Thursday, December 4, 2014

ಬೆಳಕ ತೋರೋ ಹರಿಯೇ...

ಜಗದ ಡೊಂಕ ಕಳೆಯಲು
ಬಾಗಿಲೆಲ್ಲಿದೆ ಗೋಲಕೆ..?
ತೋರೋ ಹರಿಯೇ, ಮನದ ಗೋಡೆಗೆ,
ತಿಮಿರದ ಬಾಗಿಲ...
ಹೃದಯ ಕವಾಟವ ತೆರೆದು,
ಮಲಿನ ಜೀವ-ಜಲವ ಶುದ್ಧಿ ಸಿದ್ಧಿಸಿದಂತೆ,
ಮಾಡೋ ಹರಿಯೇ, ನನ್ನ ಮನದ ಜೀವವಾಯುವ.
ಪಾಪ-ಪುಣ್ಯಗಳ ಭ್ರಾಂತಿ
ಜನನ ಮರಣದ ವರ್ತುಲಗಳ ಭೀತಿ.
ತೋರೋ ಹರಿಯೇ, ಪರಿಪೂರ್ಣ ಛಾಪು ಈ ಜೀನಕೆ
ಶಾಂತಿಯ ಕಾನನದಲ್ಲಿ ಕಾಣದ ಆತ್ಮನ ಬಾಣ,
ಅವಿರ್ಭಾವ ಅವಭೃಥ ಅಮೃತದ ಸ್ನಾನ.
ಮಾಡೋ ಹರಿಯೇ, ಇವನ್ನೇ ಕುಡಿಸಿ ಜಾಣರ ಜಾಣ
ಹಸಿರು ಮರದಲ್ಲಿ ಐಕ್ಯವಾಗಿ ಬಾಳುವುದು ಬೆಂಕಿ
ಸಖ್ಯದಿಂದಲೇ ಮಾಡುವುದುಬೂದಿ ಕುದಿಯುವುದು ಮನ,
ಆರಿಸೋ ಹರಿಯೇ ಮನದ ಮಾನಕಷಾಯದ ಬೆಂಕಿಯ...
ಸಂಕಟದ ಬುತ್ತಿಯ ತುಂಬ ಅಗುಳು ಸುಡುವುದು,
ಹೃದಯ ಗೋಡೆಯ ಮೇಲೆ ಅದು ಉಷ್ಣ ಬಿಡುವುದು
ತೋರೋ ಹರಿಯೇ ಸ್ಪಷ್ಟ ದೃಷ್ಠಿಯ ಸೃಷ್ಠಿಯ ಹಾದಿಯ...
ಒಡೆದ ಸಂದಿನಿಂದ ಬಳಿತ ಬೆಳಕು
ಕೋಣೆಯ ಕತ್ತಲ ಮಿಟುವುದು.
ತೋರೋ, ಹರಿಯೇ ಕತ್ತಲ ಭಾವಕೆ ದೀಪದ ಬಿಂಬವ
ವಿಕಾರವ ಕಡೆದು ವಿಕಾಸವ ಹಡೆದು
ತಾ ಹರಿಯೇ ಅಂತರಂಗದ ಅರ್ಮೂತಕೆ ಬೆಳಕ....


- ಭರತೇಶ ಆಲಸಂಡೆಮಜಲು


ಹೃದಯ...



ಪುಪ್ಪಸಕ್ಕೆ, ಹಸಿರ ಜೀವವ ತುಂಬುತ್ತಾ,
ಸೋಡಾರಿನಂತೆ ಅಲ್ಲಾಡುವ ಉಸಿರಬತ್ತಿಯನ್ನು,
ಅನಾಯಸವಾಗಿ ಚೇತನದಿಂದ, ಜಡದವರೆಗೆ ಚಾಲಿಸಿ
ಶುಷ್ಕಕವಾಟಗಳಲ್ಲಿ ಶಾಂತಿ ತುಂಬಿದರೆ
ತಂಪು ಶೈತ್ಯಾಗಾರ, ಪಾಪವ ತುಂಬಿದರೆ ಸುಡುಬಿಸಿಲು.
ಗಾಜಿನ ಪಾರದರ್ಶಕತೆಗೆ ತಿಮಿರವೂ ಎದೆಯಲ್ಲೇ
ಬೇಯುತ್ತಾ, ಅಂತರಾಳದ ಕೆಚ್ಚಿ ಕಿಚ್ಚು ಬಿಚ್ಚು
ನುಡಿಗಳು, ದ್ವಂದ್ವ ವಿಚಾರಣೆಯಿಂದ ಜೀವ-ಜಲ
ಪಡೆಯುವುದು ವೇಗೋತ್ಕರ್ಷ, ಹೊಗಳಿಕೆಯ ತೀಟೆಗೆ
ಹಷೋತ್ಕರ್ಷ, ಬೆಚ್ಚಗಿನ ಉಷ್ಣಕ್ಕೆ ಆತ್ಮನ
ಆಮೂರ್ತವಾಗಿ ಆವಿರ್ಭಾವದಿಂದ ಪ್ರಕಾಶಿಸಿದರೆ,
ಪುಣ್ಯವಂತ, ಇಲ್ಲದೇ ಇದ್ದರೆ ತಾಪದ ಪಾಪಿಯೆಂಬ ಕಡಗೋಲು...!
ಮನದಾಳದ ಸೃಷ್ಠಿಯ ದೃಷ್ಠಿಗೆ ಕಣ್ಣಾಗಿ,
ಕುರುಡು ವಿಘ್ನಗಳ ಓಡಿಸಿ, ಜಾಗ್ರತೆಯ
ಪರಿಧಿಯಲ್ಲಿ ಜತನದಿಂದ ಮಿಥ್ಯಗಳ
ಸುಡುತ್ತಾ, ಮತ್ತೆ ಸುಟ್ಟ ಬೂದಿಯಲ್ಲಿ
ಹೂವ ಅರಳಿಸಿ ನೆನೆದವರ ಮನಸ್ಸನ
ಹೂವಾಗಿಸಿ ಕನಸ ಬಂಗಾರವಾಗಿಸಿ,
ಪ್ರೀತಿ-ಪ್ರೇಮಗಳ ಗಂಭೀರ ಚಿಂತನೆಗೆ
ಎದೆಯ ರಕ್ತದ ಮುದ್ದೆಯಿಂದ ಚಿಲುಮೆ ಚಿಮ್ಮಿಸಿ,
ಆ ನೆತ್ತರ ಕಣಗಳಲ್ಲಿ ಹುದುಗಿರುವ
ಮಾನಕಷಾಯದ ನಿವೃತಿಯು ಮೇಣದಂತೆ
ಉರಿದು ಕರಗಿ, ಭಾವಕುಸುಮವ ಬೀರುತ್ತಾ
ಪರಮಾತ್ಮನ ಮಂದಿರಕ್ಕೆ ಸತ್ಯದ ಸಾರ್ಥಕತೆಯ
ಸತ್ಕಾರದ ಸಾಕ್ಷಾತ್ಕಾರ ರುಜುವಾದರೆ
ಆ ಹೃದಯ ಧನ್ಯ.. ಧನ್ಯ......
  - ಭರತೇಶ ಅಲಸಂಡೆಮಜಲು.

ಚಳಿಗಾಲ

                 
ನಾನೆದ್ದಾಗ ಮೂಡಣ ಬೆಳಕಿನ ನೃತ್ಯಕ್ಕೆ,
ಮಂಜಿನ ಗುಂಡಾಗಿ, ಸರ್ರನೆ ಗೋಚರಿಸಿ,
ಝರ್ರನೆ ಕರಗಿ ಹೋದ ಆ ದಿನಕರ,
ಹಿಮಮಣಿಗೆ ಕಾದ ಗುಲಾಬಿ
ಮೆಲ್ಲಗೆ, ಅರಳುತ್ತಾ ನನ್ನ ಹರಸಿತು
ಶುಭವಾಗಲೆಂದು, ಆ ನೀರ ಹನಿ
ನನ್ನ ಬಿಂಬವ ನೋಡಿ ನಕ್ಕಿತು.
ಹನಿಮುತ್ತು ಪೋಣಿಸಿ ಚಿಗುರೆಲೆ
ಮಾಲೆಯಾದರೆ, ಲತೆ-ಬಳ್ಳಿಗಳು ಹೂವ ತುಂಬಿ
ಹೊನ್ನಿನ ಅರಿವೆಯ ಹೊದೆದು,
ಹುಲ್ಲಿನೊದೆಗಳು ನನಗೆ ಕಚಗುಳಿಯ ಮಾಡಿ
ಇಬ್ಬನಿಯ ಜಳಕದ ಪುಳಕಗೊಳಿಸಿದರೆ,
ಯುದ್ಧಕ್ಕೆ ಸಿದ್ಧನಾಗುವಂತೆ ನನ್ನ
ಮೈಯ ರೋಮವೆಲ್ಲ, ಸೆಟೆದು ಜತನದಿಂದ,
ಮುಂದಡಿಯಿಟ್ಟರೆ ಬಾಯಲಿ ಸುರುಳಿ-ಸುರುಳಿ,
ಹಬೆಯ ಸುಳಿಗಳ ಹೊಗೆ.
ಮತ್ತೆ ನಡೆದರೆ ಆಕಾಶಕ್ಕೂ, ಭೂಮಿಗೂ
ಅಂತಃಪಟ ಪರದೆಯ ಮಧುರ ಸಂಬಂಧ
ಬೆಸೆದ ಶ್ವೇತ ಶುಭ್ರ ಆ ಮಂಜು,
ಈ ನನ್ನ ಶರೀರ ತುಂಬಾ ಚಳಿ,
ಒಳಗೆ ಬಿಸಿ ನೆತ್ತರ ಸುಡುಬಿಸಿಲು,
ಆ ಮಾಗಿಯೇ ಹೀಗೆ
ಹೊಂಬಿಸಿಲು, ತುಂತುರು ಮಳೆ
ತಬ್ಬುವ ಚಳಿ ಇವುಗಳೊಳಗಿನ
ಕೂಪದೊಳಗೆ ನಾನು ಬಂಧಿ.......
- ಭರತೇಶ ಆಲಸಂಡೆಮಜಲು

ನಾನು ಏಕೆ, ಏಕೆ ಹೀಗೆ...?!!!

