Tuesday, January 6, 2015

ರಾಷ್ಟ್ರೀಯ ಯುವ ದಿನಾಚರಣೆ .

ಜನವರಿ ೧೨ , ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಇದು ಅಪ್ರತಿಮ ವಾಗ್ಮಿ , ಅನುಪಮ ಮಾನವತಾವಾದಿ , ಯುವ ಪ್ರೇರಕ , ನವ ಚೇತನ ಸ್ವಾಮಿ ವಿವೇಕಾನಂದರ ಜನುಮದಿನ. ತನ್ನ ಪ್ರಭಾವಶಾಲಿ ತತ್ವಜ್ಞಾನ ,  ಉಚ್ಚಮಟ್ಟದ ಸಾಮಾಜಿಕ ಹಾಗೂ ರಾ ಜಕೀಯ ದೃಷ್ಟಿಯಿಂದ ಎಲ್ಲರ ಗಮನ  ತನ್ನಕಡೆ ದೃಷ್ಟಿಯಿಡುವಂತೆ ಮಾಡಿದ ಭವ್ಯ ವ್ಯಕ್ತಿತ್ವ. ಬಾಲ್ಯದಿಂದಲೇ ಚುರುಕು, ಅತೀವ ಬುದ್ಧಿ ಮತ್ತೆ, ಪ್ರಶ್ನಿಸುವ ಗುಣ , ಅನುಲ್ಲಂಘ್ಯ ವಿಚಾರಗಳನ್ನು ಬೇಧಿಸುವ ಕೌಶಲ್ಯ ಇವುಗಳಿಂದಲೇ ಎಲ್ಲರ ಗಮನ ತನ್ನತ್ತ ಸೆಳೆಯುತ್ತಾ ಬೆಳೆದ ನರೇಂದ್ರ ಮುಂದೆ ಬೆಳೆದು ಅಪಾರ ಮೇಧಾವಿ, ಅಧ್ಯಾತ್ಮ ಗುರು ಶ್ರೀ ರಾಮಕೃಷ್ಣ ಪರಮಂಸ ರಿಂದ ದಿವ್ಯ ದೀಕ್ಷೆ ಪಡೆದು ನರೇಂದ್ರನಾಥ ದತ್ತ ಸ್ವಾಮಿ ವಿವೆಕಾನಂದರಾದರು.

ಗುರುಗಳಿಂದ ಪಡೆದ ಬೋಧನೆಯಿಂದ, ಭಗವಂತನು ಸರ್ವಾಂತರ್ಯಾಮಿ ಪ್ರತಿಯೊಬ್ಬನಲ್ಲೂ ದೇವರಿದ್ದಾನೆ. ದರಿದ್ರ ನಾರಾಯಣ ಸೇವೆಯ ನಿಜವಾದ ಸೇವೆ ಹೀಗೆ ಮುಂತಾದ ನಂಬಿಕೆಗಳನ್ನು ಆದಿಯಾಗಿಟ್ಟು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರು ಹಾಗೆಯೇ ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಶ್ರೇಷ್ಟ ಎಂದು ಬೋಧಿಸಿದರು. ನಿಮ್ಮ ವಿವಾಹ, ನಿಮ್ಮ ಐಶ್ವರ್ಯ , ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ , ವ್ಯಕ್ತಿಗತ ಸುಖಕ್ಕಲ್ಲ ಮರೆಯದಿರಿ ಎಂದು ಅಭಿಪ್ರಾಯ ಪಟ್ಟರು. ಅಪಾರ ದೇಶಭಕ್ತಿಯಿಂದ ನಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ ಹಾಗೂ ಭಾರತ ಭೂಮಿಯು ನಮ್ಮ ಪರಂಧಾಮ ಭಾರತದ ಶುಭವೇ ನಮ್ಮ ಶುಭ ಎಂದು ದೇಶದ ಜನತೆಗೆ ಕರೆಕೊಟ್ಟರು.
