Sunday, November 21, 2021

ತುಳುವರ ದೀಪಾವಳಿ

 ಪರ್ಬೊ ಹೆಸರು ಹೇಳುವಂತೆ ತುಳುನಾಡಿನಲ್ಲಿ ಹಬ್ಬ ಎಂಬುವುದಾಗಿದೆ. ತುಡರ್ ಪರ್ಬೊ‌ವೆಂದು, ಬೆಳಕಿನ ಹಬ್ಬ ದೀಪಾವಳಿಯನ್ನು ತುಳುವರು ಕರೆಯುತ್ತಾರೆ. ಬೇಸಾಯ ಸಂಬಂಧಿ ಅಚರಣೆಯಾದ ದೀಪಾವಳಿ ಮೂರು ದಿನಗಳ ಕಾಲ ನಡೆಯುತ್ತದೆ. ದೀಪಾವಳಿ ಆಚರಣೆಯಲ್ಲಿ ಸಮುದಾಯದಿಂದ ಸಮುದಾಯಕ್ಕೆ ವ್ಯತ್ಯಾಸವಿರುತ್ತದೆ. ತುಳುನಾಡಿನಲ್ಲಿ ದುರಂತ  ವೀರರನ್ನು ಅರಾಧಿಸುವುದನ್ನು ಗರೋಡಿ, ಚಾವಡಿ, ದೈವಸ್ಥಾನಗಳಲ್ಲಿ ನೋಡಬಹುದು. ಜನಪದದಲ್ಲಿ ದುರಂತ ನಾಯಕರನ್ನು ವೈಭವಿಕರೀಸಿ ನೋಡುವುದು ವಿಶೇಷವಾದ ಒಂದು ತಂತ್ರವಾಗಿದೆ.  ಶಿಷ್ಟದ ಬಲಿಂದ್ರ ಅಥವಾ ಪುರಾಣದ ಬಲಿ ಚಕ್ರವರ್ತಿಗಿಂತ ಭಿನ್ನವಾದ ಕೃಷಿ ಸಂಸ್ಕೃತಿಯ 'ಬೊಲಿಯೇಂದ್ರ'ನೇ ತುಳು ಮತ್ತು ಅರೆಭಾಷೆ ಪ್ರದೇಶದಲ್ಲಿ ಬರುವ 'ಪರ್ಬೊ'  ಅಥವಾ ಹಬ್ಬ ಎಂಬ ನೆಲೆಯಲ್ಲಿರುವ ದೀಪಾವಳಿ ಅಚರಣೆಯಾಗಿದೆ.  ಪೂರ್ವದಲ್ಲಿ ಈ ನಾಡನ್ನು ಆಳಿದ ಜನಪ್ರಿಯ ಅರಸ ಬಲೀಂದ್ರನನ್ನು ಬರಮಾಡಿಕೊಂಡು ಆತನಿಗೆ ಬಲಿ ಸಮರ್ಪಿಸಿ "ಪೊಲಿ" ಹರಕೆ, ಹಾರೈಕೆಗಳನ್ನು ಪಡೆಯುವ ಸಂದರ್ಭವಾಗಿದೆ. ಇಲ್ಲಿ "ದೀಪ" ಪ್ರಧಾನ ಪಾತ್ರವಹಿಸುತ್ತದೆ, ಪ್ರಕೃತಿ ಸಹಜ ಅಮಾವಾಸ್ಯೆಯ ಕತ್ತಲಲ್ಲಿ ಜ್ಯೋತಿ ಬೆಳಗಿಸಿ ಆಚರಿಸುವ ಹಬ್ಬವೇ "ತುಡರ್ ಪರ್ಬೊ"ವಾಗಿದೆ. ಇದೇ ಬಲಿಯ ಬರುವಿಕೆಯ ಆಚರಣೆ ಕೇರಳ ರಾಜ್ಯದಲ್ಲಿ "ಓಣಂ"  ಸಮಯದಲ್ಲಿ ನೋಡಬಹುದು.



ಕೃಷಿ ಎಲ್ಲಿ ಜೀವನಾಧಾರವೊ ಅಲ್ಲಿ ಈ “ಪೊಲಿ” ಇರುತ್ತದೆ.  ಎಂದರೆ ಇದು ಸಮೃದ್ಧಿಯ ಸಂಕೇತವಾಗಿರುತ್ತದೆ. ಈ ನಾಡಿನಲ್ಲಿ ಕೃಷಿ ಮಾಡುತ್ತಾ ಬೇಸಾಯ ಮಾಡುತ್ತಾ ಭೂಮಿಯ ಒಡೆಯನಾದ ಬಲೀಂದ್ರ ಇಲ್ಲಿ ಪೂಜಾರ್ಹನಾಗುತ್ತಾನೆ. ವರ್ಷದಲೊಮ್ಮೆ ತುಳುನಾಡಿಗೆ ಬಂದು ಹೋಗುವ ಬಲೀಂದ್ರ ಆರಾಧನೆಯಲ್ಲಿ ಗುರುತಿಸಲ್ಪಡುತ್ತಾನೆ. ಕೃಷಿಯ ಪರಿಶ್ರಮದ ಫಲವು (ಬುಳೆ ಬಾಗ್ಯ) ಗದ್ದೆಯಿಂದ ಮನೆಯಂಗಳಕ್ಕೆ, ಅಲ್ಲಿಂದ ಮನೆಯ ಚಾವಡಿ ಸೇರಿ ಮನೆ - ಮನ ತುಂಬುವ ಕಾಲ. ತೆನೆಗೂಡುವ, ತುಂಬುವ, ಉಕ್ಕುವ, ಅರಳುವ, ತುಳುಕುವ ಚೈತನ್ಯ ಸ್ವರೂಪಿಯಾಗಿದೆ. ಈ ಪೊಲಿ ಪದವು ಹೊಲದಿಂದ ಬರುವ ಉತ್ಪನ್ನದಿಂದಾಗಿ ಪೊಲಿ<ಪೊಲ<ಹೊಲದಿಂದ ಬಂದಿರಬಹುದು. “ಪೊಲ ಹಬ್ಬ” ವೆಂಬ ಕೃಷಿ ಸಂಬಂಧಿ ಆಚರಣೆ ಮಹಾರಾಷ್ಟ್ರ, ಛತ್ತಿಸ್‌ಗಢ ಮತ್ತು ಸುತ್ತಮುತ್ತಲ್ಲಿನ ರಾಜ್ಯಗಳಲ್ಲಿ ಶ್ರಾವಣ ತಿಂಗಳ ಅಮಾವಾಸ್ಯೆಯಂದು ಮಾಡುತ್ತಾರೆ. 


ಇಲ್ಲಿ ಭತ್ತ ಸಂಸ್ಕೃತಿಯನ್ನು ಪ್ರಧಾನವಾಗಿಟ್ಟುಕೊಂಡು ನಡೆಯುವ "ಪುದ್ವಾರ್", "ಹೊಸ್ತು"(ಹೊಸ ಅಕ್ಕಿ ಊಟ ಮಾಡುವ ಪದ್ಧತಿ) "ಪೊಲಿ"ಯನ್ನು ಕರೆಯುವುದು, ಅವಲಕ್ಕಿ ಬಡಿಸುವುದು, ಅವಲಕ್ಕಿಯನ್ನೇ ಪ್ರಸಾದವೆಂದು ನೀಡುವುದು, ಗಣಪತಿಗೆ ಇಡುವುದು(ವಿಘ್ನ ಬರದಂತೆ ಗಣಪತಿಯನ್ನು ಸ್ತುತಿಸುವ ಕ್ರಮ), ಅವಲಕ್ಕಿಯನ್ನೇ  "ಪೂವರಿ"ಯಾಗಿ ಬಳಸುವುದು. ಎಲ್ಲವೂ ಭತ್ತ, ಅಕ್ಕಿ ಮತ್ತು ಅದರಿಂದ ಬರುವ ಖಾದ್ಯ ಉತ್ಪನ್ನಗಳಾದ ಹೊದುಲು, ಹುರಿಯಕ್ಕಿ, ಅವಲಕ್ಕಿಗಳು ಇಲ್ಲಿ ನಡೆಯುವ ಹಲವಾರು ಅರಾಧನಾ ಮತ್ತು ಆಚರಣಾತ್ಮಕ  ಕ್ರಿಯಾಚರಣೆಯಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. 


ತುಳುನಾಡಿನ ದೀಪಾವಳಿಯು  ಇಲ್ಲಿನ ಜಾನಪದೀಯ ನೆಲೆಯ ಜೀವನಾರ್ತನ ಆಚರಣೆಯಲ್ಲಿ ಒಂದಾದ ಸಾವಿನ ಪ್ರತೀಕವೂ ಪ್ರತಿರೂಪವೂ ಎಂದು ಹೇಳಬಹುದು. ದೀಪಾವಳಿ ಶುರುವಾಗುವುದು ''ಮೀಪುನ ಪರ್ಬೊ''ದಿಂದ. ಇದು ಸ್ನಾನ ಮಾಡುವ ಹಬ್ಬ. ಮನೆ ಮಂದಿಯೆಲ್ಲ ಎಣ್ಣೆ ಆಭ್ಯಂಜನ ಮಾಡಿ, ಮನೆಯ ಸ್ನಾನದ "ಮಂಡೆ"ಯನ್ನು ಶೃಂಗಾರ ಮಾಡಿ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಮರುದಿನ ಹಾಲೆ ಮರ(Alstonia Scholari)ದ ಕಬರು ಇರುವ ಎರಡು ಕೊಂಬೆಗಳನ್ನು ನೆಲದಲ್ಲಿ ನೆಟ್ಟು ಅದಕ್ಕೆ ಅಟ್ಟೆ(ತಲೆ) ಮರವೆಂದು ತಲೆಯ ರೂಪವನ್ನು ಪೊಂಗಾರೆ ಮರ(Erythrina stricta)ದಿಂದ ಮಾಡುತ್ತಾರೆ.  ಈ ಹಾಲೆ ಮರ ಮತ್ತು ರಾಮಪತ್ರೆ ಎರಡು ಮರಗಳು ಮೃದು ಮರಗಳು ಮತ್ತು ಹಾಲು ಬರುವ ಮರಗಳಾಗಿವೆ. ಹಾಲು ಬರುವುದು ಸಮೃದ್ಧಿಯ ಸಂಕೇತ ಎಂದು ಜನಪದರ ನಂಬಿಕೆ. ಹೀಗೆ ಮರ ಹಾಕುವುದನ್ನು 'ಬೊಲಿಯೇಂದ್ರ ಮರ ಹಾಕುವುದು' ಎಂದು ಕರೆಯುತ್ತಾರೆ. ಮೂರನೆ ದಿನ "ಬೊಲಿಯೇಂದ್ರ" ಮರವನ್ನು ಕಾಡು ಹೂವು, ಅಡಿಕೆ ಹಿಂಗಾರ, ಬಾಳೆಯ ಪಂಬೆ(ಬಾಳೆ ದಿಂಡಿನ ಹೊರಗಿನ ಹಸಿ ಕವಚ)ಗಳನ್ನು ಗರಗಸದಂತೆ ಕೊಯ್ದು ಕಟ್ಟಿ ಶೃಂಗಾರ ಮಾಡುತ್ತಾರೆ. ಮತ್ತೆ ಬಲಿಯನ್ನು ಕರೆದು ಪ್ರಾರ್ಥಿಸುವ ಕ್ರಮವಿದೆ. ಇದಕ್ಕೆ ''ಬೊಲಿಯೇಂದ್ರನ್ ಲೆಪ್ಪುನ'' ಅಥವಾ ''ಬೊಲಿಯೇಂದ್ರನ್ ಅಳುನ'' ಎಂದು ಕರೆಯುತ್ತಾರೆ. ಬೆಳೆ ಬೆಳೆದ ಗದ್ದೆಗೆ - ಕೋಣ , ಎತ್ತು, ದನಕರುಗಳಿಂದ ತುಂಬಿದ ಹಟ್ಟಿಗೆ - ಕೃಷಿ ಸಹಾಯ ಉಪಕರಣಗಳಿಗೆ - ಧಾನ್ಯರಾಶಿಗೆ ದೀಪ ತೋರಿಸಿ 'ಪೊಲಿ' ಕರೆಯುವುದು.  ತುಳಸಿಕಟ್ಟೆಗೆ ತುಡಾರ್(ಸೊಡರು) ತೋರಿಸಿ, ಬಳಿಕ ಮನೆಯ ಬಾವಿ, ನಾಗಬನ ಇದ್ದರೆ ನಾಗ ಬನಕ್ಕೂ 'ತುಡಾರ್' ತೋರಿಸುವ ಸಂಪ್ರದಾಯವಿದೆ. ಬೊಲಿಯೇಂದ್ರ ಪಾರ್ದನದಲ್ಲಿ 

ಕರ್ಗಲ್ ಕಾಯನಗಾ, ಬೋರ್ಗಲ್ ಪೂ ಪೋನಗಾ, ಜಾಲ್ ಪಾದೆ ಆನಗ, ಪುಚ್ಚೆಗ್‌ ಕೊಂಬು ಬನ್ನಗ...(ಕಪ್ಪುಕಲ್ಲು ಕಾಯಿ ಅನಗ, ಬೊಲ್ಲುಗಲ್ಲ್ ಹೂವು ಆದಾಗ, ಮನೆಯಂಗಳ ಪಾದೆ ಕಲ್ಲು ಅದಾಗ, ಬೆಕ್ಕಿಗೆ ಕೊಂಬು ಬರುವಾಗ..) ಎಂದು ಸಾಗುವ ಪಾಡ್ದನ, ಜಗತ್ತಿನಲ್ಲಿ ಸಾಮಾನ್ಯರಿಗೆ ಆಗದ ಷರತ್ತುಗಳನನ್ನು ಹೇಳುತ್ತಾ ಅಲ್ಲಿಯವರೆಗೆ ನಮಗೆಲ್ಲರಿಗೂ ಪೊಲಿ ಸಮೃದ್ಧಿಯನ್ನು ನೀಡಬೇಕು ಎಂದು ಬೇಡಿಕೊಂಡು “ಕೂ... ಕೂ...” ಎಂದು ನಮ್ಮವ ಬೊಲಿಯೇಂದ್ರ ಬಾ ಎಂದು ಕರೆಯುತ್ತಾರೆ. ಮರುದಿನ ಬಲಿಯೇಂದ್ರನನ್ನು ನೀರಿನ ಬದಿಯಲ್ಲಿ ಇಟ್ಟು ಬರುವುದು. ಇಲ್ಲಿ ತುಳುನಾಡಿನ ವ್ಯಕ್ತಿಯೊಬ್ಬ ಸತ್ತಾಗ ಮಾಡುವ ಕೆಲವು ಕ್ರಿಯಾಚರಣೆಗಳ ಸಾಮೀಪ್ಯವಿದೆ. ಸಾವು ಅದ ನಂತರ ಶವಕ್ಕೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ, ಬಿಳಿ ಬಟ್ಟೆಯಿಂದ ಶೃಂಗಾರಮಾಡಲಾಗುತ್ತದೆ. ಈ ರೀತಿ ಕ್ರಮದ ಹೋಲಿಕೆ ಮಾನವ ರೂಪದಂತೆ ಕಾಣುವ ಬೊಲಿಯೇಂದ್ರ ಮರದದಲ್ಲಿ ಕಾಣಬಹುದು. 



ತಂಬಿಲ ಅಥವಾ ಸಂಬಿಲ ಎಂದು ಕಳೆದು ಹೋದ ಹಿರಿಯರನ್ನು ಗುರು ಕಾರ್ನೂರುರೆಂದು ನೆನೆಸುವುದು ಪ್ರಾರ್ಥಿಸುವುದು ತುಳುನಾಡು/ ಅರೆಭಾಷೆ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಇಂತಹುದೇ ಕ್ರಮ ಪರ್ಬೊ ಸಂಬಿಲ ಅಥವಾ ದೀಪಾವಳಿ ಸಂಬಿಲ ಎಂಬ ನೆಲೆಯಲ್ಲಿ ದೀಪಾವಳಿಯಂದು ಮಾಡುತ್ತಾರೆ. ಕುಟುಂಬದ ಹಿರಿಯರೊಂದಿಗೆ, ದೈವಗಳ ಆರಾಧನೆಗೂ ದೀಪಾವಳಿಯಲ್ಲಿ ವಿಶೇಷ ಮಹತ್ವವಿದೆ. ಮನೆಯ ಆವರಣದಲ್ಲೇ ಇರುವ ದೈವದ ಗುಡಿಯನ್ನು ಸ್ವಚ್ಛ ಮಾಡಿ, ಅಲಂಕಾರ ಮಾಡಿ, ದೀಪ ಬೆಳಗಿ, “ಪನಿಯಾರ” ಕೊಟ್ಟು ಆರಾಧಿಸುವ ಜನಪದ ಪದ್ಧತಿ ಇದೆ.  ಇದು ದೇವಸ್ಥಾನಗಳಲ್ಲಿ ವೈದಿಕ ಕ್ರಿಯೆಗಳೊಂದಿಗೆ ಮತ್ತು ಮನೆ ಮತ್ತು ದೈವಸ್ಥಾನಗಳಲ್ಲಿ ಅಸುರ ಕ್ರಿಯೆಯೊಂದಿಗೆ ನಡೆಯುತ್ತದೆ. 


ಸೈತ್ತಿನಕುಲೆನ ಪರ್ಬೊವೆಂದು ಅಚರಿಸುವ ದೀಪಾವಳಿ ಈ ಅನ್ವರ್ಥ ನಾಮ ಬರಲು ಆ ವರ್ಷದಲ್ಲಿ ಮರಣ ಹೊಂದಿರುವ ವ್ಯಕ್ತಿಗಳಿಗೆ ಬಜಿಲ್ ಪಾಡುನ/ ಅವುಲು ಹಾಕುವುದು/ಅವಲಕ್ಕಿ ಹಾಕುವ ಕ್ರಮವಿದೆ. ಇದು ಒಬ್ಬ ವ್ಯಕ್ತಿ ಸತ್ತ ನಂತರ ಅವನಿಗೆ ಆ ವರ್ಷದ ತುಳು/ಅರೆಭಾಷೆ ಕ್ಯಾಲಂಡರಿನ ಕಡೆಯ ಕಾರ್ಯಕ್ರಮವಾಗಿದೆ.  ಮರಣ ಹೊಂದಿದ ಮಹಿಳೆಗೆ ದೀಪಾವಳಿ ಅಮಾವಾಸ್ಯೆಯಂದು ಮತ್ತು ಮರಣ ಹೊಂದಿದ ಪುರುಷರಿಗೆ ದೀಪಾವಳಿ ಪಾಡ್ಯದಂದು ಮಾಡುತ್ತಾರೆ. ಅವರು ತೊಟ್ಟ ಬಟ್ಟೆ, ಬಳಸುತ್ತಿದ್ದ ಬಳೆ, ಕರಿಮಣಿ, ಅವರ ಇಷ್ಟದ ವಸ್ತು ಇತ್ಯಾದಿಗಳನ್ನು ಪೆಟ್ಟಿಗೆಯಿಂದ ಹೊರ ತೆಗೆದು ಒಣಗಿಸಿ ಮತ್ತೆ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಲಾಗುತ್ತದೆ. ಹಾಗಾಗಿ ಕರಾವಳಿಯಲ್ಲಿ ಪೂರ್ವಿಕರನ್ನು ಸ್ಮರಿಸುವ ಹಬ್ಬ ಈ ದೀಪಾವಳಿಯಾಗಿದೆ.