                  
                               ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ ಮನೆಯಲ್ಲೂ ಹರಿದಾಡುತ್ತವೆ, ಕೆಲವು ಮತ್ತೆ ಮತ್ತೆ ಪೀಡಿಸುತ್ತವೆ, ಮಾನಸವನ್ನು ಕಾಡುತ್ತವೆ, ಒಂದಷ್ಟು ಸಮಯವನ್ನು ನುಂಗುತ್ತವೆ.
                            ನಾನು ಏಕೆ ಹೀಗೆ ಎಂಬ ಯೋಚನೆಯಲ್ಲಿ ಮಗ್ನನಾಗಿದ್ದಾಗ ಜಗದ ಡೊಂಕ ಕಳೆಯಲು ಈ ಗೋಲಕ್ಕೆ ಬಾಗಿಲೇ ಇಲ್ಲ, ಅದುದರಿಂದಾಗಿ ಡೊಂಕ ಕಳೆಯುವ ಬದಲು ನನ್ನನ್ನೇ ಬದಲಾಯಿಸುವವನಂತಾದರೆ ಜಗದ ಒಂದು ಹುಳು ಒಳಿತಾಗುತ್ತದೆಯಲ್ಲವೇ... ಹೌದು, ಐನ್‌ಸ್ಟೀನ್ ಹೇಳುವಂತೆ “ಮಿಥ್ಯ ಪ್ರಪಂಚದಲ್ಲಿ ಸತ್ಯದ ಹುಡುಕಾಟಕ್ಕೆ ಅರ್ಥವಿಲ್ಲ” ಈ ಸಂಸ್ಕಾರ ಸಂಸ್ಕೃತಿಗಳು ನದಿಯ ತಟದಲ್ಲಿ ಸಣ್ಣನೆಯ ಒಸರಿನ ರೂಪದಲ್ಲಿ, ಆವಿರ್ಭಾವಿಸುವುದು. ಅದು ಅಲ್ಲಿಂದ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಾ, ಹರಿಸುತ್ತಾ, ಒಂದು ಪ್ರಬುದ್ಧ ಸುಸಂಸ್ಕೃತರನ್ನಾಗಿ ಮಾಡುವುದು. ಆ ಸುಸುಂಸ್ಕೃತರು ನಾಡಿನ, ದೇಶದ ಆಸ್ತಿ. ಇವು ಮುಂದಿನ ಜನಾಂಗಕ್ಕೆ ಹರಿದರೆ ಅದು ಸಂಪತ್ತು ಅದರ ದಡದಲ್ಲಿ ಅದನ್ನು ಅನುಭವಿಸಿದರೆ ಅಪ್ಪಿಕೊಳ್ಳುತ್ತದೆ, ಇಲ್ಲದಿದ್ದರೆ ಫಲವತ್ತಾದ ಸಂಸ್ಕೃತಿಯನ್ನು ಬಿಟ್ಟು ಮುಂದೆ ಹರಿಯುತ್ತದೆ ಅದುದರಿಂದ ಎಲ್ಲರೂ ಸುಸಂಸ್ಕೃತರೇ. ಇದರಿಂದಲೇ ಸಂಸ್ಕೃತಿಯೆಂಬುವುದು ರಿಯಾಲಿಟಿ ಶೋಗಳಿಂದ ಬರುವುದಿಲ್ಲ  ಆ ಪವಿತ್ರ ಮಣ್ಣಿನಿಂದ ಮಾತ್ರ  ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಿದ್ದು ನಾನು ಏಕೆ ಹೀಗೆ ಎಂಬ ಚಿಂತೆ ನನನ್ನು ಕಾಡುತ್ತಿದೆ. ಹೌದು, ಕಂಡ ಕಂಡಲ್ಲಿ ಉಗುಳಬಾರದು ಎಂದು ಗೊತ್ತಿದ್ದರೂ ಎಲೆಅಡಿಕೆ, ಗುಟ್ಕಾಗಳನ್ನು ತಿಂದು ರೋಗಗ್ರಸ್ತ ಕೋಳಿಯಂತೆ ಪಿಚಕಾರಿಯ ಮೂಲಕ ವೇಗೋತ್ಕರ್ಷವಾಗಿ ಉಗುಳಿ ಸುಂದರ ಮಂಟಪ ತುಂಬಾ ಚಿತ್ತಾರ ಬಿಡಿಸುತ್ತೇನೆ. ಚಾಕಲೇಟುಗಳ ಹೊರಕವಚ "ಟುಸ್" ಎಂಬ ಶಬ್ದದಿಂದ ಹೊಡೆಸಿ ತೆಗೆದು ಚಾಕೋಲೇಟ್‌ನ್ನು ಎತ್ತಿ ಸೀಲ್ ಪ್ರಾಣಿಯಂತೆ ಹಾರಿಸಿ ಬಾಯಿಗೆ ಹಾಕುತ್ತೇನೆ. ರ್ಯಾ ಪರನ್ನು ಎಡಕೈಯಿಂದ ಹಿಂದಕ್ಕೆ ಗುರಿಯಿಲ್ಲದ ಗರಿಯಂತೆ ಹಾರಿಸಿ ನಾನು ಮುಂದಕ್ಕೆ ಹೋಗುತ್ತೇನೆ. ಅದು ಚಳಿಗಾಲವಿರಲಿ, ಬೇಸಿಗೆಯಾಗಿರಲಿ, ಮಳೆಗಾಲ ಆಗಿರಲಿ, ಆದರೆ ನನ್ನ ಫ್ಯಾನ್ ಮಾತ್ರ ಸರ್ವಋತುಗಳಲ್ಲೂ ನನಗಾಗಿ ತನ್ನ ಪಂಖಗಳನ್ನು ಸವೆಸಿ ಗಾಳಿಯನ್ನು ನೀಡುತ್ತದೆ. ಫ್ಯಾನ್ ಗಾಳಿಯಿಲ್ಲದೇ ನನಗೆ ನಿದ್ದೆ ಬಂದದ್ದೇ ಇಲ್ಲ, ಆ ಕುಡುಕನ ಹಾಗೇ ನಾನು ದಾಸನೇ....? ಸೂರ್ಯಲನ ಶ್ವೇತ ಬೆಳಕು ಹರಿದಿದ್ದರೂ ಓದಲು ಬರೆಯಲು ಕೃತಕ ಬಲ್ಬ್ ಬೇಕೆ ಬೇಕು. ಇನ್ನೂ ನಾನು ಪ್ರವಾಸಿ ತಾಣಕ್ಕೊ, ಪರ್ವತ ಅರೋಹಣಕ್ಕೆ ಹೋದರೆ ಮೊದಲೇ ಇದ್ದ ಪ್ಲಾಸ್ಟಿಕ್ ರಾಜನಿಗೆ ನನ್ನದ್ದು ಒಂದಷ್ಟು ಬಾಟಲ್‌ಗಳು, ಪ್ಲಾಸ್ಟಿಕ್‌ಚೀಲಗಳ ಮೂಲಕ ಕಪ್ಪಕಾಣಿಕೆ ಸಮರ್ಪಿಸಿಯೇ ಹಿಂದಿರುಗುವುದು, ಮೇಲೆನದುದನೆಲ್ಲ ಮಾಡಬಾರದು ಎಂದು ನನ್ನ ಪ್ರಾಥಮಿಕ ತರಗತಿಯ ಪಾಠಗಳಲ್ಲಿ ಓದಿದ್ದೆ ಅದು ಕಂಡಕಂಡಲ್ಲಿ ಉಗುಳಬಾರದು. ಪ್ಲಾಸ್ಟಿಕ್‌ಗಳನ್ನು ಅನಿವಾರ್ಯ ವಿದ್ದಾಗ ಮಾತ್ರ ಬಳಸಬೇಕು, ವಿದ್ಯುತ್‌ನು ಮಿತವಾಗಿ ಬಳಸಿ ಹೀಗೆ ಆದರೆ ಇದನ್ನೆಲ್ಲ ಅಭಾಸದಿಂದ ಆಭ್ಯಾಸ ಮಾಡಿಕೊಂಡಿದ್ದೇನೆ. ಇತ್ತೀಚೇಗೆ ನನ್ನ ಗೆಳೆಯ ಕುಂಭದ್ರೋಣ ಮಳೆಯ ಸಮಯದಲ್ಲಿ ನಾನು ಶೀತವಾಹಕವನ್ನು ಚಾಲು ಮಾಡಿದುದರ ಬಗೆಗೆ ಚಕಾರವೆತ್ತಿದಾಗ ನಾನೆಂದೇ ನೀನಗೇಕೆ ಅದು? ನನ್ನ ಸಂಸ್ಥೆಯು ಕೆ.ಇ.ಬಿ.ಗೆ ಹಣ ಜಮೆ ಮಾಡುತ್ತದೆ ಎಂದು….!! ಮತ್ತೆ ನನ್ನ ಗೆಳೆಯ ಲೈಟು, ಫ್ಯಾನ್‌ಗಳ ಬಗೆಗೆ ಮಾತೇ ತೆಗೆದಿಲ್ಲ.
                                ಇನ್ನೂ ನನ್ನ ವೈಯಕ್ತಿಕ ವಿಚಾರಗಳ ಬಗೆಗೆ ಬಂದರೆ, ಯಾವುದೋ ಒತ್ತಡದಿಂದ ಸ್ವಾಭಾವಿಕವಾಗಿ ಬೆಳೆದ ಕೆದರಿದ ಕೂದಲು ಗಾಳಿಗೆ ಹಾರಾಡುತ್ತಿದ್ದರೆ ಫಲವತ್ತಾದ ಮಣ್ಣಲ್ಲಿ ದಟ್ಟವಾಗಿ ಬೆಳೆದ ಗಡ್ಡ ಮೀಸೆಗಳನ್ನು ತೆಗೆಯಲು ಮರೆತಿದ್ದರೆ ಏನು ನಿನ್ನ ಹೆಂಡತಿ ಗರ್ಭಿಣಿಯೋ..?, ಏನು ದೇವದಾಸನಾಗ ಹೊರಟಿದಿಯೋ.? ಅಥವಾ ಸನ್ಯಾಸಿಯೋ.? ಎಂದು ಪ್ರಶ್ನಿಸುತ್ತಾರೆ. ಕತ್ತಿಗೆ ಚೈನು, ಕೈಗೆ ಕಡಗವೋ, ಒಂದಷ್ಟು ನೂಲುಗಳ ಪಟ್ಟಿಯನ್ನೂ ದಪ್ಪವಾಗಿ ಕಟ್ಟಿ, ಮುಖಾರವಿಂದಕ್ಕೆ ಸ್ವಲ್ಪ ವಿಕಾರದ ಆಕಾರ ಮತ್ತು ಕೂದಲ ಚರ್ಯೆಯನ್ನು ಬದಲಾಯಿಸಿದರೆ ನನ್ನನ್ನು ರೌಡಿಸಂ ಮಾಡಹೊರಟಿದ್ದಾನೆ ಎಂದು ಸಾಗ ಹಾಕುತ್ತಾರೆ. ಅವರಿಗೇನು ಗೊತ್ತು..? ನನ್ನ ಪಾಪದ ಹುಳುಗಳನ್ನು ಹೆದರಿಸಲು ಈ ಆಕಾರ ತಳೆದೆನೆಂದು ಯಾವುದೇ ವ್ಯವಸ್ಥೆಯ ಲೋಪವನ್ನು ಎತ್ತಿಹಿಡಿದರೆ, ಪ್ರಶ್ನಿಸಿದರೆ ನನ್ನನ್ನು ಹುಚ್ಚನೆನ್ನುವರು, ಇಲ್ಲ ಮುಂಜಾನೆಯೇ ಕುಡುಕನೆನ್ನುವರು. ಖಂಡಿತ ನಾನೂ ಏನನ್ನೂ ಮಾಡುವುದಿಲ್ಲ ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಹುಡುಕುತ್ತೇನೆ. ಇನ್ನೂ ಅಭ್ಯುದಯ ಕಂಡರೆ ಸ್ತುತ್ಯ ಮಾಡುವುದರ ಬಿಟ್ಟು ಏನೋ ಗೋಲ್‌ಮಾಲ್ ಮಾಡಿ ಬಂದಿದ್ದಾನೆ ಎಂದು ಎಲ್ಲರಲ್ಲೂ ಮಾತಾನಾಡುತ್ತೇನೆ. ಮದುವೆಯ ಮಧುರ ಬಂಧನಕ್ಕೆ ಒಳಗಾಗದೇ ದೇಶದ ಒಳಿತಿಗಾಗಿ ದೇಶಸೇವೆಯೆಂಬಂತೆ ಮಕ್ಕಳು(ಮಗು) ತಯಾರಿಸುವ ಯಂತ್ರವಾಗುವುದು ಬೇಡವೆಂದು ಬ್ರಹ್ಮಚಾರಿಯಾಗ ಹೊರಟರೆ ಬೇರೆ ಸಂಬಂಧಗಳ ಪಟ್ಟವ ಕಟ್ಟಿ ಸಂಬಂಧವನ್ನೇ ಬಗೆಯುತ್ತಾರೆ.
                               ಇನ್ನೂ ಮದುವೆಯಾದರೆ ಒಂದು ವರುಷದೊಳಗೆ ಎಲ್ಲರಿಗೂ ಸಿಹಿತಿನ್ನಿಸುವವನಾಗಬೇಕು ಇಲ್ಲದಿದ್ದರೆ ಏನಾದ್ರೂ ವಿಶೇಷ ಇಲ್ವಾ..!! ಎಂದು ಎಂಟು ದಿಕ್ಕುಗಳಿಂದಲೂ ಧ್ವನಿರ್ಧಗಳು ಶುರುವಿಡುತ್ತವೆ. ಇನ್ನೂ ಸಮಯ ಮುಂದೆ ಹೋದರೆ ನಾನು ಹೇಳಬೇಕಿಲ್ಲ...... ಆಧುನಿಕ ಜಂಗಮವಾಣಿಯ ಮೂಲಕ ಮಾತೆತ್ತದ್ದರೆ ಓಹೋ ಯಾವುದೋ ಹುಡುಗಿ ಇರಬೇಕು ಹುಡುಗ ಪುಂಡಿ ಬೇಯಿಸುತ್ತಾ ಇದ್ದಾನೆ... ಎಂದೋ ಮಕ್ಕಳು ಹಾಳಾಗಿ ಹೋಗಿದ್ದಾರೆ. ಹಾಳಾಗಿ ಹೋಗಲಿ ಎಂದೋ ಆರ್ಶಿವಾದಿಸುತ್ತಾರೆ. ಅವರಿಗೇನು ಗೊತ್ತು ಈ ಹಕ್ಕಿಗೂ ರೆಕ್ಕೆ ಬಳಿತಿದೆ ಹಾರಲು ಪ್ರಯತ್ನಿಸುತ್ತಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲವೇ... 
                   ನಾನು ಸಂದರ್ಶನಕ್ಕೆ ಹೊರಡುವಾಗ ಫಾರ್ಮಲಿಟಿ ಎಂಬ ನೆಪದಲ್ಲಿ ನನ್ನ ಪಾರದರ್ಶಕ ವ್ಯಕ್ತಿತ್ವನ್ನು ಎಲ್ಲೊ ಅಡವಿಟ್ಟು, ಬಾಡಿಗೆಯ ವ್ಯಕ್ತಿತ್ವವನ್ನು ಕ್ಷಣಕಾಲಕ್ಕೆ ತಂದು ನಾನು ಇರುವಂತೆ ಇರುವವನಾಗದೇ ಹೊಸ ಅಂಗಿ, ಹೊಸ ಪ್ಯಾಂಟ್, ಅಫೀಸ್ ಶೂಗಳನ್ನು ಧರಿಸಿ ಅದೇ ಹಳೆಯ ಕೊಳಕು ಮನಸ್ಸಿಗೆ ಒಂದಷ್ಟು ಸುಗಂಧ ಪೂಸುವ ದ್ರವ್ಯಗಳನ್ನು ಚಿಮುಕಿಸಿ, ಹೃದಯದ ಬಡಿತವನ್ನು ಹೆಚ್ಚಿಸಿಕೊಂಡು ಒದರುಸನ್ನಿಯವನಂತೆ ಸಂದರ್ಶಕನಿಗೆ ಸಂದರ್ಶನವನ್ನಿತು ಬರುವುದು. ನಾನು ಇದ್ದಂತೆ ಇದ್ದರೆ ನನಗಾರು ಕೆಲಸವೇ ನೀಡರು ನೇರವ್ಯಕ್ತಿತ್ವಕ್ಕೂ ದಕ್ಕದು ಏನೂ ವಿಪರ್ಯಾಸವಲ್ಲವೇ...! ಅದೇ ನನ್ನ ಹೆಂಡತಿ ಮಗುವನ್ನು ಎತ್ತಿಕೊಂಡಿದ್ದರೆ ಬಸ್ಸಿನಲ್ಲಿರುವವರು ಸೀಟು ನೀಡದಿದ್ದರೆ ಎಲ್ಲರ ಮೇಲೂ ರೇಗಿ ಮಾನವೀಯತೆಯ ಬಗೆಗಿನ ಭಾಷಣದ ಸಾಲುಗಳನ್ನು ಒದರುತ್ತೇನೆ. ಆದರೆ ಬೇರೊಬ್ಬನ ಹೆಂಡತಿ ಅದೇ ರೀತಿ ಮಗುವನ್ನು ಎತ್ತಿಕೊಂಡಿದ್ದರೆ ಅದೇ ಮೇಲಿನ ವದನವನ್ನು ಬೆಕ್ಕಿನಂತೆ ಪೆಚ್ಚು ಮೋರೆ ಹಾಕಿ ನೋಡಿ ನೋಡದವರಂತೆ ಕುಳಿತಿರುತ್ತೇನೆ. ಮತ್ತೆ ಆ ಮಾನವೀಯತೆಯ ಭಾಷಣವೂ ಅಚ್ಚಾಗಿದ್ದ ಮೆದುಳಿನ ಭಾಗಕ್ಕೆ ಕೀಲಿಕೈಯಿಂದ ಭದ್ರಮಾಡಿರುತ್ತೇನೆ. ಈಗ ಮಾನವೀಯತೆಯ ಅರ್ಥ ಘಟ್ಟವನ್ನು ಹತ್ತಿತು. ಹೌದು, ನಾನೊಬ್ಬ ಪ್ರತಿಭಾವಂತನಾಗಿದ್ದು, ಉತ್ತಮ ಅಂಕಗಳನ್ನೂ ಗಳಿಸಿದ್ದರೂ ಹಣವೆಂಬ ಹೆಣ ಬೀಳದೇ ಜಗತ್ತೇ ನಡೆಯುವುದೇ ಇಲ್ಲವೆಂದು ತೀರ್ಮಾನಿಸಿ ಬದುಕುತ್ತಿರುವುದು ನನಗೂ ನಿಗೂಢವಾಗಿದೆ. ಇಲ್ಲಿ ಪ್ರಸಿದ್ಧ ವಿಜ್ಞಾನಿ ಐನ್‌ಸ್ಟಿನ್ ಮಾತು ತುಂಬಾ ಅರ್ಥಗರ್ಭಿತವಾಗಿದೆ. "ನಾವು ಸೃಷ್ಟಿಸಿರುವ ಜಗತ್ತು ನಮ್ಮ ಯೋಚನೆಗಳ ಉತ್ಪನ್ನ. ನಮ್ಮ ಯೋಚನೆ ಬದಲಾಯಿಸದೇ ಅದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಖಂಡಿತ ಇಲ್ಲಿ ಶೇ.೧೦೦ ನಿಜಾಂಶವಿದೆ. ಹೀಗೆ ಮುಂದುವರೆಸುತ್ತಾ ನನ್ನನ್ನು ಯಾರಾದರೂ ಹಿಂದುಳಿದವನ್ನು ಎಂದೂ ಹೀಯಾಲಿಸಿದರೆ ಅವನ ಮೂಗನ್ನು ಕೊಯ್ಯುವಷ್ಟು ಸಿಟ್ಟು ಬರುತ್ತದೆ ಹಾಗೂ ನಾನು, ನಮ್ಮದ್ದು ಮುಂದುವರಿದ ವರ್ಗ, ನಮ್ಮ ಹಿರಿಯರು ಹಾಗೆ ಹೀಗೆ ಅವರಿಗೆ ಅಷ್ಟಿತ್ತು, ಇಷ್ಟಿತ್ತು ಎಂದು ಸಮರ್ಥನೆ ನೀಡುತ್ತೇನೆ, ಸರಕಾರಿ ಕೆಲಸ, ಸೌಲಭ್ಯಗಳಲ್ಲಿ ಮಾತ್ರ ಮೀಸಲಾತಿ ಬೇಕು ನಮ್ಮ ಜಾತಿ ಹಿಂದುಳಿದ ವರ್ಗಕ್ಕೆ ಸೇರಿಸಿ ಎಂದು ಧರಣಿ, ಪ್ರತಿಭಟನೆ ಮಾಡುತ್ತೇನೆ. ಈ ಹಿಂದುಳಿದ ವರ್ಗಕ್ಕೆ ಸೇರಿದರೆ ನನಗೆ ಅವಮಾನ ಅಥವಾ ದುರ್ಬಲನೆನಿಸಿಕೊಳ್ಳಲು ನನಗೆ ಬೇಸರವಾಗುವುದಿಲ್ಲ. ಚಾಲಕನ ಹಿಂದಿನ ಮೂರು ಸೀಟುಗಳಲ್ಲಿ ಎಲ್ಲಿಯಾದರೂ ನಾನು ಕುಳಿತು ಕೊಂಡರೆ ಸುತ್ತಲಿನ ಎಲ್ಲರೂ ನನ್ನ ಮೇಲೇಯೇ ಹರಿಹಾಯಲು ಬರುತ್ತಾರೆ. ಕಾರಣ ಅದು ಮೀಸಲು ಸೀಟುಗಳೆಂದು ಖಂಡಿತ ಸಮಾನತೆಯ ಬಗೆಗೆ ಮಾತಾನಾಡುವ ಎಲ್ಲರೂ ಸಬಲೆಯರನ್ನು ಅಬಲೆಯನ್ನಾಗಿ ಮಾಡಿ ಈ ಪುಟ್ಟ ವಿಷಯದಲ್ಲೇ ಬಲಹೀನರು ಎಂದೂ ಬಿಂಬಿಸಿರುವುದು ಅಪಹಾಸ್ಯ-ಮಾಡಿದಂತೆ. ಹಾಗೆಯೇ ನನ್ನ ಅಂಗಡಿಗೆ ಪೆನ್ನೋ, ಪುಸ್ತಕವೋ ಸಾಮಾನುಗಳನ್ನು ಖರೀದಿಸಲು ಬಂದಿದ್ದರೆ ಚಿಲ್ಲರೆಯ ಬದಲಾಗಿ ಜಾಹೀರಾತುದಾರನಂತೆ ಮೆಂಟೊಸ್, ಸೆಂಟರ್ ಫ್ರೆಶ್‌ಗಳನ್ನು ರಿಸರ್ವ್‌ಬ್ಯಾಂಕಿನಲ್ಲಿ ಚಿಲ್ಲರೆ ರೂ.ಗಳಾಗಿ ತೆಗೆದಿರಿಸದಂತೆ ಕೊಟ್ಟು ಅವರ ಮಕ್ಕಳ ಬಾಯಿ ಚಪ್ಪರಿಸುತ್ತೇನೆ. ನನ್ನ ನೆರೆಮನೆಯ ಮೊಮ್ಮಕ್ಕಳಿಲ್ಲದ ಒಬ್ಬಂಟಿ ಸಕ್ಕರೆ ಖಾಯಿಲೆಯಿರುವ ಅಜ್ಜ ಅದನ್ನು ಮರುದಿನ ಸಾಮಾನಿಗಾಗಿ ಅದೇ ಚಾಕಲೇಟುಗಳನ್ನು ಹಿಂತಿರುಗಿಸಿದಾಗ ನಾನು ದಿನಚರಿ ಬಿಟ್ಟವನಂತೆ ಗೊತ್ತಿರುವ ಎಲ್ಲ ಶಬ್ದಗಳನ್ನು ಹೊರಡಿಸಿ ವಾದವನ್ನೇ ಮಾಡಿ ರಸಮಂಜರಿಯಂತೆ ಒಮ್ಮೆ ನಾನು ಮತ್ತೆ ಅಜ್ಜ ಹೀಗೆ ಮುಂದುವರೆಯುತ್ತದೆ.
                                ಇನ್ನೂ ನನ್ನ ದೇಶಭಕ್ತಿ, ಅಪೂರ್ವ, ನನ್ನ ನೆರೆಯ ರಾಷ್ಟ್ರ ಪಾಕಿಸ್ತಾನ ಶಬ್ದ ಕೇಳಿದರೆ ಸಾಕು ಸ್ತಂಭನವಾದ ಹೃದಯವೂ ಜೋರಾಗಿ ಬಡಿಯುವುದು, ಮುಖ ಸಿಂಡರಿಸುವುದು, ರೋಮ ಸೆಟೆದು ನಿಲ್ಲುವುದು, ಬದ್ಧ ಶತ್ರು, ಕಟ್ಟಾ ವೈರಿ, ಸಾಂಪ್ರಾದಾಯಿಕ ಎದುರಾಳಿ ಹೀಗೆ ಎಲ್ಲಾ ವಿಧದಿಂದಲೂ ವಿಕರ್ಷಣೆಯೇ ಅದು ಯಾವುದೋ ಅನ್ಯಗ್ರಹದ ದೇಶದಂತೆ ಅಲ್ಲಿನ ಜನರನ್ನು ಬೇರೆ ಗ್ರಹದ ಗಗನಯಾತ್ರಿಗಳಂತೆ ಕಲ್ಪಸಿಕೊಂಡು ಕ್ರಿಕೆಟ್ ಪಂದ್ಯಾಟವಾದರೇ ಇಡೀ ದೇಶವೇ 11 ಜನರ ತಂಡಕ್ಕೆ ಎದುರಾಳಿಯಂತೆ ಬಿಂಬಿಸಿ ನಮ್ಮ ದೇಹದ ಬಿಳಿ ರಕ್ತಕಣಗಳಂತೆ ಜತನದಿಂದ ಕಾಪಾಡಲು ಸಿದ್ಧವಾಗುವುದು ಈ ಬಗೆಗಿನ ಮಿತ್ರನ ಅರುಹು ಏನೂ ವಿಪರ್ಯಾಸವಲ್ಲವೇ...?
                              ಧರ್ಮ, ಜಾತಿ, ಪಂಗಡ, ಲಿಂಗ, ಪಕ್ಷ ಇವೆಲ್ಲವೂ ನಮ್ಮ ಪರವಾಗಿದ್ದರೆ ಮತ್ತು ನನ್ನದೇ ಆಗಿದ್ದರೆ ಖುಷಿಯಿಂದ ಬಾಚಿ ಅಪ್ಪಿಕೊಂಡು ಮುದ್ದಾಡಿ ಹೊಗಳುತ್ತೇನೆ. ಇಲ್ಲದಿದ್ದರೆ ಆ ಬೋನಿನೊಳಗಿನ ಗರ್ವದ ಹುಲಿಯಂತೆ ಬರೆಗಣ್ಣಿನಿಂದ ಗುರ್ರ್, ಗುರ್, ಎಂದು ಬೋನಿನ ಕಂಬಿಗಳಂತೆ ಅಂತರವನ್ನು ಕಾಯ್ದಿಕೊಳ್ಳುತ್ತೇನೆ. ನಾನು ಹಿಂದೂವಾಗಿದ್ದರೆ ಉಳಿದ ಧರ್ಮ ಅಂದರೆ ಇಸ್ಲಾಂ, ಕ್ರೈಸ್ತ ಧರ್ಮದವರು ಶುಭನಾಮಗಳ ಪೂರ್ವಾಗ್ರಹದಿಂದ ಹಾಗೂ ಅವರ ಮುಖಚರ್ಯೆಯಿಂದ ಗುರುತಿಸಿ ಅವರ ಹೆಜ್ಜೆ ಗುರುತಿನ ಹಾದಿಯನ್ನು ಆಳಿಸದೇ ಅಲ್ಲೂ ಕಲ್ಲು ಮುಳ್ಳುಗಳನ್ನು ಹುಡುಕುವುದು. ಇನ್ನೂ ನನ್ನ ಗೆಳೆಯರಿಗೆ ಅನ್ಯಧರ್ಮಿಯರು ಮಿತ್ರರಾಗಿದ್ದರೆ ನಾನು ನಿಮಗೆ ಅವನನ್ನು ಬಿಟ್ಟು ಬೇರೆ ಯಾರೂ ಗೆಳೆಯರು ಸಿಗಲೇ ಇಲ್ವಾ? ಎಂದು ಪ್ರಶ್ನಿಸಿ ಪಾರದರ್ಶಕ ಶುಭ್ರ ಸ್ನೇಹಕ್ಕೆ ಪರದೆಗಳ ತೆರೆ ಕಾಣುವಂತೆ ಮಾಡಿದೆ. ಒಂದು ಕಡೆ ಮಂಕುತ್ತಿಮ್ಮನ ಕಗ್ಗದಲ್ಲಿ ಡಿ.ವಿ.ಜಿಯವರು
"ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ ǀ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ǁ
ಬೆಳಕೀನ ಸೂರ್ಯಚಂದ್ರರದೊಂದು ಸದ್ದಿಲ್ಲ ǀ
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮǁ"
ಅಂದರೆ "ಭೂಮಿಯಿಂದ ಮೊಳಕೆಯೊಡೆಯುವಾಗ ಯಾರೂ ತಮ್ಮಟೆಗಳನ್ನು ಬಾರಿಸಿ ಸಂಭ್ರಮ ಆಚರಿಸುವುದಿಲ್ಲ; ಸಸ್ಯರಾಶಿಗಳಲ್ಲಿ ಫಲ ಪಕ್ವಾಗಿ ಹಣ್ಣುಗಳಾಗುವಾಗ ಯಾರೂ ತುತ್ತೂರಿ ಊದುವುದಿಲ್ಲ. ಜಗತ್ತಿಗೆ ಬೆಳಕ ನೀಡುವ ಸೂರ್ಯಗ-ಚಂದ್ರರು ಯಾವ ವಿಧವಾದ ಸದ್ದು-ಗದ್ದಲಗಳಿಲ್ಲದೇ ತಮ್ಮ-ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ ಆದರೆ ನಾನೇಕೆ ಎಲ್ಲವೂ ನನ್ನಿಂದಾದದು ಎಂಬ ಜಂಭವೇಕೆ..?, ಬದಲಿಗೆ ತುಟಿ ಮುಚ್ಚಿ ಸ್ವಪಾಲಿನ ಕರ್ತವ್ಯ ಮುಖ್ಯವಾದದ್ದು " ಎಂಬುವುದಾಗಿ ಇದು  ನಿಜ ಇವೆಲ್ಲವೂ ನಮ್ಮೊಳಗಿನ ಪೂರ್ವಾಗ್ರಹ ನಮ್ಮ ಆಯ್ಕೆ, ನಿರ್ಧಾರ, ಯೋಚನೆ ಪ್ರಭಾವಿಸುತ್ತದೆ. ಇದನ್ನು ಇಂದ್ರಿಯ ಮೂಲಕ ಗ್ರಹಿಸಿ ಆದರ ಹೊರಕವಚ ಛೇದಿಸಿ ಬಿಡುಗಡೆಯಾದರೆ ಎಲ್ಲರೊಂದಿಗೆ ಅತಿಯಲ್ಲದಿದ್ದರೂ ವಸ್ತು ನಿಷ್ಠವಾಗಿ ವರ್ತಿಸಬಹುದು. ನಮ್ಮ ಹಿರಿಯ ಕವಿ ಕಯ್ಯಾರ ಕಿಞಣ್ಣ ರೈಯವರ "ಏಕೆ?" ಎಂಬ ಕವನದಲ್ಲಿ ಈ ಚಿಂತೆಗಳ ಸಂತೆಯ ಬಗೆಗೆ ಏಕೆ? ಎಂದು ಪ್ರಶ್ನಿಸುವಂತಿದೆ ಅದು 
"ಕಾಣದಿಹ ದಾರಿಯಲಿ
 ಮುಂದಿರುವ ಕಷ್ಟಗಳ
 ಇಂದು ನೆನೆಯುತ್ತಾ
 ನೀನು ಮರುಗಬೇಕೆ?"
ಹೀಗೆ ನಿರೂಪಣೆಯಾಗಿ ರಸವತ್ತಾಗಿ ಏಕೆ? ಯಲ್ಲಿ ವರ್ಣಿಸಿದ್ದಾರೆ.. ಕೆಲವು ಕಡೆ ಇಲ್ಲಿ ನಾವು, ಅವರು, ಇವರು ಎಂಬ ಶಬ್ದ ನಿರೂಪಣೆಯ ಸ್ಥಾನಪಲ್ಲಟದಲ್ಲಿ ವ್ಯತ್ಯಾಸವಾಗಿರಬಹುದು ಅವೆಲ್ಲವೂ ನಾನೇ ಅಂದರೆ ಓದುತ್ತಿರುವ ನೀವಲ್ಲ ಕೆಲವು ಯೋಜನೆಯ ಯೋಚನೆಗಳು ತಮ್ಮದು ಆಗಿರಬಹುದು. ಇವು ನನನ್ನು ಕಾಡುತ್ತಿರುವ ಉತ್ತರಿಸಲಾಗದ ಪ್ರಶ್ನೆಗಳು. ಇಲ್ಲಿನ ಹಲವು ನಿಮ್ಮವೂ ಆಗಿರಬಹುದು, ಆಗಿದ್ದರೆ ಸಾಮೀಪ್ಯದ ಆಸರೆಯಿದೆ ,ಸಮಾಧಾನವಿದೆ ಒಂದಷ್ಟು ದ್ವಂದ್ವ, ವಿಮರ್ಶೆ, ಜಿಜ್ಞಾಸೆಯಿಂದ ಕೆಲವನ್ನು ಉಸಿರಿದ್ದೇನೆ.
ಸಂಸ್ಕೃತದಲ್ಲೊಂದು ಮಾತಿದೆ.
"ಯದ್ವಾನಂ ತದ್ಭವತಿ" ಅಂದರೆ ತಾನು ಏನು  ಅಂದುಕೊಂಡಂತೆ ಹಾಗೆ ಕ್ರಮೇಣ ಆಗುತ್ತಾನೆ ಎಂದರೆ ಹುಚ್ಚನೆಂದರೆ ಹುಚ್ಚ... ಸಜ್ಜನನೆಂದರೆ ಸಜ್ಜನ 

ಇನ್ನೂ ನನ್ನನ್ನು ಚುಚ್ಚುವ ಪ್ರಶ್ನೆಯೆಂದರೆ ಒಂದು ನಾಯಿಯನ್ನು ನಾಯಿ ಎನ್ನುತ್ತೇವೆ, ಹಸುವನ್ನು ಹಸು ಆಗಿದೆ ಎನ್ನುತ್ತೇವೆ. ಆದ್ರೆ ಮಾನವನನ್ನು ಮಾನವ ಅಂತಕರೆಯುವುದಿಲ್ಲ, ಮಾನವನಾಗಬೇಕು ಎನ್ನುತ್ತೇವೆ. ಮಾನವ ಹುಟ್ಟು ಪ್ರಾಣಿಯೇ, ಬೆಳೆಯುತ್ತಾ ಮಾನವೀಯತೆಯ ನೆಲೆಯಲ್ಲಿ ಹಾಗೂ ರೂಪದ ಸಾಕಾರದಲ್ಲಿ ಮನುಷತ್ವದ ಮುಂದಾಳತ್ವದಲ್ಲಿ ಮಾನವನಾಗುತ್ತಾನೆ. ಮನದೊಳಗೆ ಮೃಗೀಯ ಧೋರಣೆಯೇ ಇದ್ದರೆ ಮಾನವ ರೂಪಿ ಮೃಗ. ಸಾಧಾರಣ ಕಲ್ಲು ವಜ್ರ ಅದರ ಗಾತ್ರ ನುಣುಪು, ಹೊಳಪುಗಳ ಮೇಲೆ ಬೆಲೆ ನಿರ್ಧಾರವಾಗುವಂತೆ ಮನುಷ್ಯರಿಗೂ ಮೌಲ್ಯ, ಬದುಕಿನ ನೆಲೆ ನಿರ್ಧಾರ ಆ ಒಳ್ಳೆಯತನದಿಂದ....... ಅಲ್ಲವೇ? ಕಟ್ಟಕಡೆಯ ಕಾಡುವ ಪ್ರಶ್ನೆ
 ನಾನು ಏಕೆ ಹೀಗೆ….?!!!
- ಭರತೇಶ ಆಲಸಂಡೆಮಜಲು