             ೧೮೯೩ರ ಚಿಕಾಗೋ ಸರ್ವಧರ್ಮ ಸಮ್ಮೇಳನದ ವರೆಗೆ ಹುದುಗಿದ್ದ ಲಾವರಸದಂತೆ ಸದ್ದಿಲ್ಲದೇ ಸರ್ವಧರ್ಮ ಸಮ್ಮೇಳನದಲ್ಲಿ ಜ್ವಾಲಾಮುಖಿಯಂತೆ ಸದ್ದು ಮಾಡಿದ ಮಹಾಪುರುಷ, ಅವರು ತಮ್ಮ ಭಾಷಣದಲ್ಲಿ " ಆಮೇರಿಕಾದ ನನ್ನ ಭಾತೃ , ಭಗಿನಿಯರೇ" ಎಂದು ಸಂಭೋಧಿಸಿ ನೆರೆದಿದ್ದ ಎಲ್ಲರಲ್ಲೂ ಭಾತೃತ್ವದ ಭಾವನೆ ಹುಟ್ಟಿಸಿದ ಮೊದಲ ವಿಶ್ವ ಮಾನವನಾಗಿ ರೂಪುಗೊಂಡರು. ಅವರು ಭಾರತದ ರಾಯಭಾರಿಯಾಗಿ ಭಾರತ ದೇಶದ ಶತಶತಮಾನಗಳಿಂದ ನಡೆದು ಬಂಡ ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ ಹಾಗೂ ಹಿಂದೂ ಧರ್ಮದ ಒಟ್ಟಾರೆ ಸಾರವನ್ನು ಜಗತ್ತಿಗೆ ತಿಳಿಸಿ ಕೊಡುವ ಕಾರ್ಯ ಮಾಡಿದರಷ್ಟೇ ಆದರೆ ಅದು ವಿಶ್ವದೆಲ್ಲೆಡೆ ಪಸರಿಸಿ ಪ್ರತಿಫಲಿಸುವಂತೆ ಮಾಡಿ ಭಾರತೀಯರ ಬಗೆಗಿದ್ದ ತಪ್ಪು ಕಲ್ಪನೆಯನ್ನು ಹೊಡೆದೋಡಿಸಿ ಇಡೀ ಜಗ ಸಮುದಾಯ ಭಾರತದತ್ತ ಅಧ್ಯಾತ್ಮ ಗೌರವದಿಂದ  ನೋಡುವಂತೆ ಮಾಡಿತು. ಇದನ್ನೇ ಮನಗಂಡು ರಾಷ್ಟ್ರಪಿತ ಹೇಳಿರಬೇಕು " ಶ್ರೀಕೃಷ್ಣ ನನ್ನು ಅರಿಯಬೇಕೆಂದಿದ್ದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯ ಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಓದಿ " ಎಂದು .
            ಅವತಾರ ಪುರುಷ ಗೌತಮ ಬುದ್ಧನು ಹೇಳುತ್ತಾನೆ " ಒಂದು ಮರವು ಅದರ ಫಲದಿಂದ ಗುರುತಿಸಲ್ಪಡುತ್ತದೆ, ಮನುಷ್ಯ ಅವನ  ಕೃತಿ ಹಾಗೂ ವಿಚಾರಗಳಿಂದ ಗುರುತಿಸಲ್ಪಡುತ್ತಾನೆ " ಎಂದು ಈ ಮಾತಿಗೆ ಉತ್ತರಾಧಿಕಾರಿಯಂತೆ ವಿವೇಕಾನಂದರು ನರೇಂದ್ರನಿಂದ ವಿಶ್ವಮಾನವನಾಗಿ , ವಿಶ್ವ ವೀಜೆತನಾಗಿ , ಅಜೇಯನಾಗಿ ಬೆಳೆದದ್ದು ತಮ್ಮ ವಿಚಾರದಿಂದ ದಿವ್ಯ ಸಮ್ಯಕ್ ದೃಷ್ಟಿಯಿಂದ ಹಾಗೂ ವೇದ ಸಮಾನವಾದ ಮಾತಿನಿಂದ ಹೊರತು ಉಟ್ಟ ಕಾವೀ ಬಟ್ಟೆಯಿಂದಲ್ಲ ಅಥವಾ ಸುಂದರ ಮೈಕಟ್ಟಿನಿಂದ ಅಲ್ಲವೇ ಅಲ್ಲ.