ಅಮಾವಾಸ್ಯೆಯಂದು ದೀಪಾವಳಿ ಹಬ್ಬವಾದರೆ ಮುಂದಿನ ಹುಣ್ಣಿಮೆಗೆ ಕೊಡಿ ಪರ್ಬೊ ಬರುತ್ತದೆ. ಇದು ದೀಪಾವಳಿ ಕಳೆದು 16ನೇ ದಿನಕ್ಕೆ ಅಗುತ್ತದೆ. ಕೊಡಿ ಪರ್ಬೊ ಅಂದರೆ ದೀಪಾವಳಿಯ ಕೊನೆ ಎಂಬ ತುಳು ಅರ್ಥ ಕೊಡುತ್ತದೆ. ಕೊಡಿ ಪರ್ಬೊದಲ್ಲಿ ದೀಪಾವಳಿಯ ಪ್ರತಿರೂಪದ ಕ್ರಮಾಚರಣೆಗಳು ಇರುತ್ತದೆ. ದೀಪಾವಳಿಯ ದಿನಗಳ ಸಮಯದಲ್ಲಿ ಬಂದ ಸೂತಕದಂತಹ ನಿಷೇಧಗಳು ಅಥವಾ  ಅನಿವಾರ್ಯ ಕಾರಣಗಳಿಂದ ನಡೆಸಲಾಗದಿದ್ದಾಗ ಮಾಡುತ್ತಾರೆ. ಇದು ಮೇಲ್ನೋಟಕ್ಕೆ ತುಳು/ ಅರೆಭಾಷೆ ಪ್ರದೇಶದಲ್ಲಿ  ಮರಣ ಹೊಂದಿದ ನಂತರ 16ನೇ ದಿನ ನಡೆಸುವ ಕ್ರಮಗಳಂತೆ ಕಂಡುಬರುತ್ತದೆ. ಜಾನಪದೀಯ ತುಳುವರ ದೀಪಾವಳಿ ಮರಣ ಹೊಂದಿದ ಬೊಲಿಯೇಂದ್ರನ ಅಚರಣೆ ವಿಶಿಷ್ಟವಾಗಿದೆ. 


ಇವನ್ನೆಲ್ಲ ಕಂಡಾಗ ಬಲಿ ಚಕ್ರವರ್ತಿಯು ಕೃಷಿಕನಾಗಿದ್ದ, ಭೂಮಿಯ ಒಡೆಯನಾಗಿದ್ದ, ಬೇಸಾಯವು ಆತನ ಪ್ರಮುಖ ವೃತ್ತಿಯಾಗಿರಬಹುದು ಎಂದೆನಿಸುತ್ತದೆ. ಗೋವು, ಕೃಷಿ ಮತ್ತು ಭೂಮಿಯ ಜೊತೆ ಆತನ ಕಥೆಯು ತಳಕು ಹಾಕಿಕೊಂಡಂತಿದೆ. ಈ ಕಾರಣದಿಂದಲೇ ತುಳುನಾಡಿನಲ್ಲಿ ಬಲೀಂದ್ರನನ್ನು “ಭೂಮಿಪುತ್ರ”ನೆಂದು ಕರೆಯುತ್ತಾರೆ. ಬಲಿಪಾಡ್ಯಮಿಯಂದು ನಡೆಯುವ ಎಲ್ಲಾ ಆಚರಣೆಗಳು ಒಂದಲ್ಲ ಒಂದು ರೀತಿಯಲ್ಲಿ ಕೃಷಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ದೀಪಾವಳಿಯ ಮೂರು ದಿನ ಕಾಲ ಹಬ್ಬದ ಸಂಭ್ರಮದಲ್ಲಿ ತುಳುವರು ನೊಗ, ನೇಗಿಲು, ಹಾರೆ, ಪಿಕ್ಕಾಸು ಮುಂತಾದ ಕೃಷಿ ಸಾಮಗ್ರಿಗಳನ್ನು ಕೆಲಸಕ್ಕೆ ಬಳಸಲಾರರು. ಭೂ ಒಡೆಯನನ್ನು ಪ್ರತಿ ವರ್ಷ ಪ್ರೀತಿಯಿಂದ ಕರೆಸಿಕೊಳ್ಳುವ ದೀಪಾವಳಿ ತುಳುನಾಡು ಮತ್ತು ಅರೆಭಾಷೆ ಪ್ರದೇಶದಲ್ಲಿ ಸತ್ತವರೂ ಸಂಭ್ರಮಿಸುವ 'ಜನಪದ ದೀಪಾವಳಿʼ. ಇಂದು ಬತ್ತ ಬೇಸಾಯವಿಲ್ಲದ ನೆಲದಲ್ಲಿ ಆ ಕಾರಣಕ್ಕಾಗಿಯೇ ಹುಟ್ಟಿಕೊಂಡ ಹಬ್ಬಗಳ ಸ್ವರೂಪದಲ್ಲಿ ವ್ಯತ್ಯಾಸಗಳೊಂದಿಗೆ ಆಚರಣೆ ಅರಾಧನೆಗಳನ್ನು ತುಳುವರು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದ್ದಾರೆ. 

- ಭರತೇಶ ಅಲಸಂಡೆಮಜಲು

ಅರೆಭಾಷೆ ಪದ ಪದಾರ್ಥ

ಮಾನವ ತನ್ನ ಭಾವನೆ, ಆಲೋಚನೆ, ವಿಚಾರಗಳನ್ನು ಮತ್ತೊಬ್ಬರಿಗೆ ತಿಳಿಸಲು ರೂಢಿಸಿಕೊಂಡಿರುವ ಹಲವು ಮಾಧ್ಯಮಗಳಲ್ಲಿ ಭಾಷೆ ಮುಖ್ಯವಾದದ್ದು.  ಇದು ಮಾನವನನ್ನು ಪ್ರಾಣಿ ಜಗತ್ತಿನಿಂದ ಬೇರ್ಪಡಿಸಿ ತೋರಿಸಲು ಇರುವ ಪ್ರಮುಖ ಸಾಧನವಾಗಿದೆ. ಭಾಷೆಯನ್ನು ಮನುಷ್ಯ ಮೂಲತಃ ಅನುಕರಣೆಯಿಂದ, ಸನ್ನೆಗಳಿಂದ, ನಾಲಗೆಯ ರಚನೆಯ ರೂಪದಿಂದ ಒಲಿಸಿಕೊಂಡಿದ್ದಾನೆ. ಇವೆಲ್ಲದರಿಂದ ಭಾಷೆಯೆಂಬುವುದು ಒಂದು ವಿಶೇಷ ಪ್ರಯೋಗ.  ಒಂದೊಂದು ಅಕ್ಷರವನ್ನು ಜೋಡಿಸುವ ಪದವು ಅರ್ಥವಾತ್ತಾದ ವಾಕ್ಯವಾಗುತ್ತದೆ.  ಇಂತಹ ವಾಕ್ಯಗಳಲ್ಲಿ ಹಲವು ಮಾತುಕತೆಗಳಿರುತ್ತವೆ.   

ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ.  ಅವುಗಳಲ್ಲಿ ನಮ್ಮ ಅರೆಭಾಷೆಯೂ ಒಂದು.   ಸುಮಾರು 600- 700 ವರ್ಷಗಳ ಇತಿಹಾಸವಿರುವ ಅರೆಭಾಷೆ, ಇಂದು ಸಮುದಾಯದ ಭಾಷೆಯಿಂದ ಪರಿಸರದ ಭಾಷೆಯಾಗಿ ಪ್ರದೇಶದ ಜನರ ಭಾಷೆಯಾಗುತ್ತಿದೆ. ಭಾಷೆಯ ಶಬ್ದ ಭಂಡಾರದಲ್ಲಿ ಬರುವ ಪದಗಳ ಕನಿಷ್ಠತಮ ಘಟಕಗಳನ್ನು ಬಿಡಿಸಿ ಒಡೆದು ನೋಡಿದಾಗ, ಮಾತಿನ ಅರ್ಥ, ಪದಗಳು ಬಂದು ಸೇರುವ ಬಗೆ, ಅದರ ಉಚ್ಚಾರದ ಒಳಮರ್ಮವನ್ನು ತಿಳಿಯಬಹುದು.  ಭಾಷೆಯೊಂದರ ಪದಗಳು ಸ್ಪೋಟಿಸುವುದು ಆ ಭಾಷೆಯ  ಜೀವಂತಿಕೆ ಮತ್ತು ಸೌಂದರ್ಯದ ಕುರುಹಾಗಿದೆ.  ಇಂತಹದ್ದೇ ರಚನೆಗಳು ಮಾತನಾಡುವ, ಕೇಳಿಸಿಕೊಳ್ಳುವ ಭಾಷೆಯಾದ ಅರೆಭಾಷೆಯಲ್ಲಿದೆ.  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಚನೆಯಾದ ನಂತರ ಬರಹದ ರೂಪವನ್ನು ಕಾಣುತ್ತಿದೆ.  ಚಲನಶೀಲವಾದ ಅರೆಭಾಷೆ ತನ್ನದೇ ಪ್ರಾದೇಶಿಕ ಅಸ್ಮಿತೆಯನ್ನು ಆಚರಣೆ ಅರಾಧನೆಗಳಿಂದ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ವಿಧಿ-ನಿಷೇಧಗಳನ್ನು, ಕಟ್ಟುಪಾಡುಗಳನ್ನು ಭಾಷೆಯೊಂದಿಗೆ ಪದಕಟ್ಟುತ್ತಾ, ಪದ ಒಡೆಯುತ್ತಾ, ಹಾಡುಗಳನ್ನು ಜೋಡಿಸುತ್ತಾ ಅನ್ಯಭಾಷೆಯ ಪದಗಳ ಜೊತೆ ನೆಂಟಸ್ತಿಕೆ ಮಾಡುತ್ತಾ  ಬಂದಿದೆ.  ಅಂತಹ ಪದಗಳ ಹರಿವಿನಲ್ಲಿ ಹಲವು ಶಬ್ದಗಳು ಹಿಂದಿನಂತೆ ಉಳಿದು ಕೆಲವು ಮಾರ್ಪಾಡುಗೊಂಡು ಮತ್ತೆ ಕೆಲವು ಮರೆತು, ಬಳಸದೇ ಕಳೆದು ಹೋಗಿರಬಹುದು.  ಅರೆಭಾಷೆಯ ಮೇಲೆ ಹಳೆ ಕನ್ನಡ, ತುಳು, ಮಲಯಾಲಂ ಮೊದಲಾದ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದು.  ಇಂತಹ ಪ್ರಭಾವವು ಭಾಷಾವ್ಯತ್ಯಾಸ, ಧ್ವನಿವ್ಯತ್ಯಾಸ, ಭಾಷಾ ಸ್ವೀಕರಣ, ಸೌಲಭ್ಯಾಕಾಂಕ್ಷೆಯ ಮೂಲಕ ಅರೆಭಾಷೆಯಲ್ಲೂ ವೈವಿಧ್ಯವಿದ್ದು ಇಲ್ಲಿ ಕೆಲವು ಅರೆಭಾಷೆ ಪದಗಳ ಅರ್ಥವನ್ನು ವಿಶ್ಲೇಷಿಸೋಣ.


ಹಂಞ ಇದು ಅರೆಭಾಷೆಯ ವಿಶೇಷ ಶಬ್ದ. ಹಂಞ, ಹಞ್ಞ  ಎಂದರೆ ಸ್ವಲ್ಪ, ಕಡಿಮೆ, ಅಲ್ಪ ಎಂಬ ಪದವು ಸಂದರ್ಭೋಚಿತ ಅರ್ಥ ಕೊಡುತ್ತದೆ. ಹಂಞ, ಘನ ರೂಪ ಮತ್ತೆ ದೂರ ಅಳೆಯುವ ಮಾಪನವಾಗಿದೆ ಎಂದು ಹೇಳಬಹುದು.  ಹಂಞ ದೂರ,  ಹಂಞ ಜನಗ, ಹೀಗೆ ದ್ರಾವಿಡ ಭಾಷೆಯ ವೈಶಿಷ್ಟ್ಯವು ಅರೆಭಾಷೆಯಲ್ಲೂ ಅನುನಾಸಿಕದಿಂದ ಕೊನೆಗೊಳ್ಳುವ ಮತ್ತು ಮಧ್ಯದಲ್ಲಿ ಬರುವ ಶಬ್ದಗಳು ಇವೆ. ಅನುನಾಸಿಕ ವ್ಯಂಜನ  'ಙ' ಮತ್ತು 'ಞ' ಗಳು ಅರೆ ಭಾಷೆಯಲ್ಲಿ ಧ್ವನಿಮಾಗಳಾಗಿಯೇ ಉಳಿದಿವೆ.   ಮಂಙ, ಕುಂಞ ಇತ್ಯಾದಿ.  ಈ ಪದಗಳಲ್ಲಿ ಅನುನಾಸಿಕ ದ್ವಿತ್ವ ರೂಪವೂ ಇದೆ. ಪಾಣಿನೀಯ ಸೂತ್ರದ ಪ್ರಕಾರ ಪ್ರತೀ ವರ್ಗದ ಕೊನೆಯಲ್ಲಿ ಬರುವ ವ್ಯಂಜನಾನುನಾಸಿಕಗಳನ್ನೇ ಆಯಾ ವರ್ಗದ ಅಕ್ಷರಗಳ ಜೊತೆ ಉಪಯೋಗಿಸಬೇಕು, ಸ್ವರಾನುನಾಸಿಕವನ್ನಲ್ಲ  ಎಂಬುವುದು ತರ್ಕ. ಉದಾಹರಣೆಗೆ ಮಙ್ಙಣೆ, ಅಙ್ಙಣ, ಹಞ್ಞ ಇತ್ಯಾದಿ.  ಹಳೆಗನ್ನಡದ ಹಲವು ಪದಗಳು ಅರೆಭಾಷೆಯಲ್ಲಿ ಮೂಲ ರೂಪವನ್ನು ಉಳಿಸಿಕೊಂಡು ಹಾಗೆಯೇ ಜನಪದರ ಮಾತುಗಳಲ್ಲಿ ಬಳಕೆಯಾಗುತ್ತಿದೆ.  ಜೊತೆಗೆ  ವ್ಯಂಜನಗಳಲ್ಲಿ ಇವತ್ತಿಗೂ ಅನುನಾಸಿಕಗಳು ಉಳಿದು ಕೊಂಡಿರುವುದು ಕೂಡಾ ವಿಶೇಷವೇ ಆಗಿದೆ. ಉದಾ: ಬೇಂಕೆ, ನೀಂಡ್,  ಮಂಕಣೆ ಇತ್ಯಾದಿ.  ಹೀಗೆ ಇದು ಅರೆಭಾಷೆ ಮತ್ತು ಹಳೆಗನ್ನಡದ ನಂಟನ್ನು ವಿವರಿಸುತ್ತದೆ.  ಮಂಙ, ಹಂಞ ಇತ್ಯಾದಿ ಪದಗಳಲ್ಲಿ  ಅನುಸ್ವಾರಗಳ ಬಳಕೆಯಿದ್ದು, ಮಂಙ ಪದವನ್ನು ಮಙವೆಂದು ಬರೆದರೂ ಓದಬಹುದು. 

ಹನೀಸ್, ಒಸಿಯ, ಒಸಿ, ಹನಿಯ, ಚೂರು ಶಬ್ದಗಳೆಲ್ಲ ಅರೆಭಾಷೆಯಲ್ಲಿ ಸ್ವಲ್ಪ, ಕಮ್ಮಿ, ಸಾಕು ಎನ್ನುವ ಅರ್ಥವನ್ನು ಕೊಡುತ್ತದೆ.  ಇವುಗಳನ್ನು ಪರಿಮಾನ ಮಾಪನವಾಗಿ ಬಳಸುತ್ತಾರೆ. ಇಲ್ಲಿ ಪದಗಳನ್ನು ಬಳಸುವ ಸಂದರ್ಭವು ದ್ರವ, ಘನ ವಸ್ತುಗಳನ್ನು‌ ಬೇಕು, ಸಾಕು ಎಂಬ ಸಂದರ್ಭದಲ್ಲಿ ಮತ್ತು ದೂರ ಹತ್ತಿರವೆಂಬ ದರ್ಶಕವನ್ನು ತಿಳಿಸುವ ಸಂದರ್ಭವಾಗಿ ಬಳಕೆಯಾಗುತ್ತದೆ.


ʼಹನಿʼ ದ್ರಾವಿಡ ಪದವಾಗಿದ್ದು ಹನಿ, ಹನಿಸ್, ಹನಿಯ ಕ್ರಿಯಾಪದವಾಗಿ ಬಳಕೆಯಾಗುತ್ತದೆ. ಮೆಲ್ನೋಟಕ್ಕೆ ಇದು uncountable nounsಗಳ ತರಹ ಜನರ ಬಾಯಲ್ಲಿ ಬಳಕೆಯಾಗು‌ತ್ತಿದೆ. ಹನಿಸ್ ನಿದ್ದೆ, ಹನಿ ಹನ್ಕುದು. ಉತ್ತಮ ಪುರುಷದಲ್ಲಿ "ನಂಗೆ ಹನಿಯ ಸಂದಿಕಾ",  "ಆಂಬ್ರ ಹನೀಸ್ ಬೊಳ್ಳ ಅವುಟ್ಟು"  ಅದರೆ ʼಹನಿಸ್ʼ ಕ್ರಿಯಾವಾಚಕವಾಗಿ ಬರುವುದಿಲ್ಲ ಆದರೂ  ಬಳಕೆಯಲ್ಲಿದೆ.  

ಹನಿ, ಹನಿಯ, ಹನಿಸ್‌ ದ್ರವ್ಯ ಮತ್ತು ಅನ್‌ಕೌಂಟೆಬಲ್‌ ಬಗೆಗೆ ತಿಳಿಸುವಾಗ ಬಳಸುವ ವ್ಯತ್ಯಾಸವನ್ನು  ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಅದರೆ ಸಾಮಾನ್ಯರ ಮಾತಿನಲ್ಲಿ ಇವೆರಡೂ ಒಂದೇ ಎನ್ನುವ ನೆಲೆಯಲ್ಲಿ ಬಳಕೆಯಾಗುತ್ತದೆ ಜೊತೆಗೆ ಪ್ರಾದೇಶೀಕ ಭಿನ್ನಾಂಶದ ವಾದವೂ ಇದೆ. 


