Sunday, February 15, 2015

ತುಳುನಾಡ ಕೆಡ್ಡಸ. - ಭೂಮಿ ಋತುಮತಿಯಾಗುವುದು.

          ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು... ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಲೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ...  ತಿನ್ನಲು ಬೊಂಡ, ಬಣ್ಣಂಗಾಯಿ, ಕೊಟ್ಟು ತಂಪು ಮಾಡಿ, ಪ್ರೀತಿಪಾತ್ರರಿಂದ ಸಿಹಿತಿಂಡಿ ನೀಡಿ ಬಾಯಿ ಸಿಹಿಮಾಡಿ, ಮತ್ತೆ ಅರಶಿನ, ಕುಂಕುಮ , ತಲೆಗೆ ತೆಂಗಿನ ಎಣ್ಣೆ , ಸ್ನಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆ ಹಾಕಿ ಸ್ನಾನ ಮಾಡಿಸಿ, ಹೊಸ ಕಾಜಿ, ಹೊಸ ಬಟ್ಟೆ ಹಾಕಿಸಿ ಮದಿಮಾಲ್ ಮಾಡುವುದೆಂದರೆ ಮನೆಮಂದಿಗೆಲ್ಲ ಅದೇನೋ ಖುಷಿಯೋ ಖುಷಿ. ಮನೆ ಹುಡುಗಿ ಮದ್ಮಲಾಯಲ್ ಅದಳು ಅಂದರೆ ಸೃಷ್ಟಿಸುವ ಕಾರ್ಯಕ್ಕೆ ಅನುವಾದಳು ಎಂಬರ್ಥ  ಅದೇ ಖುಷಿಯನ್ನು ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಕೆಡ್ಡಸ, ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎಂಬ ಪ್ರತೀತಿ. ಅಂದರೆ  ಜಗದಲ್ಲಾಗುವ ಹಗಲು - ರಾತ್ರಿ, ಋತು ಬಿಸಿಲು, ಮಳೆ, ಚಳಿ, ಹಾಗೆಯೇ ಹುಣ್ಣಿಮೆ - ಅಮಾವಾಸ್ಯೆಗಳು ನಮ್ಮ ಬಾಹ್ಯ ಅನುಭವಕ್ಕೆ ಬರುವಂತಹುದು ಅದರೆ ಸಂಕ್ರಮಣ, ಉತ್ತರಾಯಣಗಳು ನಮ್ಮ ಯೋಚನೆಗೆ ನಿಲುಕದ್ದು ಅದೇ ಪ್ರಕೃತಿಯ ಋತುಚಕ್ರ ಈ ವ್ಯತ್ಯಯಗಳ ಕಾಲವನ್ನೇ ತುಳುವರು ಒಂದೊಂದು ಆಚರಣೆಯ ರೂಪದಲ್ಲಿ ಆರಾಧಿüಸುತ್ತಿರುವುದು.
ಕಡೆ ಕೆಡ್ಡಸ 

            ಇಂತಹ ಒಂದು ಆಚರಣೆಯಲ್ಲಿ ಒಂದು ಈ ಕೆಡ್ಡಸ, ಇಲ್ಲಿನ ಜನ ಮಣ್ಣಪ್ಪೆ ಭೂಮಿಯನ್ನು ಹೆಣ್ಣಿನ ಸ್ಥಾನ ನೀಡಿ ಪ್ರೀತಿಸುವವರು, ಇದು ತುಳು ತಿಂಗಳ ಪೊನ್ನಿ(ಮಕರ) 27 ಕ್ಕೆ ಭೂರಮೆ ದೊಡ್ಡವಾದಳೆಂಬ ನಂಬಿಕೆ, ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಬರುತ್ತದೆ  ಮೂರು ದಿನದ ಈ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ.. ಈ ಸಮಯಕ್ಕೆ ಮಳೆ ಸರಿದು ಫಲ ಗಾಳಿ ಬೀಸುತ್ತಿರುತ್ತದೆ ಮಾವು, ಗೊಂಕು, ಹಲಸುಗಳೆಲ್ಲ ನಿನೆ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ.

              ಕೆಡ್ಡಸದ ಮೊದಲ ದಿನ ಅಷ್ಟೊಂದು ವಿಶೇಷತೆಯಿಲ್ಲದಿದ್ದರೂ ಪುರುಷರು ಕತ್ತಿ, ನೊಗ, ಹಾರೆಗಳಿಗೆ ಪ್ರಾರ್ಥಿಸುವ ಕ್ರಮವಿದೆ ಮುಂದಿನ ಮೂರು ದಿನ ಕತ್ತಿ , ನೊಗ ,  ಹಾರೆಗಳು ಒಟ್ಟಾರೆ ಹತ್ಯಾರುಗಳಿಗೆ ರಜೆ, ತೋಟದ ಕೆಲಸ, ಮರಕಡಿಯುವುದು, ನೆಲ ಅಗೆಯುವುದು, ಹಸಿ ಕೀಳುವುದು, ತರಕಾರಿ ಕೀಳುವುದು,  ನೀರೆರೆಯುವುದು, ಗದ್ದೆ ಕೆಲಸಗಳನ್ನು ಮಾಡಬಾರದು ಭೂ ಕುಮಾರಿಗೆ ರಜಸ್ವಲೆಯಾಗಿರುವಾಗ ಕೃಷಿಕೆಲಸ ಮಾಡಿ ನೋವುಂಟು ಮಾಡಿದರೆ ಭೂಮಿಗೆ ನೋವಾಗುತ್ತದೆ ಆಕೆ ಬಂಜೆಯಾಗುತ್ತಾಳೆ ಎಂಬುವುದು ಅದರ ಹಿನ್ನೆಲೆ. ಮೂರನೇ ದಿನ ಮಹತ್ವದ ದಿನ ಆಕೆಯ ಮೈಲಿಗೆಯ ಶುದ್ಧಚರಣೆಗೆ ಮನೆಯ ಹೆಣ್ಣು ಮಕ್ಕಳು ಸ್ನಾನ ಮಾಡಿ ತುಳಸಿ ಕಟ್ಟೆಯ ಎದುರು ಗೋಮಯದಿಂದ ಶುದ್ಧಿಗೊಳಿಸಿ ಕ್ರಮವಾಗಿ ಹಲ್ಲುಜ್ಜಲು ಇದ್ದಿಲು ಮಾವಿನ ಎಲೆ, ತಲೆಗೆ ಎಣ್ಣೆ ಬಿಟ್ಟು, ಹಲಸಿನ ಎಲೆ, ಅರಶಿನ ಸ್ನಾನದ ನೀರಿಗೆ ಹಾಕಲು, ಸೀಗೆ, ನರ್ವೋಲ್ ಮೈ ಉಜ್ಜಿಕೊಳ್ಳಲು ಇಟ್ಟರೆ ಕುಂಕುಮ ಹಣೆಗೆ ತಿಲಕವನ್ನಿಡಲು, ದರ್ಪಣ, ಬಾಚಣಿಕೆ ಸೌಂದರ್ಯ ದೋತ್ಯಕವಾದರೆ ಚೀತ್(ಸೀಳಿದ) ಬಾಳೆಎಲೆಯಲ್ಲಿ ನನ್ಯರಿಗಳನ್ನು ಸಾಲಾಗಿ ಇಟ್ಟು ಆಕೆಗೆ ಸಮ್ಮಾನ ಮಾಡಿ ಪ್ರಾರ್ಥಿಸುವುದು ಹೆಂಗಸರ ಕಾರ್ಯ ಜೊತೆಗೆ ತೆಂಗಿನ ಗರಿ ಕಡ್ಡಿ, ಕಿರು ಕತ್ತಿಯನ್ನು ಇಡುವುದು ಕ್ರಮ. ಕೆಡ್ಡಸದ ವಿಶೇಷ ತಿನಿಸು ಅಂದ್ರೆ ಅದು ನನ್ಯರಿ, ಕೆಡ್ಡಸದ ಹಿಂದಿನ ರಾತ್ರಿ ಸೇರು ಕುಚ್ಚಲಕ್ಕಿ ಜಾಲಿಸಿ, ಸ್ವಲ್ಪ ಉಪ್ಪಿನ ನೀರು ಕೊಟ್ಟು ಒಡು ಪಾಲೆ ಅಡ್ಯೆ ಮಾಡುವ ಒಡಿನ ತುಂಡು ಅಥವಾ ಕಾವಲಿಯಲ್ಲಿ ಕುಚ್ಚಲಕ್ಕಿ, ಹುರುಳಿ, ಹೆಸರು, ನೆಲಗಡಲೆ, ಗೇರುಬೀಜ, ಎಳ್ಳು, ಮೆಂತೆ ಸೇರಿಸಿ ಹುರಿದು ಮತ್ತೆ ಕಡೆಪಕಲ್ಲಿಗೆ(ಬೀಸು ಕಲ್ಲು) ಹಾಕಿ ಅರೆದು ಹುಡಿಮಾಡಿದರೆ ಕೆಡ್ಡಸದ ಪ್ರಾಥಮಿಕ ಸಿದ್ಧತೆ ಪೂರ್ಣವಾಯಿತು. ಮರುದಿನ ಬೆಳಗ್ಗೆ ಬೇಗ ಎದ್ದು ದೊಡ್ಡ ಅಡ್ಯೆತಾ ಕರದಲ್ಲಿ ಬೇಕಾದಷ್ಟು ಪೆರೆಸಿದ ಬೆಲ್ಲ, ತೆಂಗಿನ ಕಾಯಿ ತುರಿದು ಸ್ವಲ್ಪ ತುಪ್ಪ ಸೇರಿಸಿರೆ ನನ್ಯರಿ ಸಿದ್ಧ . ಮತ್ತೆ ಹೊದ್ಲು, ಹುರಿಯಕ್ಕಿ ಹಾಕಿ ಬಾಳೆಹಣ್ಣಿನೊಂದಿಗೆ ನೆಂಚಿ ತಿನ್ನಲು ಅದೆನೋ ಸೊಗಸು. ಬೆರೆಸದ ನನ್ಯರಿಯನ್ನು ಹಳೆಯ ಡಬ್ಬಗಳಲ್ಲಿ ತುಂಬಿಸಿಟ್ಟು ಬಂದ ಬಂಧುಗಳಿಗೋ, ಬಯ್ಯಾತ ಚಾಯಕ್ಕೋ ಪ್ರತಿ ಮನೆಯಲ್ಲಿಯೂ ವಾರಗಟ್ಟಲೇ ಕಾಯುತ್ತಿರುತ್ತದೆ. ಈ ನನ್ಯರಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಮತ್ತೆ ಮಧ್ಯಾಹ್ನದ ಊಟಕ್ಕೆ ನುಗ್ಗೆ - ಬದನೆ ವಿಶೇಷ ಪದಾರ್ಥ ಅಗಲೇ ಬೇಕು.
ನನ್ಯೆರಿ 