              ಹೌದು ಸ್ವಾಮಿ ವಿವೇಕಾನಂದರು ಯುವಕರ ಸ್ಫೂರ್ತಿಯ ಸೆಲೆ ಅವರು ಯುವಕರ ಬಗೆಗೆ ಹೇಳುತ್ತಿದ್ದ ಮಾತೆಂದರೆ " ಯುವಕರು ಹೇಡಿಗಳಗಬಾರದು ಪುರುಷಸಿಂಹಗಳಾಗಬೇಕು , ನೀವು ಎಂದು ಪರಾವಲಂಬಿಗಳಾಗಬಾರದು ನಿಮ್ಮ ಬದುಕಿನ ಶಿಲ್ಪಿಗಳು ನೀವೇ" ಎಂದು ಅದರೂ ಇಂದು ಯುವಕ ಎನ್ನುವಲ್ಲಿ ಎನೋ ಬಿರುಕು ಕಾಣುತ್ತಿದೆ . ಒಂದಕ್ಕೆ ಒಂದು ಕೂಡಿದರೆ ದೊಡ್ಡ ಒಂದಾಗುತ್ತದೆ ದೊಡ್ಡ ಒಂದಾದರೆ ಬೇಧವಿಲ್ಲ, ಎರಡಾದರೆ ಅದು ಬೇಧ ಮತ್ತು ಭಿನ್ನ ಇಂತಹ ಮೂಲಜ್ಞಾನದ ಕೊರತೆಯಿಂದಲೋ ಏನೋ ಇಂದು ಶುದ್ಧ ದೇಶಭಕ್ತಿಯಿಂದ ವೈಯಕ್ತಿಕತೆಯಿಂದ ಮುಕ್ತರಾದ ಶಿಸ್ತು ಸಚ್ಚಾರಿತ್ರ್ಯಗಳುಳ್ಳ ವ್ಯಕ್ತಿಗಳನ್ನು ಯಾರೂ ನಿರ್ಮಿಸುತ್ತಿಲ್ಲ ಮತ್ತು ಅದರ ನಿರ್ಮಾಣಕ್ಕೆ ನೆರವಾಗುವ ಯಾವ ವ್ಯವಸ್ಥೆಯು ನಮ್ಮ ಸಮಾಜದ ಮುಂದಿಲ್ಲ. ಇದರ ಮೂನ್ಸೂಚನೆಯಿಂದಲೇ ಇರಬೇಕು ೧೮೩೫ರ ಸುಮಾರಿಗೆ ಬ್ರಿಟನ್ ಸಂಸತ್ತಿನಲ್ಲಿ ಲಾರ್ಡ್ ಮೆಕಾಲೆ ಭವಿಷ್ಯ ನುಡಿದಿದ್ದನಂತೆ " ನಾನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿದ್ದು , ನಾನು ಒಬ್ಬನೇ ಒಬ್ಬ ಬಿಕ್ಷುಕರನ್ನಾಗಲಿ, ಕಳ್ಳನನ್ನಾಗಲಿ ನೋಡಿಲ್ಲ, ಅಷ್ಟೊಂದು ಶ್ರೀಮಂತ ದೇಶ , ಉನ್ನತ ನೈತಿಕ ಮೌಲ್ಯಗಳು, ಸಾಮರ್ಥ್ಯವಂತ ಜನರು, ಇಂಥ ದೇಶದ ಬೆನ್ನುಮೂಳೆಯಾದ ಸಂಸ್ಕೃತಿ ಹಾಗೂ ಅಧ್ಯಾತ್ಮಿಕ ಕೇಂದ್ರಗಳ ಶಕ್ತಿಯನ್ನು ಮುರಿಯದ ಹೊರತು ಅಂಥ ದೇಶವನ್ನು ನಾವು ಎಂದಿಗೂ ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿ ನಾವು ಅಲ್ಲಿನ ಪ್ರಾಚೀನ ಶೈಕ್ಷಣಿಕ ವ್ಯವಸ್ಥೆಯನ್ನು , ಅಲ್ಲಿನ ಸಂಸ್ಕೃತಿಯನ್ನು ಬದಲಾಯಿಸಿ ವಿದೇಶಿ ಸಂಸ್ಕೃತಿ ಹಾಗೂ ಅಂಗ್ಲವೇ ಉತ್ತಮ ಮತ್ತು ಅದು ತಮ್ಮದಕ್ಕಿಂತ ಹೆಚ್ಚಿನದು ಎಂದು ಭಾರತೀಯರು ಭಾವಿಸುವಂತೆ ಮಾಡಬೇಕು. ಆಗ ಅವರು ಸ್ವಾಭಿಮಾನ ಕಳೆದುಕೊಳ್ಳುತ್ತಾರೆ, ಮೂಲ ಸಂಸ್ಕೃತಿ ನಶಿಸಿ ಹೋಗುತ್ತದೆ ಮತ್ತು ಆ ರಾಷ್ಟ್ರ ಸಂಪೂರ್ಣ ನಮ್ಮ ಅಧಿಪತ್ಯಕ್ಕೆ ಬರುತ್ತದೆ" ಎಂದು ಈ ಮೇಲಿನ ವಾಕ್ಯ ಆತನ ದೂರ ದೃಷ್ಟಿಗೆ ಹಿಡಿದ ಕನ್ನಡಿ. ಇಂದು ಆತನ ಮಾತಿನ ಬಗೆಗೆ ಆಲೋಚಿಸುವಂತೆ ಮಾಡಿದೆ. ಮೇಲಿನ ವಾಕ್ಯಗಳು ಯುವ  ದಿನಾಚರಣೆಯ ಹೊಸ್ತಿಲಲ್ಲಿ ಬಾಲಿಶವಾದರೂ ಯುವ ವಿವೇಕಿಗಳ ದೇಶಭಕ್ತಿ ಜಾಗ್ರತವಾಗಲಿ ಎಂಬ ಉದ್ದೇಶ ಮಾತ್ರ. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ವಿಷಯ ಸಂಗ್ರಹಿಸಿ ತಲೆ ಭಾರವಾಗಿಸುವುದನ್ನು ಬಿಟ್ಟು ದೇಶಭಕ್ತಿಯ ಬರಿಸಿ , ಬುದ್ಧಿಯ ಕೆರಳಿಸಿ, ಮನಸನ್ನು ಅರಳಿಸುವಂತಿರಬೇಕು. 
            ಯಾವ ಕೆಲಸಕ್ಕೂ ಬಾರದೆ ಬಿಸುಟು ಕಬ್ಬಿನವೂ ತುಕ್ಕು ಹಿಡಿದು ಮಣ್ಣಾಗುವುದು , ನೇಗಿಲಿನ ಕೊನೆಯಲ್ಲಿರುವ ಕಬ್ಬಿನವು ಸವೆದು ಕೊನೆಗೆ ಮಣ್ಣು ಪಾಲಾಗುವುದು. ಹೌದು ಎರಡು ಮಣ್ಣು ಆಗುವುದೇ ಅದರೆ ಎರಡನೆಯದ್ದು ತೆರೆಸುವುದು ಕಣ್ಣು ಕೊಡುವುದು ಹಣ್ಣು ಅಷ್ಟೇ ... ಹೌದು ವಿವೇಕಾನಂದರ ಹೆಸರು ಕೇಳಿದರೆ ವಿವೇಕ ಜಾಗೃತವಾಗುವುದು , ಭಾವಚಿತ್ರ ನೋಡಿದರೆ ಸ್ಪೂರ್ತಿಯಾಗುವುದು , ವಿವೇಕವಾಣಿ ಕೇಳಿದರೆ ರೋಮಾನ್ಚನವಾಗುವುದು ಅವರ ಸಂದೇಶ ಓದಿದರೆ ಮನಸ್ಸು ನಿರ್ಮಲವಾಗುವುದು, ಅವರು ಮಾಡಿದ ಭಾಷಣ, ಬರೆದ ಪತ್ರ , ನಡೆಸಿದ ಚರ್ಚೆ ಆಕರ ಗ್ರಂಥಗಲಾಗಿವೆ. ಯುವಕರ ನರನಾಡಿಗಳಾಗಿರುವ ಇವುಗಳಲ್ಲಿ ಕೆಲವನ್ನಾದರೂ ಓದಿ ಅಖಂಡ ಭಾರತದ ಪರಿಕಲ್ಪನೆಗೆ ನಾಂದಿ ಹಾಡಿದ ಆ ಮಹಾ ಚೇತನಕ್ಕೆ ನಾವು ನೀವು ನೀಡುವ ಗುರು ಗೌರವ ವಂದನೆ. ಎಲ್ಲ ಯುವಕರ ವಿವೇಕ ಜಾಗ್ರತವಾಗಲಿ ಎಂದು ಆಶಿಸುತ್ತಾ , ರಾಷ್ಟೀಯ ಯುವದಿನಾಚರಣೆಯ ಶುಭಾಶಯಗಳು 

No comments:

Post a Comment

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...