Wednesday, December 3, 2014

ಏನು ಚೆಲುವಿನ ಯೌನವ್ವವೂ...!!


ಏನು,.. ಚೆಲುವಿನ ಯೌವ್ವನವೂ,
ಕಾಡುತಿಹುದು ಅನುದಿನವೂ ಅನುಕ್ಷಣವೂ.
ಮನದ ಮತ್ತಿನ ಮದ್ಧಿನ ಮಂಪರಿನ ವೇದನೆ
ಹೃದಯವೆಂಬ ಗುಡಿಯ ಗಂಧಪ್ರಸಾದದಿಂದ ನಿವೇದನೆ.
ಏನೋ ಹೊಸ ತರವ ಬಯಸುವ ತುಡಿತ,
ಅಲ್ಲೆಲ್ಲೊ, ಅವರಿವರ ನುಡಿಮುತ್ತುಗಳ ಕಡಿತ.
ಸ್ಮೃತಿ ಪಟಲದೊಳಗೆ, ಕಂಚು ಕುಂಚ ಕಲೆಗಾರನ ಚಿತ್ತಾರ,
ಭಾವನೆಯಿಂದ ಕೂಡಿದ ಮೊಗದ ನೆರಿಗೆಯ ಮೂಲಕ ಬಿತ್ತಾರ.
ಕಾಯದೊಳಗನ ಅಂಗ-ಅಂಗದೊಳಗಿನ, ನವ-ನವೀನತೆಯ ನವಿರೇಳುವ ಮಂದಾರ
ಕರ-ಕಾಲುಗಳೆಲೆಲ್ಲೂ ವಿಕೃತಿಯೊಳಗಿನ ವಿನಯದ ವಿದ್ಯುತ್ ಸಂಚಾರ.
ಎದೆಯ ಗೂಡ ವೀಣೆಯ ಮಧುರ ತಂತಿಗಳ ಕಂಪನ,
ನಯನ ಮಂಟಪದಲ್ಲಿ ಅವರಿವರ ಹಗ್ಗ ಜಗ್ಗಾಟದ ನರ್ತನ.
ರೋಮ-ರೋಮಗಳೊಳಗೆ, ಸೈನಿಕ ಪಡೆಯ ಸೆಟೆಯ ಜಲ್ಲನದ ಜತನ.
ಅಸ್ಧಿಮಜ್ಜೆಯ ಅಣು ಕಣಗಳಲ್ಲಿ, ಪಾದರಸದ ಚಲನವಲನ
ಮನದೊಳಗೆ ಮೆಲ್ಲನೆ ಮೆಲ್ಲಗೆ ಮಂಡಿಗೆ ಮೆಲ್ಲುವ ಕಗ್ಗಂಟು,
ಬಾಯಿ ತೆರೆದು ಬಣ್ಣಿಸಲಾಗದ ಭೀಕರ ಬಿಕ್ಕಟ್ಟು...!!!

- ಭರತೇಶ ಆಲಸಂಡೆಮಜಲು

ನಮ್ಮ ನಂಬಿಕೆಗಳು......

             