ಗೂಡೆ ಎಂಬ ಈ ಪದಕ್ಕೆ ʼಪ್ರಾಯಕ್ಕೆ ಬಂದ ಹೆಣ್ಣುʼ ಎಂಬ ಅರ್ಥ ಇದೆ.  ಕನ್ನಡ ಭಾಷೆಯಲ್ಲಿ ಸಮಾನ ಅರ್ಥವಿಲ್ಲದಿದ್ದರೂ ಹೆಣ್ಣು ಮಕ್ಕಳೇ ಪ್ರಧಾನವಾಗಿ ಆಡುವ ಕಣ್ಣಾಮುಚ್ಚಾಲೆ ಆಟದಲ್ಲಿ “ಕಣ್ಣಾಮುಚ್ಚೆ ಕಾಡೇ ಕೂಡೆ/ಗೂಡೆ!” ಎಂಬ ಪದ ಬರುತ್ತದೆ.  ಜನಪದರ ರೂಢಿಯಲ್ಲಿ ‘ಜಂಗಮನಿಗೆ ಜೋಳಿಗೆ ತಪ್ಪಿಲ್ಲ, ಕೊರಮನಿಗೆ ಗೂಡೆ ತಪ್ಪಿಲ್ಲ’ ಎಂಬ ಮಾತು ಬರುತ್ತದೆ.  ಇದು ಜಂಗಮನಿಗೆ ಭಿಕ್ಷೆ ಬೇಡುವುದು ತಪ್ಪುವುದಿಲ್ಲ, ಕೊರಮ(ಕೊರವರ)ರ ಕುಲ ಕಸುಬು ಅಗಿರುವ ಬುಟ್ಟಿ ಹೆಣೆಯುವುದು ತಪ್ಪುವುದಿಲ್ಲ ಎಂದಾಗುತ್ತದೆ. ತುಳು ಭಾಷೆಯಲ್ಲೂ ʼಗೂಡೆʼ ಪದ ಪ್ರಯೋಗವಿದೆ.  ತರಗೆಲೆ ತುಂಬಿಸುವ ದೊಡ್ಡ ಬುಟ್ಟಿಯಂತಹ ರಚನೆ ಎಂಬ ಅರ್ಥ ತುಳು ಡಿಕ್ಷನರಿಯಲ್ಲಿದೆ. ಬುಟ್ಟಿ ಮತ್ತು ಹೆಣ್ಣು ಇಲ್ಲಿ ಪ್ರಧಾನವಾಗಿರುವುದನ್ನು ಗಮನಿಸಬಹುದು. ಹಿಂದಿನ ಕಾಲದಲ್ಲಿ ಮನೆಯಲ್ಲೇ ಇದ್ದು ಕೆಲಸ ಮಾಡುವವಳು, ಒಳ್ಳೆಯದು- ಕೆಟ್ಟದು, ಕಷ್ಟ-ನಷ್ಟಗಳನ್ನು ತನ್ನೊಡಳಲಿ ಬುಟ್ಟಿಯಂತೆ ಬಚ್ಚಿಕೊಂಡು ಬದುಕುವವಳು ಎಂಬ ಗೂಢಾರ್ಥವನ್ನು ನೀಡಬಲ್ಲುದು. “ಗೂಡೆಗಳಿಗೆ ಎದೆ ಬಾಕನ ನೆಲ ಕಾಂಬಲೆ” ಎಂಬ ಅರೆಭಾಷೆ ಗಾದೆ ಪ್ರಾಯಕ್ಕೆ ಬಂದ ಹೆಣ್ಣಿಗೆ ನೆಲ ಕಾಣುವುದಿಲ್ಲ  ಅಂದರೆ ಅವಳ ಗತ್ತು ಗೈರತ್ತುಗಳನ್ನು ತಿಳಿಸುತ್ತದೆ.


ಬೆಸ್ತವಾರ ಅರೆಭಾಷೆಯಲ್ಲಿ ಗುರುವಾರಕ್ಕೆ ʼಬೇಸ್ತವಾರʼ ಅಂತ ಕರೆಯುತ್ತಾರೆ.  ಬೇಸ್ತವಾರ ಇದು ಬೃಹಸ್ಪತಿವಾರದ ಗ್ರಾಮ್ಯ ರೂಪವಾಗಿದೆ. ಬುಡುಬುಡಿಕೆಯವರ ಭವಿಷ್ಯದ ಮಾತುಗಳಲ್ಲಿ “ಮಂಗಳವಾರ ಮುಖಕ್ಷೌರ ಮಾಡಬೇಡ ಬೇಸ್ತವಾರ ಹೊಸಬಟ್ಟೆ ಹಾಕಬೇಡ, ಭಾನುವಾರ ಪ್ರಯಾಣ ಮಾಡಬೇಡ” ಎಂಬ ಮಾತು ಬರುತ್ತದೆ.. ಮಂಡ್ಯದಲ್ಲಿ ಮಾತಾನಾಡುವ ಕನ್ನಡದಲ್ಲೂ ಬೇಸ್ತಾರ, ಅಯ್ತಾರ ಬಳಕೆಯಿದೆ.  “ಮುಂದ್ನ ಎಂಟತ್ತು ಜಿನ ಇನ್ಯಾವ ಇಸೇಸವೂ ಇಲ್ದೆ ಕಳೀತು. ಒಂದು ಬೇಸ್ತವಾರ ಸಂತೇಲಿ ಸಿಕ್ದ ಅಡವಿಯಪ್ಪ ಲಕ್ಕನ್ನ ಹೊಳೆ ಅತ್ರ ಕರಕಂಡೋಗಿ ಕುಂಡರಿಸಿಕೊಂಡು ಗುಟ್ಟಾಗಿ ಮಾತಾಡಿದೊ” ಈ ರೀತಿ ಶ್ರೀ ಚದುರಂಗರು ಬರೆದ ವೈಶಾಖ ಕಾದಂಬರಿಯಲ್ಲಿ ಬರುತ್ತದೆ.  ʼಬೆಸ್ತʼ ಇದಕ್ಕೆ ಮೀನು ಹಿಡಿಯುವವನು, ಬೆಸೆದವ  ಕೆಲಸಮಾಡುವವನು, ಕೆಲಸಕ್ಕೆ ಕರೆಯಬೇಕಾದವನು ಎಂಬ ಅರ್ಥವಿದೆ ಎಂದು ಇಗೋ ಕನ್ನಡದಲ್ಲಿ ಪ್ರೊ ಜಿ. ವೆಂಕಟಸುಬ್ಬಯ್ಯನವರು ವಿವರಿಸುತ್ತಾರೆ. ಬೆಸ್ತ, ಬೆಸೆಯುವವರಿಗೆ ಮತ್ತು ಗುರುವಾರದ ಸಂಬಂಧ ಕಲ್ಪಿಸುವುದು ಕಷ್ಟ ಸಾಧ್ಯ.


ಕುರೆ ಎಂದರೆ ಅರೆಭಾಷೆಯ ವಿಶೇಷ ಅರ್ಥದಲ್ಲಿ ಮಂಗ ಎಂಬ ಅರ್ಥ ಕೊಡುತ್ತದೆ. ವಿವಿಧಾರ್ಥದಲ್ಲಿ ಇದು ಜಿಪುಣತನ, ಕೊರೆದುಹೋಗು, ಕಡಿಮೆ ಎಂಬ ಅರ್ಥ ಕೊಡುತ್ತದೆ. ‌ ಶ್ರೀ ವೆಂಕಟರಾಜ ಪುಂಚಿತ್ತಾಯರು ಸಂಗ್ರಹಿಸಿದ ತುಳು ಶ್ರೀ ಭಾಗವತದಲ್ಲಿ‌ ಈ ರೀತಿಯ ಉಲ್ಲೇಖವಿದೆ. “ಕುರೆ ವರ್ತಿತಿ ವರ್ತಕೊಮಾಶ್ಚರ್ಯೋ ಶುಭೊ ವರ್ಪಿ ನಿಮಿತ್ತೂ" ಅಂದರೆ ಶುಭವುಂಟಾಗುವುದರ ಕಾರಣದಿಂದ ಮಂಗನು ನಡೆದುಕೊಂಡ ವರ್ತನೆ ಆಶ್ಚರ್ಯಕರವಾದುದು ಎಂಬುವುದಾಗಿದೆ. ʼಕೊರೆಂಙ್ʼ ಅಂದರೆ ಮಂಗ ಎಂದು ತುಳು ಭಾಷೆಯಲ್ಲಿ ಕರೆಯುತ್ತಾರೆ. ಇದು ಹೆಚ್ಚಾಗಿ ಬೈಗುಳ ಪದವಾಗಿ ಬಳಕೆಯಾಗುತ್ತದೆ. ಇದನ್ನು ಗಮನಿಸುವಾಗ ದ್ರಾವಿಡ ಪದವಾಗಿರಬಹುದು.  ʼದೊರೆ ಮರ್ಜಿ ಕುರೆ ಬುದ್ಧಿ ಎಂಬ ಗಾದೆ ಮಾತು ರಾಜನ ದೌಲತ್ತು ಇದ್ದರೂ ಬುದ್ಧಿ ಮಾತ್ರ ಮಂಗನಾದಗಿದೆ.


ಪೊಗ್ಗು ತಿಂಗ ಅರೆಭಾಷೆಯ ಮೊದಲ ತಿಂಗಳು. ಇದು ಸೌರಮಾನದ ಯುಗಾದಿಯಿಂದ ಆರಂಭವಾಗುತ್ತದೆ. ತುಳುವಿನಲ್ಲಿ ತುಳುವರ ತಿಂಗಳಂತೆ ಪಗ್ಗು ಪ್ರಯೋಗವಿದೆ.  ಅದರೆ ಅದರ ಮೂಲ ʼಹಂಚುʼ ಅರ್ಥ ಕೊಡುವ  “ಪಾಗು”ವಿನಿಂದ ಹುಟ್ಟಿರಬಹುದೆಂದು ವಿದ್ವಾಂಸರಾದ ಕಬ್ಬಿನಾಲೆ ವಸಂತ ಭಾರದ್ವಾಜರು ತಿಳಿಸುತ್ತಾರೆ.  “ಪೊಗ್ಗು” ತುಳುವಿಗೆ ಅನ್ವಯಿಸುದಾದರೆ ʼನುಗ್ಗುʼ ಎಂಬ ಅರ್ಥವನ್ನು ಕೊಡುತ್ತದೆ.  ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ ಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನನ್ನು ಕಾಣುವ ನಕ್ಷತ್ರವನ್ನು 'ಮಹಾನಕ್ಷತ್ರ' ಎಂದು ಕರೆಯಲಾಗುತ್ತದೆ.  ಒಂದು ರಾಶಿಯನ್ನು ಪ್ರವೇಶಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ.  ಆ ದಾಟುವ ಸಮಯವನ್ನು 'ಸಂಕ್ರಮಣ' ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನುಗ್ಗುವ ಮೊದಲ ತಿಂಗಳಿಗೆ ಪೊಗ್ಗು, ಪಗ್ಗು ರೂಪ ಧರಿಸಿದೆ. ತಮಿಳು ಮಲಯಾಲಂನಲ್ಲಿ ಪೊಕು, ಕನ್ನಡದಲ್ಲಿ ಪೊಗು, ಹೊಗು, ಹುಗ್ಗು ಅರ್ಥವನ್ನು ಕಾಣಬಹುದು. ಭಾಷಾ ವಿಜ್ಞಾನದ ಪ್ರಕಾರ ಧ್ವನಿ ಬದಲಾವಣೆಯಲ್ಲಿ ಕೆಲವು ಖಚಿತ ಧ್ವನಿಗಳು ಖಚಿತ ರೀತಿಯಲ್ಲಿ ಬದಲಾಗುತ್ತಾ ಹೋಗುವ ರೀತಿಯಾಗಿದೆ.   ಇಲ್ಲಿ ಹಕಾರವೂ >ಪಕಾರಕ್ಕೆ ಬದಲಾಗಿದೆ. ಹುಗ್ಗು>ಪೊಗ್ಗು ಎಂದು ಊಹಿಸಬಹುದು.  ಜೊತೆಗೆ ಅರೆಭಾಷೆಯಲ್ಲಿ ಬಹಳಷ್ಟು ಶಬ್ಧಗಳ ಅರಂಭಿಕ ಸ್ವರ ಅಕ್ಷರ ʼಅʼಕಾರವು ʼಒʼಕಾರ ಅಗಿರುತ್ತದೆ.  ತಪ್ಪು>ತೊಪ್ಪು, ಮದುವೆ>ಮೊದುವೆ, ಪಗ್ಗು>ಪೊಗ್ಗು.   


ಚಾಂಪ “ಚಾಮಿ ಅಪ್ಪ”’ ಎನ್ನುವ ವಿಸ್ತೃತ ಪದವನ್ನು ಮೊಟಕುಗೊಳಿಸಿ ಶ್ರಮದ ಮಿತವ್ಯಯಾಸಕ್ತಿಯಿಂದ ‘ಚಾಂಪ’ ಎಂಬುದಾಗಿ ಪರಿವರ್ತಿಸಿಕೊಳ್ಳಲಾಗಿದೆ.  ಸ್ವಾಮಿಯಪ್ಪ>ಚಾಮಿ ಅಪ್ಪ> ಚಾಂಪ.  ಧ್ವನಿವ್ಯತ್ಯಾಸದ ನಿಯಮಾವಳಿಗಳಲ್ಲಿ  ‘ಸೌಲಭ್ಯಾಕಾಂಕ್ಷೆ’ಗೆ ಇದೊಂದು ಮಾದರಿಯಾಗಿದೆ.  ಇದು ತಾತ ಅಥವಾ ಅಜ್ಜ ಎನ್ನುವ ಅರ್ಥವನ್ನು ಕೊಡುತ್ತದೆ. ʼಚಾಮಿʼ ಎಂದರೆ ಸ್ವಾಮಿ,  ದೇವರು ಎಂದು ಬಾಲ ಭಾಷೆಯಲ್ಲಿ ಕರೆಯುಲಾಗುತ್ತದೆ. ತುಳು ಭಾಷೆಯಲ್ಲೂ ಇದೇ ಅರ್ಥವಿದೆ.  ʼಚಾಮಿʼ ಮಾಡುವುದು(ನಮಸ್ಕಾರ ಮಾಡುವುದು), ʼಚಾಮಿʼ ಜೇಜಾ(ದೇವರಿಗೆ ಕೈ ಮುಗಿಯುವುದು, ದೇವರು) ಪ್ರಯೋಗವಿದೆ.  ಇಲ್ಲಿ ಹಿರಿಯರನ್ನು ದೇವರ ಸಮಾನ ಎಂಬ ನೆಲೆಯಲ್ಲಿ ʼಚಾಂಪʼ ಎಂಬ ರೂಪದಲ್ಲಿ ನೋಡಬಹುದು. 

ಹೀಗೆ ಅರೆಭಾಷೆ ಮಾತನಾಡುವ ಪ್ರದೇಶದ ಕೆಲವು ಪದಗಳಲ್ಲಿ ಅದರ ನಿಷ್ಪತ್ತಿಯ ಬಗೆಗೆ  ಚರ್ಚಿಸಲಾಗಿದೆ. ಅರೆಭಾಷೆಯು ಧ್ವನಿ, ವ್ಯಾಕರಣ, ಪದಕೋಶ ಮುಂತಾದ ನೆಲೆಗಳಲ್ಲಿ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ.  ಅರೆಭಾಷೆಯ ಪದಗಳನ್ನು ಬಿಡಿಸಿ ಬೇರೆ ಭಾಷೆಯಲ್ಲಿ ಈಗಾಗಲೇ ಬಳಕೆಯಲ್ಲಿರುವ ಅರ್ಥಗಳನ್ನು ಹೊಂದಿಸಿಕೊಂಡು ಊಹಿಸಬಹುದಾಗಿದೆ. ಪದದ ಮೂಲ, ಹುಟ್ಟು, ಅರ್ಥ, ಸಂದರ್ಭಗಳ  ನೆನೆವರಿಕೆ ಅರೆಭಾಷೆಯಲ್ಲಿ ಅಗಬೇಕಿದೆ. ಭಾಷಾ ವಿಜ್ಞಾನದ ನೆಲೆಯ ಬರಹಗಳು, ಸಂಶೋಧನೆಗಳು ಅಗತ್ಯವಿದ್ದು,  ಮುಂದೆ ಅಧ್ಯಯನಕಾರರಿಗೆ ಬಹಳಷ್ಟು ಅನುಕೂಲವನ್ನು ಒದಗಿಸಿಕೊಡಬಹುದು. 

- ಭರತೇಶ ಅಲಸಂಡೆಮಜಲು

Saturday, May 23, 2020

ಪತ್ತನಾಜೆ

ತುಳುವನಾಡು ಭೌಗೋಳಿಕವಾಗಿ ವೈವಿಧ್ಯಭೂಯಿಷ್ಟವಾದದ್ದು. ನೀಳ ಗಿರಿಶಿಖರ ಶ್ರೇಣಿ, ತೋಳುಬಾಚಿ ನಿಂತ ನೀಲಸಮುದ್ರ. ಒಂದು ಕಡೆ ಸಸ್ಯ ಶ್ಯಾಮಲೆ ಮಗದೊಂದು ಕಡೆಯಿಂದ ಸಲಿಲಿಧಾರೆ ಪದವು ಮಲೆಗಳನ್ನು ಸೀಳುತ್ತಾ ಸಾಗಿ ಸಣ್ಣ ಸಣ್ಣ ಸಾರು, ಸುದೆಗಳಿಂದ ಬಳಿತ ಕಡಲು. ಇವುಗಳ ನಡುವೆ ಭೌಗೋಳಿಕವಾಗಿ ಬಂಧನವಾಗಿ ಚಿನ್ನದ ಕೊಪ್ಪರಿಗೆಯಂತಿರುವ ಊರು ತುಳುವರ ನಾಡು. 

ಇವುಗಳಿಂದೆಲ್ಲ ಪ್ರಕೃತಿಯು ಇಲ್ಲಿ ಪ್ರಯೋಗಾಲಯವಾಗಿದೆ. ಪೊನ್ನಿ ತಿಂಗಳಿನಲ್ಲಿ ಭೂಮಿ ಎಂಬ ಹೆಣ್ಣು ಋತುಮತಿಯಾಗುವ ಕೆಡ್ಡಸದ ಆಚರಣೆ, ಪರಿಸರದ ವಿಶೇಷ ವಿಲಕ್ಷಣಗಳಿಂದ ಆಳುಪ ರಾಜ ಕುಂದವರ್ಮನ ಆಹ್ವಾನದಂತೆ ಕದಿರೆಯಲ್ಲಿ ನೆಲೆಸಿದ ನಾಥಪಂಥದ ಅವದೂತರೂ, ಕೊಕ್ಕಡ ಕೋರಿಗೆ ನಾಲ್ಕು ಕನೆ ಸೊಪ್ಪು ತಂದು ಹರಕೆ ಹಾಕುವ ಬೈದ್ಯನಾಥನೆಂಬ ಮದ್ದಿನ ದೇವಸ್ಥಾನ (Healing Temple). ಪರಿಸರ, ಕಾಡು, ಹವಾಮಾನ, ಬೆಳಕು-ಮಬ್ಬು, ಮಧ್ಯಂತರ ಜಗತ್ತು, ಮತ್ತು ತಮ್ಮ ಅವಗಣನೆಗೆ ಬಾರದವುಗಳನ್ನು ಸೃಷ್ಟಿಸಿಕೊಂಡು, ಕಲ್ಪಿಸಿಕೊಂಡು, ತಾತ್ಕಾಲಿಕ ಜಗತ್ತಾಗಿಸಿ( temporal realm) ಅವುಗಳನ್ನು ವಿಶೇಷತ್ವಕ್ಕೆ ಏರಿಸಿ ಪಗ್ಗುವಿನ ಬಿಸು, ಬೇಸ ತಿಂಗಳ ಪತ್ತನಾಜೆಗಳು ಆಚರಣೆಗಳು ಆಗಿವೆ.