ಕೆಡ್ಡಸ ಹಬ್ಬದ ಒಂದು ವಾರದ ಮೊದಲು ಆ ಗ್ರಾಮದ ಭೂತ ನಲಿಕೆ ಜನ, ಪಾಣರ ಜನ, ಮನೆ ಮನೆಗೆ ಬೇಟಿ ನೀಡಿ ಕೆಡ್ಡಸದ ಲೆಪ್ಪೋಗೆ ಕೊಡಲು ಬರುವುದು ಸಾಮಾನ್ಯ ಮನೆಯ ಹಿರಿಯರು ಕೊಟ್ಟ ಬಚ್ಚಿರೆ - ಬಜ್ಜೆಯಿಯನ್ನು ಮೆಲ್ಲುತ್ತಾ ಒಂದಷ್ಟು ಕ್ಷೇಮ ಸಮಾಚಾರ ಮಾತನಾಡಿಸಿ ಅವರ ಕಟ್ಟಿನ ಪಾಡ್ದನದ ಹಾಡು ಹೇಳಿ ಕೆಡ್ಡಸ ಕರೆ ತರುತ್ತಾರೆ. ಅವರಿಗೆ ಸೇರು ಕುಚ್ಚಲಕ್ಕಿ, ಒಂದು ಚೆಪ್ಪು ಇರುವ ದೊಡ್ಡ ತೆಂಗಿನಕಾಯಿ, ಉಪ್ಪು, ಮೆಣಸು, ಹುಳಿ, ಅರಶಿನ ತುಂಡು, ಬಚ್ಚಿರೆ, ಬಜ್ಜೆಯಿ ನೀಡಿ ಕಳುಹಿಸಿ ಕೊಡಬೇಕು. ಕೆಡ್ಡಸದ ದಿನ ಸಂಕ್ರಾಂತಿಯಾದುದರಿಂದ ದೈವಸ್ಥಾನ ಬಾಗಿಲು ತೆರೆದು ದೀಪ ಇಡುವ ಕ್ರಮವೂ ಇದೆ.

ನಲಿಕೆಯವರ ಪಾಡ್ದನ ಹೀಗಿದೆ .
"ಸೋಮವಾರ ಕೆಡ್ಡಸ,
ಮುಟ್ಟುನೆ ಅಂಗಾರ ನಡು ಕೆಡ್ಡಸ
ಬುಧವಾರ ಬಿರಿಪುನೆ
ಪಜಿ ಕಡ್ಪರೆ ಬಲ್ಲಿ
ಉನುಂಗೆಲ್ ಪೊಲಿಪ್ಯರೆ ಬಲ್ಲಿ,
ಅರಸುಲೆ ಬೋಟೆಂಗ್
ಸರ್ವೆರ್ ಉಲ್ಲಾಯನಕುಲು ಪೋವೋಡುಗೆ.
ವಲಸಾರಿ ಮಜಲ್ಡ್ ಕೂಡ್ದು
ವಲಸರಿ ದೇರ್ದ್ದ್  ಪಾಲೆಜ್ಜಾರ್ ಜಪ್ಪುನಗ
ಉಳ್ಳಾಲ್ದಿನಕುಲು  ಕಡಿಪಿ ಕಂಜಿನ್ ನೀರ್ಡ್  ಪಾಡೋದು.
ಓಡುಡ್  ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು.
ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ.
ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ,
ಕೈಲ ಕಡೆಲ ಪತ್ತ್ದ್
ಉಜ್ಜೆರ್ಗೊಂಜಿ ಎರ್ಪು ಏರ್ಪಾದ್
ಇಲ್ಲ ಬೇತ್ತಡಿತ್  ಉಂತೊಂದು
ಮುರ್ಗೊಲೆಗ್ ತಾಂಟಾವೊಡು.
ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.
ಎಂಕ್ ಅಯಿತ ಕೆಬಿ, ಕಾರ್, ಕೈ, ಉಪ್ಪು, ಮುಂಚಿ, ಪುಳಿ ಕೊರೊಡು."
(ಸೋಮವಾರ ಕೆಡ್ಡಸ ಪ್ರಾರಂಭವಾಗುವುದು. ಮಂಗಳವಾರ ನಡು ಕೆಡ್ಡಸ. ಬುಧವಾರ ಮುಕ್ತಾಯ. ಹಸಿ ಕಡಿಯಬಾರದು. ಒಣಗಲು ಮುರಿಯಬಾರದು. ಅರಸುಗಳ ಬೇಟೆಗೆ ಎಲ್ಲಾ  ಯಜಮಾನರು ಹೋಗಬೇಕಂತೆ. ವಲಸರಿ ಮಜಲಿನಲ್ಲಿ ಕೂಡಿ ಓಡಾಡಿ ಬೆನ್ನಟ್ಟಿ ಪಾಲೆಚಾರಿನಲ್ಲಿ ಇಳಿಯುವಾಗ ಒಡತಿಯರು ಕಡೆಯುವ ಕಲ್ಲಿನ ಗುಂಡುಕಲ್ಲನ್ನು ನೀರಲ್ಲಿ ಹಾಕಬೇಕು. ಮಡಿಕೆ ತುಂಡಿನಲ್ಲಿ ಅರೆಯಬೇಕು. ಕಲ್ಲಿನಲ್ಲಿ ರೊಟ್ಟಿ ಹಚ್ಚಬೇಕು. ದೊಡ್ಡ ದೊಡ್ಡ ಮೃಗಗಳು ಇಳಿದುಕೊಂಡು ಬರುತ್ತವೆ. ಬಣ್ಣ ಬಣ್ಣದ ಕಾಡಕೋಳಿ, ಬಿರುರೋಮದ ಹಂದಿ, ನಾಲ್ಕು ಕಾಲಿನ ಕಡವೆ, ಚುಕ್ಕೆಯ ಜಿಂಕೆಗಳು ಇಳಿದುಕೊಂಡು ಬರುತ್ತವೆ. ಕೆಟ್ಟು ಇಲ್ಲದ ಕೋವಿ, ಗರಿ ಇಲ್ಲದ ಬಾಣ, ಸೌಟಿನ ಹಿಡಿ, ಒನಕೆಯನ್ನು ಮೇಲಕ್ಕೆತ್ತಿ ಮನೆಯ ಹಿಂಬದಿ ನಿಲ್ಲಬೇಕು. ಮೃಗಗಳಿಗೆ ತಾಗಿಸಬೇಕು. ದೊಡ್ಡ ದೊಡ್ಡ ಮೃಗಗಳನ್ನು ಗೆಲ್ಲಬೇಕು. ಅದರ ಕೈ, ಕಾಲು, ಕಿವಿ ಮತ್ತು ಉಪ್ಪು, ಮೆಣಸು, ಹುಳಿ ನನಗೆ ಕೊಡಬೇಕು)
cಕೆಡ್ಡಸದ ಹೇಳಿಕೆ ತೆಗೆದುಕೊಂಡು ಬಂದ ನಲಿಕೆ ಜನಾಂಗದವರಿಗೆ ಮನೆಮನೆಗಳಲ್ಲಿ ಕೊಡುವ ದಾನ 