         ಬಾಳಿಗೊಂದು ನಂಬಿಕೆ ಎಂಬಂತೆ, ಈ ಬಾಹ್ಯ ಜಗತ್ತು ನಂಬಿಕೆಯ ತಲೆದಿಂಬುನಿಟ್ಟು ಮಲಗಿದೆ. ಈ ನಂಬಿಕೆಯಲ್ಲಿ ಎಲ್ಲವೂ ಶೂನ್ಯ ಆಕಾಶ ಅನಂತವಾದರೆ, ಅಣು ಪರಮಾಣುಗಳು ಎನೋ ಕತ್ತಲಲ್ಲಿ ತೇಲುವ ಸೂಕ್ಷ್ಮ ಜೀವಿ, ಆ ಆಗಾಧ ಶಕ್ತಿಯ ಕೊಲ್ಮಿಂಚು ಎಲ್ಲೋ ಹುಟ್ಟಿ ಶಕ್ತಿಯ ಅದುಮಿದ ಶೂನ್ಯ, ಸತ್ಯದ ಜಗದಲ್ಲಿ ನಾವೊಂದು ಭ್ರಾಮರಕ ನಿರ್ಮಿತಿಗಳು ಅದೇ ನಿರಾಕಾರ, ನಿರ್ಗುಣ, ನಿರಾಮಯ, ಆಗೋಚರ ಬ್ರಹ್ಮಾಂಡದ ಸ್ವರೂಪಗಳು ನಮ್ಮ ಜ್ಞಾನದ ಅಳತೆಯೊಳಗೆ.... "ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ, ಮೃದುತ್ವ ಕಾಠೀಣ್ಯಗಳು ಇಲ್ಲವೇ ಇಲ್ಲ, ಅವೆಲ್ಲ ಏನಿದ್ದರೂ ನಮ್ಮ ನಿಮ್ಮ ಮಿದುಳಿನಲ್ಲಿ ನಮ್ಮ ನಿಮ್ಮ ಜ್ಞಾನದಲ್ಲಿ" ಎಂದು ಪ್ರಸಿದ್ಧ ನರ ವಿಜ್ಞಾನಿ ನೋಬೆಲ್ ವಿಜೇತ ಸರ್ ಜಾನ್ ಐಕೆಲ್ಸ್ ಹೇಳಿದ್ದಾರೆ. ನಮ್ಮ ಯೋಚನಲಹರಿಯ ಶೂನ್ಯ ಜಾಗಗಳಲ್ಲಿ ಈ ನಂಬಿಕೆಗಳು ಅಚ್ಚಳಿದು ನಿಂತಿದೆ ನಮ್ಮ ನಂಬಿಕೆಗಳೇ ಹಾಗೆ ಅದು ಪ್ರಕೃತಿಯ ಅರಾಧನೆಯಿಂದ ಹಿಡಿದು ಗುರು ಹಿರಿಯರ ಪೂಜನೆಯವರೆಗೆ ಅದರಲ್ಲೂ ಕರಾವಳಿ ಇವೂಗಳ ಗೂಡು, ಬೀಡು. ಹಲವಾರು ವೈಶಿಷ್ಟ, ವಿಶೇಷ, ಆಚರಣೆ, ಅರಾಧನೆ, ಪಾಲನೆ ಇವುಗಳಿಂದಾಗಿ ವಿಶ್ವವ್ಯಾಪ್ತಿಯಲ್ಲಿ ಛಾಪನ್ನು ಮೂಡಿಸಿದೆ.  ಎಲ್ಲರ ಮಂದ ದೃಷ್ಠಿ ಇತ್ತ ಕಡೆ ನೆಡುವಂತೆ ಮಾಡಿದೆ. ಇಲ್ಲಿನ ಆಚರಣೆ ಒಂದನ್ನು ಮೀರಿಸುವ ಇನ್ನೊಂದು ಪ್ರಬುದ್ಧವಾದದ್ದು. ಪ್ರಪಂಚದ ಬೇರೆ ಯಾವೂದೇ ಕೋಣೆಯಲ್ಲೂ ಅರಸಿ ಹುಡುಕಿದರೂ ಬಯಸಿ ಸಿಗಲಾರದು. ಯಾವುದೋ ಪೂವಾಗ್ರಹದ ನೆಲೆಯಲ್ಲಿ ತುಳುನಾಡು ತನ್ನ ಭವ್ಯ ಸಂಸ್ಕøತಿಯ ಕಣಜದ ನೆಲೆಯಲ್ಲಿ ಇನ್ನೂ ಆಚರಣೆಗಳು ಉಳಿದು ನಡೆಯುತಿದೆ. ಒಂದಷ್ಟು ಜಿಜ್ಞಾಸೆ ವಿಮರ್ಶೆಗಳಿಂದ ಮತ್ತಷ್ಟು ಪ್ರಚಾರವಾಗಿ ಇನ್ನಷ್ಟು ಗಟ್ಟಿಯಾಗಿ ತುಳುವರ ಮನಗಳಲ್ಲಿ, ಮನೆಗಳಲ್ಲಿ  ಅಗೆಲುಗಳ ರೂಪದಲ್ಲಿ ಭಾವುಕವಾಗಿ ಬೆಚ್ಚಗೆ ಕುಳಿತಿದೆ.
              ಸಂಸ್ಕೃತಿ, ಸುಸಂಸ್ಕೃತ  ಪದಗಳು ಇಂದು ನಿರ್ಜೀವ ವಸ್ತುವಂತೆ ಎಲ್ಲ್ರ ಬಾಯಲ್ಲೂ ಹೊರಲಾಡಿ ತನ್ನ ನೈಜತೆ ಯನ್ನು ಕಳಕೊಂಡಿದೆಯೇ ಹೊರತು ವಾಸ್ತವದಿಂದಲ್ಲ. ಅದರಲ್ಲೂ ಕರಾವಳಿಯ ದೇವರ ಕಾಡು, ನಾಗಬನ, ದೇವರಕೆರೆ, ಪುಣ್ಯ ನೀರು ಸ್ನಾನ, ಭೂತಕೋಲ, ಒತ್ತೆಕೋಲ, ಅಗೆಲು ಹಾಕುವುದು, ಬಿಂದು ಕೊಡುವುದು, ಪಿಂಡ ಬಿಡುವುದು, ಕುಲೆಗಳಿಗೆ ಬಡಿಸುವುದು, ಮಡೆಸ್ನಾನ, ಬೂಡು, ಗರೋಡಿ, ನಾಗತಂಬಿಲ, ಪತ್ತನಾಜೆ, ಆಟಿ ಆಚರಣೆ, ಕೋಲ, ಕೆಡ್ಡಸ,  ಹೀಗೆ ಪಂಚ ಭೂತಗಳಾದ ಪೃಥ್ವಿ ,ಅಪ್ಪು, ತೇಜಸ್ಸು ,ವಾಯು , ಆಕಾಶ ಆಕಾಶಗಳನ್ನು ಒಂದೊಂದು ವಿಧದಲ್ಲಿ ಆಕಾರಗಳಲ್ಲಿ ಪೂಜಿಸಿ ಸಂಪನ್ನಗೊಳಿಸಿ, ಸಮೃದ್ಧಿಯ ಕಾಣುವ ನಾಡು ತುಳುನಾಡು. ಎಲ್ಲವೂ ಪ್ರಬುದ್ಧವಲ್ಲದಿದ್ದರೂ ಅವುಗಳಿಗೆ ಅದರದೇ ಅದ ಕಟ್ಟಲೆ, ಹಿನ್ನೆಲೆಗಳನ್ನು ಆನಾದಿ ಕಾಲದಿಂದ ಹಲವಾರು ತಲೆಮಾರುಗಳಿಂದ ಅಜ್ಜ ನೆಟ್ಟ ಆಲದ ಮರದಂತೆ ಜೋಪಾನವಾಗಿ ಗಂಟುಕಟ್ಟಿ ದಾಟಿಸುತ್ತಿದ್ದಾರೆ. ಸಮಾಜಕ್ಕೆ ಪ್ರೇರಣೆ ನೀಡುವವರು ಮಾಹಾಪುರುಷರು ಈಲೋಕ ಬಿಟ್ಟು ತೆರಳಿದೊಡನೆ ಹಿಂದಿರುವ ಜನರು ಅವರು ಹೇಳಿದ ಮಾರ್ಗದಲ್ಲಿ ನಡೆಯುತ್ತಾ ಅವರ ಜನ್ಮಸ್ಥಳ, ಮರಣಸ್ಥಳಗಳನ್ನೂ ಪೂಜಿಸಿ ಮೊದಲು ಸ್ಮರಣೆಯಾಗಿ ಕಾಲಾಂತರದಲ್ಲಿ ಭ್ರಮೆಯಾಗುತಿದೆ. ಇದಕ್ಕೆ ಉದಾಹರಣೆಯೆಂಬಂತೆ ವೀರ ಪುರುಷರುಗಳಾದ ಕೋಟಿ- ಚೆನ್ನಯ, ಆಗೋಲಿ ಮಂಜಣ್ಣ, ಕಾಂತಬಾರೆ- ಬುದಬಾರೆಯವರ ಸಂಧಿ ಪದಗಳು ,ಕಥೆಗಳು , ಗರೋಡಿಗಳು ಜನ ಮಾನಸದಲ್ಲಿ ಇಂದು ಜನಜನಿತವಾಗಿದೆ. ಇಲ್ಲಿನ ನಾಗಾರಾಧನೆ, ಭೂತರಾಧನೆ ಅದೆಷ್ಟೋ ಕಾಂಕ್ರೀಟುಕರಣದ ನಡುವೆಯು ಏಕರೆಯಷ್ಟು ನೆಲ ಖಾಲಿಯಾಗಿ ಉಳಿದು ಮಣ್ಣಿನ ಪರಿಮಳ ಉಳಿಸಲು ಸಾಧ್ಯವಾಗಿದೆ. ಪ್ರತಿಷ್ಠಿತ ವಿದ್ಯಾ ಸಂಸ್ಥೆ, ಆಸ್ಪತ್ರೆ, ಮಾಲ್ಗಳ ಅವರಣದೊಳಗೂ ನಾಗಾರಾಧನೆ, ಭೂತರಾಧನೆಯ ಗುಡಿಗಳನ್ನು  ಕಾಣಬಹುದು ಎಂದರೆ ಈ ತುಳುವರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಲೂ ಆ ಆರಾಧನೆಯೇ ಪ್ರೇರಣಾ ಜ್ಯೋತಿ ಎಂಬಂತೇ.....

                ಹೌದು ನಾನು ಕಂಡಂತೆ ಪುತ್ತೂರು ಸಮೀಪದ ಕುಂಟಿಕಾನ ಎಂಬಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರಬ್ಬರ್ ಸಸಿ ನೆಡುವ ಭರದಲ್ಲಿ ನೂರಾರು ಹೆಕ್ಟೇರ್ನಲ್ಲಿದ್ದ ಹಸಿರಿನ ಮೇಲೆ ಬುಲ್ಡೋಜ್ಹರ್ ಹರಿಸಿತ್ತು ಆದರೆ ಜನರ ನಂಬಿಕೆಯ ನಾಗಬನಗಳನ್ನು ಮಾತ್ರ ಯಂತ್ರಗಳು ಮುಟ್ಟಲಿಲ್ಲ . ಹೌದು, ಯಾವುದೋ ನಂಬಿಕೆಯ ಮೂಲದಿಂದ ಅರ್ಧ ಎಕರೆ ಕಾಡು ಪ್ರಸಾದ ರೂಪದಲ್ಲಿ ತನ್ನ ಇರುವಿಕೆಯನ್ನು "ನಾಗಬನ", "ದೇವರ ಕಾಡು"  ಎಂಬ ಸ್ಧಿತಿಯಲ್ಲಿ ಉಳಿಯುವಂತಾಯಿತು.

                 ತುಳುನಾಡ ದೈವರಾಧನೆಯ ಸುಸಂದರ್ಭದಲ್ಲಿ ದೈವ ಆಭಯ ಕೋಡುವುದೇ ಹಾಗೆ "ನಂಬಿನಕ್ಲೆಗ್ ಇಂಬು ಕೊರ್ಪೆ, ಪೇದಿ ಅಪ್ಪೆಗ್ ಸರಿಯಾದ್ , ತಾಂಕಿ ತಮ್ಮಲೆಗ್ ಸರಿಯಾದ್, ಸೂಜಿತ ಬೇರಿಯೇ ನೂಲು ಬತ್ತಿಲೇಕ ಪೆತ್ತದ ಬೇರಿಯೇ ಕಂಜಿ ಬತ್ತಿಲೇಕೋ , ಕೆಂಡತ ಬರ್ಸೋಗು ಕರ್ಬೋತ ಬೆಲಿಯಾತ್ ಕಾತ್ಹೊಂತ್ ಬರ್ಪೆ ನಮ್ಬೋನ್ಲೆ....  ನಮ್ಬೋನ್ಲೆ...  ನಮ್ಬೋನ್ಲೆ......    "(ನಂಬಿದವರಿಗೆ ರಕ್ಷಣೆ ಕೊಡುತ್ತೇನೆ, ಹೆತ್ತ ತಾಯಿಗೆ ಸಮನಾಗಿ , ಸಾಕಿದ ಮಾವನಿಗೆ ಸಮನಾಗಿ , ಸೂಜಿಯ ಹಿಂದೆ ನೂಲು ಬರುವಂತೆ, ದನದ ಹಿಂದೆ ಕರು ಬರುವಂತೆ, ಬೆಂಕಿಯ ಮಳೆಗೆ ಕಬ್ಬಿಣದ ಬೇಲಿಯಾಗಿ ರಕ್ಷಣೆ ಮಾಡುತ್ತೇನೆ ನನ್ನನ್ನು ನಂಬಿ) ಎಂದು... ನಂಬಿದವರ ರಕ್ಷಿಸಿಸುವ ಕೆಲಸ, ನಂಬಿಕೆ, ವಿಶ್ವಾಸದ ಪ್ರಶ್ನೆ ಬಂದಾಗ ಈ ದೈವ-ಭೂತಗಳಿಗೆ ಮೊದಲ ಪ್ರಾಶಸ್ತ್ಯ. ದೈವಗಳಿಗೆ ಪ್ರಕೃತಿ ಪೂಜಾಕರಾದ ನಾವು ಪ್ರಾಣಿರೂಪವಾಗಿ, ದೈವೀರೂಪವಾಗಿ, ಪುರಾಣರೂಪಗಳಲ್ಲಿ ದೈವಾರಾಧನೆ ಮಾಡುತ್ತಾ ಬಂದು ನಮ್ಮ ಮತ್ತು ದೇವರು ಇವುಗಳ ನಡುವೆ ರಾಯಭಾರಿಯಾಗಿ, ಸಂವಹನಕಾರರಾಗಿ ಸಮಾಜವನ್ನು ಸಮರ್ಥವಾಗಿ ನಿಯಂತ್ರಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿವೆ. ಭೂತಾರಾಧನೆ ಆಧ್ಯಾತ್ಮಿಕ ಶಕ್ತಿಯ ಆರಾಧನೆ ಅಗಿರಬಹುದು ಅವುಗಳೆಲ್ಲವೂ ನಿಮಿತ್ತ ಮಾತ್ರ ತುಳುವರ ದೃಷ್ಠಿಯಲ್ಲಿ ಅದು ದಿವ್ಯ ಸೃಷ್ಠಿಗಳು ಮಾನವ ಜೀವಿಗಳ ಶ್ರೇಷ್ಟತೆಯ ಪೂರ್ಣತೆಗೆ ಅರ್ಥಕೊಡುವ ಶಕ್ತಿಗಳು......