ಪತ್ತನಾಜೆ ಎಂಬುದು ತುಳುನಾಡಿನಲ್ಲಿ ನಡೆಯುವ ಮಂಗಿಲೊ, ಆಟ-ಅಯೊನೊ, ಕೋಲ-ಜಾತ್ರೆ ಎಂಬ ಕಾರ್ಯಕ್ರಮಗಳಿಗೆ ಆಡಂಬರದ ವಿರಾಮ ಹೇಳುವ ದಿನ. ಇದು ತುಳುವರೆ ಸ್ವತಃ ಅವರಿಗಾಗಿಯೇ, ಅವರಿಂದಲೆ ಮಾಡಿಸಿಕೊಂಡ ಪ್ರಕೃತಿಯಿಂದ ಕಲಿತ ಕಾಲ ಜ್ಞಾನವನ್ನು ಸಮೀಕರಿಸಿ ವಿಧಿಸಿಕೊಂಡ ಗಡುವಿನ ದಿನ. ಇದು ತುಳು ಕಾಲ ನಿರ್ಣಾಯದಂತೆ ಸೌರಮಾನದ ಎರಡನೇ ತಿಂಗಳಾಗಿರುವ ಬೇಷದ(ಹತ್ತನೆಯ ದಿನ) ಬರುತ್ತದೆ. 



ಈ ಆಚರಣೆಯು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಮ್ಮಿಲನಗೊಳಿಸುತ್ತದೆ. ಪ್ರಕೃತಿಯ ಬದಲಾವಣೆಗೆ ಸ್ಪಂದಿಸುವ ತುಳುವ ವಿಧಿ ಮತ್ತು ನಿಷೇಧಗಳನ್ನು ಅಳವಡಿಸಿ ಪ್ರಕೃತಿಯೊಂದಿಗೆ ತನ್ನ ಸಂಸ್ಕಾರವನ್ನು ಬೆಳೆಸಿಕೊಂಡಿದ್ದಾನೆ. ಇಲ್ಲಿ ಮುಖ್ಯವಾಗಿ ಮನರಂಜನೆ ಹಾಗೂ ಧಾರ್ಮಿಕವಾಗಿ ನೂರಾರು ಜನ ಒಂದು ಕಡೆ ಸೇರುವ ಕೋಲ, ಜಾತ್ರೆ, ಕಂಬ್ಲ, ಆಟಗಳಿಗೆ ಸಂಪೂರ್ಣ ನಿಷೇಧದ ಪರದೆ ಬೀಳುತ್ತದೆ. ಉಳಿದಂತೆ ತಂಬಿಲ, ತಾಳಮದ್ದಳೆ, ದೇವರ ನಿತ್ಯ ಪೂಜೆಗಳು ನಡೆಯುತ್ತವೆ. ತುಳುವರು ಒಂದು ಕಡೆ ಸೇರಿ ಕೃಷಿ ಕೆಲಸ, ಕೃಷಿ ಚಟುವಟಿಕೆಗಳನ್ನು ಮರೆತು ಮೋಜು, ಮಸ್ತಿ, ಕೋಲ ಅಯನೊವೆಂದು ಕಳೆಯುವ ಕಾಲವನ್ನು ಮರೆಯುತ್ತಾರೆ ಎಂದು ಹಿರಿತಲೆಗಳು ಹಾಕಿಕೊಟ್ಟ ಪಥ್ಯ ಎಂದರು ತಪ್ಪಗಲಾರದು. 

ತುಳುವರ ಹೊಸ ವರುಷ ಬಿಸು ಪರ್ಬೊ, ಸೌರಮಾನದ ಮೊದಲ ತಿಂಗಳಾದ ಪಗ್ಗುವಿನ ಮೊದಲ ದಿನ, ಪಗ್ಗು ತಿಂಗಳ ಹದಿನೆಂಟನೆಯ ದಿನ(ಪಗ್ಗು ಪದಿನೆನ್ಮ) ಎಲ್ಲವೂ ಕೃಷಿ ಚಟುವಟಿಕೆಗಳಿಗೆ ಬುನಾದಿ ಹಾಕುವ ದಿನಗಳು ಆಗಿರುತ್ತದೆ. ಬೇಷ ತಿಂಗಳಾಗುವಾಗ ಒಂದಷ್ಟು ಮಳೆ ಬಂದು ಹದವಾದ ಭೂಮಿ ಕೃಷಿಗೆ ಸಿದ್ದವಾಗಿರುತ್ತದೆ. ಈ ಆಚರಣೆಯ ಕೊಂಡಿಗಳು ಒಂದನೊಂದು ಆವರಿಸಿ ಆರಾಧನೆ, ನಂಬಿಕೆಯ ನೆಲೆಯನ್ನು ನಿರೂಪಿಸಿದೆ.

ಶಬ್ದ ಅರ್ಥ
*ಪತ್ತನಾಜೆಯು ಎರಡು ಶಬ‍್ಧಗಳಿಂದಾಗಿದೆ. ಪತ್ತ್+ನ್+ಅ(ಆ)ಜೆ ಇದರಲ್ಲಿ ಷಷ್ಟಿ ವಿಭಕ್ತಿ ಪ್ರತ್ಯಯವಿದ್ದು ಉತ್ತರ ಮತ್ತು ಪೂರ್ವಗಳು ಸಂಬಂಧವನ್ನು, ನಂಟನ್ನು ಬೆಸೆಯುತ್ತದೆ. ಪತ್ತ್ ಅಂದರೆ ಸಂಖ್ಯೆ ಹತ್ತು ಇದು ಬೇಷ ತಿಂಗೊಲ ಪತ್ತ್ ಪತ್ತುನಾನಿ(ಬೇಷ ತಿಂಗಳ ಹತ್ತನೆಯ ದಿನ) ಅಜೆ ಅಂದರೆ ಹೆಜ್ಜೆ ಎಂದು ಹೇಳಬಹುದು.

*ಪತ್ತನಾಜೆ - ಬೇಷ ಪತ್ತುತ್(ಪತ್ತು ಅಂದರೆ ಹಿಡಿಯುತ್ತದು) ಪತ್ತ್‌ನೆತ ದಿನೊ.

*ಪತ್ತನಾಜೆ - ಪತ್ತ, ಪತ್ತ್ ಎಂದರೆ ಹಿಡಿದುಕೊಳ್ಳುವುದು, ಹಿಡಿದಿಟ್ಟಿರುವುದು. ಆಜೆ ನೀರಿಗೆ ಸಂಬಂಧ ಪಟ್ಟಂತಹ ಜಲವಾಚಕ ಶಬ್ಧವಾಗಿದೆ ಇದು ಸ್ಥಳನಾಮ ಘಟಕವಾಗಿ ತುಳುನಾಡಿನಲ್ಲಿ ಅಲ್ಲಲ್ಲಿ ಬಳಕೆಯಾಗಿದೆ. ನೀರನ್ನು ಭೂಮಿ ತುಂಬಿರುವ, ನೀರನ್ನು ಹಿಡಿದಿರುವ ಎಂಬ ಅರ್ಥ ಕಲ್ಪಿಸಬಹುದು. ಕಾಲ, ಸಮಯ, ಜಾಗ, ಹವಾಮಾನದ ಗುಣಗಳನ್ನು ಇಲ್ಲಿ  ಗಣನೆಗೆ ತೆಗೆದುಕೊಳ್ಳಬೇಕು. ಈ ಎರಡು ಶಬ್ದಗಳನ್ನು ಅದಲು ಬದಲು ಮಾಡಿದಾಗ ಆಜೆ ಪತ್ತ್ ಆಗಬಹುದು. ಇದು ನೀರನ್ನು ಹಿಡಿದಿಡು ಎಂಬ ಅರ್ಥವನ್ನು ಕೊಡಬಹುದು.  ಸ್ಥಳನಾಮದ ನೆಲೆಯಲ್ಲಿ ಸಂವಾದಿಯಾಗಿ  ಸಂಪಾಜೆ(ಸಂಪು ಆಯಿನ ಅಜೆ), ಅಜಕಲ, ಅಜ್ಜಾವರ ಸುಳ್ಯದ ಪಯಸ್ವಿನಿ ನದಿಯ ದಡದಲ್ಲಿರುವ ಊರು, ಈ ಊರನ್ನು ಪಯಸ್ವಿನಿ ನದಿ ಸುತ್ತುವರಿದು ಹರಿಯುತ್ತದೆ.

*ಅಜಕ್ಕಲ, ಅಜಮಾರ ಈ ಸಬ‍್ಧಗಳ ಪದಾದಿಯಲ್ಲಿ "ಅಜ" ಕ್ರಿಯಾಪದಗಳಾಗಿವೆ. ಬೋಂಟೆಯಲ್ಲಿ ಹಿಡಿದ ಪ್ರಾಣಿಗಳನ್ನು ತುಂಡು, ತುಂಡು ಮಾಡಿಕೊಂಡು ಪಾಲು ಮಾಡಿಕೊಳ್ಳುವ ಜಾಗಕ್ಕೆ ಅಜಕ್ಕಲ ಎಂದು ಕರೆಯುತ್ತಾರೆ. ಇಲ್ಲಿ ಅಜ ಎಂದರೆ ತುಂಡು ಮಾಡು, ಬೇರ್ಪಡಿಸು, ಗಡಿ ಹಾಕು, ಗಡು ಮಾಡು ಎಂಬ ಪದಾರ್ಥ ಬರುತ್ತದೆ. ಅದೇ ರೀತಿ ಅಜಮಾರೊ ಮಾಂಸವನ್ನು ತುಂಡು ಮಾಡುವ ಮರ ಎಂದು ಆಗುತ್ತದೆ. ಇದನ್ನು ಆಚರಣೆಯ ನೆಲೆಯಲ್ಲಿ ಪ್ರತಿನಿಧಿಕರಿಸುವುದಾದರೆ ಪತ್ತನಾಜೆ ಎಲ್ಲ ಮುಂದೆ ಬರುವ ಕಾರ್ಯಗಳಿಗೆ ಗಡುವಾಗಿದೆ, ಪತ್ತನಾಜೆಯ ದಿನದವರೆಗೆ ಆಡಿದ ಆಟ(ಯಕ್ಷಗಾನ), ಕುಣಿತ, ಆರಾಧನಾ ನಲಿಕೆಗಳು, ದೇವರ ದರ್ಶನ ಬಲಿ ಗಳು ಮುಂದಿನ ದಿನಗಳಲ್ಲಿ ಇಲ್ಲವೆಂದು ಕಡಕ್ಕಾಗಿ ಸಂದೇಶದೊಂದಿಗೆ ಸೀಮಾ ರೇಖೆಯಂತೆ ಗಡಿ, ಗಡು ಹಾಕಿ ಬಿಡುತ್ತದೆ. ಮರುದಿನದಿಂದ ಯಾವುದೆ ವಿಶೇಷ ಕಾರ್ಯಗಳು ನಡೆಯದುದರಿಂದ ಈ ದಿನ ಅಜಕಲ ಮಾಡಿದಂತೆ ಕೊಂಡಿಯನ್ನು ತುಂಡು ಮಾಡುತ್ತದೆ.

*ಪತ್ತ‍ನಾಜೆ - ಪತ್ತ್  ಎಂದರೆ ಹತ್ತು, ಆಜೆ ಎಂದರೆ ಹೆಜ್ಜೆ ಎಂದಾಗಿದೆ.  ಹತ್ತು ಜನ ಸೇರಿ ನಡೆಸುವಂತಹ ಕ್ರಮವಾಗಿದೆ. ಸಂಖ್ಯಾ ಜಾನಪದದ(Number Folklore) ನೆಲೆಯಲ್ಲಿ ನೋಡುವುದಾದೆ ನಾಲ್ ಬಜ್ಜೆಯಿ ಕೊರ್ಲೆ(ನಾಲ್ಕು ಅಡಿಕೆ ಕೊಡಿ), ರಡ್ಡ್ ಉನ್ಪು ಬಳಸ್‌ಲೆ(ಎರಡು ಅಗುಳು ಊಟ ಹಾಕಿ) ಅಂದರೆ ಬರೀ ನಾಲ್ಕು ಅಡಿಕೆ ಕೊಡಿ ಅಥವಾ ಎರಡು ಅಗುಳು ಕೊಡಿ ಎಂದು ಅಲ್ಲ ಜನಪದೀಯರ ನೆಲೆಯಲ್ಲಿ ಸ್ವಲ್ಪ ಸಾಕು ಎನ್ನುವ ರೀತಿ ಅಗಿರುತ್ತದೆ. ಅದೆ ರೀತಿ ಹತ್ತು ಮನೆಯವರು, ಹತ್ತು ಜನ ಇದ್ದುಕೊಂಡು ಮಾಡುವ ಸಂಬಿಲ, ಕಾರ್ಯ ಎಂದರೂ ತಪ್ಪಗಾದು.
ಪತ್ತನಾಜೆಯಲ್ಲಿ ಪತ್ತ ಪದವು ವಿಶೇಷವಾಗಿ ಬಳಕೆಯಾಗಿದೆ. ಪತ್ತುನ ಅಂದರೆ ಹಿಡಿಯುವುದು, ಪತ್ತಂಗೆಲ್ ಅಂದರೆ ಅಂಟಿಕೊಳ್ಳುವುದು. ಮಗದೊಂದು ಕೋನದಿಂದ ಪತ್ತನಾಜೆ ಪದವನ್ನು ವಿಶ್ಲೇಷಿಸಿದಾಗ ಪೂರ್ವ ಪದವು ಹಿಡಿಯು ಎಂಬ ಅರ್ಥ ಕೊಟ್ಟರೆ ಉತ್ತರಪದ ಬೇರ್ಪಡಿಸು ಎಂಬ ಅರ್ಥದಿಂದ ಕೂಡಿದೆ. ಪತ್ತುನಲ(ಹಿಡಿಯು) ಮತ್ತು  ಅಜಪುನಲ(ಬೇರ್ಪಡಿಸು) ಎಂಬ ವೀರೊಧಾಭಾಸದ ಪದ ವಿನ್ಯಾಸ ನೋಡಬಹುದು. ಪತ್ತ್‌ನೆನ್ ಬುಡುಪಾಪುನಾ, ಬೂತ ಪತ್ತುನೆನ್ ಬೂಡುಪಾಪುನ(ಹಿಡಿದ ಬೂತವನ್ನು ಬಿಡಿಸುವುದು) ಎಂಬ ಮಾತು, ಬೈಗುಳ ಪದ ತುಳು ಭಾಷೆಯಲ್ಲಿದೆ.
*ಪತ್ತನಾಜೆ ಅದೇಶ ಸಂಧಿಯ ನೆಲೆಯಲ್ಲಿ ನೋಡುವುದಾದರೆ ಪದಿನಾಜಿಯು ಅಗಬಹುದೇನೊ ಎಂಬ ಊಹೆ ಮಾಡಬಹುದು. ಇದು ಕನ್ನಡ ಸಂಧಿ ಎಂಬ ಗೊಂದಲ ಸಹಜವಾದುದು. ಇಲ್ಲಿ ಸಂಧಿಯಾಗುವಾಗ ಸ್ವರದ ಮುಂದೆ 'ತ' ಬಂದಾಗ, ಅದೇ ವರ್ಗದ ಮೂರನೇ ವ್ಯಂಜನ ಅಂದರೆ 'ದ' ಆದೇಶವಾಗಿ ಬರುತ್ತವೆ. ತುಳುವರಿಗೆ ಪದಿನಾಜಿ ವಿಶೇಷವಾದ ಸಂಖ್ಯೆ, ಕುಲೆಗಳಿಗೆ ಬಡಿಸುವುದು ಎಂಬ ನೆಲೆಯಲ್ಲಿ ಪತ್ತನಾಜೆಯನ್ನು ಗುರು ಹಿರಿಯರನ್ನು ನೆನೆಸುವ ದಿನ ಎಂದು ಗ್ರಹಿಸಬಹುದು ಅದರೆ ಇಲ್ಲಿ ಪತ್ತ ಹದಿನಾರು ಎಂಬ ದಿನ ಅಗಲಿ, ಸಂಖ್ಯೆಯ ಉಲ್ಲೇಖ ಬೇಷ ತಿಂಗಳಲ್ಲಿ ಸಿಗದಕಾರಣ ಈ ಗ್ರಹಿಕೆ ಎಷ್ಟು ಸಮಂಜಸ ಎಂಬುವುದು ನಿಮ್ಮ ಗ್ರಹಿಕೆಗೆ ಬಿಟ್ಟ ವಿಚಾರ.  
      ಮೇಲಿನ ಚರ್ಚೆಗಳಿಂದ ತಿಳಿದುಬರುವುದೇನೆಂದರೆ 'ಅಜ' ಬೇರೆ ಬೇರೆ ಮಾಡುವ, ಗಡು, ಗಡಿ, ಬೇರ್ಪಡಿಸುವ ಅರ್ಥವನ್ನು ಸ್ಪಷ್ಟವಾಗಿ ನೀಡುತ್ತದೆ. ಮಗದೊಂದು ದೃಷ್ಟಿಯಲ್ಲಿ ಭೂಮಿಯಲ್ಲಿ ನೀರು ಹಿಡಿದಿಟ್ಟು ತನ್ನ ಕೊಳಗ ತುಂಬಿಸುವ ಕಾಲಕ್ಕೆ ಸಿದ್ಧವಾಯಿತು ಎಂಬ ಅರ್ಥವನ್ನು ಅಜೆ ಪತ್ತುನ ಎಂಬ ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು. ಆಚರಣೆಯ ನೆಲೆಯಿಂದಲೂ ನೋಡುವುದಾದರೆ ಈ ದಿನದ ನಂತರದ ದಿನಗಳಲ್ಲಿ ಮುಖ್ಯವಾಗಿ ಕುಣಿತ, ನರ್ತನಗಳು ಇರುವುದಿಲ್ಲ. ಅದರೆ ಮದುವೆ, ಪೂಜೆ, ಇತರ ಸಾಂಸ್ಕೃತಿಕ ಕ್ರಮಗಳು ನಡೆಯುತ್ತದೆ. ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಏರುಪೇರುಗಳನ್ನು ಸಮಾನವಾಗಿ ಶಮನಗೊಳಿಸುವುದಕ್ಕೆ ತಯಾರು ಮಾಡುತ್ತದೆ. ಕೆಲವು ತಿಂಗಳುಗಳ ಕಾಲ ದೇವರಿಗೆ, ದೈವಗಳಿಗೆ, ಅದನ್ನು ಅನುಸರಿಸುವರಿಗೆ, ಪಾಲಿಸುವವರಿಗೆ, ಚಾಕರಿಯವರಿಗೆ ವಿಶ್ರಾಂತಿ ಸಿಗುತ್ತದೆ. ಈ ದಿನಗಳಲ್ಲಿ ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯ ಚಾಕರಿ ಮಾಡಿಕೊಂಡು ಬದುಕಲು ಮಾನಸಿಕವಾಗಿ ತಯಾರು ಮಾಡುತ್ತದೆ. ನೈಜತೆ, ಭ್ರಮೆ, ಆಧ್ಯಾತ್ಮವೆಂಬ ನಂಬಿಕೆಗಳನ್ನು ಬೆರಸಿಕೊಂಡು ಭ್ರಾಮಕ ಲೋಕ ನಿರ್ಮಾಣವಾಗುತ್ತದೆ. ಸಮಯ, ದಿನ, ಕಾಲ, ಹವಾಮಾನ, ವ್ಯಕ್ತಿ, ಸಂದರ್ಭ ಮತ್ತು ಸ್ಥಳಗಳನ್ನು ಒಂದಾಗಿಸಿಕೊಂಡು ಸೀಮಾರೇಖೆಗಳನ್ನು ಸಾಂಸ್ಕೃತಿಕವಾಗಿ ನೊಡುವ ಪತ್ತನಾಜೆ ಬೇಷ ಪತ್ತುನ ಪತ್ತೆನಾನಿ(ಬೇಷ ತಿಂಗಳು ಹಿಡಿದು ಹತ್ತನೆಯ ದಿನ) ಬರುತ್ತದೆ ಅದರೆ ಸಾಂಸ್ಕೃತಿಕ ಶಬ್ಧವಾದ ಇದನ್ನು ಹತ್ತನಾವಧಿ ಎಂದು ಕನ್ನಡಕ್ಕೆ ತರ್ಜುವೆ ಮಾಡುವುದು ಸರಿಯಾದ ಕ್ರಮವಲ್ಲ.
ಕ್ರಮಚಾರಣೆ
ಪತ್ತನಾಜೆಯಂದು ತರವಾಡು ಮನೆಯಲ್ಲಿ ಕುಟುಂಬವರೆಲ್ಲ ಸೇರಿ "ಬೂತೊಗು ಕರಿಪುನ" ಎಂಬ ಬೂತ  ತಂಬಿಲ ನಡೆಸುತ್ತಾರೆ ಇದು ಹೆಚ್ಚಾಗಿ ಹಗಲು  ಹೊತ್ತಿನಲ್ಲಿ ನಡೆಯುತ್ತದೆ. "ಕರಿದ್ ಪೊಯಿನಕುಲೆಗ್ ಕರಿಪುನಾ" (ಕಳೆದು ಹೋದವರಿಗೆ ಬಡಿಸುವುದು) ಎಂಬ ಕ್ರಮ ಸಂಜೆ ಏರು ಹೊತ್ತಿನಲ್ಲಿ ನಡೆಸುತ್ತಾರೆ, ಕುಟುಂಬದಲ್ಲಿ ಯಾರಾದರೂ ತೀರಿ ಹೋಗಿ ಕುಲೆಗಳು ಅದವರನ್ನು ಪದಿನಾಜಿ (ಹದಿನಾರು) ಸೇರಿಸುವುದು, ಅವರನ್ನು ಸೇರಿಸಿಕೊಳ್ಳುವ ಕ್ರಮ ಮಾಡುತ್ತಾರೆ. ಗುಳಿಗ ಕಟ್ಟೆ, ಬೈರವ ಕಟ್ಟೆಗಳಲ್ಲಿ ಪತ್ತನಾಜೆ ಬಡಿಸುವ "ಪತ್ತನಾಜೆ ಕರಿಪುನ" ಎಂದು ತಂಬಿಲ ಕಟ್ಟುತ್ತಾರೆ. ಗುಳಿಗ ದೈವ ಜನರಿಗೆ ಬರುವ ರೋಗಳಿಂದ ಕಾಪಾಡುತ್ತಾನೆ. ಬೈರವ ದೈವ ಜಾನುವಾರುಗಳಿಗೆ ಬರುವ ತೊಂದರೆಯನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ತುಳುವರಲ್ಲಿದೆ.  ಜೊತೆಗೆ ವನದಲ್ಲಿ ಬಡಿಸುವುದು, ಜಾಗೆತೆಗ್ ಬಳಸುನ (ಜಾಗೆಯ ಶಕ್ತಿಗೆ ಬಡಿಸುವುದು) ಎಂಬ ಕ್ರಮಗಳನ್ನು ಮಾಡುತ್ತಾರೆ.