          ಮೇಲಿನ ಡಂಗುರಪದ ಕೆಡ್ಡಸದ ಸಮಯದಲ್ಲಿ ಕೆಡ್ಡಸ ಬೋಂಟೆಯ ಮಹತ್ವ ತಿಳಿಸುತ್ತದೆ. ಊರಿನ ಗಂಡಸರೆಲ್ಲಾ ಕಾಡಿಗೆ ನುಗ್ಗಿ ಬೋಂಟೆ ದೆರುನಾ ಅಂದರೆ ಕೃಷಿ ಕೆಲಸಕ್ಕೆ ಉಪದ್ರವ ಮಾಡುವ ಕಾಡುಪ್ರಾಣಿಗಳನ್ನು ಓಡಿಸುವುದು, ಮುಖ್ಯವಾಗಿ ಪಂಜಿ ಬೋಂಟೆ ಮತ್ತೆ ಕುಂಡಕೋರಿ(ಕಾಡು ಕೋಳಿ ಜಾತಿ)ಯ ಪಕ್ಷಿ ಹಿಡಿಯುವುದು, ಕೆಡ್ಡಸದ ಸಮಯದಲಿಒಂದು ಪುಂಡಿ ಮಾಂಸವಾಗುವ ಕುಂಡಕೋಳಿಯ ಮಾಂಸ ತಿಂದರೆ ಮಾನವನ ಎಲುಬು ಗಟ್ಟಿಯಾಗುತ್ತದೆಯಂತೆ. ಈ ಬೋಂಟೆ ದೆರುನಾ ಪುರುಷತ್ವದ ಪ್ರದರ್ಶನವೂ ಅಗಿರಬಹುದು, ಕೃಷಿ ರಕ್ಷಣೆಯು ಅಗಿರಬಹುದು, ಮನರಂಜನೆಯು ಅಗಿರಬಹುದು.
             ಇಂದು ಬೋಂಟೆ ಇಲ್ಲದಿದ್ದರೂ ಕೆಡ್ಡಸತ ಕೋರಿ ಕಟ್ಟ, ಕೆಡ್ಡಸತ ನೇಮಗಳು ಪರ್ಯಾಯವಾಗಿ ನಡೆಯುತ್ತಿದೆ ಇದರಿಂದ ಕಟ್ಟದ ಕೋರಿಯೋ , ನಾಟಿ ಕೋಳಿಯೋ ಒಟ್ಟಾರೆ ಮಾಂಸ ರಾತ್ರಿಯ ಊಟಕ್ಕೆ ಸಿದ್ಧವಾಗುತ್ತದೆ.
        ತುಳುವರ ಕೆಡ್ಡಸ ಭೂಮಾತೆಯ ಫಲವಂತಿಗೆ, ಸಮೃದ್ಧಿಗಾಗಿ ಪ್ರಾರ್ಥಿಸುವ ಹಬ್ಬ, ಈ  ರೀತಿಯಿಂದದಾರೂ 3 ದಿನ ಭೂಮಿಗೂ ರಜೆಯಿರಲಿ, ಕೆಲಸ ಮಾಡುವ ಹತ್ಯಾರುಗಳಿಗೂ ವಿಶ್ರಾಂತಿಯಿರಲಿ ಎಂಬ ಉದ್ದೇಶವೂ ಅಗಿರಬಹುದು. ಹೇಗೆ ಇರಲಿ ತುಳುವರ ಈ ಧರಿತ್ರಿಯ ಆರೈಕೆ ನಿಜಕ್ಕೂ ಹೆಮ್ಮೆ ಪಡುವಂತಹುದು.
  

Thursday, February 12, 2015

ಇಬ್ಬನಿ


1.ಸತ್ಯ‬ .
oooo
ಹೂವು ಹೆಣ್ಣಾದರೆ ತಾನೇ 
ಹಣ್ಣಾಗುವುದು.. 
ಗಂಡು 
ಮುಟ್ಟದೇ
ಹೆಣ್ಣು ಕೊಡುವುದೇ
ಜಗಕೆ ಕಣ್ಣು...!!!!


2.ಅಮಾವಾಸ್ಯೆ.
೦೦೦೦೦೦೦
ಚಂದ್ರಿಕಾ 
ಮುಟ್ಟಾದೆನೆಂದು 
ಬಾನುಮನೆಯ
ಬಿಟ್ಟು
ಹಿತ್ತಿಲ
ಮನೆಯಲ್ಲಿ
ಮಲಗಿದ್ದಾಳೆ
ಚುಕ್ಕಿ
ಮಕ್ಕಳ
ತೊರೆದು...!!


3.ಗುಡುಗು - ಮಳೆ
೦೦೦೦೦೦೦೦೦
ಮೇಘ,
ಇನಿಯನೊಂದಿಗೆ 
ಪರ್ವತ ಸುತ್ತಿ,
ಹಿಮಕೆನೆ ತಿಂದು,
ತಂಪು ಗಾಳಿ ಸೋಕಿ
ಕೆಮ್ಮು
ಶೀತ..!!!


4.ಮುಸ್ಸಂಜೆ
೦೦೦೦೦
ಬೆಸ್ತನ 
ಬಲೆಗೆ
ಸಿಲುಕಿದ
ರವಿ
ಬಿಡಿಸಿಕೊಳ್ಳಲು
ವಿಲ ವಿಲ
ಒದ್ದಾಡುತ್ತಿದ್ದಾನೆ
ಸಾಗರ ತುಂಬಾ
ರಕ್ತದೋಕುಳಿಯ
ಚೆಲ್ಲಿ.



5.ಅರುಣೋದಯ.
೦೦೦೦೦೦೦೦
ಚಂದ್ರನ
ಪಿರಿಪಿರಿ
ಬೆಳಕ ಮಳೆಗೆ
ಅರಳಿದ
ಚುಕ್ಕಿ
ಅಣಬೆಗಳನ್ನು
ಮಧ್ಯಾನ್ನ ದ ಭೋಜನದ
ಸಿದ್ಧತೆಗಾಗಿ
ಮುಂಜಾನೆಯೇ
ಕೀಳುತ್ತಿದ್ದಾನೆ
ರವಿ ಮಾಮ... 

6.ಮಣ್ಣಿನ ಪರಿಮಳ.
೦೦೦೦೦೦೦೦೦೦
ಮಾಂಸಲದೊಳಗೂ
ಮಾಂಸದೊಳಗೂ
ಮದಿರೆಯೊಳಗೂ
ಮಾಂಫಲದೊಳಗೂ
ಮಾಳಿಗೆಯೊಳಗೂ
ಮಾನಸದೊಳಗೂ
ಇರುವುದೊಂದೇ
ರುಚಿ ಪರಿಮಳ
.
.
.
.
.
ಮಣ್ಣಿನದು...

7.ಮಳೆ
೦೦೦೦೦೦೦
ವರ್ಷಾಳಿಗೆ
ಜೂನ್ ತಿಂಗಳು
ಬೇನೆಯಿಲ್ಲದ 
ಪ್ರಸವಕ್ಕೆ
ದಿನಾಂಕ
ಕೊಟ್ಟಿದ್ದಾರೆ
ಪ್ರಕೃತಿ
ವೈದ್ಯರು...!!

8. ಬಡವನಾಗಬೇಕು
೦೦೦೦೦೦೦೦೦೦೦
ನಾನು ಬಡವನಾಗಬೇಕು
ಅಹಂಕಾರದಲ್ಲಿ 
ಜೀವನದ ಜೀನದಲ್ಲಿ... 
ರೋಗ ಮೂಸುವುದಿಲ್ಲ 
ಚಿಂತೆ ಕಾಡಲ್ಲ 
ಯಾರು ಬೇಡುವುದೂ ಇಲ್ಲ...
ಗೆಳೆಯರು ಕಮ್ಮಿ
ದುಡ್ಡು ಕಡಿಮೆ
ಅದರೂ
ಉಂಡ ಅಗುಳು ಮೈಗೂ
ಹಿಡಿಸುತದೆ
ಪುಷ್ಟಿ ಕೊಡುತದೆ...
ಭಗವಂತನ
ಬಲವೂ
ಇದೆ
ಅನಿಸುತದೆ... !!!!


9. ಮಣ್ಣಿನ ಪರಿಮಳ 
೦೦೦೦೦೦೦೦೦
ಮೇಘ - ಮೇಧಿನಿಯ 
ಪ್ರಥಮ ಮಿಲನಕ್ಕೆ  
ಸಿದ್ಧತೆ 
ಭೂಕೋಣೆ ತುಂಬಾ 
ಸುಗಂಧ 
ಪೂಸಿದ್ದಾರೆ. 

Monday, January 26, 2015

ಪನಿ

1. ಚಂದ್ರ...!
೦೦೦೦೦೦
ಬಣಲೆಯಲ್ಲಿ
ಹಪ್ಪಳ ಕರಿಯುತ್ತಿದ್ದಾರೆ
ರಾತ್ರಿಯ ಭೋಜನಕ್ಕೆಂದು
ಚಂದ್ರ ಕೆಂಪೇರಲೇ 
ಇಲ್ಲ
ರವಿ
ನಿದ್ದೆಗೆಟ್ಟು
ಮುಂಜಾನೆ
ಹಸಿಯಾಗಿ ತಿಂದು
ಬಿಟ್ಟ...!!

2. ಅಸಮಾನತೆ..!
೦೦೦೦೦೦೦೦
ರವಿ 
ಗೋಲಕ್ಕೆ
ಬೆಳಕ
ಯಜಮಾನನಾದ್ರೂ
ಪ್ರೀತಿಸಿ ಆರೈಸುವವರು
ಕಮ್ಮಿ,
ಅದೇ ಭೂಮಿಕಾಳನ್ನು
ಹಾಡಿ ಹೊಗಳುವವರೇ ಹೆಚ್ಚು,
ಕಾರಣ
ಅವಳು
ಹೆಣ್ಣು..!!

3.ಗ್ರಹಣ.
0000
ರವಿಯ
ದಾಂಪತ್ಯ
ಕಲಹದ
ಕುರುಹುವಾಗಿ
ಮೊಗದ
ಬಾವು
ಹೆಪ್ಪುಗಟ್ಟಿದ ರಕ್ತದ
ನೋವು.

4.ದೃಷಿ್ಟ ಬೊಟ್ಟು.
೦೦೦೦೦೦೦೦೦
ನನ್ನವಳ ಸೌಂದರ್ಯಕ್ಕೆ
ದೃಷ್ಟಿ ತಾಕುವುದು
ಬೇಡವೆಂದು
ಅವಳು
ಮುಡಿದ
ಜಡೆಯೊಳಗೆ,
ಹಿಮಮಣಿಗೆ ಕಾದ 
ಗುಲಾಬಿ ಪಕಳೆಗಳಲ್ಲಿ
ಗುಂಡಗಿನ ಬೊಟ್ಟು ಇಟ್ಟಿದ್ದಾನೆ
ಈ ರವಿ.