                ಇನ್ನೂ ನಮ್ಮ ಯಕ್ಷಗಾನ, ಬಯಲಾಟಗಳ ಕಡೆಗೆ ಹೊರಟರೆ ಅದರ ಬಗೆಗಿಟ್ಟಿರುವ ನಂಬಿಕೆ ಆಚಲ, ಧರ್ಮದಾಟ, ಸೇವೆದಾಟ, ಹೀಗೆ ಹಲವಾರು ಕಾರಣಗಳಿಂದ ಹಲವಾರು ಕ್ಷೇತ್ರ,  ಮೇಳಗಳು ಹುಟ್ಟಿ ಬೆಳೆದು ಪಸರಿಸುತ್ತಿದೆ. ಆಟ(ಯಕ್ಷಗಾನ)ದಲ್ಲಿ ಮಾನವರು ದೇವತೆಗಳಾಗಿ, ಗಣಗಳಾಗಿ , ರಾಕ್ಷಸರಾಗಿ ಮಾನವ ನಿಮಿತ್ತರೂ ದೇವ ದೇವಾತ್ಮಾ ಸಂಭೂತನಾಗುವುದು ಇಲ್ಲಿ(ತುಳುನಾಡಲ್ಲಿ) ಮಾತ್ರ ಕಾಣಬಹುದು. 
                ಶ್ರಾದ್ಧ ಕಾರ್ಯಕ್ರಮ, ಅಗೆಲು ಹಾಕುವುದು, ಕುಲೆಗಳಿಗೆ ಬಡಿಸುವುದು, ಗುರುಕಾರ್ಣವರಿಗೆ ಬಡಿಸುವುದು, ಹೀಗೆ ಇಲ್ಲಿ ಪ್ರತಿ ಮನೆ , ಮನ ಎಂಬಂತೆ ನಮ್ಮನ್ನು ಬಿಟ್ಟು ಯಾವುದೋ ಸ್ತಬ್ಧ ಸುಂದರ ಲೋಕಕ್ಕೆ ಮತ್ತೆ ಜೀವಿಸಲು, ವಿಹರಿಸಲು, ತೆರಳಿರುವ ಗುರುಹಿರಿಯರನ್ನು ನೆನಪಿಸಿಕೊಳ್ಳುವುದು ಮಾತ್ರ ನಿಜಕ್ಕೂ ಗುರುಹಿರಿಯರ ಬಗೆಗಿನ ಗೌರವ ಹೆಚ್ಚಿಸಿದೆ....ಇನ್ನೂ ವಿಜ್ಞಾನಕ್ಕೆ ಪುಷ್ಟಿ ನೀಡುವಂತೆ ಬಾಲೆ ಮತ್ತು ಮೂಗುಡು ಮೀನುಗಳನ್ನು , ಬಸಳೆ ಮತ್ತು ಹರಿವೆಯನ್ನು ಒಂದೇ ನೆಸಲೆಯಲ್ಲಿ ಹಾಕಿ ಬೇಯಿಸುವುದಿಲ್ಲ , ಬೇಯಿಸಿದರೆ ಪಾತ್ರೆಯಲ್ಲಿ ರಕ್ತ ಕಾಣುತ್ತದೆಯೆಂದು , ಮೂಲದಲ್ಲಿ ಇದೊಂದು ಅಜ್ಜಿ ಕತೆಯಂತೆ ಕಂಡರೂ ಅದು ಅಣ್ಣ ತಂಗಿಯ ಲೈಂಗಿಕ ಸಂಬಂಧದ ನಿಷೇಧದ ಕುರಿತಾಗಿದೆ. ರಾತ್ರಿ ತಿಮರೆ (ಒಂದೆಲಗ ) ಚಟ್ನಿ , ಬಾಳೆಕಾಯಿ ಪದಾರ್ಥ ತಿನ್ನುವುದಕ್ಕೆ , ಕತ್ತಲಾಗುತಿದ್ದಂತೆ ಬಟ್ಟೆ ಒಗೆಯುವುದು, ಬಟ್ಟೆ ಹೊಲಿಯುವುದು , ರಾತ್ರಿ ಉಗುರು ಕತ್ತರಿಸುವುದು ಹೀಗೆ ಹಲವಾರು ಕೆಲವು ಮಾನವನ ಅಂತರಿಕ ಹಾಗೂ ಬಾಹ್ಯ ಆರೋಗ್ಯದ ರಕ್ಷಣಾ ಕವಚಗಳಾಗಿ.... 

               ಇತ್ತಿಚೇಗೆ ರಾಜ್ಯದೆಲ್ಲೆಡೆ ಕರಾವಳಿಗರ ಬಗೆಗೆ ಇನ್ನೂ ಹೊತ್ತಿ ಉರಿದು ಗಾಳಿಯ ದೆಸೆಗೆ ಬೂದಿ ಹಾರುವಂತೆ ಮಡೆಸ್ನಾನ ಬಗೆಗಿನ ನಂಬಿಕೆ ವಿಮರ್ಶೆ ಮಾಡಿ ಹೊಲಸು ಬಾಯಿ ಮತ್ತು ಸಪ್ತವ್ಯಸನವಿರುವ ಜನ ನುಡಿಮುತ್ತು ಉದುರಿಸಿದ್ದು ಮಾತ್ರ ಖೇದಕರ....
              ಹೌದು ಇಂದಿನ ಆಧುನಿಕ ಭರಾಟೆಯಯಲ್ಲಿ ಸಂಸ್ಕøತಿ ಕಾಲದಿಂದ  ಕಾಲಕ್ಕೆ ಬೆಳೆದ ನಮ್ಮ ಜ್ಞಾನದ ದೆಸೆಯ ನೆಲೆಯಲ್ಲಿ ವಿಜ್ಞಾನಿ ಸುಜ್ಞಾನಿಯೆಂಬ ಸಹಜಪೂರಕ ಬದಲಾವಣೆ ಕಂಡು  ಆಚರಣೆ, ಅರಾಧನೆ, ಪಾಲನೆ, ನಂಬಿಕೆಗಳು ಒಬ್ಬ ಹಳ್ಳಿಯವನದ್ದು, ಅವು ಎಲ್ಲವೂ ಮೂಢತೆ, ಮೌಢ್ಯ ಎಂದು ಕರೆಯುತ್ತೇವೆ ಅದರ ಹಿಂದಿನ ಹಿನ್ನಲೆಯು ಭ್ರಮೆ ಎನ್ನುತ್ತೇವೆ. ಕೆಲವು ಕಡೆ ವಿಜ್ಞಾನದ ಭೌತವಿಜ್ಞಾನವೂ ಭ್ರಮೆಯ(Imagination) ಮೇಲೆ ನಿಂತಂತೆ ಕಣ್ಣಿಗೆ ಕಾಣದ ಎಲೆಕ್ಟ್ರಾನ್, ನ್ಯುಟ್ರೋನ್  ಅವು ಸುತ್ತುತ್ತವೆ, ತಿರುಗುತ್ತವೆ ಎಂದು ಅಂಗೀಕರಿಸುವ ನಾವು ಆಚರಣೆಗೆ ಬಂದರೆ ಕೀಳಾಗಿ ಕಾಣಲು ಈ ವಿಜ್ಞಾನದ ಕಣ್ಣು ಎಂದು ಹೇಳಬಹುದೆನೋ....! ವಿಜ್ಞಾನದ ಸಂಕೇತ, ಚಿಹ್ನೆ, ನೆರಳು, BIS,  ಮಾರ್ಕುಗಳಿಲ್ಲದಿದ್ದರೆ ಕೆಲವು ಅಸ್ತಿಕ-ನಾಸ್ತಿಕರು ಒಪ್ಪುವುದೇ ಇಲ್ಲ.. ಗೊಂದಲದಿಂದ ಬುದ್ಧಿಸ್ಥಿಮೀತವಿಲ್ಲದೇ ಕಂಡ ಪ್ರತಿಯೊಂದಕ್ಕೂ ಶಕುನ-ಅಪಶಕುನಗಳಂತೆ ವೈಜ್ಞಾನಿಕ ವಿವರಣೆ ನೀಡುತ್ತಾ ತಮ್ಮ ಚಾಪಲ್ಯ ತೀರಿಸುತ್ತಿರುವುದು ಮಾತ್ರ ನಂಬುತ್ತಿರುವ ನನ್ನಂತಹವರಿಗೆ ಸಣ್ಣ ಹೊಡೆತ ಮಾತ್ರ ಸತ್ಯ.