ಕೋಲ ನೇಮಗಳಿಗೆ ತೆರೆ
ತುಳುನಾಡಿನಲ್ಲಿ ನಡೆಯುವ ದೈವಾರಾಧನೆಯ ಭಾಗವಾದ ನೇಮ,ಕೋಲ, ಮೆಟ್ಟಿ, ಬಂಡಿಗಳಿಗೆ ಪತ್ತನಾಜೆಯು ಒಂದು ಅಡೆಪ್ಪು ತಡೆಯಾಗಿದೆ. ಕುಟುಂಬದ ದೈವ, ಗ್ರಾಮ ದೈವಗಳ ಪರ್ವಗಳನ್ನು ಈ ದಿನಕ್ಕಿಂತ ಮೊದಲು ಮುಗಿಸಬೇಕು ಎಂಬ ಕಟ್ಟುನಿಟ್ಟಿನ ಅಘೋಷಿತ ನಿಯಮಗಳನ್ನು ತುಳುವರು ಹಾಕಿಕೊಂಡಿರುತ್ತಾರೆ. ತುಳುನಾಡಿನ ಯಾರದೋ ಮನೆಗಳಲ್ಲಿ ಪತ್ತನಾಜೆಯು ನಂತರದ ದಿನಗಳಲ್ಲಿ ಭೂತ ಆರಾಧನೆಯ ನಡೆಯುವುದಿಲ್ಲ ಅದೇ ರೀತಿ ಭೂತ ಕಟ್ಟುವವರು ನೇಮ ನಡೆಸಿಕೊಡಲು ಒಪ್ಪಿಕೊಳ್ಳುವುದು ಇಲ್ಲ. ಪತ್ತನಾಜೆಯ ನಂತರ ಭೂತಗಳು ಘಟ್ಟ ಹತ್ತುತ್ತವೆ ಎಂಬ ಮಾತಿದೆ.




ಅಮ್ಚಿನಡ್ಕ - ಬಿಂತೋಡಿ ರಕ್ತೇಶ್ವರಿ, ಗುಳಿಗ ಕಟ್ಟೆ

ದೇವಸ್ಥಾನಗಳಲ್ಲಿ ಪತ್ತನಾಜೆ
ಮೇಷ ತಿಂಗಳ ಹತ್ತನೆಯ ದಿನ ಪತ್ತನಾಜೆಯಂದು ದೇವರು ಗರ್ಭ ಗುಡಿಯ ಒಳಗೆ ಹೋಗುವುದು ಇದು ದೇವರು ವಿಶ್ರಾಂತದಲ್ಲಿರುತ್ತಾರೆ ಮತ್ತೆ ದೇವರು ಹೊರಗೆ ಬರುವುದು ದೀಪಾವಳಿಯ ಸಮಯಕ್ಕೆ ಎಂಬ ನಂಬಿಕೆಯಿದೆ. ದೇವಿಗೆ, ದೇವರಿಗೆ ಇಷ್ಟವಾದ ಆಭರಣಗಳು, ಗೆಜ್ಜೆ, ವಿಶ್ವ ಕನ್ನೆಡಿ ಅಲಂಕಾರ,  ಎಲ್ಲ  ಆ ದೇವಸ್ಥಾನದ ಖಜಾನೆ ಸೇರುತ್ತದೆ.  ಅಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೈವಗಳು ಕೂಡ ಗುಡಿಯೊಳಗೆ ಸೇರಿಕೊಳ್ಳುತ್ತದೆ.

ಗೆಜ್ಜೆ ಬಿಚ್ಚುವುದು:
ತುಳುನಾಡಿನಾದ್ಯಂತ ಜೊತೆಗೆ ಮಲೆನಾಡಿನಲ್ಲೂ ಆರಾಧನಾ ನೆಲೆಯು ನಡೆಯುವ ಹಾಗೂ ದೇವಸ್ಥಾನಗಳಲ್ಲಿ ನಡೆಸಿಕೊಂಡು ಬರುತ್ತಿರುವ ನೂರಾರು ಯಕ್ಷಗಾನ ಮೇಳಗಳು ತಮ್ಮ ತಿರುಗಾಟದ ಆಟಗಳನ್ನು ನಿಲ್ಲಿಸುತ್ತವೆ. ಇದಕ್ಕೆ ಗೆಜ್ಜೆ ಬಿಚ್ಚುವುದು ಎಂದು ಕರೆಯುತ್ತಾರೆ. ತಿರುಗಾಟ ಮುಗಿಸುವ ಕಡೆಯ ದಿನ ಆಟ ಆಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟದ ಮುಕ್ತಾಯ ಮಾಡುತ್ತಾರೆ. ಮತ್ತೆ ಮುಂದೆ ಬರುವ ದೀಪಾವಳಿಯ ಸಂದರ್ಭದಲ್ಲಿ ದೇವಸ್ಥಾನಗಳ ಮೇಳಗಳ ಕಲಾವಿದರು ದೇವರ ಎದುರು ನಾಟ್ಯ ಪ್ರದರ್ಶನ ಮಾಡಿ ಆಟದ ಸೇವೆಯನ್ನು ಆರಂಭಿಸುತ್ತಾರೆ. ಪತ್ತನಾಜೆ ಬತ್ತುಂಡು ಜತ್ತಿ ಆಟೊ ಉಂತ್‍ಂಡ್ (ಪತ್ತನಾಜೆ ಬಂದಿತು ತಿರುಗಾಟಕ್ಕೆ ಹೊರಟ ಮೇಳ ನಿಂತಿತು) ಎಂಬ ಮಾತು ಯಕ್ಷಗಾನ ಬಗೆಗೆ ಚಾಲ್ತಿಯಲ್ಲಿದೆ.

ಮಳೆಗಾಲಕ್ಕೆ ನಾಂದಿ
"ಪತ್ತನಾಜೆತಾನಿ ಪತ್ತ್ ಪನಿ ಬರ್ಸೊ ಬರೊಡು" ಪತ್ತನಾಜೆ ಹತ್ತು ಹನಿ ಮಳೆ ಬರಬೇಕು ಎಂಬ ನಂಬಿಕೆ ಇದೆ. ಪತ್ತನಾಜೆಯ ಮೊದಲು ಬಿಸುವಿನ ಸಮಯವಾಗುವಂತೆ ಅಲ್ಲಲ್ಲಿ ಜಾತ್ರೆ ಕೋಲ ನಡೆಯುತ್ತವೆ. ಅ ಊರಿನವರ ನಂಬಿಕೆಯ ಕಟ್ಟಿನಂತೆ ತಮ್ಮ ಗ್ರಾಮ, ಸೀಮೆ ಜಾತ್ರೆ, ಕೋಲದಂದು ನಾಲ್ಕು ಹನಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ತಂಪುಗಾಳಿ, ಸಿಡಿಲು, ಮಿಂಚುಗಳ ಮಳೆ ಬರುತ್ತದೆ. ಇದು ಒಂದು ದೃಢವಾದ ನಂಬಿಕೆ ಮೇಲೆ ನಿಂತಿದೆ.

ಪರಿಣಾಮ :
ಭೂತಾರಾಧನೆಯ ಭೂತ ಕಟ್ಟುವ ಜನಾಂಗಗಳಾದ, ಅಜಲ, ಪರವ, ಪಂಬದ, ನಲಿಕೆಯವರಿಗೆ ಪತ್ತನಾಜೆಯವರೆಗೆ ಪಾತ್ರಿಗಳಾಗಿರುತ್ತರೆ. ನಂತರ ದಿನಗಳಲ್ಲಿ ಅವರ ಕೌಶಲ್ಯಕ್ಕೆ ತಕ್ಕಂತಹ ಅಥವಾ ಪರ್ಯಾಯ ಕೆಲಸಗಳನ್ನು ಅವರು ಆರಿಸಿಕೊಳ್ಳಬೇಕಾಗುತ್ತದೆ. ಅವರಂತೆ ಇಲ್ಲಿನ ಯಕ್ಷಗಾನ ಪಾತ್ರಧಾರಿಗಳು, ಜಾತ್ರೆಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳೆಲ್ಲ ಉದ್ಯೋಗದ ಇತರ ಆಯ್ಕೆಗಳನ್ನು ನೋಡಿಕೊಳ್ಳಬೇಕು. ಹೀಗೆ ಪತ್ತನಾಜೆ ಸಾಮಾಜಿಕ ಕಟ್ಟಲೆ, ಧಾರ್ಮಿಕ ವಿಧಿಗಳ ಜೊತೆ ಜೊತೆಗೆ ತುಳುವರ ಆರ್ಥಿಕತೆ, ಉದ್ಯೋಗದ ಮೇಲು ಪರಿಣಾಮವನ್ನು ಉಂಟುಮಾಡುತ್ತದೆ. ಪರೋಕ್ಷವಾಗಿ ಅವಲಂಬಿತವಾಗಿರುವ ಪೆಂಡಾಲ್ ಹಾಕುವವರು, ಧ್ವನಿ, ಬೆಳಕು, ಚೆಂಡೆ-ವಾದ್ಯ  ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ.

ಪತ್ತನಾಜೆಯ ಬಗೆಗಿನ ಮಾತುಗಳು ಮತ್ತು ನಂಬಿಕೆಗಳು.
*`ತುಳುನಾಡಿನಲ್ಲಿ   ಎರ್ಮಾಳು ಜಪ್ಪು ಖಂಡೇವು ಅಡೆಪು’ ಎಂಬ ಗಾದೆಯಂತೆ ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ಆ ಸೀಮೆಯ ಉತ್ಸವಗಳು ಆರಂಭಗೊಂಡು ಮೇ ತಿಂಗಳಿನ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವುನಲ್ಲಿ  ನಡೆಯುವ ಮೀನು ಹಿಡಿಯುವ ಖಂಡೇವು ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ. ಒದರಂತೆ ಅಲಲ್ಲಿ ಆ ಸೀಮೆ ಅಥವಾ ಊರಿನ ಕಟ್ಟು ಕಟ್ಟಲೆಗಳ ಜನಪದ ಮಾತು ಗಾದೆಗಳಿವೆ. ಈ ಆಡು ಮಾತು ಪ್ರಾದೇಶಿಕವಾಗಿ ಚಾಲ್ತಿಯಲ್ಲಿದೆ.
*ಪತ್ತನಾಜೆ ಬತ್ತ್Oಡ್  ಜತ್ತಿ ಆಟೊ ಉಂತ್Oಡ್ (ಪತ್ತನಾಜ್ ಬಂದಿತು (ತಿರುಗಾಟಕ್ಕೆ) ಹೊರಟ ಆಟ (ಯಕ್ಷಗಾನ ಮೇಳ) ನಿಂತಿತು
* ಪತ್ತನಾಜೆದಾನಿ ಪತ್ತ್ ಪನಿ ಬರ್ಸೊ ಬರೋಡು ಇಜ್ಜಂಡ್ ಊರುಗು ಗಂಡಾಂತರ ಉಂಡು’ ಎಂಬುದು ತುಳುವರ ನಂಬಿಕೆಯಾಗಿತ್ತು.
*ಮನೆಯಿಂದ ಯಾರಾದರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರೆ ಅವರು ಪತ್ತನಾಜೆಯ ದಿನ ಮನೆಗೆ ಬರುತ್ತಾರೆ ಎಂಬ ಮಾತು ತುಳುವನಾಡಿನಲ್ಲಿ ಚಾಲ್ತಿಯಲ್ಲಿದೆ. ದೂರದುರಿಗೆ ಹೋಗುವವರನ್ನು ನೀನು ಯಾವಾಗ ಮತ್ತೆ ಬರುತ್ತೀಯಾ? ಎಂದು ಕೇಳಿದರೆ ಪತ್ತನಾಜೆಗೆ ಬರುತ್ತೇನೆ ಎನ್ನುವ ಪ್ರತ್ಯುತ್ತರ ಸಾಮಾನ್ಯವಾಗಿರುತಿತ್ತು.  
*ಪತ್ತನಾಜೆಯಂದು ದೇವರು ಮನೆಗೆ ಬಂದು ಮನೆಯ ಹಿರಿ ಮಗನನ್ನು ತೂಗುತ್ತಾರೆ ಅಂತೆ, ಅವರು ತೂಗುವಾಗ ಹೆಚ್ಚು ತೂಕ ಇರಲು ಅವನಿಗೆ ಹಲಸಿನ ಗುಜ್ಜೆಯ ಪದಾರ್ಥ ಮಾಡಿಕೊಡಬೇಕಂತೆ.
*ಪತ್ತನಾಜೆ ಬರುವ ಹೊತ್ತಿಗೆ ಜೇನು ನೋಣಗಳು ಜೇನು ತುಪ್ಪ ಖಾಲಿ ಮಾಡುತ್ತವೆ ಅದಕ್ಕಾಗಿ ಪತ್ತನಾಜೆ ಮೊದಲೆ ಜೇನು ತೆಗೆಯಬೇಕು.
*ಪತ್ತನಾಜೆಯ ನಂತರ ಯಕ್ಷಗಾನ ಆಟ ಆಡ ಇಲ್ಲ, ಆಡಲೇ ಬೇಕೆಂದಾದರೆ ಒಂದು ಕಾಲಿಗೆ ಗೆಜ್ಜೆ ಕಟ್ಟಬೇಕಂತೆ ಎಂಬ ಜನಪದೀಯ ನಂಬಿಕೆಯಿದೆ.

ಪತ್ತನಾಜೆ ಒಂದು ಪ್ರಕೃತಿಯನ್ನು ಆರಾಧಿಸುವ ಒಂದು ಬಗೆಯ ವಿಶೇಷ ದಿನ. ಪ್ರಕೃತಿಯೊಂದಿಗೆ ಲೀನವಾಗಿರುವ ದೈವ, ದೇವರು, ಗುರುಕಾರ್ಣವೆರುಗಳ ಅರಾಧನೆ  ಮಾಡಿಕೊಂಡು ಬರುತ್ತಿರುವುದು ಮೆಚ್ಚುವಂತಹುದು.  ದೇವರ ಬಲಿ, ಭೂತ ಕೋಲ, ತುಳುನಾಡಿನ ಜನಪದ ನಲಿಕೆ, ಯಕ್ಷಗಾನಗಳಿಗೆಲ್ಲ ವಿರಾಮ ನೀಡುವ ದಿನವಾಗಿದೆ. ಇದು ಬರಿ ದಿನದ ಗಡುವಾಗದೆ ಮಾನಸಿಕ, ದೈಹಿಕವಾಗಿ ತುಳುವ ವ್ಯಕ್ತಿಯೊಬ್ಬನನ್ನು ಋತುಮಾನಕ್ಕೆ ಅನುಸಾರವಾಗಿ ಮುಂದೆ ಬರುವ ಕೃಷಿಕೆಲಸಗಳಿಗೆ ಒಗ್ಗಿಸಿಕೊಳ್ಳುವ ವಿಶೇಷ ಆಚರಣೆ. ಈ ಮಳೆ, ನೆಲ, ಕಾಲದ ಆಚರಣೆಯನ್ನು ಉಳಿಸಿ ಬೆಳೆಸುವುದು ಈ ಭಾಗದ ಪ್ರತಿಯೊಬ್ಬನ ಕರ್ತವ್ಯವಾಗಿದೆ.

