರವಿರಾಜ
ನೋಡಬಾರದೆಂದು
ಮಂಜುಳಳಿಂದ 
ಹಿಡಿದ
ಅಂತಃಪಟಲ.

9.ಅಮಾವಾಸ್ಯೆ
೦೦೦೦೦೦೦
ಶಶಿಯನ್ನು 
ಕದ್ದು 
ಅರೆದು
ಮಾರುತ್ತಿದ್ದಾಳೆ 
ನಮ್ಮ ರಾಧಾಮ್ಮ 
ಅವಳ
ಹಾಲಿನ 
ದುಂಡಗಿನ
ಬಟ್ಟಲೊಳಗೆ
ಕರಗಿ
ನೀರಾದದನ್ನು
ನಾ
ಕಂಡೆ...!

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...