Wednesday, January 7, 2015

ಯುವ"ಕರ"ಗಳು...

       ನಾವು ಜನಿಸಿರುವುದೇ ಅರಳುವುದ್ದಕ್ಕಾಗಿ, ಅರಳಿ ಪರಿಮಳ ಪಸರಿಸುವುದಕ್ಕಾಗಿ, ಕೆಲವರ ನೆರಳಾಗಿ , ಹಲವರ ಬೆಳಕಾಗಿ ಜೀವಿಸಲು, ಇವೆಲ್ಲವಕ್ಕೂ ಬಾಲ್ಯದ ವಾತಾವರಣ, ಪರಿಸ್ಥತಿ, ಸುಖ - ದುಖಃ ಎಲ್ಲವೂ ಗಣನೆಗೆ ಬರುತ್ತದೆ. ಮತ್ತೆ ಲೋಹಕ್ಕೆ ಬಿದ್ದ ಬೆಳಕು ಹೊಳೆದು, ಆ ಬೆಳಕು ಪ್ರತಿಫಲಿಸಿ, ಪ್ರತಿಫಲನಗೊಳ್ಳುವುದು ಸಮಾಜದ ಮುಂದೆ ಅದಕ್ಕಾಗಿ ಬೇಕಾಗಿರುವುದು ಪೋಷಿಸಿ, ನೀರೆರೆಯುವ ಸಮಾನ ಮನಸ್ಕರ ಬಳಗ ಯುವಕರ ಬಳಗ.


     ನವನವೀನತೆ ಹುಟ್ಟಿ ಕೊಳ್ಳುವುದು ಯುವ ಮನಸ್ಸುಗಳು ಒಂದೆಡೆ ಸೇರಿದಾಗ, ಅದಕ್ಕಾಗಿ  ವಯಸ್ಸಾದ ಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅವನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು, ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂತಹ ಕೆಲಸ ಬದುಕಿದ್ದಾಗ ಮಾಡಬೇಕು. ಇವುಗಳನ್ನು ಸಾಧಿಸಲು ಆ ಹೊಸತನ, ಮಧುರ ಆಲೋಚನೆ, ವಿಭಿನ್ನ ಮೌಲ್ಯ, ನವ್ಯತೆಯ ಕನಸುಗಳು, ಸ್ವಾಮಿ ವಿವೇಕಾನಂದರು ಇಟ್ಟಿರುವ ನಂಬಿಕೆಗಳಿಗೆ ಜೀವ ತುಂಬುವುದೇ ಈ ಯೌವ್ವನದಲ್ಲಿ . ಯುವ ಶಕ್ತಿಯ ಧ್ಯೇಯವೇ ಅಂತಹ ಸಂಕೀರ್ಣ ಮತ್ತು ಕಾಠೀಣ್ಯವಾದದ್ದು ಆ ಕುದಿಯುವ ವಯಸ್ಸು, ಕುದುರೆಯ ರಭಸ, ಹುಲಿಯ ಗರ್ವ, ಹಾವಿನ ದ್ವೇಷ, ಪಶುವಿನ ಮೃದುತ್ವ, ನೆಲಗುದ್ಧಿ ನೀರು ಬರಿಸುವೆನೆಂಬ ಬಲ, ಅದೋ ಅಲ್ಲಿ ಬೆಟ್ಟ ನೋಡು ಅಂದರೆ ಇಲ್ಲಿದೆ ತಂದೇ ಎನ್ನುವ ಛಲ, ಕಣ್ಣಂಚಿನಲ್ಲಿರುವ ಹೊಂಗನಸು, ಪರಾಂಭರಿಸದೇ ಪ್ರಶ್ನಿಸುವ ನೆತ್ತರಿನ ಬೀರ್ಯ , ಕೊತ ಕೊತ ಕುದಿಯುವ ಕೋಪ, ಹುಮ್ಮಸ್ಸು, ತೇಜಸ್ಸಿನಿಂದಿರುವ ವಸಂತ ಕಾಲ... ಯಾವುದಿಲ್ಲ, ಯಾವುದುಂಟು? ಎಲ್ಲವೂ ಒಂದನ್ನೊಂದು ಹಿಂಬಾಲಿಸಿ ಸೌಖ್ಯ ನೀಡುವಂತಹುಗಳೇ ಈ ಯೌವ್ವನದ ಅಯಸ್ಸು..ದೀಶಭಕ್ತಿ, ಗುರುಭಕ್ತಿ, ಹಿರಿಯರಭಕ್ತಿ, ಸಜ್ಜನ ಸಂಸ್ಕಾರಗಳನ್ನು ಗುಣಿಸಿ - ಕೂಡಿಸಿ ರೂಢಿಸಿಕೊಳ್ಳುವ ರಮ್ಯಕಾಲವೂ ಹೌದು, ಎಲ್ಲ ಪ್ರಾಯದವರೊಂದಿಗೆ ಬೆರೆತು ಮೃದುತ್ವ ಕಲಿತು ಒಂದಷ್ಟು ಸಾಸಿವೆಯಷ್ಟು ಬೇಕಾಗುವವನಾಗುವ ಕಾಲ. ಮನೆಯಿಂದ ಸಮಾಜಕ್ಕೆ ಬಡ್ತಿಗಳಿಸುವ ಚೈತ್ರಕಾಲ
ಡಾ. ಕಲಾಂ ಹೇಳುತ್ತಾರೆ " ಬಾಲ್ಯವಸ್ಥೆ, ಪೌಢವಸ್ಥೆಯಲ್ಲಿ ಪಡೆದ ಮೌಲ್ಯಗಳು ವಿಶ್ವವಿದ್ಯಾಲಯ ಮಟ್ಟಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ" ಎಂದು ಇದಕ್ಕೆ ಬೆಂಬಲವಾಗಿಯೇ ಪ್ರಚಲಿತದಲ್ಲಿರುವ ನಾಣ್ಣುಡಿ ನಿನ್ನ ಗೆಳೆಯರ ಬಳಗ ತೋರಿಸು ನೀನಾರೆಂದು ನಾ ಬಲ್ಲೆ ಎಂದು, ಗೆಳೆತನ ಸತ್ಸಂಗವಾಗಿರದಿದ್ದರೆ ಸಂಗ ದೋಷವೇ ಹೆಚ್ಚು .... ಮತ್ತೆ ಅಯೇ ಮಲ್ಲ ಕುಡಿ, ಚಾಲಿ ಪೋಲಿ, ಅಲ್ ಮಲ್ಲ ಕುದುರೆ ಎಂಬ ಬಿರುದುಗಳಿಂದ ಸಮಾಜದಿಂದ ಸನ್ಮಾನಿತರಾಗುವುದು ಇದೇ ವಯಸ್ಸಲ್ಲಿ..