5. ಗುಡುಗು - ಸಿಡಿಲು...!
೦೦೦೦೦೦೦೦೦
ಶಿಕಾರಿಗೆ ಹೊರಟ 
ಮಳೆರಾಯ
ತೋಟೆಯಿಟ್ಟು
ಬೇಟೆಯಾಡಿದ
ನೀಲಾ ಬಾನಿನೊಡಲ
ಸೀಳಿ ಸೀಳುತ್ತಾ
ಕರಿ ಮೇಘಗಳ
ರುಚಿಯ
ಸವಿಯಲು....

6. ಸಂಧ್ಯಾ ಜ್ಯೋತಿ.
೦೦೦೦೦೦೦೦೦
ಬೆಳಕ ಮೊಗ್ಗು 
ಅರಳುತ್ತಿದೆ...
ರವಿಯಿಲ್ಲವೆಂಬ
ನೆವನಾದಲ್ಲಾದರೂ
ಶಶಿಯನ್ನು
ಹೊಸ್ತಿಲ 
ಹೊರಗೆ
ನಿಲ್ಲಿಸಿ
ಮುದುಡಿಸಿ ಬಿಡಬೇಕೆಂಬ
ಹಠದಿಂದ...!!

7. ದೀಪೋತ್ಸವ.
ನೇಸರ ದೀಪ ಸ್ಥಂಭ
ಚಂದಿರ ದೀಪ ಬಿಂಬ
ಬಾನಿನಲ್ಲಿ
ರಾತ್ರಿ ಹಣತೆಗಳ
ಲಕ್ಷದೀಪೋತ್ಸವ
ನಿತ್ಯ ಕಾರ್ತಿಕೋತ್ಸವ.

8. ಮಾಗಿಯ ಮಂಜು.
೦೦೦೦೦೦೦೦೦
ನವವಧು ಸಿಂಗಾರಿ
ಭೂಮಿಕಾಳ
ಸೌಂದರ್ಯವ
ಹಸಿರ ಸೀರೆಯಲ್ಲಿ
ಮುಂಜಾವ
ರವಿರಾಜ
ನೋಡಬಾರದೆಂದು
ಮಂಜುಳಳಿಂದ 
ಹಿಡಿದ
ಅಂತಃಪಟಲ.

9.ಅಮಾವಾಸ್ಯೆ
೦೦೦೦೦೦೦
ಶಶಿಯನ್ನು 
ಕದ್ದು 
ಅರೆದು
ಮಾರುತ್ತಿದ್ದಾಳೆ 
ನಮ್ಮ ರಾಧಾಮ್ಮ 
ಅವಳ
ಹಾಲಿನ 
ದುಂಡಗಿನ
ಬಟ್ಟಲೊಳಗೆ
ಕರಗಿ
ನೀರಾದದನ್ನು
ನಾ
ಕಂಡೆ...!

Thursday, January 22, 2015

ದೇಹದಾನ.


ಈವಂಗೆ ದೇವಂಗೆ ಅವುದಂತರವಯ್ಯಾ
ದೇವನು ಜಗಕೆ ಕೊಡಲಿಹನು | ಕೈಯಾರೆ
ಇವನೇ ದೇವ ಸರ್ವಜ್ಞ.
ಪ್ರಪಂಚದಲ್ಲಿ ದಾನ ಮಾಡುವವನು ದೇವರಿಗೆ ಸಮಾನನು, ಪೂಜೆಗೆ ಯೋಗ್ಯನು ಸಮಾಜದ ಉನ್ನತಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ಪೂರ್ತಿಯಿಂದ ಕೊಡುಗೆ ನೀಡುವವನೇ ಮಹಾದಾನಿ ಎಂದು ಒಟ್ಟಾರೆ ತಾತ್ಪರ್ಯ.
ದಾನಕ್ಕೆ ಎಲ್ಲ ಧರ್ಮಗಳಲ್ಲೂ ಉಚ್ಚ ಸ್ಥಾನವಿದೆ, ಈ ದಾನವೆಂಬುವುದು ದೇವಸ್ಥಾನದಲ್ಲಿ ಕೊಡುವ ಎಣ್ಣೆಯಿಂದ ಹಿಡಿದು, ಬಲಿವಾಡುಗಳಿಂದ ಹಿಡಿದು, ಗೋದಾನ, ವಸ್ತ್ರದಾನ, ಅನ್ನದಾನ, ರಾಜರು ಕೊಡುತಿದ್ದ ಭೂದಾನ, ರಕ್ತದಾನ, ದೇಹದಾನ,ಕನ್ಯಾದಾನ, ವಿದ್ಯಾದಾನ ಹೀಗೆ... ಕರ್ಣನ ದಾನ, ಶಿಭಿ ಚಕ್ರವರ್ತಿಯ ದಾನ, ಬಲಿ ಚಕ್ರವರ್ತಿ ದಾನ ಎಲ್ಲವೂ ಉಲ್ಲೇಖನಿಯಾ...


ರಕ್ತದಾನ, ಅಂಗಾಂಗದಾನ, ದೇಹದಾನ ಇವು ಭೌತಿವಾಗಿ ನಮ್ಮನ್ನೇ ನಾವು ದಾನ ಕೊಡುವ ಪರಿ ಹಾಗೂ ದಾನಗಳಲ್ಲೇ ಶ್ರೇಷ್ಠವಾದವು, ಉಳಿದವೆಲ್ಲ ಐಹಿಕ ಜಗದಲ್ಲಿ ತಮ್ಮ ಸ್ವಾರ್ಥ ಸಾಧಿಸಲು , ಬೇಕುಗಳು ಈಡೇರಿಸಲು ಇರುವಂತಹುದು. ಅದರೆ ಇವು ಅವನ್ನು ಮೀರಿ ಬೆಳೆದಂತಹುಗಳು. ಪಂಚಭೂತಗಳಿಂದ ರೂಪಿತವಾದ ಈ ದೇಹ ಸತ್ತಾಗ ದೊರೆಯುವುದು ಹೆಣದಮರ್ಯಾದೆ ಧಪನವೋ, ದಹನವೋ ಮಾಡಿ ಶವ ಸಂಸ್ಕಾರ ಮಾಡುತ್ತಾರೆ ಹೊರತು ಸತ್ಕಾರ ಮಾಡಲ್ಲ, ಸತ್ಕಾರ ದೊರೆಯಬೇಕಾದರೆ ಅದು ವೈದ್ಯಕೀಯದ ಅಂಗಶಾಸ್ತ್ರ ವಿಭಾಗದಲ್ಲಿ ಮಾತ್ರ. ಪ್ರತಿ 5 ವಿದ್ಯಾರ್ಥಿಗಳಿಗೆ ಒಂದು ಶವದ ಅಗತ್ಯತೆ ಇದೆ ಎನ್ನುವುದು ವೈದ್ಯಕೀಯ ಮಾಹಿತಿ. ಹೆಚ್ಚಾಗಿ ದೇಹದಾನ ಎಂದ ಕೂಡಲೇ, ಸಾಮಾನ್ಯವಾಗಿ ಸ್ವರ್ಗ, ನರಕ, ಪುರ್ನಜನ್ಮ  ನಂಬಿದ ನಮ್ಮ ಜನ ದಹನ ಮಾಡದಿದ್ದರೆ ನರಕಕ್ಕೊ, ಮುಂದಿನ ಜನುಮದಲ್ಲಿ ಕುರುಡನೊ, ಕುಂಟನೊ ಆಗಿ ಹುಟ್ಟುತ್ತೇವೆ ಎಂಬ ನಿಮಿತ್ತ ನಂಬಿಕೆಯಿಂದ ಹಿಂಜರಿಯುವವರೇ ಹೆಚ್ಚು. ಮತ್ತೆ ಕೆಲವರಿಗೆ ಅನಗತ್ಯ ಅತಂಕ ವಿದ್ಯಾರ್ಥಿಗಳು ಅಂಗಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ, ದೇಹವನ್ನು ಗೌರವಿಸುವುದಿಲ್ಲ ಎಂಬ ಅಪವ್ಯಾಖ್ಯಾನಗಳು ಬೆಸೆದಿವೆ.
ಆ ನಮ್ಮ ದೇಹಕ್ಕೆ ನಿಜವಾದ ವ್ಯಾಖ್ಯಾನ ಸಿಗುವುದೆ ಇಲ್ಲಿ , ಶವಕ್ಕೆ ಪಠ್ಯದ ಸ್ವರೂಪ ನೀಡಿ, ಸಂಕೀರ್ಣ ಶರೀರ ರಚನೆಯ ಅಧ್ಯಯನ ಮಾಡಿ, ಪಂಚಭೂತಗಳ ವಿಂಗಡನೆ ಮಾಡಿ, ಸಾಧ್ಯವಿರುವ ಎಲ್ಲ ಪ್ರಯೋಗಗಳ ನಂತರ ದೇಹವನ್ನು ಮೂಲ ರೂಪಕ್ಕೆ ತಂದು ಅದನಂತರ ಅವರವರ ಧರ್ಮದ ಅನುಸಾರವಾಗಿ ಸಂಸ್ಕಾರವನ್ನೂ ಮಾಡಲಾಗುತ್ತದೆ. ಮತ್ತೆ ಮೂಳೆಗಳನ್ನು ಸಂಗ್ರಹಿಸಿ ಮೂಳೆಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡಲಾಗುತ್ತದೆ. ನಾವು ನೀವು ತಿಳಿದುಕೊಂಡ ಶವ ಸಂಸ್ಕಾರಕ್ಕಿಂತ ಶವ ಸತ್ಕಾರವೇ ಶ್ರೇಷ್ಠವಲ್ಲವೇ...