              ಒಂದಂತು ನಿಜ ಪ್ರಾಂಪಂಚಿಕ ನಾಗರಿಕತೆಗೆ ವಿರೋಧವಾಗಿ ಮಾತಾನಾಡಿ ಪ್ರಚಾರಗಿಟ್ಟಿಸುವ ದಿನಗಳಲ್ಲಿ ಈ ನಂಬಿಕೆಗಳ ಮೇಲೆ ನಿಂತ ಸ್ವರ್ಗ-ನರಕಗಳಿಂದಾಗಿ ಮಾನವ ದಾನವನಾಗುವುದನ್ನು ತಪ್ಪಿಸಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ನಿಮಗೂ ಗೊತ್ತು ವಿಜ್ಞಾನಸೃಷ್ಠಿಯ ಕನ್ನಡಿ ಕವಿ ಬಾಯಲ್ಲಿ ಅದು ಸತ್ಯ..!! ಅದು ಹೇಳುವುದೆಲ್ಲ ಸತ್ಯವೇ ಅದರೆ ಅದು ಸುಳ್ಳು.. ಅದು ನಮ್ಮ ಭ್ರಮೆ.. ಅದು ನೀಡುವುದು ಮಿಥ್ಯ ಬಿಂಬ ಅಂದರೆ ಉಲ್ಟಾಪಲ್ಟಾ ಬಿಂಬ ನಿಜ ಅದಾಗ್ಯೂ ಅದು ನಮ್ಮ ಮೊಗದ ಕುಳಿಗೆ ಕಾರಣವಾದ ಖುಷಿಯ ಸಂಗತಿ ತಿಳಿಸದು. ಕಣ್ಣೀರ ಕಂಡರೂ ಅದಕ್ಕೆ ಕಾರಣವಾದ ನೋವು ಕಾಣಿಸದು ಅದರಂತೆ ಈ ನಂಬಿಕೆ ಸಹ.....
                 ಆಚರಣೆ, ನಂಬಿಕೆಗಳನ್ನು ಮಾಡುವವರನ್ನು ಬುದ್ಧಿಹೀನರೂ ಮೌಢ್ಯರೂ ಎಂದು ಏಲ್ಲೆಲ್ಲೂ ಛೇಡಿಸಿ ಧಾರ್ಮಿಕಭಾವನೆಗಳಿಗೂ ಧಕ್ಕೆ ತರಲೂ ಗಾಂಧೀ ಯುಗದಲ್ಲಿ ಇವುಗಳ ಮೇಲೆ ಆದ ಪಾಶ್ಚಾತ್ಯರ ದಬ್ಬಾಳಿಕೆ ಏನೋ ಅದರ ನೆರಳು ಈಗಳು ಬೀಳುತಿರುವುದು ವಿಪರ್ಯಾಸ...!! ಬುದ್ಧಿಗೆ ನಿಲುಕದ ಕೆಲವು ಗುಣ ವಿಶೇಷಗಳಿಗೆ ವಿದ್ಯಾವಂತನೆಂಬ ನೆಲೆಯಲ್ಲಿ ಚಿಪ್ಪಿನೊಳಗೆ ತಪಸ್ಸಿಗೆ ಕುಳಿತ ಮೆದುಳಿನ ರೇಖಾಗೆರೆಗೆ ವೇಗ ಕೊಟ್ಟಂತೆ ಇಂದ್ರಿಯಲಾಲಸೆಯ ಪ್ರಪಂಚದಲ್ಲಿ ಇಂದ್ರಿಯಗಳನ್ನೇ ಕೊಂಕಿಸಿ ತರ್ಕಿಸಿ ತುರ್ಕಿಸಿ ವಿವರಣೆ ನೀಡುತಿರುವುದು ಧಾರ್ಮಿಕ ವೈರಾಗ್ಯದ ಕಡೆಗೆ ಸಾಗುತ್ತಿರುವ ಕುರುಹೋ ಏನೋ ಎಂಬಂತೆ ಭಾಸವಾಗುವುದರಲ್ಲಿ ತಪ್ಪೆನಿಲ್ಲ...ನಂಬಿಕೆಗಳು ನಂಬುವವರ ಮನೊಭೂಮಿಕೆಯ ಚೌಕಟ್ಟಿನೊಳಗೆ ಓಡಾಡುತ್ತಿರುತ್ತವೆ, ಮಿತಿಯಿಂದ ಚಿತ್ರಿಸಿ ಕಲ್ಪಿಸಿಕೊಳ್ಳುತ್ತದೆ, ನಂಬಿಕೆ ದುರ್ಬಲತೆಯ ಮನ ಹೊಕ್ಕುವುದು ಮಾತ್ರ ನಿಜ ಆತ್ಮವಿಶ್ವಾಸದ ಶಕ್ತಿ ಗುಳಿಗೆಯಾಗಿ ಪರಿಣಾಮಕಾರಿಯಾಗುವುದು ಕಾಲಸಹಜವಾಗಿ ಕಾಯಿ ಹಣ್ಣುವಷ್ಟು ನಿಜ. ಈ ನಂಬಿಕೆಯು ಚೌಕಟ್ಟಿನೊರಗೆ ಅಂದರೆ ಸೀಮಾ ಗಡಿಮೀರಿದರೆ ಅದು ಅಸ್ತಿಕತೆಯಿಂದ ನಾಸ್ತಿಕತೆಗೆ ಹೋಗುವ ದಾರಿಯಂತೆ...  "ಅತ್ತ ಇಲಿ ಇತ್ತ ಹುಲಿ" ಎಂಬಂತೆ ಇಬ್ಬದಿಯ ನೀತಿಯ ಬಗೆಗೆ ಕಗ್ಗದಲ್ಲಿ ಡಿ.ವಿ.ಜಿಯವರು
"ನಂಬದಿರ್ದನು ತಂದೆ,ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವುಬ್ಬಂದಿ ನೀನು ||
ಕಂಬದಿನೊ, ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||"
ಅಂದರೆ ದೈವವನ್ನು ನಂಬಿದವನು ಪ್ರಹ್ಲಾದ ,ಅದನ್ನು ನಂಬದವನು ಅವನ ತಂದೆ ಹಿರಣ್ಯ ಕಶ್ಯಪ . ಮಗನ ಭಕ್ತಿಯನ್ನು ತಂದೆ ಪರೀಕ್ಷಿಸುವ ಸಂದರ್ಭದಲ್ಲಿ ದೈವವೂ ನರಸಿಂಹನ ರೂಪದಲ್ಲಿ ಕಂಬವನ್ನು ಬಿರಿದುಕೊಂಡು ಹೊರಗೆ ಬಂದಿತ್ತು, ನಂಬಿದ್ದ ದೈವವನ್ನು ಕಂಡು ಪ್ರಹ್ಲಾದನಿಗೆ ಮುಕ್ತಿಯಾಯಿತು ಅದುವರೆಗೆ ನಂಬದಿದ್ದ ದೈವವನ್ನು ಆಗಅದು ತೀವ್ರ ಶ್ರದ್ಧೆ,  ಕಂಬದಲ್ಲಿ ಕಂಡು ಹಿರಣ್ಯ ಕಶ್ಯಪನಿಗೂ ಮುಕ್ತಿಯಾಯಿತು. ಅಸ್ತಿಕತೆಯಾಗಲಿ ನಾಸ್ತಿಕತೆಯಾಗಲಿ ಅಚಲ ನಂಬಿಕೆವುಳ್ಳದಾದರೆ ಅದು ಫಲ ಕೊಟ್ಟಿತೂ .. ಅರೆಮನಸಿನ ಮತ ನಿಷ್ಫಲ ಎಂಬುವುದು ಇದರ ಗೂಡರ್ಥ.  
              ಖಂಡಿತ, ನಂಬಿಕೆಗಳು ಮೂಡತೆಯಲ್ಲ ಒಂದಷ್ಟು ಹಿನ್ನಲೆ, ಇತಿಹಾಸ, ಉದ್ದೇಶ, ಸಾರ್ಥಕತೆ, ಶಾಂತಿ, ನೆಮ್ಮದಿಯ ವಿಚಾರ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪೂಜೆ, ಪುನಸ್ಕಾರ, ಆರಾಧನೆ, ಆಚರಣೆ ಮನಸ್ಸಿಗೆ - ಅಧ್ಯಾತ್ಮಕ್ಕೆ ಸಂಬಂಧಿಸಿದ ವಿಚಾರಗಳು. ವ್ಯಕ್ತಿಯ ಪರಿಪೂರ್ಣ ಸಮತೋಲಿತ ಆರೋಗ್ಯಕ್ಕೆ ದೇಹ ಮತ್ತು ಮಾನಸಿಕ ಅರೋಗ್ಯ ಅವಶ್ಯ ದೇಹದ ಆರೋಗ್ಯಕ್ಕೆ ವೈದ್ಯರ ಔಷಧಿ ಹೇಗೆ ಅವಶ್ಯವೋ  ಅದೇ ರೀತಿ ಮನಸ್ಸಿನ ಆರೋಗ್ಯದ ಸಂತುಲಿತಕ್ಕೆ ಮೇಲಿನವೆಲ್ಲಾ ಅವಶ್ಯ. ನಮ್ಮ ಅಪ್ರಬುದ್ಧ ಪೂರ್ವಾಗ್ರಹ ಪೀಡಿತ ಮನೋಧರ್ಮವೂ ಜಾನಪದ, ಅಧ್ಯಾತ್ಮಿಕ ಜಗತ್ತಿನ ಅಮೂಲ್ಯ ಸಂಗತಿಗಳನ್ನು ಟೀಕಿಸುತ್ತಾ, ಅಲ್ಲಗಳೆಯುತ್ತಾ, ಪ್ರಶ್ನಿಸುತ್ತಾ, ನಕಾರಾತ್ಮಕವಾಗಿ ಚಿಂತಿಸುತ್ತಾ, ನಿರಾಕರಿಸುತ್ತಾ ಹೋದರೆ ಯಾರ್ಯಾರಿಗೋ ನಷ್ಟವಲ್ಲ ಅದು ನಮ್ಮ ಸ್ವಂತ ನಷ್ಟ ಅಷ್ಟೇ...!!  ಮುಖಕ್ಕೆ ಈಟಿಯೇ ಚುಚ್ಚಿಸಿ ದೇಹ ದಂಡಿಸುವುದೆ ಆಗಿರಬಹುದು ಅದರೆ ಅದು ಪ್ರಸವವೇದನೆಯ ಸಂತೋಷ, ಶಾಂತಿಯನ್ನು ಅದರ ಅನುಭವಿಸಿರುವರಿಂದ ಪಡೆಯುವುದು ಸೂಕ್ತ. ಈ ನಂಬಿಕೆ ಸಾಪೇಕ್ಷ ಸ್ಥಿತಿಸ್ಥಾಪಕ(CONSTANT)ದಂತೆ, ನಮ್ಮ ಮನೆಯ ನೆಮ್ಮದಿ, ಹರಿಯುವ ನೀರಿನಲ್ಲಿ, ಚಲಿಸುವ ಗಾಳಿಯ ನೆಮ್ಮದಿಯಾಗಬೇಕಿಲ್ಲ ಪ್ರಕೃತಿಯ ಸ್ಥಿತಿ ಹೇಗಿದೆ ಎಂಬುವುದನ್ನು ಅನುಭವಗಳ ಮೂಲಕ, ನಂಬಿಕೆಗಳ ಮೂಲಕ ಒಪ್ಪಿಕೊಂಡು ಅದಕ್ಕನುಸಾರವಾಗಿ ಬದುಕಬೇಕಾಗುತ್ತದೆ ಎಲ್ಲಾವುದಕ್ಕೂ ನಂಬಿಕೆಯೇ ನಿರ್ದೇಶಕ ಎಂಬಂತೆ ..!!??.  ಈಚೆಗೆ ನಂಬಿಕೆ ವೈಯಕ್ತಿಕ ದ್ವೇಷ ಆಸೂಯೆಯಾಗಿ ಪರಿವರ್ತನೆಯಾಗುತಿರುವುದು ಖೇದಕರ.!! ಹಾಗೆ ನೋಡಿದರೆ ಎಲ್ಲರ ನಂಬಿಕೆಯು ಮೂಢವೆ... ಅದನ್ನು ಪ್ರಶ್ನಿಸುವ ಹಕ್ಕು ಇಲ್ಲ,  ಸ್ಧೆರ್ಯವೂ ಇಲ್ಲ??. ಬಲತ್ಕಾರದಿಂದ ಬಹಿರಂಗದ ಕತ್ತಲೆಯನ್ನು ಓಡಿಸಬಹುದು ಅಂತರಿಕ ಜಯ ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ. ಒಮ್ಮೆ ರಾಮಕೃಷ್ಣ ಪರಮಹಂಸರು ಶಿಷ್ಯ ನರೆಂದ್ರರಿಗೆ ಹೀಗೆ ಹೇಳುತ್ತಾರೆ " ವರ್ತಕ ಹೇಗೆ ರೂಪಾಯಿ ನೋಟುಗಳನ್ನು ತೆಗೆದುಕೊಳ್ಳುವಾಗ ಶಬ್ದ ಮಾಡಿ ತೆಗೆದುಕೊಳ್ಳುವನೋ ಹಾಗೆಯೇ ನಾನು ಹೇಳುವುದನ್ನೆಲ್ಲಾ ಒರೆ ಕಲ್ಲಿಗೆ ತಿಕ್ಕಿ ನೋಡಿ ತೆಗೆದುಕೋ ... " ಅವರಂತೆ ನಾವೂ ಸಹ ನಂಬಿಕೆಗಳನ್ನು ಒರೆ ಕಲ್ಲಿಗೆ ತಿಕ್ಕಿ ನಂಬಿಕೆಯ ಮೂಲವನ್ನು ಉಳಿಸೋಣ ನಮ್ಮ ಯಕ್ಷಗಾನ, ಭೂತಕೋಲ, ನಾಗಾರಾಧನೆಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿ ಪ್ರತಿನಿಧಿಸಿ  ನಮ್ಮನ್ನು ಪ್ರತಿಬಿಂಬಿಸುತ್ತಿವೆ ಇದು ನಮ್ಮ ಸಂಸ್ಕೃತಿಗೆ, ನಂಬುಗೆಗೆ ದೊರೆತ ಹಿರಿಮೆಯೂ ಹೌದು , ಗರಿಮೆಯೂ ಹೌದು.

            ಕಡೆಗೆ ಭಗವಂತ ನಮ್ಮ ಆಚರಣೆ ಮತ್ತು ವಿಧಿ ಅನುಷ್ಠಾನಗಳ ಬಗ್ಗೆ ಎಲ್ಲೂ, ಎಂದು ತಲೆಕೆಡಿಸುವುದಿಲ್ಲ.  ಆ  ಆಚರಣೆಯ ಹಿಂದಿನ ನಮ್ಮ ಹೃದಯ ಹಾಗೂ ಉದ್ದೇಶವನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಇತರರಿಗೆ ನೋವುಂಟು ಮಾಡುವ ಆಚರಣೆಯನ್ನು, ನಂಬಿಕೆಯನ್ನು  ತ್ಯಜಿಸೋಣ, ಭಾರತ ಮುಕುಟದಂತಿರುವ ಸಂಸ್ಕೃತಿ , ನಂಬಿಕೆಗಳನ್ನು ಉಳಿಸಿ ಬೆಳೆಸೋಣವಲ್ಲವೇ ಪ್ರಜ್ಞಾವಂತ ಜನರೇ.....ಏನಂತೀರಿ????..!!

(ಈ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು)
ಮಂಗಳೂರು ಆಕಾಶವಾಣಿಯ ಧ್ವನಿ ಕೇಳಲು ಇಲ್ಲಿ ಚಿಟಿಕೆ ಹೊಡೆಯಿರಿ
https://soundcloud.com/bharathesha-ab/a-short-talk-namma-nambikegalu



ಸಂತ ಜೋಸೆಫದ ನನ್ನ ನೆನಪುಗಳು.....!!!

           ಹಕ್ಕಿಗಳ ಚಿಲಿಪಿಲಿ ಕೇಳಿತು, ಬೆಳಕು ಹರಿಯಿತು, ಅಪ್ಪ-ಅಮ್ಮ ಅವರ ನಿತ್ಯ ಕರ್ಮಕ್ಕೆ ಹೊರಟರೆ, ಕುಳಿತು ಕಲಿಯುವ ಅಸ್ಥಾನಕ್ಕೆ ನಮ್ಮೀ ಪಯಣ ಸಾಗುತಿತ್ತು. ಹೊತ್ತಿಗೆ ಮತ್ತೆರಿದಂತೆ ಮಕರಂದ ಹೀರಲು ಬರುವ ಬಣ್ಣ ಬಣ್ಣದ ದುಂಬಿಗಳಂತೆ ನಗು ಮೊಗದಿಂದ ವಿದ್ಯಾ ವೃಂದಾವನಕ್ಕೆ ಮುತ್ತಿತು. ಸಮಯ 9:00 ಕರೆಗಂಟೆ ಮೊಳಗಿತು ಎಲ್ಲರೂ ತಮ್ಮ ಸ್ವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಕುಳಿತರೆ ಪ್ರೌಢತೆಯಿಂದ ಬಳಿತು ಪಕ್ವತೆಯೆಡೆಗೆ ಸಾಗುವ ಯೋಗಿಯಂತೆ ದಿಟ್ಟಿಸುತಿದ್ದಂತೆ ತುಳುನಾಡಿನ ಹೆಮ್ಮೆಯ ಹಿಮ್ಮೇಳದೊಂದಿಗೆ ಚೌಕಿಯಿಂದ ಒಂದೊಂದೇ ವೇಷಗಳ ರಂಗಪ್ರವೇಶ,
ಸಂತ ಜೋಸೆಪರ ತಾಂತ್ರಿಕ ಮಹಾ ವಿದ್ಯಾಲಯ ವಾಮಂಜೂರು ಮಂಗಳೂರು
St.Joseph Engineering College Vamanjoor Mangaluru.. 

 ಒಂದಷ್ಟು ಕಲರವವನ್ನುಂಟು ಮಾಡುವ ಮನಸ್ಸುಗಳು, ಪ್ರೇಕ್ಷಕರ ಕಡೆಯಿಂದ ಗದ್ದಲ ಅಲಿಖಿತ  ಯ ಆಜ್ಞೆ “BOSS, If you speak, I will cut your attendance, It’s sure..then I will teach you next year”  ಮತ್ತೆ ರಂಗದಲ್ಲಿ ಅತ್ತಿಂದಿತ್ತ ಓಡಾಟ ಇದು ಶ್ರೀರಂಗಭಟ್ಟರಾದರೆ, ಗಂಭೀರ ಹೆಜ್ಜೆ ನಗುಮೊಗದ ಪ್ರಾಂಶುಪಾಲರ  Design, ಹೌದು ಪಾಠ Design ಅದುದರಿಂದ ಕಿರು ಮೀಸೆ, ಗಡ್ಡಗಳಿಗೂ ಸ್ವಲ್ಪ Design ಮಾಡಿದರೆ, ಅವರನ್ನೆಲ್ಲ ಎದುರಿಗೆ ಕರೆದು ““Students should smart and well dressed, But how these guys look like…?”  ಪ್ರೇಕ್ಷಕರ ಕಡೆಯಿಂದ“Terrorists”ಎಂಬ ಧ್ವನಿಯೊಂದಿಗೆ ಮುಕ್ತಾಯ. ಕೆಲವೊಮ್ಮೆ ಪೂರ್ವದ ಗುರುಕುಲ ಪದ್ಧತಿಯು ಸವಿಯು ಮಾತುಬಲ್ಲವರಿಗೆ ಪ್ರಾಂಶುಪಾಲರ ತರಗತಿಯಲ್ಲಿ ಆಗುತ್ತಿದ್ದದ್ದು ಮಾತ್ರ ವಿಶೇಷ. ರಾಗ ತಾಳಬದ್ಧತೆಯೊಂದಿಗೆ ಪ್ರೋ. ಗಣಪತಿ ಭಟ್ ಅದು ಪಾಠ Vibration ಎಲ್ಲವೂ Vibrate, Pin drop silence ಅಂತಹ ಪಾಠ ಅಂತಹ ಮಾತು. ಮುಂದಿನದು Management, ತರಗತಿ Manage, ಆಗದಿದ್ದರೂ ಚರ್ಚೆ, ಕ್ವಿಜ್‍ಗಳಿಂದ Chaco P J Sirಡಿ ಮ್ಯಾನೆಜ್ ಮಾಡುತ್ತಿದ್ದದು ಮಾತ್ರ ನಿಜ. ಮತ್ತೆ ಯಕ್ಷಾಂಗಣದಲ್ಲಿ ಗದ್ಧಲ ಅರ್ಥಗಾರಿಕೆ ಮುಗಿಯುವುದರೊಳಗೆ ಸುಧೀರ್ ಸರ್‍ನ ಆಗಮನ ಸಣ್ಣ ಪ್ರತಿರೋಧನದ ಧ್ವನಿಗಳು ಕೇಳಿದರೆ ಶುರು ನಾದಸ್ವರ, ನುಡಿಮುತ್ತು, ಲೋಕವಿಚಾರ , ಜಾಣರಿಗೆ ಮಾತಿನ ಚಾಟಿಯೇಟಿನೊಂದಿಗೆ ಪಾಠ. ಹಿಂದಿನಿಂದ ನವಿಲು , ಸಿಂಹಗಳ ಭೋರ್ಗರೆತದ ಧ್ವನಿ, ರುಡಾಲ್ಫ್ ಸರ್‍ನ ನಗುವಿನಿಂದ ಆರಂಭವಾದ ಪಾಠ ಗಂಭೀರ ವದನದೆಡೆಗೆ ಒಂದಿಬ್ಬರು ಪ್ರೇಕ್ಷಕರಿಗೆ ಸಜೆ , ಜೈಲಿನೊಳಗೆ ಪ್ರಾಮಾಣ ಕರು ಬಂಧಿ, ಸಜೆಗೊಳಗಾದವರು ಹೊರನಡೆದು ಕಾಫಿ ಕೆಫೆಯಲ್ಲೋ, All is well ನಲ್ಲೋ , ಕಾಫಿಯ ಹಬೆ ಊದುತಿರುವರು. Raju Sir, Rolvin Sir, Anil Sir, Prashanth Sir, Pruthvi Sir...... ...... 
೨೦೦೯-೨೦೧೩ ಮೆಕ್ಯಾನಿಕಲ್ ಗೆಳೆಯರು, ಸ್ಪೋರ್ಟ್ಸ್ ದಿನಾಚರಣೆಯಂದು. 