ಭರತೇಶ ಅಲಸಂಡೆಮಜಲು

Wednesday, February 12, 2020

ಹವ್ಯಾಸಿ ರೇಡಿಯೋ ಬಳಗ

ಮುಂಜಾನೆ ಸಮಯ ಏಳು ಗಂಟೆ "ಸಿ ಕ್ಯೂ,  ಸಿ ಕ್ಯೂ. ಗುಡ್ ಮಾರ್ನಿಂಗ್ ಕರಾವಳಿ ಮಾರ್ನಿಂಗ್ ನೆಟ್, ಡಿಸಾಸ್ಟರ್ ಮ್ಯಾನೇಜ್ಮೆಂಟ್ ನೆಟ್, ನೆಟ್ ಕಂಟ್ರೋಲರ್ VU3VXT  ಪರಮೇಶ್ ಜಿ" … ಹೌದು ಇದು ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ ರೇಡಿಯೋ ಗೆಳೆಯರ ದಿನದ ಮೊದಲ ದಿನಚರಿ. ಹವ್ಯಾಸಿ ರೇಡಿಯೋ ಬಳಗ ಸುಮಾರು ಐವತ್ತು ವರುಷಗಳಿಂದ ನಿರಂತರವಾಗಿ ಹ್ಯಾಮ್ ರೇಡಿಯೋವನ್ನು ಬಳಸುತ್ತಾ, ಸಂವಹನ ಮಾಡುತ್ತಾ, ತನ್ನ ಬಳಗವನ್ನು ಬೆಳೆಸುತ್ತಾ, ಮುಂಜಾವಿನ ಹಕ್ಕಿಗಳಂತೆ ಚಿಲಿಪಿಲಿ ಹಾಡುತ್ತಾ  ಇಂದು ಸುಮಾರು ೩೦-೪೦ ಸಕ್ರಿಯ ಹ್ಯಾಮ್ ಬಳಗ ಉಡುಪಿ ಮಂಗಳೂರಿನಲ್ಲಿ ಹೊಂದಿದೆ. 

ಅಂತರ ಜಾಲದೊಂದಿಗೆ ಪ್ರದಕ್ಷಿಣೆ ಹಾಕುತ್ತಿರುವ ನಾವು ಒಂದು ದಿನ ಅಂತರ ಜಾಲ ಕಡಿತಗೊಂಡಾಗ ಸೀಮಿತ ಗೆಳೆಯರಿಗೆ ಮೀಸಲಾಗುತ್ತೇವೆ.  ಒಮ್ಮೆ ಯೋಚಿಸಿ, ಈ ಅಂತರ ಜಾಲ, ಮೊಬೈಲ್, ಇನ್ನಿತ್ತರ ಸಂವಹನ ಮಾಧ್ಯಮಗಳು ಯಾವುದೊ ಸಕಾರಣದಿಂದ ಸ್ಥಗಿತಗೊಂಡಾಗ ಸಂವಹನ ನಡೆಸುವುದು ಹೇಗೆ? ನಮ್ಮ ಇಷ್ಟದವರೊಂದಿಗೆ ಮಾತಾನಾಡುವುದು ಹೇಗೆ? ದೂರದೂರಿಗೆ ಸಂದೇಶ ಕಳುಹಿಸುವುದು ಹೇಗೆ? ಹೀಗೆ ಹೇಗೆ? ಪ್ರಶ್ನೆಗಳು  ಮೆರವಣಿಗೆಯ ಪತಾಕೆಯಂತೆ ರಂಗು ರಂಗಾಗಿ ಬರುತ್ತದೆ. ನೀವು ಆಲೋಚಿಸಿಯೇ ಇಲ್ಲ ನೋಡಿ..!!! 

ಹೌದು ಇಂತಹ ತುರ್ತಿನ ಸಂದರ್ಭಗಳಲ್ಲಿ ಹ್ಯಾಮ್ ರೇಡಿಯೋ ಬಳಕೆಗೆ ಬರುತ್ತದೆ. ಜೊತೆಗೆ ದೂರದೂರಿಂದ ಮದ್ದು, ಪರವೂರಿನ ಹವಾಮಾನ, ವಾಹನ ದಟ್ಟಣೆ, ಮುಖ ಪರಿಚಯ ಇಲ್ಲದೆ ಹೊಸ ಗೆಳೆಯರನ್ನು ಮಾಡಿಕೊಳ್ಳುವುದು, ಕೃಷಿ ವಿಚಾರ  ಹಂಚಿಕೊಳ್ಳುವುದು
ಕ್ಷೇಮ ವಿಚಾರ, ಹೊರ ದೇಶದ ಗೆಳೆಯರನ್ನು ಪಡೆಯುವುದು, ಜಾನಪದ,  ಶಿಕ್ಷಣ ತರಬೇತಿ, ವಿದ್ಯುನ್ಮಾನಗಳ ಪ್ರಯೋಗ, ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ನಿಸ್ತಂತು  ಪ್ರಯೋಗ, ನಿಶ್ಚಿತವರದಿಗಾರಿಕೆ, ತುರ್ತು ಸಂದೇಶ ರವಾನೆ, ಸ್ವತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಹೀಗೆ ಇದರ ವ್ಯಾಪ್ತಿ ಸಮುದ್ರದಗಲ. 

ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಘಡಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಸ್ಥಳೀಯ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ, ದೇಶದ ಸೈನಿಕನಾಗಿ ಸಹಾಯ ಮಾಡಬಲ್ಲುದು.

ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ, ಅಂತಸ್ತು ಮೀರಿ ಸಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವ್ಯಕ್ತಿಗತ, ಸಮೂಹ ಅಥವಾ ಸಂಸ್ಥೆಯೊಂದು ತನ್ನ ಸ್ವಂತ ಸ್ಥಾಪಿತ ರೇಡಿಯೋ ನೆಲೆಯಿಂದ ಮತ್ತೊಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸಿ ಸ್ನೇಹ ಬಯಸುವ ಹವ್ಯಾಸಿಗಳ ಬಳಗ ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡಬಹುದು.

ಹ್ಯಾಮ್, ರೇಡಿಯೊ ಸಂಪರ್ಕ ಜ್ಞಾನವಿರುವ, ರೇಡಿಯೊ ಸ್ಟೇಷನ್ ಇಟ್ಟುಕೊಳ್ಳಲು ಬೇಕಾದ ಲೈಸನ್ಸ್ ಪಡೆದ ಹವ್ಯಾಸಿ. ಹ್ಯಾಮ್ ಹೆಸರು ಹಟ್ರ್ಸ್ (ಎಚ್) ಅಲೆಕ್ಸಾಂಡರ್ ಗ್ರಹಾಮ್ ಬೆಲ್ (ಎ) ಮತ್ತು ಮಾರ್ಕೊನಿ (ಎಂ) ಇವರ ಹೆಸರುಗಳ ಪ್ರಥಮಾಕ್ಷರ ಸಮ್ಮಿಲನ  ಎಂಬ ಅಭಿಪ್ರಾಯವಿದೆ ಹೆಲ್ಪ್ ಅಲ್ ಮ್ಯಾನ್ಕೈಂಡ್ ಎಂಬುದು ಆಗಿದೆ . ಭಾರತ ಸರ್ಕಾರ ನಡೆಸುವ ಅಮೆಚೂರ್ ಸ್ಟೇಷನ್ ಆಪರೇಟರ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಹ್ಯಾಮ್ ಲೈಸನ್ಸ್ ಪಡೆದು ಮುಂದೆ ಪ್ರೇಷಕ (ಟ್ರಾನ್ಸ್‍ಮೀಟರ್), ಅಭಿಗ್ರಾಹಕ (ರಿಸೀವರ್) ಮತ್ತು ಆಂಟೆನಗಳನ್ನು ಒಳಗೊಂಡ ಹವ್ಯಾಸಿ ರೇಡಿಯೊ ಸ್ಟೇಷನನ್ನು ತಮ್ಮ ಮನೆ, ಕಾರು, ಹಡಗು ಹೀಗೆ ತಮ್ಮೊಂದಿಗೆ ಲೈಸನ್ಸನ ಮಾದರಿಯಂತೆ ಈ ಸ್ಟೇಷನ್ನುಗಳಿಗೆ ಆಯಾ ದೇಶ ಮತ್ತು ಹವ್ಯಾಸಿಯ ಹೆಸರುಗಳಿಗೆ ಅನುಗುಣವಾದ ಕರೆ ಚಿಹ್ನೆಗಳು (ಕಾಲ್ ಸೈನ್ಸ್) ಇರುತ್ತವೆ. ಇವರು ಪರಸ್ಪರ ಸಂಪರ್ಕ ಸಾಧಿಸಿದ ಅನಂತರ ಕರೆ  ಗುರುತು ಪತ್ರಗಳ(ಕ್ಯೂ.ಯಸ್.ಲ್ ) ವಿನಿಮಯವನ್ನು ಮಾಡಿಕೊಳ್ಳುತ್ತಾರೆ.  

ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ ನ್ನು ೧೯೭೨ರಲ್ಲಿ ಶ್ರೀ ಯು ವರದರಾಯ ನಾಯಕ್ ಮತ್ತು ಶ್ರೀ ಮಹಾಬಲ ಹೆಗ್ಡೆಯವರು ಸ್ಥಾಪಿಸಿದರು. ಸುಮಾರು ೮೩ ಪ್ರಾಯದ ಶ್ರೀ ಮಹಾಬಲ ಹೆಗ್ಡೆಯವರು ವಿಜಯ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿರುವವರು. ಇಂದಿಗೂ ಸಕ್ರಿಯ ಹ್ಯಾಮ್ ಪಟು ಇವರು. ಅವರ ಮಾತಿನಂತೆ ಆ ಕಾಲದಲ್ಲಿ ಮನರಂಜನೆಗೆ ಯಾವುದೇ ದ್ವಿತೀಯ ಮಾಧ್ಯಮ ಇಲ್ಲದಿದ್ದಾಗ ಅಣ್ಣನ ಮೆಕ್ಯಾನಿಕಲ್ ಜ್ಞಾನದಿಂದ ಈ ಹವ್ಯಾಸದ ಕಡೆಗೆ ವಾಲಿತು, ತನ್ನ ರೇಡಿಯೊ ರಿಪೇರಿ, ಇಲೆಕ್ಟ್ರಾನಿಕ್ ಗಳ ಬಗೆಗಿದ್ದ ಒಲವು ಹ್ಯಾಮ್ ನ ಕಡೆಗೆ ಸೆಳೆಯಿತು ಎನ್ನುತ್ತಾ ಭಾರತದಾದ್ಯಂತ, ಒಟ್ಟಿಗೆ ವಿದೇಶದ ಗೆಳೆಯರನ್ನು ಪಡೆದೆ  ಎನ್ನುತ್ತಾರೆ. ಜೊತೆಗೆ ಇಳಿ ವಯಸ್ಸಿನ ನನ್ನ ಜೀವನೋತ್ಸವಕ್ಕೆ ಹ್ಯಾಮ್ ಕಾರಣ ಪ್ರತಿದಿನ ಬೆಳಗ್ಗೆ ಎಲ್ಲರೊಂದಿಗೆ ಹರಟೆ ಹೊಡೆಯುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ. 

ಶ್ರೀ ಮಹಾಬಲ ಹೆಗ್ಡೆ (VU2HEG)
ಮಣಿಪಾಲದ ಶ್ರೀಕಾಂತ್ ಭಟ್ ಇವರು ಪ್ರಸ್ತುತ ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ ನ ಅಧ್ಯಕ್ಷರು ಹೇಳುವಂತೆ ನಿಸ್ತಂತು ತಂತ್ರಜ್ಞಾನದ ನೇರ ಅನುಭವ, ಆಂಟೆನಾ, ರೇಡಿಯೋ ತಂತ್ರಜ್ಞಾನದ ಮೂಲ ಜ್ಞಾನಕ್ಕೆ ಬಹಳ ಸಹಕಾರಿ. ಹ್ಯಾಮ್ ಒಂದು ಕುಟುಂಬದಂತೆ ಜ್ಞಾನ, ವಿಶೇಷ  ಅನುಭವ, ವ್ಯಕ್ತಿತ್ವ ವಿಕಸನ, ಸ್ವಂತಿಕೆ, ಸಾಹಸಗಳಿಂದ ಕೂಡಿರುವ ವಿಶೇಷ ಹವ್ಯಾಸವಾಗಿದೆ. ಜೊತೆಗೆ ಮರೆಯಲಾರದ ನೆನಪು, ಸಾಹಸದಂತಹ ಪ್ರಯೋಗ ನನ್ನನ್ನು ಪಕ್ವ ಮಾಡಿದೆ ಎನ್ನುತ್ತಾರೆ. ಯುವಕರು ಇಂತಹ ಹವ್ಯಾಸದಿಂದ ತಮ್ಮ ಗೆಳೆತನದ ಜಾಲ ಬೆಳೆಸುವುದರ ಜೊತೆಗೆ ಮತ್ತೊಂದು ಜಗತ್ತನ್ನೇ ನೋಡುವಂತಾಗುತ್ತದೆ.  ಹೌದು ೧೩ ಫೆಬ್ರುವರಿ ರೇಡಿಯೋ ದಿನ ಎಲ್ಲರಿಗೆ ರೇಡಿಯೋ ದಿನಾಚರಣೆಯ ಶುಭಾಶಯಗಳು.

ಶ್ರೀಕಾಂತ್ ಭಟ್ (VU2SBJ)

ವಿದ್ಯಾರ್ಹತೆ:
12 ವರ್ಷ ತುಂಬಿದ ಭಾರತದ ನಾಗರಿಕರಾಗಿರಬೇಕು ಹಾಗೂ ದೂರಸಂಪರ್ಕ ಮತ್ತು ವಿದ್ಯುನ್ಮಾನ ಸಚಿವಾಲಯ ಭಾರತ ಸರಕಾರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫ್ರೌಡಶಾಲಾ ಹಂತದ ವಿಜ್ಞಾನ ವಿಷಯ(ಮೂಲ ವಿದ್ಯುತ್ ಮತ್ತು ದೂರ ಸಂಪರ್ಕ ), ರೇಡಿಯೋ ಬಳಸುವ ಮೂಲ ಜ್ಞಾನ , ರೇಡಿಯೋ ನಿಯಮಗಳು ಮತ್ತು ಕಾನೂನುಗಳ ಬಗೆಗೆ ಪ್ರಾಥಮಿಕ ಜ್ಞಾನ ಇರಬೇಕು. 

ಹ್ಯಾಮ್ ರೇಡಿಯೋ, ರೇಡಿಯೋ ಸ್ಟೇಷನ್ ಎಂದರೆ ಆಕಾಶವಾಣಿಯಂತೆ ದೊಡ್ಡ ಸ್ಟೇಷನ್ಗಳಲ್ಲ.   ಸಾಧನಗಳು ಸುಮಾರು ಎರಡು ಮೂರು ಸಾವಿರದಿಂದ ಲಕ್ಷದಷ್ಟಿದೆ . ವಿ ಎಚ್ ಎಫ್ , ಎಚ್ ಎಫ್, ಯು  ಎಚ್ ಎಫ್ ತರಂಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಕರಾವಳಿಯಲ್ಲಿ ಹ್ಯಾಮ್ ಬಹಳಷ್ಟು ಜನರಿದ್ದಾರೆ. ಉದ್ಯೋಗದಾತರು, ಉದ್ಯಮಿಗಳು, ವೈದ್ಯರು, ಪ್ರತಿಷ್ಠಿತ ಕಾಲೇಜುಗಳ ಪ್ರಾಧ್ಯಾಪಕರು, ಪೈಲಟ್, ಬ್ಯಾಂಕ್ ಉದ್ಯೋಗಿಗಳು, ಕೃಷಿಕರು, ಎಂ ಆರ್ ಪಿ ಎಲ್ ಉದ್ಯೋಗಿಗಳು, ಸಮಾಜ ಸೇವಕರು, ಸಾಮನ್ಯರು ಹೀಗೆ ಎಲ್ಲರೂ ಇಲ್ಲಿದ್ದಾರೆ. 

ಭರತೇಶ ಅಲಸಂಡೆಮಜಲು 

Wednesday, November 6, 2019

ತುಳು ಪದ ವಿಶೇಷ


ಭಾಷೆ ಎಂಬುದು ಒಂದು ವಿಸ್ಮಯ. ನಾಗರಿಕ ಮಾನವನ ಮಹಾ ಅನ್ವೇಷಣೆಯಲ್ಲಿ ಇದೂ ಒಂದು. ಉಸಿರೆಂಬ ಶಬ್ದಗಾಳಿಯ ನಡುವೆ ಸಿಲುಕಿ ನಿರಂತರ ಕಂಪನವಾಗಿ, ಕಂಪನವು ಒತ್ತಡ, ಬಲ ಪ್ರಯೋಗ ಹಾಗೂ ಕಣಗಳ ಸ್ಥಾನ ಪಲ್ಲಟದಿಂದ ಉಂಟಾಗಿ, ಕಂಪನವು ಅಲೆಗಳ ರೂಪವಾಗಿ ಮಾತು ಅರಳು ಹುರಿದಂತೆ ಅರಳುತ್ತದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆಯಂತೆ. ಅವುಗಳಲ್ಲಿ ತುಳುವಿಗೂ  ವಿಶಿಷ್ಟ ಸ್ಥಾನವಿದೆ. 2000 ವರ್ಷಗಳಿಂದ ಜನ ಭಾಷೆಯಾಗಿದ್ದು, ಇಂದಿಗೂ  ಜೀವಂತವಾಗಿರುವ ನುಡಿ ಇದು. ಇಂತಹ ಅನನ್ಯತೆ ಇರುವುದು ಕೆಲವೇ ಭಾಷೆಗಳಿಗೆ ಮಾತ್ರ. ಅಸಂಖ್ಯಾತ ಜನ ತುಳುವನ್ನು ಬಳಸುತ್ತಾ  ಬಳಸುತ್ತಾ ನುಡಿಯಲ್ಲಿನ ಶಬ್ದಗಳಿಗೂ ಅವುಗಳ ಆಳದ ಅರ್ಥಗಳಿಗೂ ಅನನ್ಯ ಸಂಬಂಧ ಉಂಟಾಗಿದೆ. ಮಾತಿಗೂ ಅರ್ಥಕ್ಕೂ ಇರುವ ನಂಟನ್ನು ಕಾಳಿದಾಸ ಶಿವ ಪಾರ್ವತಿಯರಿಗೆ ಹೋಲಿಸಿದ್ದಾನೆ. ಆದರೆ ಶಬ್ದ ಅರ್ಥಗಳಲ್ಲಿ ಮೂಲಭೂತವಾದ ನಂಟೇನು ಇಲ್ಲ ಎನ್ನಬಹುದೇನೋ! ಹೆಚ್ಚಿನವು ರೂಪ, ಗುಣ, ಲಕ್ಷಣ ಮತ್ತು ರೂಢಿಯಿಂದ ಬಂದವಷ್ಟೇ.