ಹಮ್ ನಾ ರಹೇಂಗೆ,
ತುಮ್ ನಾ ರಹೋಂಗೆ,
ಪೀರ್ ಬೀ ರಹೇಗಿ ನಿಶಾನಿಯಾ....
ರಾಜ್ ಕಪೂರ್ ರ ಈ ಹಿಂದಿ ಹಾಡು ಎಷ್ಟು ಹೊಂದುತ್ತದೆತಲ್ಲಾ,



ದಾನಕ್ಕೆ ಬರುವ ಅಡೆತಡೆಗಳು:
*ಅಮ್ಮ ಅಪ್ಪನೊಂದಿಗೆ ಹೇಳಿ ಒಪ್ಪಿಸುವುದು ಪ್ರಾಥಮಿಕವಾದದ್ದು.
*ಅಜ್ಜಿಯೊಂದಿಗೆ ಚರ್ಚಿಸಿದರೆ ಮುಂದಿನ ಜನ್ಮದಲ್ಲಿ ಕುರುಡನಾಗುತ್ತಿ, ಮೋಕ್ಷ ಸಿಗಲ್ಲವೆಂದು ಪೂರ್ವಗ್ರಹ ಪೀಡಿತರಾಗಿ ನಿಮ್ಮನ್ನು ಬೆಂಬಲಿಸಲ್ಲ.
*ಸತ್ತ ಮೂರು ದಿನದಲ್ಲಿ ಮಾಡುವ ಬೂದಿ ಮುಚ್ಚುವುದು, ಬೊಜ್ಜದಂದು ದೂಪೆ ಹತ್ತಿರ  ಹೋಗುವ ಕ್ರಮಗಳಿಗೆ ಪರ್ಯಾಯ ಕ್ರಮಗಳನ್ನು ಮಾಡಬೇಕು.

ಹೇಗೆ ಮಾಡಬೇಕು:
*ಹತ್ತಿರದ ವೈದ್ಯಕೀಯ ಮಾಹಾವಿದ್ಯಾಲಯದಲ್ಲಿ ನೋಂದಯಿಸಬೇಕು.
*ಮೃತ್ಯುಪತ್ರದಲ್ಲಿ ವಿವರವನ್ನು ಭರಿಸತಕ್ಕದ್ದು.
*ವಕೀಲರ ಮೂಲಕ ಮರಣ ಶಾಸನ ವಿಲೋನಾಮೆ ಪತ್ರ ಬರೆಯಿಸಿ ಅವರ ಸಹಿ ಮಾಡಿಸಬೇಕು. (ರೂ. 750.00 ನಾನು ಕೊಟ್ಟಿದ್ದೆ).
*ಮನೆಯವರ  ಸಾಕ್ಷಿ ಸಹಿ ಬೇಕು, ಅಪ್ಪ , ಅಮ್ಮನೋ ಅಕ್ಕ -ತಮ್ಮನೋ, ಇಲ್ಲ ಹತ್ತಿರದ ಸಂಬಂಧಿಗಳಾದರೂ ಆಗಬಹುದು.
*ನೋಂದಾವಣೆ ಕಡ್ಡಾಯವೇನಲ್ಲ ಕೊನೆ ಗಳಿಗೆಯಲ್ಲೂ ಸಂಬಂಧಿಸಿದ ವೈದ್ಯರಿಗೆ ಕುಟುಂಬ ಸಾಕ್ಷಿಗಳೆದುರು ಶವದಾನ ಮಾಡಬೇಕೆಂದು ಬಯಸುವವರು ಹೇಳಿಕೆ ನೀಡಬಹುದು.
*ತಮ್ಮ ದೇಹದಾನ ಮನೆಯವರಿಗೆಲ್ಲಾ ತಿಳಿದಿರಬೇಕು.

ಯಾರೆಲ್ಲ ಮಾಡಬಹುದು?
*ಆರೋಗ್ಯವಾಗಿರುವ ಎಲ್ಲರೂ ಮಾಡಬಹುದು. ಪ್ರಾಥಮಿಕ ಹಂತದ ಕ್ಯಾನ್ಸರ್, ಏಡ್ಸ್, ಜಾಂಡೀಸ್ ರೋಗವಿದ್ದವರೂ ಸಹ.,
*ಅಸ್ವಾಭಾವಿಕ, ಅಪಘಾತದ ಸಾವುಗಳಾಗಿದ್ದಲ್ಲಿ ಪೋಲಿಸ್ ಮತ್ತು ಎಲ್ಲ ಕಾನೂನಿನ ರಿತ್ಯಗಳ ನಂತರ.
*ವಯಸ್ಸು, ಲಿಂಗಗಳ ಭೇದವಿಲ್ಲ.


ಕುಟುಂಭಿಕರ ಜವಾಬ್ದಾರಿ,
* ವ್ಯಕ್ತಿ ಮೃತರಾದೊಡನೆಯೆ ನೋಂದಾಯಿಸಿದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ತಿಳಿಸಬೇಕು.
*ಸ್ವಂತ ವೆಚ್ಚದಲ್ಲಿ ಮಹಾವಿದ್ಯಾಲಯ ಸಾಗಾಣಿಕ ವ್ಯವಸ್ಥೆ ಮಾಡಿಕೊಳ್ಳುತ್ತದೆ.
*10 -12 ಗಂಟೆಗಳ ಒಳಗೆ ದೇಹ ವೈದ್ಯಕೀಯ ಮಹಾವಿದ್ಯಾಲಯದ ಸುಪರ್ದಿಗೆ ಸೇರಬೇಕು.  
 
ಎಲ್ಲಿ ಒಳಿತು, ಕೇವಲ ಒಳಿತಿನದೇ ಅಧಿಪತ್ಯವಿರುತ್ತದೋ, ಅಂತಹ ಸಮಾಜವೊಂದರ ನಿರ್ಮಾಣದಲ್ಲಿ ಈ ವಿಚಾರ ಅತ್ಯಂತ ಸಣ್ಣ ರೀತಿಯಲ್ಲಾದರೂ ನೆರವಾದರೆ ಅದೇ ಸಂತಸ. "ವ್ಯಕ್ತಿಯ ದಾನ ಕರ್ಮಗಳಿಂದ ಅವನಿಗೆ ಲಭ್ಯವಾಗುವ ಪುಣ್ಯವು, ಆ ವ್ಯಕ್ತಿಯ ಹೃದಯ, ದಾನ ನೀಡುವುದರ ಹಿಂದಿನ ಅವನ ಉದ್ದೇಶ, ದಾನ ನೀಡುವಾಗಿನ ಸಂದರ್ಭ, ಯಾರಿಗೆ ದಾನ ನೀಡಲಾಗುತ್ತಿದೆ ಹಾಗೂ ಆ ಸಂದರ್ಭದಲ್ಲಿ ದಾನ ಸ್ವೀಕರಿಸುವವನ ಪರಿಸ್ಥಿತಿ ಎಲ್ಲವೂ ಗಣನೆಗೆ ಬರುತ್ತದೆ."

Sunday, January 11, 2015

ಕಾಮನಬಿಲ್ಲು .

ರವಿ
ತಾಪದ
ಕೋಪದಿಂದ
ಮಳೆರಾಯನಿಗೆ
ದಂಡ
ಪ್ರಯೋಗ
ಬೆದರಿ ಅಳುತಿದ್ದಾನೆ...
ಇಳೆಕೊಳ ತುಂಬಾ
ಅಶ್ರುಧಾರೆ...
ಅಚ್ಚಾಗಿದೆ ನೋಡಿ
ಬಾನಿನ
ಮೈಮೇಲೆ
ಬಾಸುಂಡೆ
ಗೆರೆಗಳು...



Wednesday, January 7, 2015

ಯುವ"ಕರ"ಗಳು...

       ನಾವು ಜನಿಸಿರುವುದೇ ಅರಳುವುದ್ದಕ್ಕಾಗಿ, ಅರಳಿ ಪರಿಮಳ ಪಸರಿಸುವುದಕ್ಕಾಗಿ, ಕೆಲವರ ನೆರಳಾಗಿ , ಹಲವರ ಬೆಳಕಾಗಿ ಜೀವಿಸಲು, ಇವೆಲ್ಲವಕ್ಕೂ ಬಾಲ್ಯದ ವಾತಾವರಣ, ಪರಿಸ್ಥತಿ, ಸುಖ - ದುಖಃ ಎಲ್ಲವೂ ಗಣನೆಗೆ ಬರುತ್ತದೆ. ಮತ್ತೆ ಲೋಹಕ್ಕೆ ಬಿದ್ದ ಬೆಳಕು ಹೊಳೆದು, ಆ ಬೆಳಕು ಪ್ರತಿಫಲಿಸಿ, ಪ್ರತಿಫಲನಗೊಳ್ಳುವುದು ಸಮಾಜದ ಮುಂದೆ ಅದಕ್ಕಾಗಿ ಬೇಕಾಗಿರುವುದು ಪೋಷಿಸಿ, ನೀರೆರೆಯುವ ಸಮಾನ ಮನಸ್ಕರ ಬಳಗ ಯುವಕರ ಬಳಗ.