ಇಂದು ಸಮಾಜ ತಿಳಿದಷ್ಟು ಯುವಜನ ಕೇಡದಿದ್ದರೂ ಅಲ್ಪ ಒಡಕಿದೆ ಮನೆ ಮನ ಬಿರುಕು ಮಾಡುವ ಮೂರ್ಖರ ಪೆಟ್ಟಿಗೆ, ಕೈ, ಕಣ್ಣು , ಮಾನಸಗಳನ್ನು ಚಂಚಲವಾಗಿಸುವ ಜಂಗಮವಾಣಿ ಹಾಗೂ ಸರಳತೆಗಾಗಿ ಬಳಸುವ ತಾಂತ್ರಿಕ ವಸ್ತುಗಳು ಪ್ರತಿಯೊಬ್ಬನ ನಿಜವಾದ ಸೃಜನಶೀಲತೆಗೆ ಲಗಾಮು ಹಾಕಿದೆ. ಅನುಭವ ಸಣಕಲಾಗಿದೆ, ದೂರದೃಷ್ಠಿ ಸಪೂರವಾಗಿದೆ. ಇವುಗಳ ಜೊತೆ ಜೊತೆಗೆ ಯಾರು ವಿದ್ಯಾವಂತನಾಗಿ, ವಿವೇಕಿಗಳಾಗಿ, ನಿರಂಕುಶಮತಿಗಳಾಗಿ ವಿಮರ್ಶ ಮನೋಭಾವ ಬೆಳೆಸಿಕೊಂಡ ವ್ಯಕಿ ವಿಕಸಿತ ಮಾನವನಾಗಿ (Evolved Person)  ಬದುಕುತ್ತಾನೆ. ಇತ್ತೀಚೆಗಿನ ದಿನಗಳಲ್ಲಿ ಸಂಸ್ಕಾರ ನೀಡಬೇಕಾದ ತಾಯಿ, ಜವಾಬ್ದಾರಿ ನೀಡಬೇಕಾದ ತಂದೆ, ಜ್ಞಾನದ ದೀಟಿಗೆ ಹಿಡಿಯಬೇಕಾದ ಗುರುಗಳು ತಮ್ಮ ತಮ್ಮ ಕರ್ತವ್ಯನಿಷ್ಠೆಯಿಂದ ಕಳಚಿಕೊಂಡಿರುವುದರಿಂದಲೋ ಏನೋ ಭಾವೀ ಪ್ರಜೆಗಳಲ್ಲಿ ಒಂದಷ್ಟು ನಿಷ್ಠೆಯ ಕೊರತೆ, ದೇಶಭಕ್ತಿ ಬಡತನ, ಧರ್ಮದ ಸವಕಲತೆ ಹಾಗೂ ಜೊಳ್ಳು ಹವ್ಯಾಸ ತನ್ನತನವನ್ನು ಮರೆಸುವಂತೆ ವರ್ತಿಸುತ್ತಿದ್ದಾರೆ.
ದೇಶಭಕ್ತಿಯ ಬಗೆಗೆ ಸರಸಂಚಾಲಕ ಡಾ | ಕೇಶವ ಬಲಿರಾಮ ಹಡಗೇವಾರ ತಿಳಿಸುತ್ತಾ " ಎಲ್ಲೇ ಆಗಲಿ ದೇಶದ ಕುರಿತಾದ ಯಾವುದೇ ಕೆಲಸವಿರಲಿ ಅದರ ಆಚರಣೆಗೊಳಗಾಗಿ ಅರ್ಧಕ್ಕೆ ನಿಂತರೆ ಅದನ್ನು ಮುಂದುವರೆಸಬಲ್ಲೆವು ಎಂಬ ವಿಶ್ವಾಸ ನಮ್ಮಲ್ಲಿದ್ದರೆ ಆ ಧರ್ಮ , ಈ ಧರ್ಮ, ಆ ಪಕ್ಷ, ಈ ಪಕ್ಷವೆಂದು ಯೋಚಿಸದೇ ಮಾಡಲು ಅವಶ್ಯ ಮುಂದಾಗಬೇಕು" ಎಂದು ಇದು ಯುವಕರ ನಿಜಕರ್ತವ್ಯದ ಬಗೆಗೆ ವಿವರಿಸುತ್ತಾರೆ. 
ಅದಿಶಂಕರರು
"ಸತ್ಸಂಗತ್ವೇ ನಿಸ್ಸಂಗತ್ವಂ,
ನಿಸ್ಸಂಗತ್ವೇ ನಿರ್ಮೋಹತ್ವಂ,
ನಿರ್ಮೋಹತ್ವೇ ನಿಶ್ಚಲತ್ವಂ,
ನಿಶ್ಚಲತ್ವೇ ಜೀವನ್ಮುಕ್ತಿ:
ಸತ್ಸಂಗ ಮಾತ್ರ ನಮ್ಮನ್ನು ಎಲ್ಲಾ ಬಂಧನಗಳಿಂದ ಬಿಡುಗಡೆ ಮಾಡಿಕೊಳ್ಳಲು ಸಹಾಯ ಮಾಡುವುದು, ಅಪಾರ ಪ್ರೀತಿ ಇದ್ದರೂ ಮೋಹಗಳಿಂದ ದೂರ ಮಾಡುವುದು. ಮನಸ್ಸಿಗೆ ನಿಶ್ಚಲತೆಯನ್ನು ಅನುಸರಿಸುವಂತೆ ಮಾಡಿ ಮುಕ್ತಿಯ ಮಾರ್ಗಕ್ಕೆ ಕಾರಣವಾಗುತ್ತದೆ. ರಾಷ್ಟ್ರೀಯ ಯುವ ದಿನಾಚರಣೆಯ ಹೊಸ್ತಿಲಲ್ಲಿ ವಿವೇಕಾನಂದರ ಅದರ್ಶ, ಹೃದಯ ವೈಶಾಲ್ಯತೆ, ಅಪಾರ ದೇಶ ಭಕ್ತಿಯಿಂದ ಯುವ ಸಂಘಗಳು ಮರು ಹುಟ್ಟು ಪಡೆದು, ಒಳಿತು ನಮ್ಮ ನಿಮ್ಮದಾಗಲಿ ಎಂಬುವುದೇ ಒಟ್ಟು ಆಶಯ.
ಯುವಕರ ದಿನಾಚರಣೆಯ ಶುಭಾಶಯಗಳು.

1 comment:

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...