ಒಂದು ಭಾಷೆಯ ಮೂಲಕ ಆಲೋಚನೆ ರೂಪು ತಾಳಿ ಮೊಟ್ಟೆಯಾಗಿ ಕಾವು ಕೊಟ್ಟು ಒಡೆದು ಮರಿಯಾಯಿತೆಂದರೆ ಅಲ್ಲಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದುದರಿಂದ ಭಾಷೆಯ ಹದವನ್ನು ತಿಳಿದು ಮಾತನಾಡುವುದನ್ನು ಇತರರು ಹೇಳಿದ್ದನ್ನು ಸರಿಯಾಗಿ  ಅರ್ಥ ಮಾಡಿಕೊಂಡು ಯೋಚಿಸುವವರಾಗಬೇಕಾಗುತ್ತದೆ. ಅದಕ್ಕಾಗಿ ಮಾತು ಮತ್ತು ಅರ್ಥ ಇವೆರಡರ ಸಂಬಂಧವನ್ನು ಅರಿತಾಗ ಮಾತ್ರ ಮಾತಿನ ಹದವಾದ ಎರಕ ಉಂಟಾಗುತ್ತದೆ. ಮಾತಿನ ಹೊರಮೈ ಅದರಲ್ಲಿ ಅರ್ಥ ಬಂದು ಸೇರುವ ಬಗ್ಗೆ, ಅದರ ಉಚ್ಚಾರ, ಶಬ್ದ ಒಡೆದು ನೋಡುವ ಪರಿ ಹೀಗೆ ಇವುಗಳ ಒಳಮರ್ಮವನ್ನು ತಿಳಿದರೆ ಭಾಷೆಯ ಬಗೆಗಿನ ಹಿಡಿತ ಕೈಗೂಡೀತು. ಇದು ಅಭ್ಯಾಸದಿಂದ. ಓದುವುದರಿಂದ ಹಾಗು ಬಳಸುವುದರಿಂದ  ಸಾಧ್ಯವಾಗುವುದು. 2000 ವರ್ಷಗಳಲ್ಲಿ ಅಸಂಖ್ಯಾತ ತುಳುವರುಸರವುಡು ಸರವುಮಲ್ಲೆಎಂದು ಮಾತನಾಡುವ, ಕೇಳಿಸಿಕೊಳ್ಳುವ ಭಾಷೆಯಾದ ತುಳುವನ್ನು ನಿರಂತರವಾಗಿ ಹರಿಯುವ ನದಿಯಂತೆ ಪದಕಟ್ಟುತ್ತಾ, ಪದ ಒಡೆಯುತ್ತಾ , ಅನ್ಯಭಾಷೆಯ ಪದಗಳ ಜೊತೆ ನೆಂಟಸ್ತಿಕೆ ಮಾಡುತ್ತಾ ಬಂದಿದ್ದಾರೆ. ಹರಿವಿನಲ್ಲಿ ಹಲವು ಶಬ್ದಗಳು ಹಿಂದಿನಂತೆ ಉಳಿದು ಬಂದಿದೆ. ಕೆಲವು ಮಾರ್ಪಾಡು ಮತ್ತೆ ಕೆಲವು ಮರೆಯಾಗಿ ಮರಳಲ್ಲಿ ನೆರಳಾಗಿ ಇಂಗಿಹೋಗಿವೆ. ಅದೆಷ್ಟೋ ಪದಗಳು ಹೊಸದಾಗಿ ಬಂದು ಬಂಧುರಾಗಿ ಸೇರಿಕೊಂಡಿವೆ. ಹೀಗೆ ಶಬ್ದಗಳ ನದಿಹರಿಯುತಿದೆ. "ಶಬ್ದ ಪಾರಂ ಆರ್ಗಂ ಅಶಕ್ಯಂ" ಎಂಬ ಮಾತಿದ್ದರೂ, ನಾವು ಬಳಸುವ ಶಬ್ದಗಳ ಸ್ವರೂಪ ಅಂದರೆ ಅವುಗಳ ಹುಟ್ಟು ಬೆಳವಣಿಗೆಯನ್ನು ಕೆದಕುವ ಹಾಗೂ ಶಬ್ದಗಳ ದಾಂಪತ್ಯದ ಮರ್ಮವನ್ನು ಕೆದಕುವ ಅದರ ಫಲವನ್ನು ಕುಡಿಗಳಲ್ಲಿ ಹುಡುಕುವ ಮೂಲಕ ಪದಗಳ ಹದವನ್ನು ಹರಿವನ್ನು ಹುಡುಕುವ ಚಿಕ್ಕ ಪ್ರಯತ್ನವಿದು.

ಆದಿವಾಸಿ ಸಂಸ್ಕೃತಿಯನ್ನು ಒಳಗೊಂಡ ತುಳುನಾಡಿನ ಸಂಸ್ಕೃತಿಯು ಕೃಷಿಯನ್ನು ಒಳಗೊಂಡ, ಮುಖ್ಯವಾಗಿ ಭತ್ತದ ಕೃಷಿ. ಭತ್ತದ ಕೃಷಿ ಸಾಹಿತ್ಯದಲ್ಲಿ ಕಂಡು ಬರುವ ಪಾಡ್ದನ, ಸಂಧಿ, ಉರಲ್, ಕವಿತೆ ಇದರಲ್ಲಿ ಬರುವ ಬಿತ್ತು, ಬೆನ್ನಿ, ಬಾರ್, ಬೇಸಾಯ, ಬುಲೆ , ಬೇಲೆ, ಬೇಂಕೆ, ಬೇನೆ, ಬೆಗರ್, ಬಿದೆ , ಬಯಿ, ಭತ್ತದ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಈಗ ಒಂದೊಂದೇ ತುಳು ಶಬ್ದಗಳನ್ನು ನೋಡುವುದಾದರೆ, ಸಂಸ್ಕೃತದಲ್ಲಿ ಬೀಜವಾದರೆ ದ್ರಾವಿಡದಲ್ಲಿ ಅದು ಕುರು ತುಳುವಿನಲ್ಲಿ ಬಿತ್ತು ಎಂದಾಗುತ್ತದೆ. ಮೊಳಕೆಗೆ ಬಂದ ಬೀಜಗಳಿಗೆ ಪೊಜಿಲು ಬಿತ್ತು, ಮೊಳಕೆ ಬರದ ಬೀಜಗಳಿಗೆ ಪೊಡಿ ಬಿತ್ತು ಎಂದಾಗುತ್ತದೆ. ಪುಂಡಿ ಬಿತ್ತು, ಕೈಬಿತ್ತು, ಕಿಂಕಿಣಿ ಬಿತ್ತು, ಪೊಟ್ಟು ಬಿತ್ತು ಎಂಬೆಲ್ಲ ಬೇರೆ ಬೇರೆ ಸಂದರ್ಭಗಳ ಪ್ರಯೋಗದಲ್ಲಿದೆ. ಜೊತೆಗೆ ಬಿತ್ತು ಪಾಡುನ, ಬಿತ್ತು ನರ್ಗಾಪುನ, ಬಿತ್ತುನವು, ಬಿತ್ತ್ ತಾರಾಯಿಬಿತ್ತ್ ಮುಡಿ, ಬಿತ್ತ್ ಬೋರಿ ಇವು ಜೀವ ಜೀವಕ್ಕೆ ಸಾಕ್ಷಿಯಾದವುಗಳ ವಂಶ ವಂಶದ ಕುಡಿ ಎಂಬ ಅರ್ಥವನ್ನು ಕೊಡುತ್ತದೆ. ಇನ್ನು ದ್ರಾವಿಡ ಭಾಷೆಯ ಕುರುವಿನ ಕಡೆ ಹೋದರೆ ಮಲಯಾಲಂನಲ್ಲಿ ಚಕ್ಕ ಕುರು ಅಂದರೆ ಹಲಸಿನ ಬೀಜ ತುಳುವಿನಲ್ಲಿ ಪೆಲತ್ತರಿ. ಅದಕ್ಕೆ ಸಂವಾದಿಯಾಗಿ ಅರಿ, ಜೂವೊತ್ತರಿ, ನಿಲುತ್ತರಿ ಪುತ್ತರಿ (ಪೊಸ ಅರಿ), ಹುತ್ತರಿ , ಸಾಮೆತರಿ ಎಂಬ ಪದಗಳು ಬಳಕೆಯಲ್ಲಿವೆ ಇವೆಲ್ಲ ಹುಟ್ಟು, ಸಮೃದ್ಧ, ಫಲವಂತಿಕೆ, ಜೀವನದ ಬಗೆಗಾಗಿವೆಇವು ಕೊಡವ, ತಮಿಳಿನಲ್ಲಿಯೂ ಬಳಕೆಯಲ್ಲಿವೆ. ಆದರೆ ಕನ್ನಡದ ಅಕ್ಕಿ, ಅರಬ್ಬಿಯ ಆಲ್ರುಸ್ ಗಳಿಗೆ ಸಂಬಂಧ ಕಲ್ಪಿಸುವುದು ಕಷ್ಟ ಸಾಧ್ಯ.

ಕುರುವನ್ನು ಆದಿಯಾಗಿರಿಸಿ, ತುಳುವಿನಲ್ಲಿ ಕುರುಂಟು ಎಂಬ ಪದವಿದೆ. ಇದು ದೈವಾರಾಧನೆಯ ಸಂಧರ್ಭದಲ್ಲಿ ದೈವಕ್ಕೆ ಕೊಡುವ ಒಂದು ಗಂಟಿನ ಕೈ ಕಾಣಿಕೆ. ಇದರಲ್ಲಿ ಅಕ್ಕಿ ಅಥವಾ ಬತ್ತವನ್ನು ತುಂಬಿಸಿ ಬೈಹುಲ್ಲಿನಲ್ಲಿ ಕಟ್ಟಿ ಅದಕ್ಕೊಂದು ಕೈ ಮಾಡಿ ಕೊಡುವುದು. ಇದು ಸಾಂಸ್ಕೃತಿಕ ನೆಲೆಯ ಶಬ್ದ ಎಂಬ ಜಿಜ್ಞಾಸೆ ಇದ್ದರೂ ಕುರು ಆದಿ ಪ್ರಯೋಗವಾಗಿದೆ. ಒಟ್ಟಾರೆ ಉರುಂಟು, ಕುರುಂಟು, ಮುರುಂಟು, ಸುರುಂಟು ಶಬ್ದಗಳೆಲ್ಲ ಬಾಯಿಯನ್ನು ಸುರುಂಟಿ ಸುತ್ತಿಕೊಂಡು ಅಥವಾ '' ಎನ್ನುವಂತೆ ಮಾಡುತ್ತದೆ. ಇದೇ ಕುರುಂಟು ಕೊಳಕೆ ಗದ್ದೆಯಲ್ಲಿ ಬೀಜ ಬಿತ್ತುವ ಮೊದಲು ನೀರು ಸರಿಯಾಗಿ ಹರಿದು ಹೋಗಲು ಚಿಕ್ಕ ಕಾಲುವೆಗಳನ್ನು ಮಾಡಲು ಉಪಯೋಗಿಸುವ ಸ್ವಲ್ಪ ದಿನ್ನ ಇರುವ ಗುಂಡಗಿನ ಕಲ್ಲು ಹೌದು. "ಅರಿಬೈಲ್ತ ಪೂಕರೆ ಕಂಡೊಟ್ ಸಂಕಪಾಲೆ ಕುರುಂಟು ಒಯಿಪುವೆ" ಎಂಬ ನಂಬಿಕೆಯಿದೆ. ಕುರುಂಟುವಿಗೆ ಕುಗ್ಗಿಹೋಗುವುದು, ಮುದುಡು, ಸುರುಳಿಸುತ್ತು, ಅಕ್ಕಿಯ ಸಣ್ಣ ಮುಡಿ ಒಂದೆಡೆಯಾದರೆ ಮದುಮಗಳ ಸಖಿಯು ಇದೇ ಕುರುಂಟು ಆಗಿದ್ದಾಳೆ. ಮದುಮಗಳ ಒಟ್ಟಿಗೆ ಬರುವ ಕುರುಂಟಿಗೆ ಕುರುಂಟು ಮರ್ಯಾದಿಯ ಬಿರ್ದ್  ಇದೆ. ಇದರೊಂದಿಗೆ ಕುರ್ಲೆ, ಕೊಡಿಪು, ಕೊಡಿಪಾಲೆ, ಕುಂಕುರು, ಕುರಲೆ, ಕುರುಂಬಿಲ್, ಕುರುಬಾಕಿಲ್, ಕುರೆ, ಕುರೆಪಾಟ್ ಎಂತೆಲ್ಲಾ ಕುರು ಎಂಬುದು ಸಾಮಾನ್ಯವಾಗಿ ಕಂಡು ಬರುತ್ತದೆ. ದ್ರಾವಿಡಿಯನ್ Etymology ಪ್ರಕಾರ ಕೊಡಿ ಎಂದರೆ Point, Peak , ಕುಡಿ, ಚಿಗುರು ಎಲೆ, ವಂಶ, ವಂಶದ ಕುಡಿ, ಬಾವುಟ, ಪತಾಕೆ, ಅಥವಾ ಧಾರ್ಮಿಕ ವಿಧಿ ಎಂದೆಲ್ಲ ಅರ್ಥಗಳು ಬರುತ್ತವೆ. ತಮಿಳು, ಮಲಯಾಲಂ, ಕೊಡವ ಭಾಷೆಗಳಲ್ಲಿಯು ಕೋಟ ಎಂಬ ಪ್ರಯೋಗದಿಂದ ಇದೇ ಅರ್ಥ ಬರುತ್ತದೆ. ”ಕಲ್ಲ ಮರಾಯಿಡ್ ನೀರ್ ದೆತ್ತೆರ್ ದೇವೆರ್ ಕೈ ಕೊಡಿ ಕಾರ ಕೊಡಿ ದೆಕ್ಯೆರ್ಎಂಬ ಪಾಡ್ದನದ ವ್ಯಾಖ್ಯಾನವಿದೆ. ದೈವ ದೇವರ ಧಾರ್ಮಿಕ ವಿಧಿಯ ಸಂದರ್ಭದಲ್ಲಿ ಮಡಿವಾಳನು ಶುಭಕಾರ್ಯ ನಡೆಯುವ ಸ್ಥಳದ ಮೇಲ್ಗಡೆಯ ಚಪ್ಪರಕ್ಕೆ ಚೌಕಾಕಾರವಾಗಿ ಕಟ್ಟುವ ಬಿಳಿಬಟ್ಟೆಯೂ ಹೌದು. ನಿಷೇಧ, ನಿಷಿದ್ಧ, ಯಂತ್ರ, ತಂತ್ರ, ಮಂತ್ರಗಳ ತಡೆಯ ಸಂಕೇತವಾಗಿ ಇದನ್ನು ಬಳಸುತ್ತಾರೆ. ಕಾಸರಕನ ಗೆಲ್ಲು, ಕೋಲು, ಚೀಂಕ್ರುಗಳನ್ನು ಬಳಸಿ ಕೊಡಿನಡ್ಪುನ ಎಂಬ ಬಳಕೆಯಿದೆ. ”ಕೊಡಿಕುಂಟುಎಂದು ಯಾವುದೇ ದೊಡ್ಡ ಉತ್ಸವದ ಸಂದರ್ಭದಲ್ಲಿ ಇಲ್ಲ್ ಒಕ್ಕೆಲ್  ಸಮಯದಲ್ಲಿ ಯಾರೆಲ್ಲ ಕೆಲಸಗಾರರಾಗಿ ದುಡಿದಿರುತ್ತಾರೊ ಅವರಿಗೆಲ್ಲ ಕೊಡುವ ಬಟ್ಟೆಯೂ ಆಗಿದೆ. ”ಕೊಡಿಯಡಿಎಂದರೆ ದೈವಾರಾಧನೆಯ ಸಂದರ್ಭದಲ್ಲಿ ಭೂತವನ್ನು ಕಟ್ಟುವವನು 'ವಸಯ' ಆಗುವ ಜಾಗದ ದೊಂಪ ಮತ್ತು ಸಿಂಗದನದ ಮೇಲ್ಗಡೆ ಚಪ್ಪರದಲ್ಲಿ ಮಡಿವಾಳ ಬಿಳಿಬಿಟ್ಟೆ ಕಟ್ಟುತ್ತಾನೆ. ಒಂದು ನೆಲೆಯಲ್ಲಿ ಬಟ್ಟೆಯಾದರೆ ಮತ್ತೊಂದು ನೆಲೆಯಲ್ಲಿ ನಿಷೇಧವನ್ನು ಕಾಣಬಹುದು. ಯಾಕೆಂದರೆ ಇಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಎಂಬುದು ಗಮನಾರ್ಹ. ಅದೇ ರೀತಿಕೊ()ಡಿಕಡ್ಪುನಎಂದರೆ ಮನೆಯಲ್ಲಿ ಯಾವುದೇ ಕಾರಣದಿಂದ ಉಶಾರಿಲ್ಲದವರಿಗೆ ಕಾಯಿಲೆ ಪೀಡಿತರಾದವರಿಗೆ ಒಂದು ನಿಗದಿತ ಪೂರ್ವ ನಿಯೋಜಿತ ದಿನದಂದು ಮಾಂಸಾಹಾರದೊಂದಿಗೆ ದೈವ ದೇವರ ಹೆಸರಿನಲ್ಲಿ ನಲಿಕೆ ಜನಾಂಗದವರು ಅವರು ನಂಬಿದ ದೈವರ ನಂಬಿಕೆಯ ವಿಧಿವಿಧಾನದಲ್ಲಿ ಮಾಡುವ ಪ್ರಾರ್ಥನೆಯು ಆಗಿದೆ. ಇಲ್ಲಿ ಒಂದು ನಿಶ್ಚಿತ ಗಡು ಸಾಂಕೇತಿಕ ನಿಷೇಧವು ಆಗಿರುತ್ತದೆ.
ಕೊಡಿ ಏರುನಎಂದರೆ ದೈವ ದೇವರುಗಳ ಉತ್ಸವಕ್ಕಾಗಿ ಧ್ವಜ ಏರುವುದು. ಇಲ್ಲಿ ಪತಾಕೆ ಬಟ್ಟೆಯ ತುಂಡು, ನಿಷೇಧ ಅರ್ಥಗಳನ್ನು ಕಾಣಬಹುದು. ಕೊಡಿ ಏರಿದ ಮೇಲೆ ಊರ ಹೊರಗೆ, ಗ್ರಾಮದ ಹೊರಗೆ ಹೋಗಿ ತಂಗುವುದುವಿಶೇಷ ಗೌಜಿ, ಶುಭ ಸಮಾರಂಭ , ಮಾಂಸಾಹಾರ ಹೀಗೆ ಇವನ್ನೆಲ್ಲ ಮಾಡಬಾರದೆಂಬ ನಿಯಮಗಳಿವೆ ಹಾಗೆಯೇ ಕೋಡಿ ಎಂದರೆ ಮೂಲೆ, ತುದಿ ಎಂಬ ಸ್ಥಳವಾಚಿಯು ಬಳಕೆಯಲ್ಲಿದೆ. ತೆಲುಗು ಭಾಷೆಯಲ್ಲಿ ಜಲವಾಚಿಯಾಗಿತಗ್ಗಾದ ನೀರಿನ ಬೈಲು”, ನೀರು ಹರಿಯುವ ತೋಡು ಎಂಬ ಪದಾರ್ಥವಿದೆ. ಕೋಡಿ ಮಜಲು, ಬೆಂಗೋಡಿ, ಮುಡೋಡಿ , ಮುಂಡೋಡಿ  ಮುಸ್ಥಳನಾಮಗಳನ್ನು ನಾವು ಕಾಣಬಹುದು.
ಅರದಲ ಮತ್ತೊಂದು ಪದ. ಇದು ದೈವಾರಾಧನೆಯ ಸಂದರ್ಭದಲ್ಲಿ ಭೂತ ನರ್ತಕರು ಮುಖ, ಮೈ ಮೇಲಿನ ಸಿಂಗಾರಕ್ಕಾಗಿ ಹಚ್ಚಿಕೊಳ್ಳುವ ಜಾನಪದ ಬಣ್ಣ. ಇದು ಒಂದು ಬಗೆಯಲ್ಲಿ ನೆಲಮೂಲದ ನೈಜ ಪ್ರಾಕೃತಿಕ ಬಣ್ಣ. ಇಲ್ಲಿ ಮೂಲ ಬಣ್ಣಗಳಾಗಿ ಹಳದಿ, ಕಪ್ಪು, ಕೆಂಪುಗಳಿವೆ. ಮುದ್ರೆ, ಚುಕ್ಕಿ. ಚುಟ್ಟಿ, ಗೆರೆ, ಸುಲಿ, ನಾಮ, ನಾಮ ಬರೆಪ್ಪುನಚುಟ್ಟಿ ಬರೆಪ್ಪುನ, ದಾಡೆ ಬರೆಪ್ಪುನ ಹೀಗೆ ಹಲವುಅರದಲ ಎನ್ನುವಂತದ್ದು ವಿದ್ವಾಂಸರ ನೆಲೆಯಲ್ಲಿ ಇದೊಂದು ಪಾರಿಭಾಷಿಕ ಪದ. ಹಳದಿ, ಅರಶಿಣ ಸಂಬಧಿಸಿದ್ದು ಗಾರ್ಸಿಯ ಪ್ರಭೇದದ ಮರ ಎಂಬ ನೆಲೆಯಲ್ಲಿ ಜಿಜ್ಞಾಸೆಯಿದೆ.