     ನವನವೀನತೆ ಹುಟ್ಟಿ ಕೊಳ್ಳುವುದು ಯುವ ಮನಸ್ಸುಗಳು ಒಂದೆಡೆ ಸೇರಿದಾಗ, ಅದಕ್ಕಾಗಿ  ವಯಸ್ಸಾದ ಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅವನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು, ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂತಹ ಕೆಲಸ ಬದುಕಿದ್ದಾಗ ಮಾಡಬೇಕು. ಇವುಗಳನ್ನು ಸಾಧಿಸಲು ಆ ಹೊಸತನ, ಮಧುರ ಆಲೋಚನೆ, ವಿಭಿನ್ನ ಮೌಲ್ಯ, ನವ್ಯತೆಯ ಕನಸುಗಳು, ಸ್ವಾಮಿ ವಿವೇಕಾನಂದರು ಇಟ್ಟಿರುವ ನಂಬಿಕೆಗಳಿಗೆ ಜೀವ ತುಂಬುವುದೇ ಈ ಯೌವ್ವನದಲ್ಲಿ . ಯುವ ಶಕ್ತಿಯ ಧ್ಯೇಯವೇ ಅಂತಹ ಸಂಕೀರ್ಣ ಮತ್ತು ಕಾಠೀಣ್ಯವಾದದ್ದು ಆ ಕುದಿಯುವ ವಯಸ್ಸು, ಕುದುರೆಯ ರಭಸ, ಹುಲಿಯ ಗರ್ವ, ಹಾವಿನ ದ್ವೇಷ, ಪಶುವಿನ ಮೃದುತ್ವ, ನೆಲಗುದ್ಧಿ ನೀರು ಬರಿಸುವೆನೆಂಬ ಬಲ, ಅದೋ ಅಲ್ಲಿ ಬೆಟ್ಟ ನೋಡು ಅಂದರೆ ಇಲ್ಲಿದೆ ತಂದೇ ಎನ್ನುವ ಛಲ, ಕಣ್ಣಂಚಿನಲ್ಲಿರುವ ಹೊಂಗನಸು, ಪರಾಂಭರಿಸದೇ ಪ್ರಶ್ನಿಸುವ ನೆತ್ತರಿನ ಬೀರ್ಯ , ಕೊತ ಕೊತ ಕುದಿಯುವ ಕೋಪ, ಹುಮ್ಮಸ್ಸು, ತೇಜಸ್ಸಿನಿಂದಿರುವ ವಸಂತ ಕಾಲ... ಯಾವುದಿಲ್ಲ, ಯಾವುದುಂಟು? ಎಲ್ಲವೂ ಒಂದನ್ನೊಂದು ಹಿಂಬಾಲಿಸಿ ಸೌಖ್ಯ ನೀಡುವಂತಹುಗಳೇ ಈ ಯೌವ್ವನದ ಅಯಸ್ಸು..ದೀಶಭಕ್ತಿ, ಗುರುಭಕ್ತಿ, ಹಿರಿಯರಭಕ್ತಿ, ಸಜ್ಜನ ಸಂಸ್ಕಾರಗಳನ್ನು ಗುಣಿಸಿ - ಕೂಡಿಸಿ ರೂಢಿಸಿಕೊಳ್ಳುವ ರಮ್ಯಕಾಲವೂ ಹೌದು, ಎಲ್ಲ ಪ್ರಾಯದವರೊಂದಿಗೆ ಬೆರೆತು ಮೃದುತ್ವ ಕಲಿತು ಒಂದಷ್ಟು ಸಾಸಿವೆಯಷ್ಟು ಬೇಕಾಗುವವನಾಗುವ ಕಾಲ. ಮನೆಯಿಂದ ಸಮಾಜಕ್ಕೆ ಬಡ್ತಿಗಳಿಸುವ ಚೈತ್ರಕಾಲ
ಡಾ. ಕಲಾಂ ಹೇಳುತ್ತಾರೆ " ಬಾಲ್ಯವಸ್ಥೆ, ಪೌಢವಸ್ಥೆಯಲ್ಲಿ ಪಡೆದ ಮೌಲ್ಯಗಳು ವಿಶ್ವವಿದ್ಯಾಲಯ ಮಟ್ಟಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ" ಎಂದು ಇದಕ್ಕೆ ಬೆಂಬಲವಾಗಿಯೇ ಪ್ರಚಲಿತದಲ್ಲಿರುವ ನಾಣ್ಣುಡಿ ನಿನ್ನ ಗೆಳೆಯರ ಬಳಗ ತೋರಿಸು ನೀನಾರೆಂದು ನಾ ಬಲ್ಲೆ ಎಂದು, ಗೆಳೆತನ ಸತ್ಸಂಗವಾಗಿರದಿದ್ದರೆ ಸಂಗ ದೋಷವೇ ಹೆಚ್ಚು .... ಮತ್ತೆ ಅಯೇ ಮಲ್ಲ ಕುಡಿ, ಚಾಲಿ ಪೋಲಿ, ಅಲ್ ಮಲ್ಲ ಕುದುರೆ ಎಂಬ ಬಿರುದುಗಳಿಂದ ಸಮಾಜದಿಂದ ಸನ್ಮಾನಿತರಾಗುವುದು ಇದೇ ವಯಸ್ಸಲ್ಲಿ..

ಇಂದು ಸಮಾಜ ತಿಳಿದಷ್ಟು ಯುವಜನ ಕೇಡದಿದ್ದರೂ ಅಲ್ಪ ಒಡಕಿದೆ ಮನೆ ಮನ ಬಿರುಕು ಮಾಡುವ ಮೂರ್ಖರ ಪೆಟ್ಟಿಗೆ, ಕೈ, ಕಣ್ಣು , ಮಾನಸಗಳನ್ನು ಚಂಚಲವಾಗಿಸುವ ಜಂಗಮವಾಣಿ ಹಾಗೂ ಸರಳತೆಗಾಗಿ ಬಳಸುವ ತಾಂತ್ರಿಕ ವಸ್ತುಗಳು ಪ್ರತಿಯೊಬ್ಬನ ನಿಜವಾದ ಸೃಜನಶೀಲತೆಗೆ ಲಗಾಮು ಹಾಕಿದೆ. ಅನುಭವ ಸಣಕಲಾಗಿದೆ, ದೂರದೃಷ್ಠಿ ಸಪೂರವಾಗಿದೆ. ಇವುಗಳ ಜೊತೆ ಜೊತೆಗೆ ಯಾರು ವಿದ್ಯಾವಂತನಾಗಿ, ವಿವೇಕಿಗಳಾಗಿ, ನಿರಂಕುಶಮತಿಗಳಾಗಿ ವಿಮರ್ಶ ಮನೋಭಾವ ಬೆಳೆಸಿಕೊಂಡ ವ್ಯಕಿ ವಿಕಸಿತ ಮಾನವನಾಗಿ (Evolved Person)  ಬದುಕುತ್ತಾನೆ. ಇತ್ತೀಚೆಗಿನ ದಿನಗಳಲ್ಲಿ ಸಂಸ್ಕಾರ ನೀಡಬೇಕಾದ ತಾಯಿ, ಜವಾಬ್ದಾರಿ ನೀಡಬೇಕಾದ ತಂದೆ, ಜ್ಞಾನದ ದೀಟಿಗೆ ಹಿಡಿಯಬೇಕಾದ ಗುರುಗಳು ತಮ್ಮ ತಮ್ಮ ಕರ್ತವ್ಯನಿಷ್ಠೆಯಿಂದ ಕಳಚಿಕೊಂಡಿರುವುದರಿಂದಲೋ ಏನೋ ಭಾವೀ ಪ್ರಜೆಗಳಲ್ಲಿ ಒಂದಷ್ಟು ನಿಷ್ಠೆಯ ಕೊರತೆ, ದೇಶಭಕ್ತಿ ಬಡತನ, ಧರ್ಮದ ಸವಕಲತೆ ಹಾಗೂ ಜೊಳ್ಳು ಹವ್ಯಾಸ ತನ್ನತನವನ್ನು ಮರೆಸುವಂತೆ ವರ್ತಿಸುತ್ತಿದ್ದಾರೆ.
ದೇಶಭಕ್ತಿಯ ಬಗೆಗೆ ಸರಸಂಚಾಲಕ ಡಾ | ಕೇಶವ ಬಲಿರಾಮ ಹಡಗೇವಾರ ತಿಳಿಸುತ್ತಾ " ಎಲ್ಲೇ ಆಗಲಿ ದೇಶದ ಕುರಿತಾದ ಯಾವುದೇ ಕೆಲಸವಿರಲಿ ಅದರ ಆಚರಣೆಗೊಳಗಾಗಿ ಅರ್ಧಕ್ಕೆ ನಿಂತರೆ ಅದನ್ನು ಮುಂದುವರೆಸಬಲ್ಲೆವು ಎಂಬ ವಿಶ್ವಾಸ ನಮ್ಮಲ್ಲಿದ್ದರೆ ಆ ಧರ್ಮ , ಈ ಧರ್ಮ, ಆ ಪಕ್ಷ, ಈ ಪಕ್ಷವೆಂದು ಯೋಚಿಸದೇ ಮಾಡಲು ಅವಶ್ಯ ಮುಂದಾಗಬೇಕು" ಎಂದು ಇದು ಯುವಕರ ನಿಜಕರ್ತವ್ಯದ ಬಗೆಗೆ ವಿವರಿಸುತ್ತಾರೆ. 
ಅದಿಶಂಕರರು
"ಸತ್ಸಂಗತ್ವೇ ನಿಸ್ಸಂಗತ್ವಂ,
ನಿಸ್ಸಂಗತ್ವೇ ನಿರ್ಮೋಹತ್ವಂ,
ನಿರ್ಮೋಹತ್ವೇ ನಿಶ್ಚಲತ್ವಂ,
ನಿಶ್ಚಲತ್ವೇ ಜೀವನ್ಮುಕ್ತಿ:
ಸತ್ಸಂಗ ಮಾತ್ರ ನಮ್ಮನ್ನು ಎಲ್ಲಾ ಬಂಧನಗಳಿಂದ ಬಿಡುಗಡೆ ಮಾಡಿಕೊಳ್ಳಲು ಸಹಾಯ ಮಾಡುವುದು, ಅಪಾರ ಪ್ರೀತಿ ಇದ್ದರೂ ಮೋಹಗಳಿಂದ ದೂರ ಮಾಡುವುದು. ಮನಸ್ಸಿಗೆ ನಿಶ್ಚಲತೆಯನ್ನು ಅನುಸರಿಸುವಂತೆ ಮಾಡಿ ಮುಕ್ತಿಯ ಮಾರ್ಗಕ್ಕೆ ಕಾರಣವಾಗುತ್ತದೆ. ರಾಷ್ಟ್ರೀಯ ಯುವ ದಿನಾಚರಣೆಯ ಹೊಸ್ತಿಲಲ್ಲಿ ವಿವೇಕಾನಂದರ ಅದರ್ಶ, ಹೃದಯ ವೈಶಾಲ್ಯತೆ, ಅಪಾರ ದೇಶ ಭಕ್ತಿಯಿಂದ ಯುವ ಸಂಘಗಳು ಮರು ಹುಟ್ಟು ಪಡೆದು, ಒಳಿತು ನಮ್ಮ ನಿಮ್ಮದಾಗಲಿ ಎಂಬುವುದೇ ಒಟ್ಟು ಆಶಯ.
ಯುವಕರ ದಿನಾಚರಣೆಯ ಶುಭಾಶಯಗಳು.