           ಹೀಗೆ ಒಬ್ಬರ ಹಿಂದೆ ಮತ್ತೊಬ್ಬರು ಪೈಪೋಟಿಗಿಳಿದು ಬೇರೆ ಬೇರೆ ಭೂಷಣಗಳಿಂದ ಸಾಲು ಸಾಲು ಪ್ರವಚನ, ತರಗತಿಯಲ್ಲಿ ಕೆಲವು ರಾಷ್ಟ್ರಪಿತನ ಶಿಷ್ಯರಾದರೆ, ಮತ್ತೆ ಹಲವಾರು ಭೂಗತ ಜಗತ್ತಿನ ಸಹೋದರರು “ವಿಕಾಸ” “ವಿಕ್ರಮ”ಗಳು ತಮ್ಮ ಭಯಂಕರತೆಯಿಂದ ರಂಗದಲ್ಲಿ ಕರಿಹಲಗೆಯ ಮೇಲೆ ರೇಖೆಗಳ ಚಿತ್ತಾರ ಚಿತ್ರ ಬಿಡಿಸುತ್ತಿದ್ದ ಗೆಳೆಯನಿಗೆ ಸೈತಾನನಿಗೆ ಕಲ್ಲು ಹೊಡೆಯುವಂತೆ ಚಾಕ್, ಬರೆಯದ ಪೆನ್, ಯಾರದೋ ಪೆನ್ಸಿಲ್ ಗಳ ಸುರಿಮಳೆ. ಬಿಡುವಿನಲ್ಲಿ, ಕಡಲೆಕಾಯಿ ವಿರಾಮದಲ್ಲಿ ಪೇಪರ್ ಚೆಂಡಿನ ಕ್ರಿಕೆಟ್, ಸುಜೀತ್‍ನ ಟೇಬಲ್ ಟೆನಿಸ್, ಬಲೂನಿನ ರಾಕೆಟ್, CET , GATE  ಪರೀಕ್ಷೆಗಳ ಮರುದಿನ ಡೆಸ್ಕ್‍ಗೆ ಅಂಟಿಸಿದ್ದ ಕ್ರಮಸಂಖ್ಯೆ ಗೆಳೆಯನ ಉದ್ದ ಬಾಲ ಹೀಗೆ, ... ಹುಟ್ಟುಹಬ್ಬದ ದಿನದ ಆ ಮಾಲೆ ಪಟಾಕಿ ಸದ್ದಿನ ಗುದ್ದು ಮರುವರ್ಷದ ಆಚರಣೆಯವರೆಗೆ ಮರೆಯಾಲಾಗದು.. ಹೀಗೆ ಹಲವು, ಹಲವಾರು..... 
ವಿದ್ಯಾರ್ಥಿ ಗ್ರಂಥಾಲಯದ ಹತ್ತಿರ,. 

                ಒಂದು ಚಿಂತೆಯಂತು ಕಾಡುತಿದೆ Directorರ ಕಣ್ಣು ತಪ್ಪಿಸಿ ID card  ಹಾಕದೇ ಬಂದದ್ದು, ಗಡ್ಡ ಮೀಸೆ ಬಿಟ್ಟು ಪ್ರಾಂಶುಪಾಲರಿಗೆ ಬಗ್ಗಿ ಸಲಾಮ್ ಹೊಡೆದದ್ದು, HODಗೆ  Design Hand Book ಎಂದು ಅಂತಹುದೇ ಬೈಂಡ್ ಇರುವ ಬೇರೆ ಪುಸ್ತಕ ತೋರಿಸಿದ್ದು... ಇಂತಹ ರಸವತ್ತದ ಸನ್ನಿವೇಷಗಳನ್ನು ಬಹಳ ಮಿಸ್ ಮಾಡ್‍ಕೊತೆವೆಂತ.
                  ಮೆಕ್ಯಾನಿಕಲ್ ವಿದ್ಯಾರ್ಥಿಗಳ ಮೊದಲ ದಿನಚರಿಯೇ ಇಷ್ಟು..?? ಸುಮಾರು 60 ಮೆಟ್ಟಿಲು ಹತ್ತಿ ಮೂರನೇ ಮಹಡಿಯಲ್ಲಿ ಗಣಪನಿಗೆ ವಂದಿಸಿ ಪಕ್ಷಿನೋಟದ ಸಮೀಕ್ಷೆ , ಅಥವಾ ಸರ್ವೆ.. ಕೆಳಗಿನವರ ತಲೆ, ಜುಟ್ಟು, ಬ್ಯಾಗ್, ಅಂದ-ಚಂದ ಕಲರ್- ಕಲರ್ ಗಳ ಕಲರವ ಮಾತು,..??!! ಒಂದಂತು ನಿಜ ಪ್ರಕೃತಿಯ ಅಸಮತೋಲನದಂತೆ ತರಗತಿಯಲ್ಲಿ ಗಂಡು-ಹೆಣ್ಣುಗಳ ಅಣುಪಾತದಲ್ಲಿ ಬಾರಿ ಏರಿಳಿತ ಪ್ರತಿಶತ 97:3. ಬಂದ ಪ್ರತಿ ವೇಷಗಳು ತ್ಸುನಾಮಿಯಂತೆ ಬಂದು ಹೋದ ದಿನಗಳೇ ಹೆಚ್ಚು, ಪ್ರತಿದಿನವೂ ಅಲೆಗಳ ಅಬ್ಬರದ ಗದ್ದಲ ಕೇಳಿಸುತಿದ್ದದು ಮಾತ್ರ ಸತ್ಯ. ಇದರಿಂದಾಗಿ ಯಾಕೋ ಮೆಕ್ಯಾನಿಕಲ್ ಅಂದರೆ ಎಲ್ಲರಿಗೂ ಅಲರ್ಜಿ ಇರಬೇಕು ನನಗೂ ಉತ್ತರ ಸಿಕ್ಕಿಲ್ಲ ಉತ್ತರಿಸಲಾಗದ ಪ್ರಶ್ನೆಗಳ ಹಾಗೆ.....
೨೦೦೯-೨೦೧೩ ಮೆಕ್ಯಾನಿಕಲ್ ವಿಭಾಗ. 
2009-2013 Mechanical Batch

"ಸ್ವದೇಶಿ ಪೂಜ್ಯತೆ ರಾಜಾ, ವಿದ್ವಾನ್ ಸರ್ವತ್ರ ಪೂಜ್ತೆ" ಅಂದರೆ ರಾಜನಾದವನು ಕೇವಲ ತನ್ನ ರಾಜ್ಯದಲ್ಲಿ ಮಾತ್ರ ಪೂಜಿಸಲ್ಪಡುತ್ತಾನೆ ಆದರೆ ಯಾರಲ್ಲಿ ವಿದ್ಯೆ ಇದೆಯೋ ಅವನು ಎಲ್ಲೆಲ್ಲಿಯೂ ಪೂಜಿಸಲ್ಪಡುತ್ತಾನೆ ಎಂದು ಸುಭಾಷಿತ ವಿದ್ಯೆಯ ಮಹತ್ವವನ್ನು ಸಾರಿ ಹೇಳುತ್ತದೆ. ಸದ್ಗುಣ, ಸನ್ಮಾರ್ಗ, ಸತ್ ಚಾರಿತ್ರ್ಯದ ಸಂಸ್ಕಾರದೆಡೆಗೆ ಸಾಗುವ ರಾಜಮಾರ್ಗಕ್ಕೆ ಒಂದಷ್ಟು ಗೊಬ್ಬರ, ನೀರು ಸಿಕ್ಕರೆ ಗಿಡ ಮರವಾಗಿ ಉತ್ತಮವಾದ ಫಲ ಕೊಡುತ್ತದೆ, ಉಷ್ಣಕ್ಕೆ ಕಾದ ಕಬ್ಬಿಣ ಕರಗಿ ಬೇಕಾದ ಆಕಾರ ಪಡೆಯುತ್ತದೆ, ಅದೆಷ್ಟೋ ಉಳಿಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿಯ ರೂಪ ಪಡೆಯುತ್ತದೆ. ತುಕ್ಕು ಹಿಡಿದ ನಮ್ಮ ಸ್ಮೃತಿಯೊಳಗೆ  ಜ್ಞಾನದ ಪ್ರಕಾಶನವ ತುಂಬಿದ ನಮ್ಮೆಲ್ಲ ಗುರುಗಳಿಗೆ ನಮಿಸಿ, ನಮ್ಮ ಕಾಲೇಜು ಕಛೇರಿಯಲ್ಲಿ ವಿದ್ಯಾರ್ಥಿಗಳು ಸಿಹಿಗೆ ಮುತ್ತಿಕೊಂಡ ಇರುವೆಗಳಂತೆ ರೋಹಿತ್ ಸರ್ ನ್ನು ಸುತ್ತಿಕೊಂಡು ಮೇಲಿಂದ ಮೇಲೆ ಪ್ರಶ್ನೆ ಬೀಸುತ್ತಾ  ಲಗುಬಗೆಯಿಂದ ಸದಾನಂದರಂತೆ ನಗು ಮೊಗ್ಗೆಯಿಂದಲೇ ಸೇವೆ ಮಾಡುವ ಸರ್ ನ್ನು ನೆನಪಿಸುತ್ತಾ, ಮುಂದಿನ ಸುತ್ತಾಟದ ಮೇಳಕ್ಕೆ ಸಿದ್ದತೆ ಭರ್ಜರಿಯಾಗಿ ಸಾಗಿದೆ, ಬೇಸರದಿಂದ ಆಕಸ್ಮಿಕವಾಗಿ ಅಪರಿಚಿತ ಮುಖ ಇಂದು ಪರಿಚಯವಾಗಿ ಸ್ನೇಹವಾಗಿ ಅನಿವಾರ್ಯಕ್ಕಾಗಿ ಬೇರ್ಪಡಬೇಕಾಗಿದೆ. ಎಲ್ಲರನ್ನೂ ಹರಸುತ್ತಾ, ಕಿರಿಯರಿಗೆ ಶುಭ ಹಾರೈಸುತ್ತಾ,..
"ಸಾಧಿಸುವ ಮನವೊಂದಿದ್ದರೆ, 
ದಾರಿ ತೋರ್ಪ ದೀಪವಿರುವುದಿಲ್ಲಿ,
ಬಾನೆತ್ತರದ ಕನಸ ಕಂಡು,
ಅಡಿಗಲ್ಲು ಮೇಲೈಸಿ ನಿಂತಿದೆ
ಮುಂದಡಿಯಿಟ್ಟ ತಾರೆಗಳಂತೆ ತಲೆಯೆತ್ತಿ ಸಲಾಂ... 
ST. JOSEPH ಗೆ ಅರ್ಪಿಸಿ
ಗುರುಗಳಿಗೆ ಸಮರ್ಪಿಸಿ..... ಮಂಗಳಂ ಶುಭ ಮಂಗಳಂ 
ಈ ವರ್ಷದ ಆಟಕ್ಕೆ ಇಲ್ಲಿಗೆ ವಿರಾಮ. . . .

- ಭರತೇಶ ಎ ಬಿ
ಅಂತಿಮ ಮೆಕ್ಯಾನಿಕಲ್

St. Joseph Engineering College Vamanjooru ಕೊಂಡಿಗೆ ಇಲ್ಲಿ ಚಿಟಿಕೆ ಹೊಡೆಯಿರಿ : http://www.sjec.ac.in/

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...