ಕಪ್ಪು ಬಣ್ಣಕ್ಕಾಗಿ ಬೈಹುಲ್ಲನ್ನು ಹೊತ್ತಿಸಿ ಮಸಿ ಮಾಡಿ ಅದನ್ನು ಎಣ್ಣೆಯಲ್ಲಿ ಕಲಸಿಮಯಿಮಾಡಿದರೆ, ತೆಂಗಿನ ಗೆರಟೆ ಸುಟ್ಟು ಮಾಡಿದಚಿಪ್ಪಿ ಕರಿ’ಯನ್ನು ಬಳಸುತ್ತಾರೆ. ಬಿಳಿ ಬಣ್ಣಕ್ಕಾಗಿ ಜೇಡಿ ಅಥವಾ ಅಕ್ಕಿಯನ್ನು ಅರೆದು ಬೊಳ್ಗಲ್ ಪೊಡಿಯಿಂದ ಮಾಡಿದರೆ,   ಹಳದಿ ಬಣ್ಣಕ್ಕಾಗಿ ಆನೆ ಮಂಜೊಲ್, ಬಚ್ಚನಾರೆ ಬೇರ್ ಗಳನ್ನು ಬಳಸುತ್ತಾರೆ. ಮುಖ್ಯವಾಗಿ  ಇಲ್ಲಿ ಅರ, ಅರೆ ಪದಗಳ ಅರ್ಥಗಳನ್ನು ಕಾಣಬಹುದು. ಅರೆದು ಮಾಡುದರಿಂದ ಕ್ರಿಯಾ ಘಟಕದ ನೆಲೆಯಲ್ಲಿ ಅರದಲ ಬಂದಿದೆಯೊ ಎನೋ ಎಂಬ ಕುರುಹು ಇದೆ. ಅರ ಎಂದರೆ ಗರಗಸಗಳನ್ನು ನಯಗೊಳಿಸುವ Multipointಗಳಿರುವ ಸಣ್ಣ ಹತ್ಯಾರು, ಹಲವು ಬಾಯಿ ಇರುವ ಲೋಹದ ವಸ್ತುಗಳನ್ನು ನಯಗೊಳಿಸುವ ಸಾಧನವಾಗಿದೆ. ಅಂಗೈ, ಕೈಯ ಬೆರಳುಗಳಿಂದ ಮುಖ, ದೇಹವನ್ನು   ಉಜ್ಜಿಕೊಳ್ಳುವುದರಿಂದ ಇದು ಒಂದು ನಮೂನೆ ಅರದಿಂದ ಅರೆದಂತೆ ಬಾಸವಾಗುತ್ತದೆ. ಜೊತೆಗೆ ಅರವು, ಆರ್ಕ್(ತಬ್ಬು),  ಅರ್ಕೆಲ್, ಅರೆಪ್ಪು, ಅರಬಾಯಿ, ಅರ್ಕಂಜಿ(ಅರಿನ್ ಕೈಟ್ ಉಳುಂಬುತ್(Friction) ದೆಕ್ಕುನಾ ನೀರ್ ) ಅರಂಟೆಲ್, ಅರಂಜೆಲ್ ಪದಗಳು ಬಲಕೊಡುತ್ತದೆ. 

 'ಅರ್' ಸ್ಥಳನಾಮವಾಗಿಯೂ ಗಮನಿಸಬಹುದು. ತಾರ್, ಸಾರ್, ದೇವರ  ಜಲಸ್ನಾನ ಆರಾಟೊ ಮುಖ್ಯವಾಗಿ ಜಲವಾಚಿಯಾದ ಬಳಕೆಗಳಾಗಿವೆ. ಅರ್ಕುಳ, ಅರಿಯಡ್ಕ, ಅರಂದ್, ಅರಂತೋಡು, ಅರ್ಕಲ, ಕೊಂಬಾರ್, ಮಿಯಾರ್ ಗಳಲ್ಲಿ ಸಾಧಿತ ಮತ್ತು ವಾರ್ಗಿಕ ಅಕೃತಿಮಗಳಾಗಿ ಇವುಗಳು ಸೇರಿಕೊಂಡಿವೆ . ಒಟ್ಟಾರೆ ನೀರಿನಿಂದ ಸೇರಿಸಿ ಅರೆಕಲ್ಲಿನಿಂದ ಅರೆದ ಅರೆಪ್ಪು ಅರದಾಳವಾಯಿತೆಂದರೂ ಆಶ್ಚರ್ಯಪಡಬೇಕಿಲ್ಲ.

ಪನಿ ಅವಾರೊಪನಿವಾರೊ ಪನಿ ಮತ್ತು ಅವಾರೊ ಎಂಬೆರಡು ಶಬ್ದದಿಂದ ಬಂದಿರುವಂತಹುದು. ಪನಿ ಎಂದರೆ ತಂಪು, ಹನಿ, ಸಣ್ಣ, ಸ್ವಲ್ಪ ಎಂಬರ್ಥಗಳಿವೆ. ಇರ್ಪನಿ, ಬಿರ್ಪನಿ, ಧಾರೆ ಪನಿ, ಪನಿನೀರ್, ಪನಿಪ್ಪುನಿ, ಪನಿಪು, ಪನಿ ಕಡಿಪುನ, ಪನಿಕತೆ , ಪನಿಕಪ್ಪೆ, ಪನಿದೊಂಬು, ಪನಿಕುಂಕುಮ ಇಲ್ಲಿ ದೈವಕ್ಕೆ ಬೆಟ್ಟದಷ್ಟು ಬೇಕು. ಮಾನವರಾದ ನಾವು ಅಷ್ಟೆಲ್ಲಾ ನೀಡಲು ಅಸಾಧ್ಯ ಬದಲಾಗಿ ಹನಿಯಷ್ಟು ನೀಡಿದನ್ನು ಬೆಟ್ಟದಷ್ಟು ಎಂದು ತಿಳಿದು ನಾವು ಕೊಡುವ ಅವಾರೊ ಆಹಾರವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಬೇಕೆಂಬುದು ಆಗಿದೆ. ಅವಾರೊ ಸಂಸ್ಕೃತದ ಆಹಾರದಿಂದ ಬಂದಿದೆ ಎಂದರೂ ದ್ರಾವಿಡದಲ್ಲಿ ಅವ್ ಪ್ರತ್ಯಯ ಭತ್ತ ಅಕ್ಕಿಗೆ ಸಂಬಂಧಿಸಿದ್ದಾಗಿದೆ. ಅವಲ್, ಅವಲಕ್ಕಿ, ಅವಿಲ್ ಎಂಬ ಬಳಕೆ ಕಾಣಬಹುದು. ದೈವಗಳಿಗೆ ಕೊಡಿ ಬಾಲೆ ಎಲೆಯಲ್ಲಿ ಬಡಿಸಿ ಅರ್ಪಿಸುವ ಕಜ್ಜಾಯವು ಹೌದು. ನಮ್ಮ ಸುತ್ತಮುತ್ತಲು ಬೆಳೆಯುವ ನಮ್ಮದೇ ಆಹಾರಗಳಾಗಿರುವ ಬಾಳೆಹಣ್ಣು, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬೆಲ್ಲ ಪೊರಿಗಳನ್ನು ಒಟ್ಟಾಗಿ ನೀಡುವುದು ನೋಡಬಹುದು. ಇಲ್ಲಿಯು ಪೊರಿ ಮುಖ್ಯವಾದುದರಿಂದ ಅಕ್ಕಿ ಸಂಬಂಧಿ ಪದಾರ್ಥ ಎಂಬುವುದದು ಸ್ಪಷ್ಟವಾಗುತ್ತದೆ. ಪನಿಯಾರದಂತೆ ಬಾರಣೆ, ಬಲಿ, ಬಿಂದು, ಅಂಗಾತ್ನೆ, ಅಗೆಲ್ಆವಾರೊ , ಸರ್ವೆ, ಪಸಾರ್ನೆ, ಭೋಗ ಎಲ್ಲವೂ ಇದೇ ಅರ್ಥ ಕೊಡುತ್ತದೆ.

ತುಳುವಿನಲ್ಲಿ ಇಂತಹ ಬಹಳಷ್ಟು ಶಬ್ದಗಳು ಕುತೂಹಲ ಕೆರಳಿಸುವಂತಿದೆ. ಅವುಗಳ ಸ್ವರೂಪ, ರೂಢಿ, ಲಕ್ಷಣ, ಉಚ್ಚಾರ, ಆಕೃತಿಮಾ ಸಂದರ್ಭಗಳಿಗನುಸಾರವಾಗಿ ಬದಲಾಗುತ್ತವೆ. ಅವು ಪಾರಿಭಾಷಿಕ ಪದಾರ್ಥಗಳಾಗಿರಬಹುದು, ರೂಢಿಪದಗಳಾಗಿರಬಹುದು. ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೃಷಿ ಸಂಬಂಧಿಗಳು ಆಗಿರಬಹುದು. ತುಳು ಪದದ ಜಿಜ್ಞಾಸೆಯಲ್ಲಿ ತುಲುವೆಂದರೆ ತುಳುವ ಪೆಲಕಾಯಿ, ಮೆದು, ನೀರು ಎಂಬುದನ್ನು ಬಿಟ್ಟು ಅದಕ್ಕಿರುವ ಪರ್ಯಾಯ ಪದಾರ್ಥಗಳಾದ ಆಕ್ರಮಣ, ಕೇರಳೋತ್ಪತಿಯ ತುಳು, ತಮಿಳಿನ ತುಲೈ, ತುರುನಾಡು, ತುರುವೆ, ತುಲ್ಲುನಾ, ತುಳ್ಳಲ್ ಎಲ್ಲ ಮುಖ್ಯ ಪಾತ್ರ ವಹಿಸುತ್ತದೆ ಅದೇ ರೀತಿ ಬೆರ್ಮೆರ್, ಸಿರಿಯ  ಬಿರ್ಮಾಳ್ವ , ಕೋಟಿ ಚೆನ್ನಯರ ಬೆರ್ಮೆರ್, Pietro Della Valle Brimore, ಅಮಿತ್ ಘೋಷ್ B-M-S ಬೊಮ್ಮ, ಬೊಮ್ಮರಸ  ಎಲ್ಲವುಗಳು ಚರಿತ್ರೆ, ಪ್ರಭುತ್ವ, ಆರಾಧನೆ, ನಂಬಿಕೆಗಳ ತುಳುವನ್ನು ಕಟ್ಟಬೇಕಾಗಿದೆ. ಎಲ್ಲೆ-ನಾಳೆ ಎಂಬ ಗಡಿಯು ತೆಂಗಿನಗಡಿಯು ಆಗಬಹುದು. ಕೋಡೆ, ಕೊಡಿ ಎಂಬ ನಿಷೇಧವು ಇರಬಹುದು. Sick ನಿಂದಾದ ಸೀಕು, ಕಾಕಜ್ನಿಂದಾಗಿ ಕಾಕಜಿಯು ಆಗಬಹುದು. ಆಟಿ-ಅರೆಗಾಲೊ, ಮಾಯಿ-ಮರಿಯಾಲೊ, ಮೂರ್ತೆ, ಪೊವುಲು, ಮುಡ್ಕನೆ, ಅಜಮಾರೊ, ಅಜಕೋಲು, ಅಡ್ಯರ, ವರಂಕ, ಕಾಂಗೊ-ದಾವನೆ, ಕುತ್ತಿ-ಕತ್ತಿ ಯಾವುದೇ ಇರಲಿ ಅವುಗಳ ಮೂಲಸ್ವರೂಪಗಳು ವಿಶಿಷ್ಟವಾದುವುಗಳು.

ಮಧ್ಯಮಣಿ ನ್ಯಾಯಎಂಬಂತೆ ಹಾರದ ಮಧ್ಯದಲ್ಲಿ ದೊಡ್ಡದಾಗಿರುವ ಒಂದು ನೀಲಿ ಮಣಿಯನ್ನೋ ಕೆಂಪನ್ನೋ ಪೋಣಿಸಿರುತ್ತಾರೆ. ಅದು ಹಾರದ ಎರಡು ಪಾರ್ಶ್ವಗಳಿಗೂ ಸೌಂದರ್ಯವನ್ನು ಕೊಡುತ್ತದೆ ಅಥವಾ ಮೂಗುತಿಯಲ್ಲಿ ಎರಡು ಮುತ್ತುಗಳ ಮಧ್ಯದಲ್ಲಿ ಕೆಂಪು ಇರುತ್ತದೆ. ಕೆಂಪಿನ ಕಾಂತಿಯೂ ಇಕ್ಕೆಲಗಳ ಮುತ್ತುಗಳ ಮೇಲೆ ಹರಡುತ್ತದೆ. ವಾಕ್ಯದಲ್ಲಿರುವ ಪದಾರ್ಥದಲ್ಲಿರುವ ಶಬ್ದವು ಪೂರ್ವೋತ್ತರ ವಿಷಯಗಳೆರಡಕ್ಕೂ ಸಂಬಂಧವಾದಾಗ ನ್ಯಾಯ ಪ್ರವರ್ತಿಸುತ್ತದೆ. ಇದು ಪದಗಳ ನ್ಯಾಯ.

ಚೀನಾ ಮಹಾಗೋಡೆಯನ್ನು ಹೇಗೋ ದಾಟಿಕೊಂಡು ಒಳಗೆ ನುಸುಳಿದ ವಿದೇಶೀ ಪ್ರವಾಸಿಗನೊಬ್ಬ ಚೀನಿಯವನೊಬ್ಬನಿಗೆ ಕೇಳಿದನಂತೆ ವಿದೇಶಿ ಆಕ್ರಮಣಕಾರರ ಹಾವಳಿಯನ್ನು ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದ್ದೀರಾ ಎಂದು? ಪ್ರಶ್ನೆಗೆ ಚೀನಿಯನು ಕೊಟ್ಟ ಉತ್ತರ ಅದು ಹಾಗಲ್ಲ !! ‘ವಿದೇಶಿಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಗೋಡೆ ಕಟ್ಟಿದ್ದೇವೆಎನ್ನುತ್ತಾನೆ ತರಹದ ಭಾಷಿಕ ನೆಲೆಯ ಗೋಡೆ ನಾವು ಕಟ್ಟಿಕೊಂಡು ಪದ, ಶಬ್ದ, ಮಾತುಗಳನ್ನು ಜತನದಿಂದ ಕಾಪಾಡುತ್ತಾ ಬೆಳೆಸುವುದು ಉತ್ತಮ.

ಹೀಗೆ ತುಳುವಿನ ಅನನ್ಯತೆಯ, ಅಸ್ಮಿತೆಯ ಪ್ರಾದೇಶಿಕತೆಯು ಗುರುತಾಗಿಸಿ ಪ್ರತಿ ಪದಾರ್ಥಗಳ ಸವಿರುಚಿ ಹುಡುಕುವುದೆಂದರೆ ಅದು ಮಳೆಗಾಲದ ಡೆಂಜಿ ಬೋಂಟೆಯಷ್ಟೆ ಸೊಗಸು. ಒಂದು ಹುಡುಕಿದರೆ ಮತ್ತೊಂದು ಮಗದೊಂದು ಎಂದು ಪದಾರ್ಥಗಳ ಬೇಟೆ ಖುಷಿಯ ಕೊಡುತ್ತದೆ. ಕರಾವಳಿಯ ತುಳುನಾಡಿನಲ್ಲಿ ಹಲವು ಸಮುದಾಯಗಳು, ಪ್ರಾದೇಶಿಕ ಭಿನ್ನತೆಯೊಂದಿಗೆ ಹಲವು ತುಳು ಶಬ್ದ, ಪದಗಳನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಆಧುನಿಕತೆಯ ಕೊಡಿ ಅಡ್ಡ ಬರದೇ ಎಲ್ಲ ಕಡೆಯು ಬಿತ್ತು ಹಾಕಿಕೊಂಡು ಪನಿವಾರದಂತೆ ಎಲ್ಲರೂ ಸ್ವಲ್ಪ ಸ್ವಲ್ಪವೇ ಬಳಸುತ್ತಾ ಶಬ್ದ ಭಂಡಾರದೊಂದಿಗೆ ಆಟವಾಡುತ್ತಾ, ಅನನ್ಯತೆಯೊಂದಿಗೆ ಉಳಿಸಿಕೊಂಡು ಸಾಂಸ್ಕೃತಿಕವಾಗಿ ಬೆಳೆಸೋಣ ಎಂಬುದೇ ಆಶಯ.

ಸುಳ್ಯ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ 2019 ಇದರಲ್ಲಿ ಪ್ರಕಟವಾದ ಬರಹ.


Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...