Tuesday, January 6, 2015

ರಾಷ್ಟ್ರೀಯ ಯುವ ದಿನಾಚರಣೆ .

ಜನವರಿ ೧೨ , ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಇದು ಅಪ್ರತಿಮ ವಾಗ್ಮಿ , ಅನುಪಮ ಮಾನವತಾವಾದಿ , ಯುವ ಪ್ರೇರಕ , ನವ ಚೇತನ ಸ್ವಾಮಿ ವಿವೇಕಾನಂದರ ಜನುಮದಿನ. ತನ್ನ ಪ್ರಭಾವಶಾಲಿ ತತ್ವಜ್ಞಾನ ,  ಉಚ್ಚಮಟ್ಟದ ಸಾಮಾಜಿಕ ಹಾಗೂ ರಾ ಜಕೀಯ ದೃಷ್ಟಿಯಿಂದ ಎಲ್ಲರ ಗಮನ  ತನ್ನಕಡೆ ದೃಷ್ಟಿಯಿಡುವಂತೆ ಮಾಡಿದ ಭವ್ಯ ವ್ಯಕ್ತಿತ್ವ. ಬಾಲ್ಯದಿಂದಲೇ ಚುರುಕು, ಅತೀವ ಬುದ್ಧಿ ಮತ್ತೆ, ಪ್ರಶ್ನಿಸುವ ಗುಣ , ಅನುಲ್ಲಂಘ್ಯ ವಿಚಾರಗಳನ್ನು ಬೇಧಿಸುವ ಕೌಶಲ್ಯ ಇವುಗಳಿಂದಲೇ ಎಲ್ಲರ ಗಮನ ತನ್ನತ್ತ ಸೆಳೆಯುತ್ತಾ ಬೆಳೆದ ನರೇಂದ್ರ ಮುಂದೆ ಬೆಳೆದು ಅಪಾರ ಮೇಧಾವಿ, ಅಧ್ಯಾತ್ಮ ಗುರು ಶ್ರೀ ರಾಮಕೃಷ್ಣ ಪರಮಂಸ ರಿಂದ ದಿವ್ಯ ದೀಕ್ಷೆ ಪಡೆದು ನರೇಂದ್ರನಾಥ ದತ್ತ ಸ್ವಾಮಿ ವಿವೆಕಾನಂದರಾದರು.

ಗುರುಗಳಿಂದ ಪಡೆದ ಬೋಧನೆಯಿಂದ, ಭಗವಂತನು ಸರ್ವಾಂತರ್ಯಾಮಿ ಪ್ರತಿಯೊಬ್ಬನಲ್ಲೂ ದೇವರಿದ್ದಾನೆ. ದರಿದ್ರ ನಾರಾಯಣ ಸೇವೆಯ ನಿಜವಾದ ಸೇವೆ ಹೀಗೆ ಮುಂತಾದ ನಂಬಿಕೆಗಳನ್ನು ಆದಿಯಾಗಿಟ್ಟು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರು ಹಾಗೆಯೇ ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಶ್ರೇಷ್ಟ ಎಂದು ಬೋಧಿಸಿದರು. ನಿಮ್ಮ ವಿವಾಹ, ನಿಮ್ಮ ಐಶ್ವರ್ಯ , ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ , ವ್ಯಕ್ತಿಗತ ಸುಖಕ್ಕಲ್ಲ ಮರೆಯದಿರಿ ಎಂದು ಅಭಿಪ್ರಾಯ ಪಟ್ಟರು. ಅಪಾರ ದೇಶಭಕ್ತಿಯಿಂದ ನಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ ಹಾಗೂ ಭಾರತ ಭೂಮಿಯು ನಮ್ಮ ಪರಂಧಾಮ ಭಾರತದ ಶುಭವೇ ನಮ್ಮ ಶುಭ ಎಂದು ದೇಶದ ಜನತೆಗೆ ಕರೆಕೊಟ್ಟರು.
             ೧೮೯೩ರ ಚಿಕಾಗೋ ಸರ್ವಧರ್ಮ ಸಮ್ಮೇಳನದ ವರೆಗೆ ಹುದುಗಿದ್ದ ಲಾವರಸದಂತೆ ಸದ್ದಿಲ್ಲದೇ ಸರ್ವಧರ್ಮ ಸಮ್ಮೇಳನದಲ್ಲಿ ಜ್ವಾಲಾಮುಖಿಯಂತೆ ಸದ್ದು ಮಾಡಿದ ಮಹಾಪುರುಷ, ಅವರು ತಮ್ಮ ಭಾಷಣದಲ್ಲಿ " ಆಮೇರಿಕಾದ ನನ್ನ ಭಾತೃ , ಭಗಿನಿಯರೇ" ಎಂದು ಸಂಭೋಧಿಸಿ ನೆರೆದಿದ್ದ ಎಲ್ಲರಲ್ಲೂ ಭಾತೃತ್ವದ ಭಾವನೆ ಹುಟ್ಟಿಸಿದ ಮೊದಲ ವಿಶ್ವ ಮಾನವನಾಗಿ ರೂಪುಗೊಂಡರು. ಅವರು ಭಾರತದ ರಾಯಭಾರಿಯಾಗಿ ಭಾರತ ದೇಶದ ಶತಶತಮಾನಗಳಿಂದ ನಡೆದು ಬಂಡ ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ ಹಾಗೂ ಹಿಂದೂ ಧರ್ಮದ ಒಟ್ಟಾರೆ ಸಾರವನ್ನು ಜಗತ್ತಿಗೆ ತಿಳಿಸಿ ಕೊಡುವ ಕಾರ್ಯ ಮಾಡಿದರಷ್ಟೇ ಆದರೆ ಅದು ವಿಶ್ವದೆಲ್ಲೆಡೆ ಪಸರಿಸಿ ಪ್ರತಿಫಲಿಸುವಂತೆ ಮಾಡಿ ಭಾರತೀಯರ ಬಗೆಗಿದ್ದ ತಪ್ಪು ಕಲ್ಪನೆಯನ್ನು ಹೊಡೆದೋಡಿಸಿ ಇಡೀ ಜಗ ಸಮುದಾಯ ಭಾರತದತ್ತ ಅಧ್ಯಾತ್ಮ ಗೌರವದಿಂದ  ನೋಡುವಂತೆ ಮಾಡಿತು. ಇದನ್ನೇ ಮನಗಂಡು ರಾಷ್ಟ್ರಪಿತ ಹೇಳಿರಬೇಕು " ಶ್ರೀಕೃಷ್ಣ ನನ್ನು ಅರಿಯಬೇಕೆಂದಿದ್ದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯ ಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಓದಿ " ಎಂದು .
            ಅವತಾರ ಪುರುಷ ಗೌತಮ ಬುದ್ಧನು ಹೇಳುತ್ತಾನೆ " ಒಂದು ಮರವು ಅದರ ಫಲದಿಂದ ಗುರುತಿಸಲ್ಪಡುತ್ತದೆ, ಮನುಷ್ಯ ಅವನ  ಕೃತಿ ಹಾಗೂ ವಿಚಾರಗಳಿಂದ ಗುರುತಿಸಲ್ಪಡುತ್ತಾನೆ " ಎಂದು ಈ ಮಾತಿಗೆ ಉತ್ತರಾಧಿಕಾರಿಯಂತೆ ವಿವೇಕಾನಂದರು ನರೇಂದ್ರನಿಂದ ವಿಶ್ವಮಾನವನಾಗಿ , ವಿಶ್ವ ವೀಜೆತನಾಗಿ , ಅಜೇಯನಾಗಿ ಬೆಳೆದದ್ದು ತಮ್ಮ ವಿಚಾರದಿಂದ ದಿವ್ಯ ಸಮ್ಯಕ್ ದೃಷ್ಟಿಯಿಂದ ಹಾಗೂ ವೇದ ಸಮಾನವಾದ ಮಾತಿನಿಂದ ಹೊರತು ಉಟ್ಟ ಕಾವೀ ಬಟ್ಟೆಯಿಂದಲ್ಲ ಅಥವಾ ಸುಂದರ ಮೈಕಟ್ಟಿನಿಂದ ಅಲ್ಲವೇ ಅಲ್ಲ.
              ಹೌದು ಸ್ವಾಮಿ ವಿವೇಕಾನಂದರು ಯುವಕರ ಸ್ಫೂರ್ತಿಯ ಸೆಲೆ ಅವರು ಯುವಕರ ಬಗೆಗೆ ಹೇಳುತ್ತಿದ್ದ ಮಾತೆಂದರೆ " ಯುವಕರು ಹೇಡಿಗಳಗಬಾರದು ಪುರುಷಸಿಂಹಗಳಾಗಬೇಕು , ನೀವು ಎಂದು ಪರಾವಲಂಬಿಗಳಾಗಬಾರದು ನಿಮ್ಮ ಬದುಕಿನ ಶಿಲ್ಪಿಗಳು ನೀವೇ" ಎಂದು ಅದರೂ ಇಂದು ಯುವಕ ಎನ್ನುವಲ್ಲಿ ಎನೋ ಬಿರುಕು ಕಾಣುತ್ತಿದೆ . ಒಂದಕ್ಕೆ ಒಂದು ಕೂಡಿದರೆ ದೊಡ್ಡ ಒಂದಾಗುತ್ತದೆ ದೊಡ್ಡ ಒಂದಾದರೆ ಬೇಧವಿಲ್ಲ, ಎರಡಾದರೆ ಅದು ಬೇಧ ಮತ್ತು ಭಿನ್ನ ಇಂತಹ ಮೂಲಜ್ಞಾನದ ಕೊರತೆಯಿಂದಲೋ ಏನೋ ಇಂದು ಶುದ್ಧ ದೇಶಭಕ್ತಿಯಿಂದ ವೈಯಕ್ತಿಕತೆಯಿಂದ ಮುಕ್ತರಾದ ಶಿಸ್ತು ಸಚ್ಚಾರಿತ್ರ್ಯಗಳುಳ್ಳ ವ್ಯಕ್ತಿಗಳನ್ನು ಯಾರೂ ನಿರ್ಮಿಸುತ್ತಿಲ್ಲ ಮತ್ತು ಅದರ ನಿರ್ಮಾಣಕ್ಕೆ ನೆರವಾಗುವ ಯಾವ ವ್ಯವಸ್ಥೆಯು ನಮ್ಮ ಸಮಾಜದ ಮುಂದಿಲ್ಲ. ಇದರ ಮೂನ್ಸೂಚನೆಯಿಂದಲೇ ಇರಬೇಕು ೧೮೩೫ರ ಸುಮಾರಿಗೆ ಬ್ರಿಟನ್ ಸಂಸತ್ತಿನಲ್ಲಿ ಲಾರ್ಡ್ ಮೆಕಾಲೆ ಭವಿಷ್ಯ ನುಡಿದಿದ್ದನಂತೆ " ನಾನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದು , ನಾನು ಒಬ್ಬನೇ ಒಬ್ಬ ಬಿಕ್ಷುಕರನ್ನಾಗಲಿ, ಕಳ್ಳನನ್ನಾಗಲಿ ನೋಡಿಲ್ಲ, ಅಷ್ಟೊಂದು ಶ್ರೀಮಂತ ದೇಶ , ಉನ್ನತ ನೈತಿಕ ಮೌಲ್ಯಗಳು, ಸಾಮರ್ಥ್ಯವಂತ ಜನರು, ಇಂಥ ದೇಶದ ಬೆನ್ನುಮೂಳೆಯಾದ ಸಂಸ್ಕೃತಿ ಹಾಗೂ ಅಧ್ಯಾತ್ಮಿಕ ಕೇಂದ್ರಗಳ ಶಕ್ತಿಯನ್ನು ಮುರಿಯದ ಹೊರತು ಅಂಥ ದೇಶವನ್ನು ನಾವು ಎಂದಿಗೂ ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿ ನಾವು ಅಲ್ಲಿನ ಪ್ರಾಚೀನ ಶೈಕ್ಷಣಿಕ ವ್ಯವಸ್ಥೆಯನ್ನು , ಅಲ್ಲಿನ ಸಂಸ್ಕೃತಿಯನ್ನು ಬದಲಾಯಿಸಿ ವಿದೇಶಿ ಸಂಸ್ಕೃತಿ ಹಾಗೂ ಅಂಗ್ಲವೇ ಉತ್ತಮ ಮತ್ತು ಅದು ತಮ್ಮದಕ್ಕಿಂತ ಹೆಚ್ಚಿನದು ಎಂದು ಭಾರತೀಯರು ಭಾವಿಸುವಂತೆ ಮಾಡಬೇಕು. ಆಗ ಅವರು ಸ್ವಾಭಿಮಾನ ಕಳೆದುಕೊಳ್ಳುತ್ತಾರೆ, ಮೂಲ ಸಂಸ್ಕೃತಿ ನಶಿಸಿ ಹೋಗುತ್ತದೆ ಮತ್ತು ಆ ರಾಷ್ಟ್ರ ಸಂಪೂರ್ಣ ನಮ್ಮ ಅಧಿಪತ್ಯಕ್ಕೆ ಬರುತ್ತದೆ" ಎಂದು ಈ ಮೇಲಿನ ವಾಕ್ಯ ಆತನ ದೂರ ದೃಷ್ಟಿಗೆ ಹಿಡಿದ ಕನ್ನಡಿ. ಇಂದು ಆತನ ಮಾತಿನ ಬಗೆಗೆ ಆಲೋಚಿಸುವಂತೆ ಮಾಡಿದೆ. ಮೇಲಿನ ವಾಕ್ಯಗಳು ಯುವ  ದಿನಾಚರಣೆಯ ಹೊಸ್ತಿಲಲ್ಲಿ ಬಾಲಿಶವಾದರೂ ಯುವ ವಿವೇಕಿಗಳ ದೇಶಭಕ್ತಿ ಜಾಗ್ರತವಾಗಲಿ ಎಂಬ ಉದ್ದೇಶ ಮಾತ್ರ. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ವಿಷಯ ಸಂಗ್ರಹಿಸಿ ತಲೆ ಭಾರವಾಗಿಸುವುದನ್ನು ಬಿಟ್ಟು ದೇಶಭಕ್ತಿಯ ಬರಿಸಿ , ಬುದ್ಧಿಯ ಕೆರಳಿಸಿ, ಮನಸನ್ನು ಅರಳಿಸುವಂತಿರಬೇಕು. 
            ಯಾವ ಕೆಲಸಕ್ಕೂ ಬಾರದೆ ಬಿಸುಟು ಕಬ್ಬಿನವೂ ತುಕ್ಕು ಹಿಡಿದು ಮಣ್ಣಾಗುವುದು , ನೇಗಿಲಿನ ಕೊನೆಯಲ್ಲಿರುವ ಕಬ್ಬಿನವು ಸವೆದು ಕೊನೆಗೆ ಮಣ್ಣು ಪಾಲಾಗುವುದು. ಹೌದು ಎರಡು ಮಣ್ಣು ಆಗುವುದೇ ಅದರೆ ಎರಡನೆಯದ್ದು ತೆರೆಸುವುದು ಕಣ್ಣು ಕೊಡುವುದು ಹಣ್ಣು ಅಷ್ಟೇ ... ಹೌದು ವಿವೇಕಾನಂದರ ಹೆಸರು ಕೇಳಿದರೆ ವಿವೇಕ ಜಾಗೃತವಾಗುವುದು , ಭಾವಚಿತ್ರ ನೋಡಿದರೆ ಸ್ಪೂರ್ತಿಯಾಗುವುದು , ವಿವೇಕವಾಣಿ ಕೇಳಿದರೆ ರೋಮಾನ್ಚನವಾಗುವುದು ಅವರ ಸಂದೇಶ ಓದಿದರೆ ಮನಸ್ಸು ನಿರ್ಮಲವಾಗುವುದು, ಅವರು ಮಾಡಿದ ಭಾಷಣ, ಬರೆದ ಪತ್ರ , ನಡೆಸಿದ ಚರ್ಚೆ ಆಕರ ಗ್ರಂಥಗಲಾಗಿವೆ. ಯುವಕರ ನರನಾಡಿಗಳಾಗಿರುವ ಇವುಗಳಲ್ಲಿ ಕೆಲವನ್ನಾದರೂ ಓದಿ ಅಖಂಡ ಭಾರತದ ಪರಿಕಲ್ಪನೆಗೆ ನಾಂದಿ ಹಾಡಿದ ಆ ಮಹಾ ಚೇತನಕ್ಕೆ ನಾವು ನೀವು ನೀಡುವ ಗುರು ಗೌರವ ವಂದನೆ. ಎಲ್ಲ ಯುವಕರ ವಿವೇಕ ಜಾಗ್ರತವಾಗಲಿ ಎಂದು ಆಶಿಸುತ್ತಾ , ರಾಷ್ಟೀಯ ಯುವದಿನಾಚರಣೆಯ ಶುಭಾಶಯಗಳು 

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...